ಬೇಂದ್ರೆ ಬೆಳಕು

ಬೇಂದ್ರೆ ಬೆಳಕು
-ಸುರೇಶ ವೆಂ. ಕುಲಕರ್ಣಿ

ನಿನ್ನ ಹಾದೀನ ಬ್ಯಾರೆ
ಸಾಮಾನ್ಯವಾಗಿ ಮುಂಜಾನೆ ಹೊತ್ತು ಬಾಳಣ್ಣ ಅವರು ಕಿಟೆಲ್ ಕಾಲೇಜಿಗೆ ಹೋಗುವ ಮೊದಲು ಮಹೀಂದ್ರಕರ್ ಚಾಳಿನಲ್ಲಿರುವ ನಮ್ಮ ಮನೆಗೆ ಬಿಟ್ಟು ಹೋಗುತ್ತಿದ್ದರು. ಅದನ್ನು ಗಮನಿಸಿದ ಒಬ್ಬ ಲೇಖಕರು
‘ನೀವು ಸುರೇಶನ ಮನಿಗೆ ಹೋಗತೀರಿ, ಅವನ ಮನೆಯ ಹಾದಿಯೊಳಗೇ ನಮ್ಮ ಮನೆಯಿದೆ ಒಮ್ಮೆ ಬರ್ರಿ’. ಅಂತ ಕರೆದರು. ಅದಕ್ಕೆ ಬೇಂದ್ರೆಯವರು
‘ಅವನ ಹಾದಿಯೊಳಗ ನೀ ಇದ್ದರ ಬರತ್ತಿದ್ದೆ, ಆದರ ನಿನ್ನ ಹಾದೀನ ಬ್ಯಾರೆ ಅದ ಹ್ಯಾಂಗ ಬರಲಿ’, ಅಂತಂದರು.

ತಂಬಿಟ್ ತಿಂದ್ವಿ
ಪಂಚಮಿಯ ಒಂದು ದಿವಸ ಮುಂಜಾನೆ ಬೇಂದ್ರೆಯವರೊಂದಿಗೆ ಚರ್ಚೆಯನ್ನು ಮಾಡುತ್ತ ಕುಳಿತಿದ್ದೆವು. ನನ್ನ ತಾಯಿ ತಂಬಿಟ್ಟು ಉಂಡಿಯನ್ನು ಕೊಟ್ಟರು. ತಿಂದು ಮತ್ತೆ ಚರ್ಚಿಸುತ್ತ ಕುಳಿತೆವು. ಆ ವೇಳೆಗೆ ‘ಎನ್ಕೆ’ಯವರು ಬಂದರು. ಉಂಡಿ ತಿಂದಿಟ್ಟ ಬಟ್ಟಲುಗಳು ಅಲ್ಲಿಯೇ ಇದ್ದವು. ‘ಬರ್ರಿ’ ಎಂದು ಹೇಳುತ್ತಿದ್ದಂತೆಯೇ ನನ್ನ ತಾಯಿಯವರು ಉಂಡಿ ಒಯ್ದು ಕೊಡಲು ಒಳಗಿನಿಂದ ಕರೆದರು.
‘ಈಗ ನಾವ್ ತಂಬಿಟ್ಟು ತಿಂದ್ವಿ’ ಎಂದು ಬೇಂದ್ರೆಯವರು ಎನ್ಕೆಯವರಿಗೆ ಅಂದರು. ಅದಕ್ಕೆ ಎನ್ಕೆಯವರು ‘ಅಡ್ಡಿಯಿಲ್ಲ, ಛಲೋ ಆತಲ್ಲ’ ಅಂದರು. ಕೂಡಲೇ ಬೇಂದ್ರೆಯವರು ‘ತಮ್ಮನ್ನ ಬಿಟ್ಟು ತಿಂದಿಲ್ಲ, ತಂಬಿಟ್ಟು ತಿಂದ್ವಿ’
‘ತಿಳಿಲಿಲ್ಲ’?
‘ನಮಗೂ ತಂಬಿಟ್ಟು ಉಂಡಿ’ ಕೊಟ್ರು ತಿಂದ್ವಿ ಅಂತ ಹೇಳಿದೆ’ ಎಂದು ವಿವರಿಸಿದಾಗ ಎಲ್ಲರಿಂದ ನಗೆ ಸಿಡಿದೆದ್ದಿತು. (ತಂಬಿಟ್ಟು = ತಂಬಿಟ್ಟು ಉಂಡಿ ಮತ್ತು ತಮ್ಮನ್ನು ಬಿಟ್ಟು ತಿಂದಿವಿ. ಇದು ಶ್ಲೇಷಾರ್ಥ ಚಮತ್ಕಾರ.)

