ಯಾವುದೋ ಗಿರಿಗೆ ಪ್ರಯಾಣ

ನಗಿಸುವುದು ಒಂದು ಕಲೆಯಾದರೆ, ನಗುವುದು ಒಂದು ಕಲೆ ಅನ್ನೋದು ನನ್ನ ಅಭಿಪ್ರಾಯ. ಎಲ್ಲರಿಗೂ ನಗಿಸಕ್ಕೆ ಬರೋಲ್ಲ ಹಾಗೇ ಎಲ್ಲರಿಗೂ ಹಾಸ್ಯ ಅರ್ಥ ಆಗಲ್ಲ.
ನಗಿಸುವುದರಲ್ಲಿ ನಮ್ಮ ಈ ಪುಟ್ಟ ಮಕ್ಕಳದ್ದು ಒಂದು ಕೈ ಮೇಲೇ ಅನ್ನಬಹುದು. ಈಗಿನ ಮಕ್ಕಳಿಗೆ ಬಲು ಬುದ್ಧಿ. ತಮ್ಮ ಜ್ಞಾನದಾಹ, ಕುತೂಹಲ ಹಾಗು ಮುಗ್ಧತೆ ಮಿಶ್ರಿತ ಸವಾಲುಗಳಿಂದ ದೊಡ್ಡವರ ಬೆವರನ್ನು ಸಲೀಸಾಗಿ ಇಳಿಸಬಲ್ಲ ಪುಟಾಣಿಗಿವರು. ಹಾಗೆ, ಅವರ ಮುಗ್ಧತೆಯ ಉತ್ತರಗಳು, ಉಚ್ಛಾರಗಳು ತಲೆತಲಾಂತರಗಳಿಂದ ದೊಡ್ಡವರನ್ನು ನಗಿಸುತ್ತಾ ಬಂದಿದೆ.
ನಮ್ಮ ನಿಮ್ಮ ಮನೆಯ ಪುಟ್ಟ ಪುಟ್ಟಿಯರು ನಮ್ಮೆಲ್ಲರನ್ನು ಹೇಗೆ ನಗಿಸುವರೆಂದು ಈ ಸರಣಿ ಪ್ರಸಂಗಗಳಲ್ಲಿ ನೋಡೋಣ ಬನ್ನಿ!
ಯುಗಾದಿಗೆ ಅಂತ ಮೈಸೂರಿಗೆ ಹೋಗಿದ್ದೆ. ಯುಗಾದಿಯಲ್ಲಿ ವ್ರತ ಗಿತ ಇಲ್ಲದೆ ಇದ್ದಿದ್ದರಿಂದ ಸ್ವಲ್ಪ ಸುತ್ತಾಡಕ್ಕು ಸಮಯ ಇತ್ತು. ನಾನು ಮತ್ತು ನನ್ನ ಕಜ಼ಿನ್, ಬೆಂಗಳೂರಿಂದ ಹೋಗ್ತಾನೆ ಮೈಸೂರಲ್ಲಿ ಎಲ್ಲೆಲ್ಲಿ ಹೋಗಬೇಕು ಅಂತ ಪ್ಲಾನ್ ಮಾಡಿದ್ದೆವು. ಅವನು ತನ್ನ ಹೆಂಡತಿ ಅರ್ಥಾತ್ ನನ್ನ ಕಜ಼ಿನ್ ಇನ್ ಲಾ ಹಾಗು ಮಗಳು ಪುಟ್ಟಿಯನ್ನು ಕರೆದುಕೊಂಡು ನನ್ನನ್ನು ಕರೆದೊಯ್ಯಲು ನಮ್ಮ ಮನೆಗೆ ಬಂದ. ಅದು ಇದು ಮಾತಾಡುತ್ತಾ ಕುಳಿತ ನಮ್ಮನ್ನು ನೋಡಿ, ಇವರನ್ನು ಹೀಗೆ ಬಿಟ್ಟರೆ ಹೊರಗೆ ಹೋಗೋ ಬದಲು ಹರಟೆಯಲ್ಲೆ ಕಾಲ ಕಳೆಯುತ್ತಾರೆ ಎಂದು ಕಳವಳಗೊಂಡ ನಮ್ಮ ಪುಟ್ಟೀ,
“ಅಪ್ಪಾ, ಅದೇನೋ ‘ಕಾಂಪ್ಲಾನ್’ ತೋರಿಸಕ್ಕೆ ಕರ್ಕೊಂಡ್ ಹೋಗ್ತೀನಿ ಅಂದ್ರಲ್ಲ, ಯಾವಾಗ ಹೋಗದು?” ಅಂದ್ಲು.
