ಹಂಚಿ ತಿಂದರೆ ಹಬ್ಬದ ಊಟ … (ಸಣ್ಣ ಕಥೆ)

ಅಂದು ಸಾರ್ವಜನಿಕ ರಜೆ, ಬಸ್ಸುಗಳು ಕೊಂಚ ವಿರಳವಾಗಿದ್ದ ಹೊತ್ತು. ಯಾವುದೂ ಕೆಲಸದ ನಿಮಿತ್ತ ಮಾರ್ಕೆಟಿಗೆ ಹೋಗುವ ಬಸ್ ಏರಿ ಕುಳಿತಿದ್ದೆ. ಬಸ್ಸು ಹೊರಡುವ ಸಮಯ. ಸೀಟುಗಳೆಲ್ಲಾ ಆಗಲೇ ಭರ್ತಿಯಾಗಿದ್ದವು. ಪ್ರಯಾಣಿಕರೆಲ್ಲ ಡ್ರೈವರ ನಿರೀಕ್ಷೆಯಲ್ಲಿದ್ದರು. ಆ ಹೊತ್ತಿಗೆ ಹಸುಗೂಸೊಂದನ್ನು ಸೊಂಟಕ್ಕೇರಿಸಿಕೊಂಡು ಬಸ್ಸು ಏರಿದ ಹೆಂಗಸು, ದಯಾದ್ರರ್ ಳಾಗಿ ಅಕ್ಕಾ…. ಅಣ್ಣಾ….. ಅಮ್ಮಾ…. ತಾಯಿ…. ಎನ್ನುತ್ತಾ, ತನ್ನ ಹಸುಗೂಸನ್ನು ತೋರಿಸುತ್ತ ಕಾಸಿಗಾಗಿ ಕೈ ಚಾಚಿ ಕಾಡತೊಡಗಿದಳು. ಪ್ರಯಾಣಿಕರಿಂದ ಅಷ್ಟೋ – ಇಷ್ಟೋ ಕಾಸು ಗಿಟ್ಟಿಸಿಕೊಂಡು ಬಸ್ಸಿನಿಂದಿಳಿದವಳು, ಅಲ್ಲೇ ಪಕ್ಕದ ಮರದ ನೆರಳಿನಲ್ಲಿ ನಿಂತು ಮತ್ತೊಂದು ಬಸ್ಸಿಗೆ ಕಾಯತೊಡಗಿದಳು.

ಅಷ್ಟರಲ್ಲಿ ಮತ್ತೊಬ್ಬ ವೃದ್ಧ ಬಿಕ್ಷುಕ ಬಸ್ಸನ್ನೇರಿ ಪ್ರಯಾಣಿಕರನ್ನು ಕಾಸಿಗಾಗಿ ಜುಲುಮೆ ಮಾಡತೊಡಗಿದ. ಕಡಿಮೆ ಅಂತರದಲ್ಲಿ ಹೀಗೆ ಇಬ್ಬರು ಬಿಕ್ಷುಕರನ್ನು ಕಂಡು ಅಸಹನೆಗೊಂಡ ಕೆಲ ಪ್ರಯಾಣಿಕರು, “ನಾವಾದ್ರೂ ಎಷ್ಟು ಜನರಿಗಂತ ಕೊಡೋದಯ್ಯ….? ನಿಮದೊಳ್ಳೆ ಕಾಟ ಕಣ್ರಯ್ಯಾ”….! ಎಂದು ಎತ್ತರದ ದನಿಯಲ್ಲಿ ಬಾಯ್ ಮಾಡತೊಡಗಿದರು. ಅವರಯಾರ ಮಾತುಗಳು ತನಗಲ್ಲವೆನೋ ಎಂಬಂಥ ನಿರ್ಲಿಪ್ತತೆಯಿಂದ ತನ್ನ ಕಾಯಕ ಮುಗಿಸಿಕೊಂಡು ಬರಿಗೈಯಲ್ಲೇ ಬಸ್ಸಿನಿಂದಿಳಿದ ಆ ವೃದ್ಧ ಬಿಕ್ಷುಕ.

ಹೀಗೆ ಬಸ್ಸಿನಿಂದಿಳಿದವ ಕೂಸು ಎತ್ತಿಕೊಂಡದ್ದ ಆ ಬಿಕ್ಷುಕಿಯತ್ತ ನಡೆದ. ಮಾತು ಮೊದಲಾಯಿತು. ಬಸ್ಸಿನ ಹತ್ತಿರದಲ್ಲೇ ನಿಂತು ಮಾತಾಡುತ್ತಿದ್ದ ಅವರಿಬ್ಬರ ಸಂಭಾಷಣೆ ಬಸ್ಸಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ನನಗೆ ಸ್ಪಷ್ಟವಾಗಿಯೇ ಕೇಳುತ್ತಿತ್ತು.

