ಶೋಧನೆಗಳು ಮತ್ತು ನಮ್ಮ ಜೀವನ – ೨

ಮೊದಲ ಸರಣಿಯ ಲೇಖನ ಓದಿ ಒಬ್ಬ ಓದುಗ ಕೇಳಿದ ಪ್ರಶ್ನೆ – ಈ ಸರಣಿಯ ಉದ್ದೇಶ ವಿಜ್ಞಾನ ಅಥವಾ ತಂತ್ರಜ್ಞಾನದ ಶೋಧನೆ ತಪ್ಪೆಂದು ತಿಳಿಸಲೇನು?

ಖಂಡಿತ ನನ್ನ ಉದ್ದೇಶ ತಪ್ಪೆಂದು ತೋರಿಸುವದಲ್ಲ, ಪ್ರತಿಯೊಂದು ಶೋಧನೆಯ ಪ್ರಭಾವ ಜೀವನದಲ್ಲಿ ಎರಡು ವಿಧದಲ್ಲಿ ಆಗುತ್ತದೆ ೧. ರಚನಾತ್ಮಕ ಮತ್ತು ೨. ವಿನಾಶಕಾರಕ. ಶೋಧನೆಯ ಪ್ರಭಾವ ಉಪಯೋಗಿಸುವರಿಗೆ ಗೊತ್ತಿದ್ದೋ, ಗೊತಿಲ್ಲದೆಯೋ ತನ್ನ ಹಾದಿ ಹಿಡಿದು ಹೊರಡುತ್ತದೆ. ಗೊತ್ತಿದ್ದೂ ರಚನಾತ್ಮಕದ ಪ್ರಭಾವದಿಂದ ವಿನಾಶಕಾರಕದ ಹಾದಿ ಹಿಡಿದ ಒಂದು ಶೋಧನೆಯ ಉದಾಹರಣೆ ಅಣ್ವಸ್ತ್ರ ಸಿಡಿಗುಂಡು (ನ್ಯೂಕ್ಲೀಯರ ಬಾಂಬ್).
ಮನುಷ್ಯ ಸಾಮಾಜಿಕ ಪ್ರಾಣಿ, ಹಿಂದಿನ ಕಾಲದಲ್ಲಿ ನದಿ ದಡದಲ್ಲಿ ಗುಂಪಿನಲ್ಲಿ ವಾಸಿಸುತ್ತಿದ್ದ ಮನುಷ್ಯ ಹೊಸಶೋಧನೆಯಿಂದ ನಗರದ ಕನಸು ಕಂಡು ಅದನ್ನು ಕಾರ್ಯರೂಪಕ್ಕೆ ತಂದನು, ಅದನ್ನು ಸಮತೋಲನದಲ್ಲಿ ನಡೆಸುಕೊಂಡು ಹೋದರೆ ಚೆನ್ನಾಗಿರುತ್ತಿತ್ತು ಆದರೆ ಸಮತೋಲನ ತಪ್ಪಿದಾಗ ಆದ ಪರಿಣಾಮಗಳು ಇಂದಿನ ಪರಿಸರದ ವಿಕೃತಿಗೆ ಒಂದು ಕೊಡುಗೆ. ಇದು ಗೊತ್ತಿಲ್ಲದೆ ಆಗುವ ಒಂದು ಉದಾಹರಣೆ.

ನನ್ನ ಲೇಖನಗಳ ಉದ್ದೇಶ ಹೊಸಶೋಧ ನಮ್ಮ ಜೀವನದಲ್ಲಿ ಹೇಗೆ ಬೆಸೆದಿದೆ ಎನ್ನುವ ವಿಚಾರಕ್ಕೆ ಸೀಮಿತ, ಅದು ಒಳ್ಳೆಯದೋ ಅಥವಾ ಕೆಟ್ಟದೋ ಎಂದು ಚರ್ಚಿಸುವದಲ್ಲ.

ನಾನು ಇಂದು ಯಾವುದೇ ಹೊಸ ಶೋಧದ ಬಗ್ಗೆ ಚರ್ಚಿಸುತ್ತಿಲ್ಲ, ಬದಲಿಗೆ ಹೊಸ ಶೋಧನೆಯತ್ತ ನಮ್ಮ ಚಿಕ್ಕ ಹೆಜ್ಜೆ ನೋಡೋಣ. ಇಂದು ಮಂಗಳ ಗ್ರಹ ನಮಗೆ ಹೊಸ ಮನೆಯಂತೆ ಕಾಣುತ್ತಿದೆ, ಮಂಗಳನ ಮೇಲೆ ಹೇಗೆ ಜೀವಿಸಬಹುದು ಎಂಬ ವಿಷಯದ ಬಗ್ಗೆ ಸಂಶೋದನೆ ತೀವ್ರ ಗತಿಯಲ್ಲಿ ಸಾಗುತ್ತಿದೆ. ಮಂಗಳನ ಮೇಲೆ ವಾಸಸ್ಥಾನ ಅಷ್ಟು ಮುಖ್ಯವೆ?

