ಬದುಕಲಿಕ್ಕೆ ಅನುಕೂಲ ಇಲ್ಲಾ, ಸಾಯಲಿಕ್ಕೆ ಪರಮೀಶನ್ ಇಲ್ಲ

ಬದುಕಲಿಕ್ಕೆ ಅನುಕೂಲ ಇಲ್ಲಾ, ಸಾಯಲಿಕ್ಕೆ ಪರಮೀಶನ್ ಇಲ್ಲ

ಅಕ್ಟೋಬರ್ 14 ಬೇಂದ್ರೆಯವರಿಗೆ ಸಾಮಾಜಿಕ ಕಳಕಳಿ ಭಾಳ ಇತ್ತು. ಪ್ರತಿ ನಿತ್ಯದ ಆಗು ಹೋಗುವ ಬಗ್ಗೆ ಕೇಳುತ್ತಿದ್ದರು, ನೋಡುತ್ತಿದ್ದರು, ಮನೆಗೆ ಬಂದ ಅತಿಥಿಗಳೊಬ್ಬರು ‘ಇವತ್ತಿನ ಪೇಪರ ಸುದ್ದಿ ಓದಿರಿಲ್ಲೋ? ಕಲಬೆರಿಕಿ ಆಹಾರ ಸೇವನೆಯಿಂದ ಎಷ್ಟ ಮಂದಿ ಸತ್ತಾರ’ ಅಂದ. ತತ್‍ಕ್ಷಣ-ಬೇಂದ್ರೆಯವರು ಹೇಳತೇನಿ ಕೇಳು ಅದು ಒಂದು ಕಥೀ-
ಒಂದು ದವಾಖಾನೆಯೊಳಗ 12 ಮಂದಿ ರೋಗಿ ಇದ್ದರು. ಡಾಕ್ಟರ ಅವರನ್ನು ನೋಡಿದರು. ಔಷಧ ಬರದು, ಆ ಪ್ರಕಾರ ಔಷಧ ಕೊಡಲಿಕ್ಕೆ ನರ್ಸಿಗೆ ಹೇಳಿ ಹೋದರು. ಮರುದಿನ ಮುಂಜಾನೆ ಬಂದು ನರ್ಸಿಗೆ
‘ನಿನ್ನೆ ಏನೇನಾತು?’ ಅಂತ ರಿಪೋರ್ಟ್ ಕೇಳಿದರು. ನರ್ಸ್ ಹೇಳಿದಳು.
‘ನೀವು ಬರದು ಕೊಟ್ಟಂಗ ಔಷಧ ಕೊಟ್ಟೆ, ಅದರಾಗ, ಹನ್ನೆರಡು ಮಂದಿ ಪೈಕಿ ಎಂಟ ಮಂದಿ ಸತ್ತಾರ, ನಾಕಮಂದಿ ಉಳದಾರ’. ಡಾಕ್ಟರಿಗೆ ಇದನ್ನು ಕೇಳಿ ಬಹಳ ಆಶ್ಚರ್ಯವಾಯಿತು.
