T.R.P. ಎಂಬುದಿಟ್ಟನೋ… ನಮ್ಮ ಶಿವ ಕಾಣದಂತೆ ಮಾಯವಾದನೋ…

T.R.P. ಎಂಬುದಿಟ್ಟನೋ… ನಮ್ಮ ಶಿವ ಕಾಣದಂತೆ
ಮಾಯವಾದನೋ…
“ನಿಮ್ಮ ಅಕ್ಕ ಇದ್ದಾಳಲ್ಲಾ ಅವಳು ಇದೇ ಮನೇಲಿದ್ರೆ ನರಕ ತೋರಿಸ್ತೀನಿ ನರಕ. ಅದು ಹೇಗೆ ಕಾಪಾಡ್ಕೋತೀಯೋ… ಕಾಪಾಡ್ಕೋ.. ನಾನೂ ನೋಡ್ತೀನಿ.”
“ಮುಗಿಸ್ಬೇಕು”
“Address? ”
“details ನಿನ್ನ ಮೊಬೈಲ್ಗೆ ಬರುತ್ತೇ..”
ನಾನು ನಿನ್ನನ್ನ ಈ ಜನ್ಮದಲ್ಲಿ ಕ್ಷಮಿಸೋಲ್ಲ.”
“ನೋಡ್ತಿರು… ನಿನ್ನ ಒಂದೊಂದು ರಹಸ್ಯಾನೂ ನಿನ್ನ ನೆಮ್ಮದೀನ ಹೇಗೆ ಕಿತ್ಕೊಳ್ತವೆ ಅಂತಾ..”
“ಅವಶ್ಯಕತೆಗಿಂತ ಹೆಚ್ಚು ಅನುಕಂಪ ಗಿಟ್ಟಿಸ್ಕೋಕೆ ನೋಡಿದ್ರೆ ಪರಿಣಾಮ ಚನ್ನಾಗಿರೋಲ್ಲ ಗೊತ್ತಿರ್ಲಿ.. ಹೂಂ, ಹೊರಡು.”
“ನಿನ್ನ ಮೇಲೆ ನಿನ್ನೆ ರಾತ್ರಿ ಒಂದು ಕೊಲೆ ಪ್ರಯತ್ನ ನಡೀತು…ಯಾರು ಮಾಡಿಸಿದ್ದು ಗೊತ್ತಾಯ್ತೇನೆ? ಅದು ನಾನೇಏಏಏ”
ಇದೇನು ಗೊತ್ತಾಯ್ತಾ? ಇಲ್ವಾ? ಕನ್ನಡ ಧಾರಾವಾಹಿ ನೋಡೋರ್ನ ಕೇಳಿ.
ಗೊತ್ತಿರುತ್ತದೆ. ‘ಮಗಳು ಜಾನಕಿ’ ‘week end with Ramesh’ ಈ ಎರಡನ್ನು ಬಿಟ್ಟರೆ ನಾನುTV ನೋಡುವದಿಲ್ಲ. ನೋಡಬಾರದೆಂಬ ವೃತ ಅಥವಾ ಹಟವೇನೂ ಇಲ್ಲ. ನೋಡಲಾಗುವದಿಲ್ಲ ಅಷ್ಟೇ… (ಹಾಗಾದರೆ ಮೇಲೆ ಬರೆದದ್ದು ಹೇಗೆ ತಿಳಿಯಿತು ಅಂತಾನಾ? ಅವು ಧಾರವಾಹಿಗಳ ಮಧ್ಯದಲ್ಲಿ ಬರುವ ಉಳಿದ ಧಾರವಾಹಿಗಳ ಜಾಹೀರಾತು) ಎಲ್ಲವೂ ಅಲ್ಲ, ಆದರೆ ಬಹುಪಾಲು ಧಾರವಾಹಿಗಳಲ್ಲಿ, ಸುದ್ದಿ ಪ್ರಸಾರಗಳಲ್ಲಿ, ಅವಾಸ್ತವಿಕತೆ, ಜಗಳ, ದ್ವೇಷ, ಸಂಚು, ದೌರ್ಜನ್ಯ, ಅದಿಲ್ಲದಿದ್ದರೆ ಹಾಸ್ಯದ ಹೆಸರಿನಲ್ಲಿ ‘ಹಾಸ್ಯಾಸ್ಪದ’ ಧಾರವಾಹಿಗಳು. ರಿಯಾಲಿಟಿ ಶೋಗಳೇನೋ ಚನ್ನಾಗಿರುತ್ತವೆ. ಆದರೆ ಅವಕ್ಕೂ TRP ದಾಹ… ಎಸ್. ಪಿ ಬಿ ಅಂಥವರ ‘ಎದೆ ತುಂಬಿ ಹಾಡಿದೆನು’ ಮೂಲ ಶೋ ಪ್ರಾರಂಭದಲ್ಲಿ ಸಾಕಷ್ಟು ಜನಮೆಚ್ಚುಗೆ ಪಡೆದ ಧಾರವಾಹಿ. ಈಗ ಅಂಥ ಎಲ್ಲ ಕಾರ್ಯಕ್ರಮಗಳು film fare events ಆಗಿ ಕಂಗೋಳಿಸುತ್ತಿವೆ. ಕಿರುಚಾಟ, ಅಬ್ಬರ, ಹೆಸರಿನಲ್ಲಿ ದೊಂಬರಾಟ, ಇನ್ನೂ ಸರಿಯಾಗಿ ಕಣ್ತೆರೆಯದ ಮಕ್ಕಳಲ್ಲಿ ಇಲ್ಲದ ಪೈಪೋಟಿ, ವಾಸ್ತವಿಕತೆ ಇಲ್ಲದ ವಿಶ್ಲೇಷಣೆ, ವಿಮರ್ಶೆ ಇವೆಲ್ಲ TV ಕಾರ್ಯಕ್ರಮಗಳನ್ನು ನೋಡುವವರ ಸಹನೆ ಪರೀಕ್ಷೆ ಮಾಡುತ್ತಿವೆ. ನಿನ್ನೆ ಕನ್ನಡದ ಕೋಗಿಲೆಯ ಕಾರ್ಯಕ್ರಮ ಜಾನಪದ ವಿಶೇಷವಿತ್ತು. ಹಾಡುಗಳು, ಹಾಡುಗರು ಚನ್ನಾಗಿಯೇ ಪ್ರಸ್ತುತ ಪಡಿಸಿದರು. ಆದರೆ ಜಾನಪದ ಪರಿಸರ ಮಾತ್ರ ಶೂನ್ಯ… ಹಾಡುಗರು/ ಉಳಿದ ಮಕ್ಕಳು ‘ಹಸೆ ಮಣೆ’ ಏರುವ ಮದುವಣಗಿತ್ತಿಯರ ಅಲಂಕಾರಗಳಲ್ಲಿ… ಮೊದಲೆಲ್ಲ ಇಳಕಲ್ ಸೀರೆ, ಕೈತುಂಬ ಬಳೆ, ಎತ್ತಿ ಕಟ್ಟಿದ ಕಚ್ಚೆ, ದೊಡ್ಡ ಕುಂಕುಮ, ಕಂಚಿನ ಕಂಠ, ಅತಿ ಕಡಿಮೆ ಆದರೆ ಗ್ರಾಮೀಣ ಹಿನ್ನೆಲೆವಾದ್ಯಗಳು ಪೂರಕ ವಾತಾವರಣವನ್ನು ಸೃಷ್ಟಿಸುತ್ತಿದ್ದವು. TRP ಹೆಚ್ಚಳದ ಹಣವನ್ನು ಧನಾತ್ಮಕವಾಗಿ, ಮೌಲ್ಯಯುತವಾಗಿ ಬಳಸಿದರೆ ಕಾರ್ಯಕ್ರಮಗಳು ಇನ್ನೂ ಶ್ರೀಮಂತಗೊಳ್ಳ ಬಲ್ಲವು… ಆದರೆ ಇಲ್ಲಿಯ ಪಾತ್ರಧಾರಿಗಳೆಲ್ಲವೂ ಅಂಬಾನಿ, ಅದಾನಿ ಕುಟುಂಬದವರೇ… ರಾತ್ರಿ ಮಲಗಿದಾಗಲೂ ಮೊಳದಗಲ ಜರಿ ಸೀರೆ, ಮೈ ಮೇಲೆ ಕುತ್ತಿಗೆಯನ್ನು ಹಿಂದೆ ಮುಂದಕ್ಕೆ ಜಗ್ಗುವ ಭಾರದ ಆಭರಣಗಳು, ಎಲ್ಲೆಲ್ಲೂ ಐಷಾರಾಮಿ ಕಾರುಗಳು…
ಆದರೆ ಮೆಗಳು ಮಾತ್ರ,
‘ಸುಖ ವಿಲ್ಲಾ’
ಸಮಾಧಾನ ವಿಲ್ಲಾ’
‘ಆನಂದ ‘ವಿಲ್ಲಾ’
ಶಾಂತ ‘ವಿಲ್ಲಾ’… ದಂಥ ವಿಲ್ಲಾಗಳೇ…
ಇವುಗಳು ಈಗಿರುವ ಸಮಾಜವನ್ನು ಬಿಂಬಿಸುತ್ತಿವೆಯೊ? ಸಮಾಜವೇ ಹೀಗೆ ಬದಲಾಗುತ್ತಿದೆಯೋ ಗೊಂದಲ… ಹಿರಿಯರು ಬೇಕಾದರೆ ನೋಡಿಯಾರು ಬೇಡವಾದರೆ ಬಿಟ್ಟಾರು… ಆದರೆ ಮಕ್ಕಳ ಗತಿ? ನೆನೆದರೆ ಗಾಬರಿಯಾಗುತ್ತದೆ.
ನಮಗೆ ಹತ್ತನೇ ವರ್ಗದಲ್ಲಿ ‘ಚತುರ ಚಾಣಕ್ಯ’ ಎಂಬ non detailed text ಪಠ್ಯವಾಗಿತ್ತು. ನಂದರಿಂದಾದ ಅಪಮಾನದ ಸೇಡು ತೀರಿಸಿಕೊಳ್ಳಲು ಚಾಣಕ್ಯ ಚಂದ್ರಗುಪ್ತನನ್ನು ಎತ್ತಿಕಟ್ಟಿ ಸೋಲಿಸಿ, ಮೌರ್ಯ ಸಾಮ್ರಾಜ್ಯ ಸ್ಥಾಪಿಸುವ ಒಂದು ಕಥೆ. ಅದರಲ್ಲಿ ‘ವಿಷಕನ್ಯೆಯರ’ ಪ್ರಸ್ತಾಪ ಬರುತ್ತದೆ. ಹುಟ್ಟಿದ ಹೆಣ್ಣು ಮಕ್ಕಳಿಗೆ ಅವರ ವಯಸ್ಸು ಗಮನದಲ್ಲಿಟ್ಟುಕೊಂಡು ಸ್ವಲ್ಪ ಹೆಚ್ಚಿಸುತ್ತ ವಿಷಕೊಡುತ್ತಹೋದೆ ಅವರು ವಿಷಕನ್ಯೆಯರಾಗಿ ಬೆಳೆದು, ಅವರ ಸಂಗಮಾಡಿದವರು ವಿಷ ಏರಿ ಸದ್ದಿಲ್ಲದೇ ಇಲ್ಲವಾಗುತ್ತಿದ್ದರು, ಹೀಗಾಗಿ ಶತ್ರು ಸಂಹಾರಕ್ಕೆ ಅವರ ಬಳಕೆಯೊಂದು ಕುಟಿಲತೆಯ ಭಾಗವಾಗಿತ್ತು ಎಂದು ಓದಿದ ನೆನೆಪು… ಕೇಳಿದ್ದು ನಿಜವೋ, ಅಲ್ಲವೋ, ಇಲ್ಲಿ ಬೇಡ… ಆದರೆ ಸಮಾಜಕ್ಕೆ ಪೂರಕವಲ್ಲದ್ದನ್ನು ನೋಡಿ, ಕೇಳಿ, ಕಂಡು ಅಳವಡಿಸಿಕೊಳ್ಳುವದನ್ನು ನಿಯಂತ್ರಿಸಲಾಗದೇ ಹೋದರೆ ಕಂಡಿತ ಅಪಾಯ ಹತ್ತಿದರಲ್ಲಿದೇ ಎಂದಲ್ಲವೇ?
ಮೊದಲೇ ಹೇಳಿದ್ದೇನೆ. ನಾನು ಧಾರವಾಹಿಗಳ ನಿಯಮಿತ ನೋಡುಗಳಲ್ಲ. ಎಲ್ಲವೂ ಹೀಗೇ ಇರುತ್ತದೆ ಎಂದೂ ಅರ್ಥವಲ್ಲ… ಅನೇಕ ಘಟಾನುಘಟಿಗಳ ಕಾರ್ಯಕ್ರಮಗಳನ್ನು ಕಾಳು ಜೋಮು ಹಿಡಿಯುವ ವರೆಗೆ ಕುಳಿತು ನೋಡಿದ್ದೇನೆ. ಈಗಲೂ ಚನ್ನಾಗಿದ್ದರೆ ಹಾಗೆಯೇ ಕುಳಿತು ನೋಡುತ್ತೇನೆ. ನೋಡುವವರನ್ನು ಗೌರವಿಸುತ್ತೇನೆ. ಆದರೆ ಎಲ್ಲವೂ ಮೊದಲಿನಂತಿಲ್ಲ ಎಂಬುದು ಪ್ರಾರಂಭದ ಕೆಲ ಧಾರವಾಹಿಗಳ ಮೇಲಿನ ಸಂಭಾಷಣೆಗಳು ಹೇಳುತ್ತಿಲ್ಲವೇ?

Leave a Reply