ನಾನು ಇದೇನಪ್ಪಾ, ಎಲ್ಲ ಮಕ್ಕಳು ಕಾಂಪ್ಲಾನ್ ಕುಡಿದರೆ, ಈ ನಮ್ ಪುಟ್ಟೀ ನೋಡಿ ಅಷ್ಟಕ್ಕೇ ಸಂತೋಷ ಪಡೋ ಅಂತ ಒಳ್ಳೆ ಮಗುವೇ ಅಂದುಕೊಳ್ಳುತ್ತಿರುವಾಗಲೇ, ನನ್ನ ಕಜ಼ಿನ್, ಅವನ ಹೆಂಡತಿ ಹೋ ಅಂತ ನಗಕ್ಕೆ ಶುರು ಮಾಡಿದ್ರು. ನನ್ನ ಕಜ಼ಿನ್ ಹೆಂಡತಿ,
“ಪುಟ್ಟೀ ಅದು ಕಾಂಪ್ಲಾನ್ ಅಲ್ಲ ಕಂದ, ಅದು Decathlon” ಅಂದಾಗ ನಗೋ ಸರದಿ ನಂದಾಗಿತ್ತು.
(Decathlon ಅನ್ನುವುದು ಒಂದು sports shop)
ಎಲ್ಲಾ Decathlon ಕಡೆ ಸವಾರಿ ಹೊರಟ್ವಿ. ಪುಟ್ಟಿನ ನಾನು ನನ್ನ ತೊಡೆ ಮೇಲೆ ಕೂರಿಸ್ಕೊಂಡು ಅವಳ ಶಾಲೆ ಬಗ್ಗೆ, ಪಾಠದ ಬಗ್ಗೆ ವಿಚಾರಿಸ್ತಾ ಇದ್ದೆ. ಪುಟ್ಟೀನು, ತುಂಬಾ ಉತ್ಸಾಹದಿಂದ ಹೇಗೆ ಅವಳು ಪ್ರಾರ್ಥನೆ ಬರದೆ ಇದ್ದರೂ, ಒಣ ಒಣ ಅಂತ ತುಟಿ ಅಲ್ಲಾಡಿಸಿ ಪ್ರಾರ್ಥನೆಯ ನಾಟಕ ಮಾಡ್ತಾಳೆ, ಅವಳಿಗೆ ಯಾವ ಸ್ಪರ್ಧೆಯಲ್ಲಿ ಎಷ್ಟನೇ ಬಹುಮಾನ ಅಂತ ವಿವರಿಸ್ತಾ ಇದ್ದಳು.
ನಾನು ನಮಗೆ ಒಂದನೇ ತರಗತಿಯಲ್ಲಿ ಕನ್ನಡದಲ್ಲಿ ಯಾವ ಪದ್ಯ ಎಂದು ನೆನೆಸಿಕೊಳ್ಳುತ್ತಾ,
“ಪುಟ್ಟೀ, ಕನ್ನಡದಲ್ಲಿ ಯಾವ ಪದ್ಯ ಇದೆ?” ಎಂದು ಕೇಳಿದೆ. ಕಾಂಪ್ಲಾನ್ ಕುಡಿದೋಳ ಥರ ಉಚ್ಛ ಸ್ವರದಲ್ಲಿ ‘ಏರುತಿಹುದು ನಮ್ಮ ಬಾವುಟ’ ಹಾಡಿ ಮುಗಿಸಿದಳು. ನನ್ನ ತಲೆಯಲ್ಲೋ ಯಾರು ಇದನ್ನು ಬರೆದ ಕವಿ ಎಂದು ಕೊರೆಯುತ್ತಿತ್ತು. ಅವಳಿಗೆ,
“ಇದನ್ನು ಯಾರಮ್ಮಾ ಬರೆದಿರೋದು” ಅಂತ ಒಂದು ಪೆದ್ದ ಪ್ರಶ್ನೆ ಕೇಳಿದೆ ನೋಡಿ, ತಟಕ್ಕನೆ ನಮ್ಮ ಪುಟಾಣಿ, “ಅದನ್ ಯಾರು ಬರೆದಿಲ್ಲ.. ಅದು ಪ್ರಿಂಟ್ ಮಾಡಿರದು” ಅಂದಾಗ ನಾನು ಒಂದು ಕಡೆ ಕಕ್ಕಾಬಿಕ್ಕಿ ಇನ್ನೊಂದು ಕಡೆ ನಗು. ಆಮೇಲೆ ಮಗುವಿಗೆ ಅದಕ್ಕೆ ಅರ್ಥ ಆಗೋ ಭಾಷೆಯಲ್ಲಿ ಅವಳ ಅಮ್ಮ ಬರೆದವರ ಬಗ್ಗೆ ವಿವರಿಸಿದ್ದಾಯಿತು.