‘ಅಲ್ಲ, ಹನ್ನೆರಡು ಮಂದೀನೂ ಸಾಯಬೇಕಾಗಿತ್ತು, ನಾಕಮಂದಿ ಉಳಿದರು ಹ್ಯಾಂಗ?’ ಅವಾಗ ನರ್ಸ್ ಹೇಳಿದಳು: ‘ಈ ಜಗತ್ತಿನ್ಯಾಗ ಉಳದು ಏನು ಮಾಡಬೇಕು, ಬೆಳಗ ಹರದರ ಕೊಲೆ, ಸುಲಿಗಿ, ಖೂನಿ, ನಡಿsತದ, ದಿನದಿನಕ್ಕ ಬೆಲೆ ಏರಿಕೆ; ಮರ್ಯಾದೆಯಿಂದ ಬದಕಲಿಕ್ಕೆ ಆಗುತ್ತಿಲ್ಲ-ನಾವು ಔಷಧವನ್ನು ತೊಗೊಳ್ಳುದಿಲ್ಲ’ ಅಂತ ಯಾರು ಔಷಧ ತೊಗೊಂಡಿಲ್ಲವೋ ಆ ನಾಕು ಮಂದಿ ಬದುಕಿದ್ದಾರೆ. ಇನ್ನು ಮಗಳ ಮದವಿ ಆಗಬೇಕು, ಮಗನಿಗೆ ನೌಕರಿ ಹತ್ತಬೇಕು, ಮೊಮ್ಮಕ್ಕಳನ್ನು ನೋಡಬೇಕು. ಇನ್ನೂ ಗಳಿಸಬೇಕು, ಅದೂ ಆಗಬೇಕು, ಇದೂ ಆಗಬೇಕು, ಇನ್ನೂ ಏನಾರ ಛೋಲೊ ಕೆಲಸಾ ಮಾಡಬೇಕು – ಇನ್ನೂ ಬದುಕಬೇಕು ಅಂತ ಆಶಾ ಇಟಗೊಂಡವರು ಔಷಧ ತೊಗೊಂಡರು, ಅವರು ಸತ್ತಾರ.
ಸಾಯಬೇಕು ಅನ್ನೋವರು ಬದುಕ್ಯಾರ, ಬದುಕಬೇಕು ಅನ್ನೋವರು ಸತ್ತಾರ ಬದುಕಲಿಕ್ಕೆ ಅನುಕೂಲ ಇಲ್ಲ; ಸಾಯಲಿಕ್ಕೆ ಪರಮೀಶನ್ ಇಲ್ಲಾ. ಸಾಯಬೇಕು ಅನ್ನೋವರು ಬದುಕಿದರ, ಬದುಕುವವರಿಗೂ ಬದಕಲಿಕ್ಕೆ ಬಿಡೋದಿಲ್ಲ.
ಜನರು ಸುಖದಿಂದ ಇರೋಹಂಗ ಮಾಡೋದೆ ‘ಬೇಂದ್ರೇನಿಗೆ ಮಾಡೋ ಕೆಲಸ’ ದಿ 26-6-1977 ರಂದು ಕಲಾಭವನದ ಹತ್ತಿರ ಶಿಲಾನ್ಯಾಸ ಮಾಡಲಿಕ್ಕೆ ಮಂತ್ರಿಗಳು ಬಂದಿದ್ದರು. ಅವರು ಬೇಂದ್ರೆಯವರ ಅಭಿಮಾನಿ. ಅವರು ಬೇಂದ್ರೆಯವರಿಗೆ ಕೇಳಿದರು – ‘ ಬೇಂದ್ರೆಯವರ ನಿಮ್ಮ ಸಲುವಾಗಿ ಏನಾರ ಮಾಡಬೇಕಂತೀನಿ, ಏನು ಮಾಡಲಿ ಹೇಳ್ರಿ’. ಬೇಂದ್ರೆಯವರು ಥಟ್ಟನೆ ಹೇಳಿದರು.
‘ಬೇಂದ್ರೆನs, ಬೇಂದ್ರೆನ ಸಲುವಾಗಿ ಅಂತ ಏನೂ ಮಾಡಿಕೊಂಡಿಲ್ಲ, ನೀವ್ಯಾಕ ಮಾಡತೀರಿ. ನೀವು, ಜನರಿಗೆ ಸುಖವಾಗಿ ಇಡತೇನಿ ಅಂತ ಮಾತು ಕೊಟ್ಟು ಆರಿಸಿ ಬಂದೀರಿ. ಅವರಿಗೆ ಸುಖಾ ಆಗೋಹಂತಾದ್ದು ಮಾಡಿರಿ, ಜನರು ಸುಖದಿಂದ ಇರೋದೇ ಬೇಂದ್ರೆ ಬಯಸೋದು, ಅದs ನೀವು, ಬೇಂದ್ರೆ (ಸಲುವಾಗಿ) ಮಾಡಬೇಕಾದ ಕೆಲಸ’. ಎಂದಾಗ ಸಾರ್ವಜನಿಕರಿಂದ ಕರತಡನಗಳಾದವು.