ನಗರಗಳು ಈಗ ಅಡ್ಡ ಹಾಗು ಉದ್ದ ಬೆಳೆಯುತ್ತಿವೆ; ಜನಸಂಖ್ಯೆ ಹಾಗು ಬೆಳೆಯುವ ಅವಶ್ಯಕತೆಗಳನ್ನು ಪರಿಗಣಿಸಿ ಭೂಮಿಯನ್ನು ಹಿಗ್ಗಿಸಬೇಕು ಇಲ್ಲವೇ ಪರ್ಯಾಯ ವ್ಯವಸ್ಥೆ ಹುಡುಕಬೇಕು. ಇತ್ತಿಚೆಗೆ ಆಗುತ್ತಿರುವ ಪ್ರಕೋಪಗಳನ್ನು ನೋಡಿದರೆ ಭೂಮಿ ತಾಯಿ ನಿಜವಾಗಿಯೂ ನಮ್ಮ ಅಜ್ಞಾನಕ್ಕೆ ನೊಂದು ತನ್ನನ್ನು ತಾನೇ ದಂಡಿಸಿಕೊಳ್ಳುತ್ತಿದ್ದಾಳೆ. ನಮ್ಮ ನೆಚ್ಚಿನ ನಟ, ನಟಸಾರ್ವಭೌಮ ಡಾ: ರಾಜಕುಮಾರ ಅವರು ಈ ಮಾತನ್ನು ೧೯೭೭ ರಲ್ಲಿ ಹಾಡಿ ತಿಳಿಸಲು ಪ್ರಯತ್ನಿಸಿದ್ದಾರೆ. ಈ ಲೇಖನದಲ್ಲಿ ಆ ಹಾಡನ್ನು ಸೇರಿಸಿದ್ದೇನೆ, ತಾವು ಈಗಲಾದರೂ ಕೇಳಿ ತಿಳಿದುಕೊಳ್ಳಿ.

ಎಲೋನ್ ಮುಸ್ಕ್ (Elon Musk) ಸ್ಪೇಸ್ ಏಕ್ಷ್ (Space X) ಮುಖ್ಯಸ್ಥ ಹೇಳಿದ್ದೇನು ನೋಡೋಣ – ಭೂಮಿಯ ಮೇಲೆ ಅರಿಯದ ಪ್ರಕೋಪದಿಂದ ದೈತ್ಯ ಸರೀಸೃಪ ಸಂತತಿ ಮಾಯವಾಗಿದೆ; ಹಾಗೆಯೇ ಈಗಿನ ರಾಸಾಯನಿಕ ಅಸ್ತ್ರಗಳು, ಅರಿಯದ ವೈರಾಣು ಇಲ್ಲವೇ ನೈಸರ್ಗಿಕ ಪ್ರಕೋಪದಿಂದ ಮನುಷ್ಯ ಜೀವಿಯೂ ಈ ಭೂಮಿಯಿಂದ ಅಳಿದುಹೋಗಬಹುದು. ಮನುಷ್ಯ ಜೀವಿಯ ಗಂಡಾಂತರ ತಪ್ಪಿಸಲು ಭೂಮಿಗೆ ಪರ್ಯಾಯ ಅವಶ್ಯಕತೆ ಇದೆ. ಮಂಗಳ ಗ್ರಹದ ಗುಣಲಕ್ಷಣಗಳು ಬಹು ವಿಧದಲ್ಲಿ ಭೂಮಿಗೆ ಸಮರೂಪದ ಗ್ರಹ ಎಂದು ವಿಜ್ಞಾನಿಗಳ ಶೋಧನೆ ತಿಳಿಸುತ್ತದೆ.

ಭಾರತ ಈ ನಿಟ್ಟಿನಲ್ಲಿ ಬಹು ದೊಡ್ಡ ಹೆಜ್ಜೆ ಇಟ್ಟಿದೆ. ಭಾರತದ ಕಡಿಮೆ ಖರ್ಚಿನ ಮಂಗಳ ಯಾನ ಜಗತ್ತನ್ನು ಬೆರಗುಗೊಳಿಸಿದೆ, ಇದೆ ರೀತಿ ನಮ್ಮ ಪ್ರಯತ್ನ ಮುಂದುವರೆದರೆ ನಾವು ಕೆಲವೇ ವರುಷಗಳಲ್ಲಿ ಮಂಗಳನ ಮೇಲೆ ಮನೆ ಕಟ್ಟಬಹುದು. ನಮಗೆ ಈ ಪರ್ಯಾಯ ವ್ಯವಸ್ಥೆ ನಿಜವಾಗಿಯೂ ಅವಶ್ಯ; ಹಿಂದೆ ಹೊಸ ದೇಶಗಳನ್ನು ಶೋಧಿಸುತ್ತ ಜನರು ಸಮುದ್ರ ಯಾನ ಮಾಡಿದರು, ಈಗ ಹೊಸ ಗ್ರಹಗಳನ್ನು ಶೋಧಿಸಲು ಸೌರ ಯಾನ ಮಾಡುತ್ತಿದ್ದೇವೆ. ಕೆಲವೇ ವರುಷಗಳಲ್ಲಿ ಮನುಷ್ಯನಿಗೆ ನಮ್ಮ ಆಕಾಶಗಂಗೆ ಕೂಡಾ ಚಿಕ್ಕದಾಗಬಹುದು, ಅದನ್ನು ದಾಟಿ ಹೊಸ ಆಕಾಶಗಂಗೆ ಹುಡುಕುವ ಕಾಲ ದೂರವಿಲ್ಲ.

Leave a Reply