ಮಾತಿಗೆ ಇಷ್ಟಾದರೆ; ಮೌನಕ್ಕೆ ಎಷ್ಟು?

ಮಾತಿಗೆ ಇಷ್ಟಾದರೆ; ಮೌನಕ್ಕೆ ಎಷ್ಟು?

ಬಜಾರಿನಲ್ಲೊಬ್ಬ ಗಿಳಿ ಮಾರುವವನಿದ್ದ. ನೋಡಲಿಕ್ಕೆ ಸುಂದರವಾದ ಗಿಳಿಗಳು. ಆದರೆ ಬೆಲೆ ಹೆಚ್ಚು. ಹತ್ತು ರೂಪಾಯಿಗೆ ಒಂದು ಗಿಳಿ. ನಸಿರುದ್ದೀನ ಚೌಕಾಸಿ ಮಾಡಿದ. ಆದರೆ ಗಿಳಿ ಮಾರುವವನು ಕಿಂಚಿತ್ತೂ ಬೆಲೆ ಕಡಿಮೆ ಮಾಡಲು ಒಪ್ಪಲಿಲ್ಲ.
ಮುಲ್ಲಾ ನಸಿರುದ್ದೀನನಿಗೆ ಸಿಟ್ಟು ಬಂತು. ಮನೆಗೆ ಬಂದು ಮನೆಯಲ್ಲಿದ್ದ ಕೋಳಿಗಳನ್ನೆಲ್ಲಾ ಬೀದಿಯಲ್ಲಿ ಹರಡಿಕೊಂಡು ಕೂತ.
‘ಒಂದು ಕೋಳಿಗೆ 25 ರೂಪಾಯಿಗಳು’ ಎಂದು ಕೂಗತೊಡಗಿದ.
ಜನರಿಗೆ ನಗು ಬಂತು.
‘ಕೋಳಿಗೆಲ್ಲಾದರೂ 25 ರೂಪಾಯಿಗಳನ್ನು ಯಾರಾದರೂ ಕೊಡುತ್ತಾರಾ’ ಎಂದು ಹಾದಿಹೋಕರು ಪ್ರಶ್ನಿಸಿದರು.
ಅದಕ್ಕೆ ನಸಿರುದ್ದೀನ ‘ಒಂದು ಗಿಳಿಗೆ 10 ರೂಪಾಯಿ ಕೊಡಬಹುದಾದರೆ ಒಂದು ಕೋಳಿಗೆ 25 ರೂಪಾಯಿ ಯಾಕೆ ಕೊಡಬಾರದು?’ ಎಂದ.
‘ಗಿಳಿ ಸುಂದರವಾಗಿದೆ. ಮತ್ತು ಮಾತಾಡುತ್ತದೆ. ಆದ್ದರಿಂದ ಅದಕ್ಕೆ ಹತ್ತು ರೂಪಾಯಿ’ ಎಂದ ಮಾರುವವ.
‘ನನ್ನ ಕೋಳಿ ಮಾತಾಡುವುದಿಲ್ಲ. ನೀನು ಗಾದೆ ಮಾತು ಕೇಳಿಲ್ಲವೇ? ಮಾತು ಬೆಳ್ಳಿ, ಮೌನ ಬಂಗಾರ ಅಂತ. ಅದಕ್ಕೆ ನನ್ನ ‘ಮೌನ’ಕ್ಕೆ ಬಂಗಾರದ ಬೆಲೆ’ ಎಂದ ನಸಿರುದ್ದೀನ.

Leave a Reply