ರುದ್ರಾಕ್ಷ ಶಿವನ ಕಣ್ಣ ಹನಿ

ರುದ್ರಾಕ್ಷ ಶಿವನ ಕಣ್ಣ ಹನಿ
ವೀರಭದ್ರಪ್ಪ ಧೋತರದ ಚುಂಗು ಎತ್ತಿ ಹಿಡಿದು ಭರಭರ ಹೊರಟನೆಂದರೆ ಮೈಲು ದೂರ ಇರುವ ಮುರುಘಾಮಠ ಮಾರು ದೂರವಾಗುತ್ತದೆ. ಎತ್ತರದ ಬಡಕುದೇಹಿ ವೀರಭದ್ರಪ್ಪನನ್ನು ‘ಉದ್ದಾನ ವೀರಭದ್ರ’ ಎಂದು ಓಣಿ ತುಂಟ ಹುಡುಗುರು ಅವನ ಹಿಂದಿನಿಂದ ಆಡಿಕೊಳ್ಳಲು ಅದೇ ಓಣಿಯ ‘ಗಿಡ್ಡ ವೀರಭದ್ರ’ನೂ ಒಂದು ಕಾರಣ. ಹೆಬ್ಬಳ್ಳಿ ಅಗಸಿಯ ಕರೆ ಹಂಚಿನ ನಾಲ್ಕು ಪಾಲಾದ ಹಿರೇರ ಮನಿಯು ಮೂರು ಫೂಟು ಅಗಲದ ಓಣಿಯಲ್ಲಿತ್ತು. ಒಂದು ಹಾಲ್ಕಮ್ ಡೈನಿಂಗ್ ಆದರೆ ಇನ್ನೊಂದು ಕಿಚಿನ್ ಕಮ್ ಬೆಡರೂಮ್ ಆಗಿತ್ತು. ಮನೆ ಮುಂದಿನ ಗಟಾರಕ್ಕೆ ಹೊಂದಿಕೊಂಡಂತೆ ಒಂದು ಬಿದಿರಿನ ತಟ್ಟಿಗೋಡೆಯ ಬಾತರೂಂ ಇತ್ತು. ಇಂಥಾ ಮನೆಯಲ್ಲಿ ವಾಸವಿದ್ದ ವೀರಭದ್ರಪ್ಪನಿಗೆ ಮೂವರು ಗಂಡುಮಕ್ಕಳು ಇಬ್ಬರು ಹೆಣ್ಣುಮಕ್ಕಳು. ಹತ್ತನೇ ತರಗತಿ ಫೇಲಾದ ವೀರಭದ್ರಪ್ಪ ಗದಿಗೆಪ್ಪ ಶೆಟ್ಟರ ವಕಾರದಲ್ಲಿ ಹತ್ತಿ ಅಂಡಿಗೆಯ ಮೇಲೆ ಹೆಸರು, ತೂಕ ಬರೆಯುವ ಕಾರಕೂನ್ ಕೆಲಸಕ್ಕೆ ಸೇರಿದ್ದ. ಚಿಂಚಲಿಕರ ರಾಮಣ್ಣ ಹೆಡ್ ಕ್ಲರ್ಕು. ರಾಮಣ್ಣನ ಮಕ್ಕಳು ಮುಂಬಯಿಗೆ ಕೆಲಸಕ್ಕೆ ಸೇರಿ ಅಲ್ಲಿಯೇ ಮನಿ ಮಾಡಿದ ಮೇಲೆ ರಾಮಣ್ಣನನ್ನೂ ಕರೆಸಿಕೊಂಡಿದ್ದರು. ಆ ಹೊತ್ತಿಗಾಗಲೇ ವ್ಯವಹಾರಜ್ಞಾನ ಅರಿತ ವೀರಭದ್ರಪ್ಪನನ್ನೇ ಗದಿಗೆಪ್ಪ ಶೆಟ್ಟರು ಪ್ರಮೋಶನ ಕೊಟ್ಟು ಹೆಡ್ ಕ್ಲರ್ಕ ಮಾಡಿದರು. ಪ್ರಮೋಶನ್ ಆದಮೇಲೆ ವೀರಭದ್ರಪ್ಪನ ದಿನಚರಿ ಕಾಲನ ಕೈಗೆ ಸಿಕ್ಕು ಕಿಚಡಿಯಾಗಿತ್ತು. ಬೆಳಿಗ್ಗೆ ಎದ್ದು ಹೆಬ್ಬಳ್ಳಿ ಅಗಸಿ ದಾಟಿ ಯಾವುದಾದರೂ ಒಂದು ಹೊಲದಲ್ಲಿ ದಿನಕರ್ಮ ತೀರಿಸಿ, ತಣ್ಣೀರು ಸ್ನಾನ ಮಾಡಿ, ಹಾಲಗೇರಿ ಹಣಮಪ್ಪಗ ಕೈಮುಗಿದು ಮಾರಿಗೊಂದು ಹೆಜ್ಜೆ ಹಾಕಿ ಮುರುಘಾಮಠದ ಗದ್ದಿಗಿಗೆ ಹಣಿ ಹಚ್ಚಿ ಈಬತ್ತಿ ಹಚುಗೊಂಡು