ತನ್ನಂತೆ ಪರರ ಬಗೆದೊಡೆ

ತನ್ನಂತೆ ಪರರ ಬಗೆದೊಡೆ…
ಧಾರವಾಡದ ಹೆಂಬ್ಲಿ ಓಣಿಯ ನಮ್ಮ ಮನೆ ಅತಿ ದೊಡ್ಡದು. ಅದಕ್ಕೆ ತಕ್ಕಂತೆ ಹಿತ್ತಲವೂ ಇತ್ತು. ನನಗೂ ಹೂ ಗಿಡಗಳ ಹುಚ್ಚು. ಹೀಗಾಗಿ ಎಲ್ಲ ರೀತಿಯ ಹೂಬಳ್ಳಿಗಳು, ಹೂವಿನ/ಹಣ್ಣಿನ ಗಿಡಗಳೂ ಇದ್ದವು. ನಿಂಬೆ, ಕರಿಬೇವು, ಹಸಿಮೆೆಣಸಿನಕಾಯಿ, ಪೇರಲ, ಇನ್ನೂ  ಏನೇನೋ…” ಶ್ರೀಮತಿ, ಸ್ವಲ್ಪ ಎಣ್ಣೆ, ರವೆ ಇಟ್ಟುಬಿಡು.ಬಂದವರು ಉಪ್ಪಿಟ್ಟು  ಮಾಡಿಕೊಂಡು ತೋಟದಲ್ಲಿಯೇ ತಿಂದು ಹೋಗುತ್ತಾರೆ” ಎಂದು ತಮಾಷೆಯಾಗಿ ಹೇಳುವವರೂ ಇದ್ದರು.
ಅನಿವಾರ್ಯವಾಗಿ ಬೆಂಗಳೂರಿಗೆ ವಲಸೆ ಬಂದಮೇಲೂ ನನಗೇನೂ ಹೆಚ್ಚು ವ್ಯತ್ಯಾಸವಾಗಲಿಲ್ಲ. ಏಕೆಂದರೆ ನಾವು ಇಲ್ಲಿಯೂ ಅಪಾರ್ಟ್ಮೆಂಟ್ನಲ್ಲಿ ಇರದೇ ಸ್ವತಂತ್ರ ಮನೆಗಳಲ್ಲಿಯೇ  ಇದ್ದುದರಿಂದ ತೋಟದ ಸಂಸ್ಕೃತಿಗೆ
ಧಕ್ಕೆಯಾಗದಂತೆ ನಡೆದುಹೋಯಿತು. ನನ್ನನ್ನು ಹೊರತುಪಡಿಸಿ ಎಲ್ಲರೂ ಸದಾ busy ಇರುತ್ತಿದ್ದುದರಿಂದ ತೋಟದ ಚಿಕ್ಕ ಪುಟ್ಟ ಕೆಲಸಗಳನ್ನು ನಾನೇ ನೋಡಿಕೊಳ್ಳುತ್ತಿದ್ದೆ/ತ್ತಿದ್ದೇನೆ. ನನಗೆ ಮೀರಿದ್ದು ಇದ್ದರೆ ಮೆಂಟೇನನ್ಸ ವಿಭಾಗದಿಂದ ತೋಟದ ಉಸ್ತುವಾರಿ ಮಾಡುವವರಿಗೆ ಹೇಳಿ ಮಾಡಿಸಿಕೊಳ್ಳಬೇಕು/ ಮಾಡಿಸಿಕೊಳ್ಳುತ್ತೇವೆ…
‌. LOCKDOWN ಅವಧಿಯಲ್ಲಿ ಹೊರಗಿನವರಿಗೆ ಮನೆಯ ಒಳಗೆ ಪ್ರವೇಶ ಸಂಪೂರ್ಣ ನಿಷೇಧವಿದ್ದುದರಿಂದ ತೋಟದ ಕೆಲಸ ತುಂಬಾ ದಿನಗಳಿಂದ ಬಾಕಿ ಇತ್ತು. ನಿನ್ನೆಗೆ lockdown ನಿಯಮ ಸಡಿಲಿಸಿದ್ದರಿಂದ ಕೆಲಸದವರೆಲ್ಲ ಎಂದಿನಂತೆ ಹಾಜರಾದರು .ನಾನೂ mask ಹಾಕಿಕೊಂಡು ದೂರದಿಂದಲೇ ಅವರಿಗೆ guide ಮಾಡಲು ನಿಂತೆ,
” ಎಲ್ಲ ಒಣಗಿನಿಂತ ಗಿಡಗಳನ್ನೂ ,ಇನ್ನು
ಚಿಗುರುವದಿಲ್ಲ ಅನಿಸುವ ಗಿಡಗಳನ್ನು ತೆಗೆದು ಬಿಡಿ, ಈಗ ಮಳೆಗಾಲ. ಬೇರೆ ಹಚ್ಚೋಣ. ಅವುಗಳ ಜಾಗ ಖಾಲಿಯಿಡಿ.
