ಮಕ್ಕಳ ಕಥೆ – “ಕೆಂಪು ತಿನಿಸೆಲ್ಲ ನನ್ನದೇ”

ಒಂದು ಅಮ್ಮಕೋಳಿ ಇತ್ತು. ಅದಕ್ಕೆ ಎರಡು ಕೋಳಿಮರಿಗಳಿದ್ದವು. ಒಂದು ಕೆಂಪು ಬಣ್ಣದ್ದು ಅದರ ಹೆಸರು ಕೆಂಪಿ. ಇನ್ನೊಂದು ಹಳದಿ ಬಣ್ಣದ್ದು ಅದರ ಹೆಸರು ಹಳದಿ. ಕೆಂಪಿ ಕೆಂಪು ಬಣ್ಣದ ತಿನಿಸೆಲ್ಲ ನನ್ನದೇ ಎನ್ನುತ್ತಿತ್ತು. ಯಾರಿಗೂ ಕೊಡುತ್ತಿರಲಿಲ್ಲ. ಹಳದಿ ಏನಿದ್ದರೂ ಹಂಚಿ ತಿನ್ನುತ್ತಿತ್ತು.

ಒಮ್ಮೆ ಎಲ್ಲವೂ ಮಾತನಾಡುತ್ತಾ ನಿಂತಿದ್ದವು. ಕೆಂಪಿಯ ಗಮನ ಮನೆಯ ಮುಂದಿದ್ದ ಗಿಡಗಳ ಕಡೆ ಹೋಯಿತು. ಅದು ತಕ್ಷಣ ಆ ಗಿಡಗಳ ಬಳಿ ಓಡಿತು. ಅಮ್ಮಕೋಳಿ, `ಕೆಂಪಿ, ಎಲ್ಲಿಗೆ ಹೋಗುತ್ತಿರುವೆ? ಒಬ್ಬಳೇ ಹೋಗಬೇಡ’ ಎಂದು ಕರೆಯಿತು. ಕೆಂಪಿ ನಿಲ್ಲದೇ, `ಆ ಗಿಡದಲ್ಲಿನ ಕೆಂಪು ಹಣ್ಣು ನನ್ನದೇ’ ಎನ್ನುತ್ತಾ ಓಡಿತು.

ಗಿಡಗಳಲ್ಲಿ ಕೆಂಪಿಗೆ ಕೆಂಪು ಕೆಂಪಾದ ಉದ್ದನೆಯ ಹಣ್ಣುಗಳು ಕಂಡವು. ಆದರೆ ಅದು ಯಾವ ಹಣ್ಣೆಂದು ತಿಳಿಯಲಿಲ್ಲ. ರುಚಿ ನೋಡಲು ನಿಧಾನವಾಗಿ ಹಣ್ಣಿಗೆ ಬಾಯಿ ಹಾಕಿತು.

ಹಣ್ಣನ್ನು ಸ್ವಲ್ಪ ಕಚ್ಚುತ್ತಲೇ, `ಅಯ್ಯೋ ಖಾರ… ಖಾರ… ಕೊಕ್ಕೊ ಕೋಕೋ… ಅಮ್ಮಾ ನನ್ನ ಬಾಯಿ ಉರಿಯುತ್ತಿದೆ’ ಎಂದು ಕೂಗತೊಡಗಿತು. ಏಕೆಂದರೆ ಅದು ತಿಂದದ್ದು ಹಣ್ಣು ಮೆಣಸಿನ ಕಾಯಿ.

ಅಷ್ಟರಲ್ಲಿ ಹಳದಿಯು, ಕೆಂಪಿ ಮೆಣಸಿನ ಕಾಯಿ ತಿಂದು ಕೂಗುತ್ತಿದ್ದುದನ್ನು ನೋಡಿ ಮನೆಯ ಒಳಗೆ ಓಡಿತು. ಅಮ್ಮಕೋಳಿ, `ಏ ಹಳದಿ ನೀನೆಲ್ಲಿ ಹೋಗುತ್ತಿರುವೆ? ನಿಲ್ಲು. ಕೆಂಪಿ… ಬಂದೆ ಇರು’ ಎನ್ನುತ್ತಾ ಕೆಂಪಿಯ ಹತ್ತಿರ ಓಡಿತು.

ಅಮ್ಮಕೋಳಿ ಕೆಂಪಿಯ ಹತ್ತಿರ ಬಂದು ಸಮಾಧಾನ ಹೇಳುತ್ತಾ, `ನಾನು ಕೂಗಿದರೂ ನಿಲ್ಲದೇ ಓಡಿ ಬಂದೆ. ಕೆಂಪು ಬಣ್ಣದ ತಿನಿಸೆಲ್ಲ ನಿನ್ನದೇ ಎನ್ನುತಿದ್ದೆ. ಈಗ ನೋಡು ಹೇಗಾಯಿತು ಅಂತ. ಅದಕ್ಕೆ ಅವಸರ ಮಾಡಬಾರದು ಅನ್ನೋದು’ ಎಂದಿತು. ಅಷ್ಟರಲ್ಲಿ ಹಳದಿಯು ಮನೆಯೊಳಗಿಂದ ಹಳದಿ ಬಣ್ಣದ ಬೂಂದಿ ಲಾಡು(ಉಂಡೆ) ಕಚ್ಚಿಕೊಂಡು ಬಂದಿತು.

ಹಳದಿ, `ಕೆಂಪಿ ತಗೋ ಈ ಲಾಡು ತಿನ್ನು. ನಿನ್ನ ಖಾರವೆಲ್ಲ ಮಾಯವಾಗುತ್ತೆ’ ಎನ್ನುತ್ತಾ ಕೆಂಪಿಯ ಬಾಯಿಗೆ ಲಾಡನ್ನು ಹಾಕಿತು. ಸಿಹಿ ಸಿಹಿಯಾದ ಹಳದಿ ಲಾಡನ್ನು ತಿಂದಕೂಡಲೇ ಕೆಂಪಿಯ ಖಾರ ಮಾಯವಾಗಿ ಬಹಳ ಖುಷಿ ಆಯಿತು.

ಕೆಂಪಿ, `ನಾನಿನ್ನು ಯಾವತ್ತೂ ಹೀಗೆ ಮಾಡಲ್ಲ. ಏನಿದ್ದರೂ ಎಲ್ಲರ ಜೊತೆ ಹಂಚಿಕೊಳ್ಳುವೆ. ಅಮ್ಮಾ ನೀನು ಹೇಳಿದ ಹಾಗೇ ಕೇಳುವೆ’ ಎಂದಿತು. ಅಮ್ಮಕೋಳಿ ಮರಿಕೋಳಿಗಳನ್ನು ತನ್ನ ಮೈಮೇಲೆ ಹತ್ತಿಸಿಕೊಂಡಿತು. ಎಲ್ಲರೂ ಬಹಳ ಸಂತೋಷದಿಂದ ಕಾಳನ್ನು ಹುಡುಕಲು ಓಡಿದವು.

Leave a Reply