ಅಲ್ಲೇ ಗಿಡದಾಗಿನ ನಾಲ್ಕು ಬಿಲ್ವಪತ್ರಿ ಹರಕೊಂಡು ಮನಿಗೆ ಬಂದ ಲಿಂಗಪೂಜೆ ಮಾಡಿ ಬಿಲ್ವಪತ್ರಿ ಏರಸೂದ್ರಾಗ ರೇಣವ್ವನ ರೊಟ್ಟಿ ರೆಡಿಯಾಗಿರುತ್ತಿತ್ತು. ಎರಡು ರೊಟ್ಟಿ ತಿಂದು ನಾಕು ರೊಟ್ಟಿ ಕಟಗೊಂಡು ಒಂಭತ್ತು ಅನ್ನೂದ್ರಾಗ ಮನಿ ಬಿಟ್ಟಾಂದ್ರ ರಾತ್ರಿ ಒಂಭತ್ತಕ್ಕೆ ಬರೂದು. ಆದರೆ ಇಂದು ಮುರುಘಾಮಠಕ್ಕೆ ಹೊರಟ ಅವನ ಕಾಲುಗಳು ಒಂದು ರೀತಿಯ ನಡುಕದೊಂದಿಗೆ ವೇಗ ಪಡೆಯಲು ಯತ್ನಿಸುತ್ತಿದ್ದವು. ಮನಸ್ಸಿನ ವೇಗಕ್ಕೂ ಕಾಲಿನ ವೇಗಕ್ಕೂ ತಾಳೆಯಾಗದೇ ಕಾಲುಗಳು ತೊಡರುತ್ತಿದ್ದವು.

ಕೇಂದ್ರದಲ್ಲಿ ಸರ್ಕಾರ ಬದಲಾಗಿತ್ತು. ಭಾರತದಲ್ಲಿ ಭಯೋತ್ಪಾದನೆ ಉಂಟು ಮಾಡಲು ಪಾಕಿಸ್ತಾನ ಇನ್ನಿಲ್ಲದ ಕಸರತ್ತು ನಡೆಸಿತ್ತು. ಕಾಶ್ಮೀರ ನಿತ್ಯ ನರಕವಾಗಹತ್ತಿತ್ತು. ವೀರಭದ್ರಪ್ಪನ ಮಗ ಮಹಾಂತೇಶ ಕಾಶ್ಮೀರದಲ್ಲಿದ್ದುದು ವೀರಭದ್ರಪ್ಪನ ಸಧ್ಯದ ಆತಂಕಕ್ಕೆ ಕಾರಣವಾಗಿತ್ತು. ಮಹಾಂತೇಶ ಎಸ್.ಎಸ್.ಎಲ್.ಸಿ ಪಾಸು ಮಾಡಿ ಮುಂಜಾನೆ ಸಂಜೆ ಅಂತ ಕಾಲೇಜಿಗಿಂತ ಮಲ್ಲಸಜ್ಜನ ವ್ಯಾಯಾಮ ಶಾಲೆಯೊಳಗ ಹೆಚ್ಚು ಸಮಯ ಕಳಿತೀದ್ದ. ಅದೇ ವೇಳೆ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಮಿಲ್ಟ್ರಿ ಭರ್ತಿ ನಡೆದಿತ್ತು. ಸುದ್ದಿ ತಿಳಿದು ಹಾರಿ ಹೋದ ಮಹಾಂತೇಶನ ಎತ್ತರ ನೋಡಿ ಭರ್ತಿ ಮಾಡಿ ಕೊಳ್ಳುವ ಅಧಿಕಾರಿ ಪದೇ ಪದೇ ವಯಸ್ಸು ಕೇಳಿದ. ಎದಿ ಅಗಲ ಮತ್ತು ತೂಕ ಕಮ್ಮಿ ಇತ್ತು. ತಮ್ಮ ಸಹಅಧಿಕಾರಿಗೆ ‘ಇಸ್ಕೊ ಭರ್ತಿ ಕರ್ಲೊ, ಛಾತಿ ಜೌರ ವಜನ ಅಪ್ನ ಆಪೆ ಭಡಜಾಯೇಗಾ’ ಎಂದು ಹೇಳಿದ ಮಹಾಂತೇಶ ಮಿಲ್ಟ್ರಿ ಭರ್ತಿಯಾಗಿ ಪಟಿಯಾಲಾದಲ್ಲಿ ಒಂದು ಹಂತದ ಟ್ರೇನಿಂಗ ಮುಗಿಸಿ ಊರಿಗೆ ಬಂದ. ಆಗ ಅವನನ್ನು ವೀರಭದ್ರಪ್ಪ ಮುರುಘಾಮಠಕ್ಕೆ ಕರಕೊಂಡು ಹೋದ. ದಾರಿಯಲ್ಲಿ ಅಪ್ಪನ ಹೆಜ್ಜಿಗೆ ಹೆಜ್ಜಿ ಹಾಕಲಾರದೇ ಮಹಾಂತೇಶ ಮಿಲ್ಟ್ರಿ ಸುದ್ದಿ ತಗದು ಅಪ್ಪ ಸಾವಕಾಶ ಹೋಗುವಂತೆ ಮಾಡಿದ. ‘ಈಗ ಯು.