ದೊಡ್ಡ ಗಿಡಗಳಲ್ಲಿ ಯಾವುದೇ ಟೊಂಗೆ ಒಣಗಿ ಬಾಡಿದ್ದರೆ ಕತ್ತರಿಸಿಬಿಡಿ. ಒಟ್ಟಿನಲ್ಲಿ ತೋಟ ಹಸಿರಾಗಿ ನಳನಳಿಸಬೇಕು, ಹಾಗಿರಲಿ. ಖಾಲಿ ಜಾಗದ ಮಣ್ಣು ಸಡಿಲಿಸಿ ಎರಡು ದಿನ ಮಳೆ ಬಾರದಿದ್ದರೆ ನೀರು ಹಾಕಿ ಮೆದು ಮಾಡಿ – ಹೊಸ ಗಿಡಗಳನ್ನು ತಂದು ನಡೋಣ,”-
ಮುಂತಾಗಿ ಸಲಹೆ ಕೊಟ್ಟು ಎಲ್ಲ ಕಡೆ ಓಡಾಡುವ ಅವರ ಜೊತೆಗೆ ಹೆಚ್ಚು ಕಾಲ ಇರುವುದು ಕ್ಷೇಮವಲ್ಲಾ ಅನಿಸಿ ಒಳಗೆ ಬಂದೆ.
‌‌ ಕೊನೆಗೊಮ್ಮೆ ಮತ್ತೆ ಹೋಗಿ ನೋಡುವುದು ಇದ್ದುದರಿಂದ ತಾತ್ಕಾಲಿಕ  ಕೆಲಸವೇನಾದರೂ ಇದ್ದದ್ದಾದರೆ ಮಾಡೋಣವೆಂದರೂ ಏಕೋ  ಮನಸ್ಸಾಗದೇ ಹಾಗೇ ಕುಳಿತೆ. ನಾನು ಅವರಿಗೆ ಹೇಳಿದ ಕೆಲಸಗಳನ್ನು ನೆನೆದು ಮತ್ತೇನಾದರೂ ಹೇಳಲುಂಟೇ ಎಂದು ನಿಧಾನವಾಗಿ ಯೋಚನೆ ಮಾಡತೊಡಗಿದಾಗ ಮನಸ್ಸಿನಲ್ಲಿ ಏನೋ ವಿಚಾರ ಬಂದು ಬೆಚ್ಚಿದೆ.
ಯಾರೋ ಒಬ್ಬರು,
” ಈ ವಯಸ್ಸಾದ ಹಿರಿಯರಿಂದ ಏನೂ ಆಗುವುದಿಲ್ಲ, ಸುಮ್ಮನೇ ಸಾಕುವುದು ಭಾರ, ಇವರಿಗೆ ಔಷಧೋಪಚಾರ ದಂಡ.