ಇದಾದ ಮೇಲೆ ನಮ್ಮ ಪುಟ್ಟಿ ಗುಣಗಾನ ನನ್ ಕಜ಼ಿನ್ ಮಾಡಿದ. ಒಂದು ದಿನ,ಪುಟ್ಟಿ ಅಪ್ಪ ಅಮ್ಮ ಇಬ್ಬರೂ ಯಾರೋ ನೆಂಟರ ಮನೆಗೆ ಹೋಗಬೇಕಿತ್ತಂತೆ. ಪುಟ್ಟಿನ ಮನೆಯಲ್ಲೆ ಅಜ್ಜಿ ಜೊತೆ ಬಿಟ್ಟು ಹೋಗಿದಾರೆ. ನಮ್ಮ ಪುಟ್ಟಿದು ಸ್ವಲ್ಪ ಯಜಮಾನಿಕೆ ಜಾಸ್ತಿನೇ. ಇವಳ ಅಪ್ಪನನ್ನು ಹುಡುಕಿಕೊಂಡು ಯಾರೋ ಮನೆಗೆ ಬಂದಿದಾರೆ. ಅಜ್ಜಿ ಒಳಗೆ ಅಡುಗೆ ಮಾಡ್ತಿದಾರೆ. ಮಗುನ ಬಂದವರು ಮಾತಾಡಿಸಿ,”ಎಲ್ಲಿ ಪುಟ್ಟೀ, ನಿಮ್ಮ ಅಪ್ಪ?” ಎಂದು ಕೇಳಿದಾರೆ.
ಅವಳೋ “ಅವರೂ, ಯಾವ್ದೋ ಗಿರಿಗೆ ಹೋಗಿದಾರೆ”.
ಬಂದವರು, ಇವಳು ಏನು ಹೇಳ್ತಾ ಇದಾಳೆ ಅಂತ ಅರ್ಥವಾಗದೆ, “ಏನು” ಎಂದು ಮತ್ತೆ ಕೇಳಿದಾರೆ.
ಅವಳು ಮತ್ತೆ, “ಅವರು ಯಾವ್ದೋ ಗಿರಿಗೆ ಹೋಗಿದಾರೆ ಅಂದನಲ್ಲ” ಅಂತ ಒಳ್ಳೆ ದೊಡ್ಡವರು ಮಾತಾಡೋ ಧಾಟಿಯಲ್ಲಿ ಹೇಳಿದಾಳೆ. ಬಂದವರು, ಇದೇನು ಈ ಮಗು ಈ ವಯಸ್ಸಿಗೆ ಎಂಥ ಒಳ್ಳೆ ಕನ್ನಡ ಮಾತಾಡುತ್ತೆ. ಅಪ್ಪ ಯಾವುದೋ Hill station ಗೆ ಹೋಗಿದಾರೆ ಅಂತ ಎಷ್ಟು ಚೆನ್ನಾಗಿ ಅಚ್ಚ ಕನ್ನಡದಲ್ಲಿ ಹೇಳುತ್ತೆ ಅಂದುಕೊಳ್ಳುತ್ತಿರುವ ಹಾಗೆ ಅವಳ ಅಜ್ಜಿ ಹೊರಗೆ ಬಂದಿದಾರೆ.
“ಆಂಟಿ, ಎಲ್ಲಿ ಹೋಗಿದಾನೆ ನಿಮ್ ಮಗ? ಊಟಿನೋ, ಕೊಡಾಯ್ ಒ?”
ಅವಳ ಅಜ್ಜಿ, “ಇಲ್ಲೆ ಇದಾನಾಲ್ಲಪ್ಪ. ನಿಂಗೆ ಯಾರು ಹೇಳಿದ್ರು ಊರಲ್ಲಿಲ್ಲ ಅವನು ಅಂತ?”
ಬಂದವರು: “ಮತ್ತೆ ಪುಟ್ಟೀ ಅಂದ್ಲು, ಯಾವುದೋ ಗಿರಿಗೆ ಹೋಗಿದಾರೆ ಅಂತ. ನಾನು Hill station ಗೆ
ಹೋಗಿರಬೇಕು ಅನ್ಕೊಂಡೆ” ಅಂದಾಗ ಅಜ್ಜಿ ಜೋರಾಗಿ ನಗಕ್ಕೆ ಶುರು ಮಾಡಿದ್ರಂತೆ.
ಏನಪ್ಪಾ ವಿಷಯ ಅಂದ್ರೆ, ಪುಟ್ಟೀ ಅಪ್ಪ ಅಮ್ಮ ‘ಯಾದವ ಗಿರಿ’ ಹೋಗಿದ್ರೆ, ಪುಟ್ಟೀ ಅವರನ್ನ ಯಾವುದೋ ಗಿರಿಗೆ ಕಳಿಸಿದ್ಲು. ನಾವೆಲ್ಲ ಪುಟ್ಟೀ ಕಥೆ ಕೇಳಿ ನಕ್ಕಿದ್ದೇ ನಕ್ಕಿದ್ದು!

Leave a Reply