ಎನ್.ಓ. ಅಂತ ಒಂದ ಐತಿ. ಒಂದು ದೇಶ ಇನ್ನೊಂದು ದೇಶದಮ್ಯಾಲ ಸುಮಸುಮ್ಕ ಯುದ್ಧಕ್ಕೆ ಹೋಗು ಹಂಗಿಲ್ಲ ಹಂಗ ಹೋದ್ರ ಆ ದೇಶಕ್ಕ ಔಷಧ, ಆಹಾರಾ ಎಣ್ಣೆ ಎಲ್ಲಾ ಬಂದ ಮಾಡತಾರ’ ಯುದ್ಧ ಆಗಂಗಿಲ್ಲ ಅಂದ್ರ ಮಿಲ್ಟ್ರಿ ಸೇರಾಕ ಯಾಕ ಹೆದರಬೇಕು. ಪಂಜ್ಯಾಬಿನಾಗ ಮನಿಗ ಇಬ್ರ ಮಿಲ್ಟ್ರ್ಯಾಗ ಅದಾರ’. ಎಂದು ಹೇಳಿದ. ‘ಏ ಇವೆಲ್ಲ ಸುಳ್ಳ ಬಿಡಲೇ ತಮ್ಮ, ಆ ಅಮೇರಿಕಾ ಇರಾಕ ಮ್ಯಾಲ ಸುಮಸುಮ್ಕ ದಾಳಿ ಮಾಡಿಲಿಲ್ಲೇನು? ಆಗ ಏನ ಮಾಡಿತಪಾ ನಿಮ್ಮ ಯು.ಎನ್.ಓ. ಹೋಗಲಿ, ಚೀನಾದೇಶ, ಟಿಬೇಟ ಹಿಡಕೊಂಡು ಕುಂತೈತೆಲ್ಲಾ ಏನ ಮಾಡಿತೈತಿ ನಿಮ್ಮ ಯು.ಎನ್.ಓ. ನೋಡು ಮಿಲ್ಟ್ರಿ ಅಂದ್ರ ಮಿಲ್ಟ್ರಿ, ಯಾವಾಗಲೂ ಗನ್ನ ಹಿಡಕೊಂಡು ಅಡ್ಡಾಡಬೇಕ್ಕಾಕ್ಕತಿ’ ಅಂದ. ಲೋಕ ಕಂಡ ಅಪ್ಪನ ವಾದಕ್ಕೆ ಏನು ಹೇಳಬೇಕು ಅಂತ ತಿಳಿಯದೇ ಮಹಾಂತೇಶ ಒದ್ದಾಡುತ್ತಿರುವಾಗಲೇ ಮಠ ಬಂದು ಅವನ್ನ ಆ ಮುಜುಗರದಿಂದ ಪಾರು ಮಾಡಿತ್ತು. ಮಠದಲ್ಲಿ ಗದ್ದಿಗಿಗೆ ನಮಸ್ಕಾರಮಾಡಿ ‘ಅಜ್ಜಾರ ಭೇಟ್ಟಿ ಮಾಡೂಣ ಬಾ’ ಎಂದು ಮಗನನ್ನು ಅಜ್ಜಾರ ಖೋಲಿಗೆ ಕರಕೊಂಡು ಹೋದ. ಅಜ್ಜಾರು ಅದೇ ಲಿಂಗ ಪೂಜೆ ಮುಗಿಸಿ ಭಕ್ತರ ಭೇಟ್ಟಿಗೆ ಕುಳತಿದ್ದರು. ಅಜ್ಜಾರ ಮುಂದ ಅಡ್ಡಬಿದ್ದು ‘ಮಗಾ ಮಿಲ್ಟ್ರಿ ಸೇರ್ಯಾನ ನೀವ ದಾರಿ ತೋರಸಬೇಕು’. ಎಂದು ಬೇಡಿಕೊಂಡ ಅಜ್ಜಾರು, ‘ದೇಶ ಸೇವೆ ಮಾಡಬೇಕು ಮಾಡಲಿಬಿಡು’ ಎಂದು ಮಹಾಮೃತುಂಜಯ ಜಪ ಮಂತ್ರಿಸಿ ಒಂದು ರುದ್ರಾಕ್ಷಿ ಕೊಟ್ಟರು. ‘ಇದನ್ನ ಒಂದು ಅರಿವಿ ಒಳಗ ಸುತ್ತಿ ಮನಿದೇವರ ಹೆಸರು ತಗೊಂಡು ಅವನ ಕೊಳ್ಳಾಗ ಕಟ್ಟು. ಇದು ಅವನ ಕೊಳ್ಳಾಗ ಇರೋತನಕಾ ಅವಗ ಏನೂ ಆಗಂಗಿಲ್ಲ ಹೆದರಬ್ಯಾಡ ಹೋಗಿ ಬರ್ರೀ ಶಿವಾ ಒಳ್ಳೆದು ಮಾಡತಾನ!’ ಎಂದು ಆಶೀರ್ವಾದ ಮಾಡಿ ಕಳಿಸಿದರು.