ಪ್ರಯೋಜನವಿಲ್ಲ, ಇಂಥವರಿಂದ ಮುಕ್ತರಾಗಲು ಏನು ಮಾಡಬೇಕು”-
ಎಂದು ಎಲ್ಲ ತರುಣ ಪೀಳಿಗೆ ಯೋಚಿಸತೊಡಗಿದರೆ ನಿಮ್ಮಂಥವರ ಗತಿ ಮುಂದೆ ಏನಾಗಬಹುದು? ಯೋಚಿಸಿದ್ದೀರಾ? ” -ಎಂದು ಕೇಳಿದಂತೆ ಭಾಸವಾಗಿ ವಿಷಣ್ಣಳಾದೆ. ಕಣ್ಣೆದುರು ಇತರರ/ ಮಕ್ಕಳ ಅವಕೃಪೆಗೆ ಒಳಗಾಗಿ ಅಸಹಾಯಕರಾಗಿ ಸಾಲುಸಾಲಾಗಿ ವೃದ್ಧರು ಕಾಣಿಸಿದಂತಾಗಿ , ಅವರನ್ನು ಒತ್ತಾಯದಿಂದ ಮನೆಯಿಂದ ಹೊರಡಿಸಿ ವೃದ್ಧಾಶ್ರಮಕ್ಕೆ ಸೇರಿಸಿ ಕೈತೊಳೆದು ಕೊಂಡಂತೆ ಅನಿಸತೊಡಗಿ ತಲೆ ತಿರುಗಿದಂತಾಗ ತೊಡಗಿತು.
ಒಣಗಿದ ಹಾಗೂ ಹೂ – ಕಾಯಿಗಳನ್ನು ಬಿಡದ ಗಿಡಮರಗಳು ಹಿತ್ತಲಕ್ಕೆ, ನಮಗೆ, ಭಾರವೆನಿಸಿ ಅವುಗಳನ್ನೆಲ್ಲ ಕಡಿದು ,ಟೊಂಗೆ ಕತ್ತರಿಸಿ ಒಗೆದು ಹೊಸದಕ್ಕೆ ದಾರಿಮಾಡುವದಕ್ಕೂ ಮೇಲಿನ ವಿಚಾರಕ್ಕೂ ವ್ಯತ್ಯಾಸವೇ ಅನಿಸಲಿಲ್ಲ.
ಎಲ್ಲೋ ಮನದಾಳದಲ್ಲಿ ಕಳಮಳ/ ಸಂಕಟ. ಕೂಡಲೇ ಹೊರಹೋಗಿ ಅವರಿಗೆ ಹೇಳಿದೆ,
” ಒಣಗಿದ ಯಾವುದನ್ನೂ ಕಡಿಯಲು ಹೋಗಬೇಡಿ, ಸ್ವಲ್ಪ ದಿನ ಕಾದು ನೋಡೋಣ, ತಾನೇ ಕಳಚಿ ಬಿದ್ದಾಗ ಮುಂದಿನದು ನೋಡೋಣ. ಉಳಿದ ಭಾಗವೆಲ್ಲ clean ಮಾಡಿಬಿಡಿ ಸಾಕು.”
‌ಕೆಲಸದ ಬಗ್ಗೆ ಜೋರು ದನಿಯಲ್ಲಿ ಇಷ್ಟುದ್ದ ಪಟ್ಟಿ ಕೊಟ್ಟ ಇವರಿಗೆ ಇಷ್ಟರಲ್ಲಿ ಏನಾಯಿತು? ಎಂದು ನನ್ನನ್ನೇ ನೋಡುತ್ತಾ ನಿಂತಿದ್ದ ಕೆಲಸದವರ ಕಣ್ತಪ್ಪಿಸಿ ಒಳಗೆ ಜಾರಿಕೊಂಡೆ…
ನನ್ನ ಈ ನಡೆಗೆ ಕಾರಣ, ನಿಜವಾದ ಪರಿಸರ ಪ್ರೀತಿಯೋ, ಅಥವಾ
ಅದರೊಳಗಡಗಿದ ನನ್ನದೇ ಮನದ ಭೀತಿಯೋ ಇನ್ನೂ ಸ್ಪಷ್ಟವಾಗಿಲ್ಲ.

1 Comment

Leave a Reply