ಆ ವೃದ್ಧನನ್ನು ಕುರಿತು ಬಿಕ್ಷುಕಿ, ಕನಿಕರದಿಂದಲೋ ಎಂಬಂತೆ ಏನಾದರು ಕಾಸು ಸಿಕ್ಕಿತಾ ಅಂತ ವಿಚಾರಿಸತೊಡಗಿದಳು. ಆತ ‘ಈಗ ಎರಡು ಬಸ್ಸು ಹತ್ತಿಳಿದ್ರೂ ಹತ್ ಪೈಸೆ ಕೂಡಾ ದಕ್ಕಲಿಲ್ಲವೆಂದ’. ಮುಂದುವರಿದು; ರಾತ್ರಿಯಿಂದ ಏನು ತಿನ್ನಲಿಲ್ಲವೆಂದು ತನ್ನ ದೈನೇಸಿ ಸ್ಥಿತಿಯನ್ನ ಆಕೆಯಲ್ಲಿ ತೋಡಿಕೊಂಡ. ಆ ಮಾತಿಗೆ ಅವಳು ಸ್ಪಂದಿಸಿದ ರೀತಿ ನೋಡಿ ಅಚ್ಚರಿಯಾಯಿತು. ಆತನ ಸಮಾಧಾನಕ್ಕೇನೋ ಎಂಬಂತೆ ಮತ್ತೆ ಬಸ್ಸುಗಳು ಬರುತ್ವೆ ಎಂದ ಆಕೆ, ತನ್ನ ಹರಿದ ಸೆರಗಿನ ಗಂಟಲ್ಲಿ ಕಟ್ಟಿಕೊಂಡ ಪುಡಿಗಾಸಿನಲ್ಲೇ ಎಷ್ಟೋ ಎತ್ತಿಕೊಟ್ಟಳು. ವೃದ್ಧನ ಮುಖದ ನೆರಿಗೆಗಳು ಸಡಿಲಗೊಂಡವು.

ಆಕೆಯ ಮಾತು, ಸಹಾಯದ ಪರಿ ಕಂಡು ಭೇಷ್ ಅನಿಸಿದ್ದು ಸುಳ್ಳಲ್ಲ. ಸ್ವತಃ ತಾನೇ ಬೇಡಿ ತಂದಿದ್ದರಲ್ಲಿಯೂ ಕೊಂಚ ನೀಡಿ ತಿನ್ನಬೇಕೆಂಬ ಆಕೆಯ ಗುಣ ಅನುಕರಣೀಯ. ಹೀಗೆ ಅಕ್ಕಾ…. ಅಣ್ಣಾ….. ಅಮ್ಮಾ…… ತಾಯಿ…ಎಂದುಕೊಂಡೇ ಅಧಿಕಾರದ ಗದುಗ್ಗೆ ಹಿಡಿದು, ನಿರಾತಂಕವಾಗಿ ಭಕ್ಷಿಸುತ್ತಿರುವವರು ಇನ್ನಾದರೂ ಇಂಥ ಪ್ರಜ್ಞೆ ಮೈಗೂಡಿಸಿಕೊಳ್ಳಲಿ ಅಂತ ಅನ್ನಿಸುವದಿಲ್ಲವೇ….? ಸಂಪತ್ತಿನ ಸಮಾನ ಹಂಚಿಕೆಗೆಂದೇ ನಿಯುಕ್ತರಾದ ಅಧಿಕಾರ ವರ್ಗವೂ ಕೂಡಾ ಈ ಗುಣಗಳನ್ನ ರೂಢಿಸಿಕೊಳ್ಳಬೇಕಿದೆ ಅಲ್ಲವೇ?

ಅಲ್ಲಲ್ಲಿ ತೇಪೆ ಹಾಕಿದ ಆಕೆಯ ವಸ್ತ್ರ, ಕೆದರಿದ ಒರಟು ತಲೆಕೂದಲು, ಸೊಂಟದಲ್ಲಿ ಮೂಳೆ – ಚಕ್ಕಳಗಳೇ ಎದ್ದು ಕಾಣುವ ಕೂಸು, ನೀರು ಕಾಣದ ಅದರ ಮೈ, ಎಲ್ಲಾ ಈ ಘಟನೆ ನಡೆದ ನಂತರ ಎಷ್ಟೋ ದಿನಗಳವರೆಗೆ ಕಾಡುತ್ತಿದವು. ಭಿಕ್ಷಾಟನೆ ಸಮಾಜಕ್ಕೆ ಅಂಟಿದ ಜಾಡ್ಯ, ಶಾಪ ಎಂಬೆಲ್ಲಾ ಮಾತು ಕೇಳುವ ಈ ಹೊತ್ತಿನಲ್ಲಿ ತಿಂದುಣ್ಣುವರ ತಿರುಗಿ ನೀಡುವ ಗುಣ ಕಂಡು ಚಕಿತನಾದೆ. ಟಿಕೇಟಿಗಾಗಿ ಕೈಯಲ್ಲೇ ಹಿಡಿದಿದ್ದ ಚಿಲ್ಲರೆಗಳು ಒಮ್ಮಲೇ ಬಿಸಿಯಾದಂತೆನಿಸಿತು. ಬೇಡುವವನಲ್ಲಿರುವ ಈ ನೀಡುವ ಗುಣ ಕಂಡು ಬೆನಕನೂ ಮೆ(ಬೆ) ಚ್ಚಿರಬಹುದೇ….!?

– ಹೊಸ್ಮನೆ ಮುತ್ತು

ಚಿತ್ರ: ಗೂಗಲ್

Leave a Reply