ಮೊದಲ ರಜೆ ಮುಗಿಸಿ ಹಿಂದಿರುಗಿದ ಮಹಾಂತೇಶನನ್ನು ಕಾಶ್ಮೀರಕ್ಕೆ ವರ್ಗಮಾಡಿದ್ದರು. ವಾರಕ್ಕ ಹದಿನೈದು ದಿನಕ್ಕೆ ಒಮ್ಮೆ ಬರುತ್ತಿದ್ದ ನಳದ ನೀರು ನೋಡಿದ್ದ ಮಹಾಂತೇಶ ಕಾಶ್ಮೀರದ ಹಿಮ ನೋಡಿ ದಂಗಾದ. ಅಲ್ಲಿಂದ ಹೆಲಿಕ್ಯಾಪ್ಟರನ್ಯಾಗ ಅವನನ್ನು ಪೂಂಚ ವಿಭಾಗದ ಶಿಬಿರಕ್ಕೆ ಕಳಿಸಲಾಯಿತು. ಜಾಟ್ ರೆಜಿಮೆಂಟಿನ ಕಮಾಂಡರ ಸುಖವಿಂದರ ರುಲಿಯಾ ಇವನಿಗೆ ಏನು ಮಾಡಬೇಕು ಹೇಗಿರಬೇಕು, ಸ್ವರಕ್ಷಣೆ ಆರೋಗ್ಯ ಕುರಿತು ಸೂಕ್ಷ್ಮಗಳನ್ನೆಲ್ಲ ಹೇಳಿದರು. ತುಮಕೂರಿನ ಹರೀಶಗೌಡ ಇವನು ಇಬ್ಬರೇ ಕನ್ನಡಿಗರು. ಉಳಿದವರು ಇಬ್ಬರು ಮರಾಠಿಗರು ಇನ್ನುಳಿದ ಮೂವರು ಹರಿಯಾಣ, ಉತ್ತರಾಂಚಲದವರು. ಎಲ್ಲರೂ ಇಪ್ಪತ್ತು ಇಪ್ಪತೈದರ ತರುಣರು. ಕಾಲೇಜು, ಕ್ಯಾಂಟಿನ, ಬಸ್ ಸ್ಟ್ಯಾಂಡನಲ್ಲಿ ನಿಂತು, ಹೋಗಿ ಬರುವ ಹುಡಿಗಿಯರನ್ನು ಛೇಡಿಸುತ್ತಾ ಅಥವಾ ಯಾವುದೋ ಒಂದು ಹುಡಿಗಿ ಮೇಲೆ ಮನಸಿಟ್ಟು ಅವಳನ್ನು ಕಾಯುತ್ತಾ ಕಣ್ಣಿಗೆ ಕನಸು ಕೊಡುವ ವಯಸ್ಸದು. ಜಗತ್ತಿನ ಅತೀ ಎತ್ತರದ ರಣರಂಗವಾದ ಸಿಯಾಚಿನ ಬೆಟ್ಟದಲ್ಲಿ ಝಲು ಪರ್ವತ ಶ್ರೇಣಿಗುಂಟ ಅಡ್ಡಾಡುತ್ತಾ ದುರ್ಬಿನಿಗೆ ಕಣ್ಣು ನೆಟ್ಟು ಅಲ್ಲಿಂದೀಚಿಗೆ ನುಸುಳುವ ಪಾಕ್ ಉಗ್ರರನ್ನು ಕಾಯುವ ಕೆಲಸ ಇವರದಾಗಿತ್ತು. ಆದರೆ ಯಾರಿಗೂ ತಮ್ಮ ಕಾಯಕ ಬೇಸರ ತಂದಿರಲಿಲ್ಲ. ಎದುರಿಗೆ ಭೇಟಿಯಾಗುವ ಪ್ರತಿ ಸೈನಿಕನಿಗೆ ‘ರಾಮ್ ರಾಮ್’ ಎಂದು ವಂದನೆ ಸಲ್ಲಿಸುತ್ತ ತುಂಟ ಚೇಷ್ಟೆಗೆ ಇಳಿಯುತ್ತಿದ್ದ ಮಹಾಂತೇಶ ಅವರೊಳಗೊಬ್ಬನಾಗಿ ‘ಮಾಹಿ’ ಎಂದು ಕರೆಸಿಕೊಳ್ಳುತ್ತಿದ್ದ. ದೇವಭೂಮಿ ಅಂದರೆ ಇದೇ. ನಮ್ಮ ಅನೇಕ ಸಾಧು ಸಂತರು ಓಡಾಡಿದ ಸ್ಥಳವಿದು. ಅಲ್ಲಿ ಕಾಣುವ ಯಾವುದೋ ಒಂದು ಬೆಟ್ಟದ ಹಿಂದೆ ನಾವು ಪೂಜಿಸುವ ಶಿವನಿದ್ದಾನೆಂದು ನಂಬಿಕೆ ನಮ್ಮದು. ಈ ಭೂಮಿ ನಮ್ಮ ಪ್ರಾಣ ಹೋದರೂ ಬಿಡಬಾರದು. ಎಂದು ಹೀಗೆಲ್ಲ ವಿಚಾರಗಳು ಬಂದು ಕೊರಳೊಳಗಿದ್ದ ರುದ್ರಾಕ್ಷಿಯನ್ನು ಮುಟ್ಟಿ ಕಣ್ಣಿಗೊತ್ತಿಕೊಂಡು ಮಹಾಂತೇಶ. “ಎಂಥಾ ಸುಂದರ ಕಣಿವೆ”ಯಿದು ನಮ್ಮ ಅವ್ವನ್ನ ತಂಗೇರನ ಕರಕೊಂಡು ಬಂದು ತೋರಿಸಬೇಕು ಎಂದು ಕೊಳ್ಳುತ್ತಿರುವಾಗಲೇ ಎಲ್ಲಿಂದಲೋ ಬಂದ ಮೇಘಗಳು ನೆಲ್ಲಿಕಾಯಿ ಗಾತ್ರದ ಆಣಿಕಲ್ಲು ಸುರಿದು ಹೋದವು. ಆಗ ಮಹಾಂತೇಶನಿಗೆ ಧಾರವಾಡದಲ್ಲಿನ ತನ್ನ ತಂಗಿಯರು ಯಾವಾಗಲೋ ಒಮ್ಮೆ ಬೀಳುವ ಆಣಿಕಲ್ಲುಗಳನ್ನು ಅಪ್ಪನ ಛತ್ರಿ ಉಲ್ವಾಮಾಡಿ ಹಿಡಿದು ಆಯ್ದು ತಿನ್ನುವ ದೃಶ್ಯ ನೆನಪಾಗಿ ನಕ್ಕ. ಮುನ್ನೂರು ಅಡಿ ಆಳದಲ್ಲಿರುವ ತನ್ನ ಬರಾಕ ನಿಂದಲೇ ದೂರದ ತನ್ನೂರಿನೊಂದಿಗೆ ಭಾವನಾತ್ಮಕ ಬೆಸುಗೆ ಹಾಕಿಕೊಂಡು ದಿನಕಳೆಯುತ್ತಿದ್ದ.
ಪೂಂಚ ವಿಭಾಗದ ಹೊರಗೆ ಆಣಿಕಲ್ಲು ಮಳೆ ಸುರಿಯುತ್ತಿದ್ದರೂ ಒಳಗೆ ಹೊಗೆಯಾಡುತ್ತಿತ್ತು. ಜಮ್ಮು ಕಾಶ್ಮೀರದ ಗುರೇಜ ವಲಯದಲ್ಲಿ ಇಪ್ಪತ್ತೈದರಿಂದ ಮೂವತ್ತು ಉಗ್ರರು ನುಸುಳಿದ್ದಾರೆ ಎಂಬ ಸುಳಿವನ್ನು ಕುರಿಕಾಯುವವರು ತಿಳಿಸಿದರು. ಲಷ್ಕರ್ ಎ ತೊಯ್ಬಾ, ಜೈಶೆ-ಇ-ಮೊಹಮ್ಮ ದ ಅಲ್ಬದ್ರ ಮುಂತಾದ ಸಂಘಟನೆಗಳು ಪಾಕ್ನ ಅನೇಕ ಶಿಬಿರಗಳಲ್ಲಿ ಮುಸ್ಲಿಂ ತರುಣರನ್ನು ಧರ್ಮದ ಹೆಸರಲ್ಲಿ ಮರಳು ಮಾಡಿ ಉಗ್ರರನ್ನಾಗಿಸುವ ಸಂಗತಿ ಭಾರತಕ್ಕೆ ತಿಳಿದಿತ್ತು. ಈ ವಿಚಾರದಲ್ಲಿ ಎಚ್ಚರ ವಹಿಸುವಂತೆ ಸೈನ್ಯಕ್ಕೆ ಸೂಚನೆ ಬಂದಿತ್ತು. ಸೈನ್ಯ ಶಿಬಿರಗಳಲ್ಲಿ ಸರಬರ ಓಡಾಟ ಆರಂಭವಾಯಿತು. ಮೇಲಾಧಿಕಾರಿಗಳು ಕಟ್ಟು ನಿಟ್ಟಾದ ಆದೇಶ ಹೊರಡಿಸ ಹತ್ತಿದರು. ಇವು ಯುದ್ಧಕ್ಕೆ ಮುನ್ನುಡಿ ನೀಡಿದವು.