‘ದಿಕ್ಕಿಲ್ಲದ ಮಕ್ಕಳೇ ಇಲ್ಲಾ, ಅನ್ನ ಇಲ್ಲದ ಮನೀನ ಇಲ್ಲ, ಉದ್ಯೋಗ ಬೆಳೆದದ ಅನ್ನಲಿ ದೇಶ’ ಹೀಗನ್ನುತ್ತ ತಮ್ಮ ಭಾಷಣ ಮುಂದುವರೆಸಿದರು.
ಭಗವದ್ಗೀತೆಯ ಜ್ಞಾನ ವಿಜ್ಞಾನಯೋಗ 19ನೇ ಶ್ಲೋಕ
ಬಹೂನಾಂ ಜನ್ಮನಾಮಂತೇ ಜ್ಞಾನವಾನ್ಮಾಂ ಪ್ರಪದ್ಮತೇ |
ವಾಸುದೇವ: ಸರ್ವಮಿತಿ ಸ ಮಹಾತ್ಮಾ ಸುದುರ್ಲಭಃ |
ಭಾವ: ಅನೇಕ ಜನ್ಮಗಳ ಪುಣ್ಯ ಸಂಚಯದಿಂದ ಕೊನೆಯಲ್ಲಿ ಜ್ಞಾನವಂತನಾಗಿ ವಾಸುದೇವನೇ ಸರ್ವವು ಎಂದು ನನ್ನನ್ನೇ ಹೊಂದುತ್ತಾನೆ. ಅಂಥ ಮಹಾತ್ಮನು ಲೋಕದಲ್ಲಿ ಅತ್ಯಂತ ಸುದುರ್ಲಭ.
ಗೀತೆಯ ದಿನನಿತ್ಯದ ಜೀವನವನ್ನು ನಡೆಸುವ ವಿಧಾನವನ್ನು ಮತ್ತು ಅದರ ಮೂಲಕ ಹೇಗೆ ಶ್ರೇಯಸ್ಸನ್ನು ಪಡೆಯಬಹುದೆಂಬುದನ್ನು ಬೋಧಿಸುವ ಕೈಪಿಡಿಯಾಗಿದೆ. ಗೀತೆಯ ಮಾರ್ಗದರ್ಶನದಂತೆ ಆರ್ತ:, ಜಿಜ್ಞಾಸು, ಅರ್ಥಾರ್ಥಿ ಮತ್ತು ಜ್ಞಾನಿ ಎಂಬ ನಾಲ್ಕು ಬಗೆಯ ಭಕ್ತರೆಲ್ಲರೂ ಮುಮುಕ್ಷ ಪಥದಲ್ಲಿ ಸಾಗಿದವರೇ ಸಾಧಕನು. ಜನ್ಮಜನ್ಮಾಂತರಗಳಿಂದ ಹಂತಹಂತವಾಗಿ ಸಾಧನೆಯತ್ತ ಸಾಗುತ್ತಾನೆ. ಮೊದಲು ಪ್ರಾಪಂಚಿಕ ಅನುಕೂಲತೆಗಳಿಗಾಗಿ ಪೂಜಿಸುತ್ತಾನೆ. ನಂತರ ಈ ದೇವ ಪಥದಲ್ಲಿ ಶಾಂತಿ, ಸಮಾಧಾನ,ಆನಂದ ಅರಸುತ್ತಾನೆ. ಮುಂದೆ ಜ್ಞಾನ ಮಾರ್ಗದಲ್ಲಿ ಆತ್ಮಜ್ಞಾನವನ್ನು ಮತ್ತು ಪರಮಶಾಂತಿಯನ್ನು ಪಡೆದು ಅನೇಕ ಜನ್ಮಗಳ ಪುಣ್ಯ ಸಂಚಯದಿಂದ ಈ ವಿಶ್ವವೇ ವಸುದೇವನಿರುವ ಕುಟುಂಬ ಎಂಬ ಪರಮ ಸತ್ಯವನ್ನು ಅರಿಯುತ್ತಾನೆ. ಅವನೇ ಮಹಾತ್ಮ. ಅಂಥ ಜ್ಞಾನಿಗಳು ದುರ್ಲಭ. ಈ ಲೋಕದಲ್ಲಿ ಕೋಟಿಗೊಬ್ಬರು. ಆದರೆ ಎಲ್ಲಾ ಕಾಲದಲ್ಲಿಯೂ ಈ ಪರಿಪೂರ್ಣತೆಯನ್ನು ಒಬ್ಬರಲ್ಲ ಒಬ್ಬರು ಸಾಧಿಸಿಯೇ ಇರುತ್ತಾರೆ.