ಬಡತನವನ್ನೇ ಗೊಬ್ಬರಾ ಮಾಡಿಕೊಂಡು ಬೆಳದಾನ
ಬೇಂದ್ರೆಯವರು ನನ್ನ ಚಿತ್ರ ಪ್ರದರ್ಶನ ಉದ್ಘಾಟಿಸಿದ ನಂತರ ಮೊತ್ತಮೊದಲಿಗೆ ನನ್ನ ಮನೆ ಹುಡುಕುತ್ತ ಜೊತೆಗೆ ಧಾರವಾಡದ ಜೆ.ಎಸ್.ಎಸ್. ಸೈನ್ಸ್ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಡಾ.ವಿ.ಜಿ.ಕುಲಕರ್ಣಿಯವರನ್ನು ಕರೆದುಕೊಂಡು ಬಂದರು. ಅವರು ನನ್ನ ದೂರದ ಸಂಬಂಧಿಗಳು ಎಂಬುದು ಆಗಲೇ ತಿಳಿಯಿತು. ಅವರು ನನ್ನ ಪರಿಚಯ ಹೇಳುತ್ತ ‘ಇವನ ಸಣ್ಣ ವಯಸ್ಸಿಗೇ ತಂದೆ ತೀರಿಕೊಂಡರು. ಇವರು ಏಳು ಜನ ಗಂಡಸರು ಮತ್ತು ಮೂರುಜನ ಹೆಣ್ಣುಮಕ್ಕಳು. ಎಲ್ಲರೂ ಒಬ್ಬರಿಗಿಂತ ಒಬ್ಬರು ಜಾಣರು. ಸುರೇಶ ಕೆಲಸ ಮಾಡುತ್ತಲೇ ಕಲಿಯುತ್ತಲಿದ್ದಾನೆ. ಭಾಳ ಬಡವರು….’ ಹೀಗೆ ಹೇಳುತ್ತಲಿದ್ದಂತೆಯೇ ‘ಸುರೇಶ ಬಡತನವನ್ನೇ ಗೊಬ್ಬರಾ ಮಾಡಿಕೊಂಡು ಬೆಳದಾನ ಮತ್ತು ಬೆಳೀತಾನ. ಬಡತನ ಅಂಬೂದು ಶಾಶ್ವತ ಅಲ್ಲ’ ಎಂದು ಧೈರ್ಯ ಹೇಳಿ, ತಾವು ಬಂದ ಕಾರಣ ತಿಳಿಸಿದರು. ಅಂದಿನಿಂದ ಅವರೊಂದಿಗೆ ಅನ್ಯೋನ್ಯತೆ ಬೆಳೆಯಿತು.

ದನಾ ಕಾಯೋ ಹುಡಗರೂ ಬೇಂದ್ರೆನ ಹಾಡು ಹೇಳತಾರೆ!?
ನಮ್ಮ ಮನೆ ಮಹೀಂದ್ರಕರ ಚಾಳಿನಲ್ಲಿತ್ತು. ಅಲ್ಲಿಂದ ನಡೆಯುತ್ತ ಕಿತ್ತೂರ ಚೆನ್ನಮ್ಮನ ಪಾರ್ಕಿನ ಹತ್ತಿರ ಹೊರಳುತ್ತಿದ್ದಾಗ ಒಬ್ಬ ಹುಡುಗ 3-4 ಎಮ್ಮೆಗಳನ್ನು ಹೊಡೆದುಕೊಂಡು ಒಂದು ಎಮ್ಮೆಯ ಮೇಲೆ ಕುಳಿತು ‘ಇನ್ನು ಯಾಕ ಬರಲಿಲ್ಲವ್ವ ಹುಬ್ಬಳ್ಳಿಯಾಂವ…’ ಹಾಡನ್ನು ಹಾಡುತ್ತ ಬರುತ್ತಿದ್ದನು. ಅವನು ನಮ್ಮನ್ನು ಸಮೀಪಿಸುತ್ತಿದ್ದಂತೆಯೇ ಬೇಂದ್ರೆಯವರು ಆ ಹುಡುಗನನ್ನು ತಡೆದು ‘ನಿನ್ನ ಹೆಸರೇನು? ಎಲ್ಲಿರತೀ?’ ಮುಂತಾಗಿ ಪ್ರಶ್ನಿಸುತ್ತ ‘ಈ ಹಾಡು ಎಲ್ಲಿ ಕಲಿತೀ’? ಅಂದಾಗ ಆ ಹುಡುಗ
‘ಕೆಲಗೇರಿ ಚಾದ ಅಂಗಡ್ಯಾಗ ಹಚ್ಚತಾರ್ರಿ, ಅದನ್ನ ಕೇಳಿ ಕಲತೇನ್ರಿ, ಅದನ್ನ ನಮ್ಮ ಸಾಧನಕೇರಿ ಬೇಂದ್ರೆ ಅಜ್ಜಾರು ಬರದದ್ದಂತರಿ’ ಎಂದು ಹೇಳಿ ಎಮ್ಮೆ ಮೇಲೆ ಸವಾರಿ ಮುಂದುವರೆಸಿದ.
ಆಗ ಬೇಂದ್ರೆಯವರು ನನಗೆ ಹೇಳಿದರು ‘ಹೊಸದಾಗಿ ಇಂಥ ಹಾಡು ನಾನು ಬರದಾಗ, ಕೆಲವು ಸಾಹಿತಿಗಳು ‘ದನಾ ಕಾಯೋ ಹುಡುಗರು ಹಾಡೋ ಹಾಡು ಈ ಕವಿ ಬರದಾನ’ ಅಂತಿದ್ರು. ಬೇಂದ್ರೆ ಪ್ರಸಿದ್ಧಿ ಪಡೆದ ಮ್ಯಾಲೆ ‘ದನಾ ಕಾಯೋ ಹುಡುಗರೂ ಅಂತಾರ ಅಷ್ಟು ಪ್ರಸಿದ್ಧವಾದ ಹಾಡು ಅಂತಾರ’ ಜನಾ. ‘ಬೆಳಗು’ ಕವನ ಬರೆದು, ಪ್ರಕಟಿಸುವಾಗ ‘ಸದಾನಂದ ಜಂಗಮ’ ಅಂತ ಕಾವ್ಯನಾಮ ಕೊಟ್ಟೆ. ನಂತರ ಜನರಿಗೆ ‘ಅಂಬಿಕಾತನಯದತ್ತ’ರ ಕವನ ಎಂದು ಗೊತ್ತಾಯಿತು.

Leave a Reply