ಮಹಾಂತೇಶ ಇದ್ದ ಕಮಾಂಡರ ಸುಖವಿಂದರ ರುಲಿಯಾನ ತಂಡ ಮುಂದಿನ ಬರಾಕ ಆಕ್ರಮಿಸಿ ಅಲ್ಲಿಂದ ಪಾಕ್ ಉಗ್ರರ ಮೇಲೆ ಕಣ್ಗಾವಲು ಮಾಡಬೇಕು ಎಂಬ ಆದೇಶ ಬರುತ್ತಿದ್ದಂತೆ, ಮಹಾಂತೇಶ ಸೇರಿದಂತೆ ಎಂಟು ಜನರ ತುಕಡಿಯೊಂದು ದಾರಿಯುದ್ದಕ್ಕೂ ಫೈರಿಂಗ ಮಾಡುತ್ತಲೇ ತನ್ನ ಬರಾಕ ಸೇರಿತು. ಅಲ್ಲಿಗಾಗಲೇ, ಏಕೆ-47 ಸೇರಿದ���ತೆ ಬೋಫೋರ್ಸ ಗನ್ಗಳನ್ನು ಶೇಖರಣೆಯಾಗಿತ್ತು. ಹಗಲು ರಾತ್ರಿ ಫೈರಿಂಗ ಶುರುವಿತ್ತು. ರಣರಂಗ ಚುರುಕಾಗಿತ್ತು. ಪಾಕ್ ಸೈನಿಕರು ದ್ರಾಸ್ ವಿಭಾಗದಲ್ಲಿ ಕೆಲವೊಂದು ಪ್ರದೇಶಗಳನ್ನು ವಶಪಡಿಸಿಕೊಂಡು, ಶ್ರೀನಗರ-ಕಾರ್ಗಿಲ್ ರಸ್ತೆಯನ್ನು ವಶಪಡಿಸಿಕೊಳ್ಳುವ ಸ್ಥಿತಿಯಲ್ಲಿತ್ತು. ಇದರಿಂದ ಲೇಹ ಮತ್ತು ಸಿಯಾಚಿನ ಜೊತೆ ಭಾರತದ ಸಂಪರ್ಕ ಕಡಿತವಾಗಲಿತ್ತು. ಮೊದಲು ಕಾರ್ಗಿಲ್ ಪಟ್ಟಣದ ಮೇಲೆ ಶೆಲ್ ದಾಳಿಯನ್ನು ಪಾಕ್ ಸೈನಿಕರು ಆರಂಭಿಸಿದರು. ದ್ರಾಸ, ತೋಲೊಲಿಂಗ್ ಟೈಗರ ಹಿಲ್ಸಗಳಲೆಲ್ಲಾ ಪಾಕ್ ಸೈನಿಕರ ಜಾಡುಗಳು ಕಂಡು ಬಂದವು.
ಟೈಗರ ಹಿಲ್ಸ ಏರಿ ಕುಳಿತ ಪಾಕ್ ಸೈನಿಕರು ಮಹಾಂತೇಶನ ತಂಡದವರು ಕುಳಿತಿದ್ದ ಬರಾಕನ್ನು ಅದ್ಹೇಗೋ ಪತ್ತೆ ಹಚ್ಚಿಬಿಟ್ಟರು. ಇವರು ಹೊರ ಬರದಂತೆ ಪದೇ ಪದೇ ಗುಂಡಿನ ದಾಳಿ ನಡೆಸಿದರು. ಆದರೆ ಬಿಸಿ ರಕ್ತದ ಚಾಣಾಕ್ಷ ಸುಖವಿಂದರ್ ರುಲಿಯಾ ತನ್ನ ತಂಡವನ್ನು ಇನ್ನಷ್ಟು ಮುನ್ನಡೆಸಿದ ಮಹಾಂತೇಶನನ್ನು ಜೊತೆಗೆ ಎಳೆದುಕೊಂಡು ರಾತ್ರಿ ವೇಳೆ ಇನ್ನೊಂದು ಸುರಕ್ಷಿತ ತಾಣ ಹುಡುಕಿದ. ರಾತ್ರಿ ತಿರುಗಿ ನಾಳೆ ಎಲ್ಲಿ ಭೊಪೋರ್ಸ ಗನ್ ಇಡಬೇಕು ಹೇಗೆ ವೈರಿಪಡೆಯನ್ನು ಹಿಮ್ಮೆಟ್ಟಿಸಬೇಕು ಎಂದೆಲ್ಲ ಪ್ಲಾನ್ ಮಾಡಿ ರಾತ್ರೋರಾತ್ರಿ ಬರಾಕನಿಂದ ಗನ್ ಗಳನ್ನು ಸಿಡಿಗುಂಡುಗಳನ್ನು ಹೊರ ತರಿಸಿದ. ವೈರಲೇಸ್ ಸೆಟ್ ಮೂಲಕ ಹೆಡಕ್ವಾರ್ಟರ್ಸಗೆ ಮೇಸಜ್ ಕಳುಹಿಸಿದ ರಾತ್ರಿಯೆಲ್ಲ ದಣಿದಿದ್ದರಿಂದ ಬೊಫೋರ್ಸ ಗನ್ ಗಳ ಕಾಯುವ ಕೆಲಸವಿದ್ದದ್ದರಿಂದ ಸುಖವಿಂದರ್ ರುಲಿಯಾ ಮತ್ತು ಮಹಾಂತೇಶ ಬರಾಕನಿಂದ ಹೊರಗುಳಿದು ಪಾಳಿಯ ಮೇಲೆ ನಿದ್ದೆಗೆಟ್ಟರು ಇತ್ತ ಬರಾಕನಲ್ಲಿ ಹರೀಶಗೌಡ ಮತ್ತು ವಿನಾಯಕ ಜಾಧವ ಫೈರಿಂಗ ನಡೆಸಿದ್ದರು ರಾಮನಾರಾಯಣ ವೈರಲೇಸ್ ಸೆಟ್ ನಿಂದ ಸಂಜ್ಞೆಗಳನ್ನು ಸ್ವೀಕರಿಸುತ್ತಿದ್ದ. ಆ ಭೀಕರ ರಾತ್ರಿ ಪಾಕ್ ಕಡೆಯಿಂದ ಬಿದ್ದ ಬಾಂಬೊಂದು ಕ್ಷಣ ಮಾತ್ರದಲ್ಲಿ ಬರಾಕನ್ನು ಧ್ವಂಸಮಾಡಿತ್ತು. ಆರು ಜನ ಸೈನಿಕರು ವೈಯರಲೆಸ್ ಸೆಟ್ ಸೇರಿದಂತೆ ಎಲ್ಲ ಯುದ್ಧ ಸಾಮಗ್ರಿಗಳೂ ಭಸ್ಮವಾಗಿಬಿಟ್ಟವು. ಅನತಿ ದೂರದಲ್ಲಿದ್ದ ಕಮಾಂಡರ ರುಲಿಯಾ ಮತ್ತು ಮಹಾಂತೇಶ ಮಾತ್ರ ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದರು. ರುಲಿಯಾನ ರಕ್ತ ಕುದಿಯ ತೊಡಗಿತು. ಮಹಾಂತೇಶ – ‘ಸರ್ ಈಗ ರಾತ್ರಿಯಾಗಿದೆ. ನಾವು ಫೈರ್ ಮಾಡುವುದು ಬೇಡ, ಬೆಳಿಗ್ಗೆ ಅವರ ಚಲನೆ ನೋಡಿ ನಾವು ನಮ್ಮ ನಿರ್ಧಾರ ತೆಗೆದುಕೊಳ್ಳೊಣ ಎಂದು ಸಮಾಧಾನಿಸಿದ’ ಇತ್ತ ಭಾರತೀಯ ಸೇನೆಯಲ್ಲಿ ತನ್ನ ಒಂದು ತುಕುಡಿಯಿದ್ದ ಬರಾಕನ್ನು ಪಾಕ್ ಸೈನಿಕರು ಹೊಡೆದುರುಳಿಸಿ ವಶಪಡಿಸಿಕೊಂಡರು ಎಂದು ಸುದ್ದಿಯಾಯಿತು. ವೈಯರಲೆಸ್ ಸೆಟ್ ಹಾಳಾಗಿದ್ದರಿಂದ ಬೇರೆ ನೆರವು ಕೋರಲು ಕಮಾಂಡರ್ ರುಲಿಯಾ ಅಸಹಾಯಕನಾದ. ಆದರೂ ಮುಂದಿನ ಆದೇಶ ಬರುವತನಕ ಹೆಜ್ಜೆ ಹಿಂದಿಕ್ಕುವುದಿಲ್ಲ ಎಂದು ಪಣ ಮಾಡಿದ. ಪಾಕ್ ಸೇನೆ ಹೀಗೆ ಆಕ್ರಮಿಸಿದ್ದು ಭಾರತ ಸೇನೆಗೆ ಆಘಾತವಾಯಿತು. ಇನ್ನೂ ಹೆಚ್ಚಿನ ಅನಾಹುತ ಆಗದಿರಲೆಂದು ಸೇನೆಗೆ ಹಿಂದೆ ಸರಿಯಲು ಆದೇಶ ಬಂದಿತು. ಈ ಆದೇಶವನ್ನು ಕದ್ದು ಕೇಳಿದ ಪಾಕ್ ಸೈನ್ಯಪಡೆ ಇನ್ನಷ್ಟು ಮುಂದೆ ಸರಿದು ನಿಂತಿತು. ಕಮಾಂಡರ ರುಲಿಯಾ ಬೆಳಗಾಗುವುದನ್ನೆ ಕಾಯ್ದು ಮಹಾಂತೇಶನಿಗೆ ದುರ್ಬಿನ ಮೇಲೆ ಕಣ್ಣಾಡಿಸಲು ಹೇಳಿದ ದುರ್ಬಿನ್  ನಲ್ಲಿ ಕಂಡ ದೃಶ್ಯ ಮಹಾಂತೇಶನಿಗೆ ನಂಬಲಸಾಧ್ಯವಾಯಿತು. ರಾತ್ರೋರಾತ್ರಿ ಪಾಕ್ ನ ಒಂಭತ್ತು ತುಕಡಿಗಳು ಕಣ್ಣಳತೆಯ ದೂರದಲ್ಲಿ ಬಂದು ಬಿಟ್ಟವೆ. ರುಲಿಯಾಗೆ ವಿಷಯ ತಿಳಿಸಿದ. ರುಲಿಯಾ ದುರ್ಬಿನು ನೋಡಿ ಧೃತಿಗೆಡಲಿಲ್ಲ. ‘ಮಾಹಿ, ಬೊಫೋರ್ಸ ಗನ್ ಸೆಟ್ ಮಾಡು ಒಂದೇ ಏಟಿಗೆ ಅವರನ್ನೆಲ್ಲ ಉಡಾಯಿಸೋಣ’ ಎಂದ. ಮಹಾಂತೇಶನಿಗೆ ಮೈದುಂಬಿ ಬಂದು ಟಾರ್ಗೆಟ್ ಸೆಟ್ ಮಾಡಿದ. ‘ರೆಡಿ ಸರ್’ ಎಂದ. ಮೂರುಸುತ್ತು ಹಾರಿಸಲು ಪಾಕ್ ನ ಒಂದೇ ಸಾಲಿನಲ್ಲಿದ್ದ ಏಳು ತುಕಡಿಗಳು ನಿರ್ನಾಮಗೊಂಡವು. ಪಾಕ್ ಸೇನೆ ಈ ಹೊಡತವನ್ನು ತಾಳಲಿಲ್ಲ. ಪಾಕ್ ಸೇನೆಗೆ ವೈಯರಲೇಸ್ ಸೆಟ್ ಮೂಲಕ ಮಾಹಿತಿ ಹೋಯಿತು. ಈ ಮಾಹಿತಿ ಕದ್ದಾಲಿಸಿದ ಭಾರತೀಯ ಸೇನೆ ಅಷ್ಟೊಂದು ಅನಾಹುತ ಯಾವ ಭಾರತೀಯ ತುಕಡಿಯಿಂದ ಆಗಿದೆ ಎಂದು ಚಿಂತಿಸತೊಡಗಿತು. ಕೂಡಲೇ ಆ ಸ್ಥಳಕ್ಕೆ ಇನ್ನಷ್ಟು ವ್ಯವ್ಯಸ್ಥಿತ ತುಕಡಿಯನ್ನು ಕಳಿಸಿತು. ಆದರೆ ಆ ಒಳಗಾಗಿ ಅಲ್ಲಿ ಇನ್ನೊಂದು ಅನಾಹುತ ಸಂಭವಿಸಿತು. ಕಮಾಂಡರ ರುಲಿಯಾ ಪಾಕ್ ಸೇನೆ ಹಾರಿಸಿದ ಇನ್ನೊಂದು ರಾಕೆಟ್ ಗೆ ಬಲಿಯಾದರು. ಹತ್ತಿರದಲ್ಲಿದ್ದ ಮಹಾಂತೇಶ ತೀವ್ರ ಗಾಯಗೊಂಡ. ಅವನ ಮೈತುಂಬಾ ಶಿಲ್ ನ ವಿಷಕಾರಿ ಚೂರುಗಳು ಸೇರಿದ್ದವು. ಕೂಡಲೇ ಆಗಮಿಸಿದ ಸೇನೆ ಮಹಾಂತೇಶನನ್ನು ಹಾಗೂ ವೀರ ಮರಣ ಹೊಂದಿದ ಕಮಾಂಡರ ಸುಖವಿಂದರ ರುಲಿಯಾನ ದೇಹವನ್ನು ಅಲ್ಲಿಂದ ಸಾಗಿಸಿತು. ದಿನಗಳೆದಂತೆ ಮಹಾಂತೇಶ ಚೇತರಿಸಿಕೊಂಡ. ಟೈಗರ ಹಿಲ್ಸ ಪಾಕ್ ನಿಂದ ಭಾರತೀಯರ ವಶಕ್ಕೆ ಮತ್ತೆ ಬಂದಿತು.
ಅಲ್ಲಿ ಮಗ ಆಸ್ಪತ್ರೆ ಯಲ್ಲಿದ್ದರೆ ಇಲ್ಲಿ ತಂದೆಯ ಮೈಯಲ್ಲಿ ನಡುಕ ಉಂಟಾಗಿತ್ತು ಕರುಳಿಗೆ ಭೌಗೋಳಿಕ ದೂರ ಅಡ್ಡಿ ಪಡಿಸಿದ್ದಿಲ್ಲ. ಮುಂದೆ ಮಹಾಂತೇಶ ಗುಣಮುಖನಾಗಿ ಊರಿಗೆ ಬಂದ. ವೀರಭದ್ರಪ್ಪ ಅವನನ್ನು ಮುರುಘಾಮಠಕ್ಕೆ ಕರೆದೊಯ್ದು ಅಜ್ಜಾರ ಪಾದಕ್ಕೆ ನಮಸ್ಕಾರ ಮಾಡಿಸಿದ ಯುದ್ದ ವಿವರವನ್ನು ಮಹಾಂತೇಶ ಒಪ್ಪಿಸಿದ. ಅಜ್ಜಾರು ನಗುತ್ತಾ, ‘ಶಿವಾ ದೊಡ್ಡಾಂವ ಅವನ ಆಶೀರ್ವಾದ ನಿನ್ನ ಮ್ಯಾಲ್ ಐತಿ. ನಿನಗ ಬಂದ ಕುತ್ತು ತಪ್ಪಿಸಿದ. ನಿನ್ನ ಕೊಳ್ಳಾಗಿನ ರುದ್ರಾಕ್ಷಿ ತಗದು ನೋಡು ನಿನಗ ಗೊತ್ತಾಕ್ಕೈತಿ’ ಎಂದರು. ಮಹಾಂತೇಶ ತನ್ನ ಕೊಳ್ಳಾನ ರುದ್ರಾಕ್ಷಿ ತೆಗೆದು ನೊಡಿದರೆ ಅದು ತುಂಡಾಗಿತ್ತು.

— ಶ್ರೀನಿವಾಸ. ಹುದ್ದಾರ
ಧಾರವಾಡ

Leave a Reply