ಅಂಥ ಮಹಾತ್ಮ ಸುದುರ್ಲಭರಲ್ಲಿ ಶ್ರೀ ರಾಮಕೃಷ್ಣ ಪರಮಹಂಸರೊಬ್ಬರು, ಅನೇಕ ಜನ್ಮಗಳ ಪುಣ್ಯ ಸಂಚಯದಿಂದ ಅವತಾರವೆತ್ತಿದ ತ್ರಿಕಾಲ ಜ್ಞಾನಿಗಳು. ಹದಿನೆಂಟು ಭಾವಗಳಿಂದ ಸಗುಣ, ಸಾಕಾರ, ಈಶ್ವರ ಸಾಕ್ಷಾತ್ಕಾರಗಳನ್ನು ಭಾವ ಸಾಧನೆಯ ಪರಮಾವಧಿಯನ್ನು ತಲುಪಿ ಅಳವಡಿಸಿಕೊಂಡರು. ಅವರೊಳಗೆ ನಿರ್ಗುಣ ನಿರಾಕಾರ ಬ್ರಹ್ಮ ಸಾಕ್ಷಾತ್ಕರದ ತೇಜೋಮಂಡಲ ಪ್ರಜ್ವಲಿಸಲು ಅಸಾಧಾರಣ ವೇದಾಂತಿಯಾದ ನಗ್ನ ಸಂನ್ಯಾಸಿ ತೊತಾಪುರಿಯು ನಿಮಿತ್ತನಾದ. ಜ್ಞಾನ ಸಾಂಮ್ರಾಟನಾದ ತೊತಾಪುರಿಯ ಗುರುತ್ವದಲ್ಲಿ ಅದ್ವೈತ ಸಾಧನೆಗೈದರು, ಗುರು ನಾಲ್ವತ್ತು ವರ್ಷಗಳಲ್ಲಿ ಸಾಧನೆಗೈದ ಅದ್ವೈತ ಸಾಧನೆಯನ್ನು ಒಂದೇ ದಿನದಲ್ಲಿ ಉತ್ತಮೋತ್ತಮ ಸಿದ್ಧಿಯಾದ ನಿರ್ವಿಕಲ್ಪ ಸಮಾಧಿಯನ್ನು ಸಾಧಿಸಿದರು. ಈ ಸಾಧನೆಯಿಂದ ಶ್ರೀ ರಾಮಕೃಷ್ಣರ ದೃಷ್ಟಿ ಎಂದಿಗಿಂತಲೂ ಹೆಚ್ಚು ಉದಾರವಾಯಿತು ಸಮದರ್ಶಿತ್ವ ನೆಲೆಗೊಂಡಿತು. ಮುಕ್ತಿಮಾರ್ಗಕ್ಕೆ ಎಲ್ಲ ಮತಗಳು ವಿವಿಧ ಪಥಗಳು ಎಂದು ಅವುಗಳನ್ನು ಅರಿಯುವ ಕುತೂಹಲದಿಂದ ಅನ್ಯ ಮತ ಸಾಧನೆಗೂ ಕ್ಯಹಾಕಿದರು. ಗೋವಿಂದರಾಯ ಎಂಬೊಬ್ಬ ಮುಸಲ್ಮಾನ ಫಕೀರನಿಂದ ಇಸ್ಲಾಂ ದೀಕ್ಷೆಯನ್ನು ಸ್ವೀಕರಿಸಿ ಇಸ್ಲಾಂಧರ್ಮದ ಸಾಧನೆಗೈದರು. ಶಂಭುಮಲ್ಲಿಕನೆಂಬ ಭಕ್ತನು ಕಲ್ಕತ್ತೆಯ ತನ್ನ ಮನೆಯಲ್ಲಿ ಶ್ರೀ ರಾಮಕೃಷ್ಣರಿಗೆ ಬೈಬಲನ್ನು ಓದಿ ಹೇಳಿದನು, ಆ ಮಹಾ ಹುತಾತ್ಮನ ಜೀವನ ಚರಿತ್ರೆ ಅವರನ್ನು ಸಂಪೂರ್ಣವಾಗಿ ಅಕ್ರಮಿಸಿ ಬಿಟ್ಟಿತು. ಮಧುರ ಭಾವದಲ್ಲಿ ರಾಧೆಯ ಮಹಾಭಾವದ ಪರಾಕಾಷ್ಠತೆ ಪೂರ್ಣಪ್ರಕಾರವಾಗಿ ಗೋಚರಿಸಿತು ಶ್ರೀ ರಾಮಕೃಷ್ಣ ಪರಮಹಂಸರಿಗೆ.
ಯಾವನು ಕೃಷ್ಣನೋ ಅವನೇ ಶಿವ. ಅವನೇ ಕಾಳಿ, ಆದಿಶಕ್ತಿ. ಆತನೇ ಯೇಸು, ಆತನೇ ಅಲ್ಲಾ. ಒಂದೇ ಸತ್ಯದದೆಡೆಗೆ ಹೋಗುವ ಬೇರೆ ಬೇರೆ ಭಗವಂತನ ಸಾಕಾರ ರೂಪಗಳೆಂದು ಅರಿತರು. ದೀನ ದಲಿತರಲ್ಲಿ ನಾರಾಯಣನನ್ನೇ ಕಂಡರು, ದರಿದ್ರರನ್ನು, ದುಃಖಿಗಳನ್ನು ಕಂಡರೆ ಅವರ ಮನಸ್ಸು ನೋವಿನಿಂದ ಪರಿತಪಿಸುತ್ತಿತ್ತು.
ಒಂದು ಸಲ ಮಥುರನಾಥ ಕಂದಾಯ ಮಸೂಲಿಗೆ ಹೋಗುವಾಗ ಶ್ರೀ ರಾಮಕೃಷ್ಣರನ್ನು ಜೊತೆಗೆ ಕರೆದುಕೊಂಡು ಹೋಗಿದ್ದನು. ಆ ಸಲ ಸರಿಯಾಗಿ ಮಳೆ ಆಗದೇ ಬೆಳೆ ಬಂದಿರಲಿಲ್ಲ. ರೈತರೆಲ್ಲ ತಮ್ಮ ಕಷ್ಟವನ್ನು ಹೇಳಿಕೊಂಡು, ಕಂದಾಯ ಬಿಡುವಂತೆ ಕೇಳಿಕೊಂಡರು. ಆದರೆ ಮಥುರಬಾಬು ಒಪ್ಪಲಿಲ್ಲ. ಆ ಸನ್ನಿವೇಶ ನೋಡಿ ಶ್ರೀ ರಾಮಕೃಷ್ಣರು ಸಮಾಧಾನದಿಂದ ಕಂದಾಯ ಬಿಡುವಂತೆ ಹಾಗೂ ಕಷ್ಟದಲ್ಲಿ ಇರುವ ಅವರಿಗೆ ಧನ-ಧಾನ್ಯಗಳನ್ನು ಕೊಟ್ಟು ಉಪಚರಿಸುವಂತೆ ಹೇಳಿದರು. ಅದಕ್ಕೂ ಮಥುರಬಾಬು ಸತರಾಂ ಒಪ್ಪಲಿಲ್ಲ. ಆಗ ಶ್ರೀ ರಾಮಕೃಷ್ಣರು ಹಾಗೆಂದರೇನು? ಈ ಭೂಮಿ ನಿನ್ನದೇ? ನೀನು ಇಲ್ಲಿ ದುಡಿಯುತ್ತಿಯೇನು? ಆ ಬಡ ಜನರಲ್ಲವೇ ದುಡಿಯುವವರು ನೀನು ಬರೀ ಜಗನ್ಮಾತೆಯ ಮೇಸ್ತ್ರಿ. ಆದರೆ, ಅವರೆಲ್ಲ ಆಕೆಯ ಮಕ್ಕಳು. ಆಕೆಯ ಹಣವನ್ನು ಅವರ ಮಕ್ಕಳ ಯೋಗಕ್ಷೇಮಕ್ಕಾಗಿ ವ್ಯಯ ಮಾಡಲೇಬೇಕು. ಅವರೆಲ್ಲ ಗೋಳಾಡುತ್ತಿದ್ದಾರೆ. ಕೊಡುವುದಿಲ್ಲ ಎನ್ನಲು ನಿನಗೆ ಹೇಗೆ ಮನಸ್ಸು ಬರುತ್ತದೆ? ನೀನು ಈ ಕೆಲಸ ಮಾಡಲೇಬೇಕು ಎಂದು ಶ್ರೀ ರಾಮಕೃಷ್ಣರು ಜೋರಿನಿಂದ ಗದರಿಸಿ ಹೇಳಿದಾಗ ಮಥುರಾಬಾಬು ಅವರು ಹೇಳಿದಂತೆ ಮಾಡಲೇಬೇಕಾಯಿತು.
ಇನ್ನೊಂದು ಸಾರಿ ಬಡವರಿಗೆ ಉಪಕಾರ ಮಾಡಬೇಕು ಎಂದು ಶಿಷ್ಯನೊಬ್ಬ ಹೇಳಿದಾಗ ಶ್ರೀ ರಾಮಕೃಷ್ಣ ಪರಮಹಂಸರು ಹೀಗೆ ಹೇಳಿದರು. ‘ಜೀವವೇ ಶಿವ. ಎಲ್ಲ ಜೀವರಲ್ಲಿ ಶಿವನಿದ್ದಾನೆ’ ಎಂದಾಗ ಉಪಕಾರ ಎನ್ನುವುದು ಎಂಥ ಗರ್ವದ ಮಾತು. ಉಪಕಾರ ಎನ್ನಬಾರದು, ಸೇವೆ ಸೇವೆ ಎನ್ನಬೇಕು ಎಂದು ಒತ್ತಿ ಒತ್ತಿ ಹೇಳಿದರು. ನರನಲ್ಲೂ ನಾರಾಯಣನನ್ನು ಕಂಡ ದಿವ್ಯಾತ್ಮರು ಶ್ರೀ ರಾಮಕೃಷ್ಣರು, ಅನೇಕ ಜನ್ಮಗಳ ಪುಣ್ಯ ಸಂಚಯದಿಂದ ನವ ಯುಗಾವತಾರಿಗಳಾಗಿ ಲೋಕ ಕಲ್ಯಾಣಕ್ಕೆ ಬಂದ ಶ್ರೀರಾಮಕೃಷ್ಣ ಪರಮಹಂಸರು ಸತ್ಯ ಸಾಕ್ಷಾತ್ಕಾರಕ್ಕಾಗಿ ಸಾಧಕನು ಕೈಗೊಳ್ಳುವ ಎಲ್ಲ ಸಾಧನೆಗಳ ಉತ್ತುಂಗಕ್ಕೇರಿ, ಚರಾಚರ ವಸ್ತುಗಳಲ್ಲಿಯೂ ದೇವನನ್ನೇ ಕಂಡು ದೇವನಲ್ಲಿಯೇ ಒಂದಾಗಿ ದೇವಮಾನವರಾದರು. ಹದಿನೆಂಟು ಭಾವಗಳಲ್ಲಿ ಸಾಧನೆಗೈದ ಶ್ರೀ ರಾಮಕೃಷ್ಣ ಪರಮಹಂಸರ ಭಾವಧಾರೆಯ ಚೈತ್ರಯಾತ್ರೆ ಯುಗಯುಗಾಂತರದಲ್ಲೂ ಮನುಕುಲದ ದಾರಿದೀಪವಾಗಿ ಮುನ್ನಡೆಯಲಿ.

Leave a Reply