ಸೇತುಬಂಧನ (ಮೇ ೨೦೧೬)

ನಾಟಕದ ಬಗ್ಗೆ:

ಟಿ.ಪಿ.ಅಶೋಕ ಅವರ ಬರಹವೊಂದರಿಂದ ಆಯ್ದ ಭಾಗಗಳು
ಈ ನಾಟಕವನ್ನು ಒಂದು ಸ್ವತಂತ್ರ ನಾಟಕವಾಗಿಯೂ ಹಾಗೂ ಅಕ್ಷರ ಅವರ ಹಿಂದಿನ ನಾಟಕಗಳಾದ “ಸ್ವಯಂವರ ಲೋಕ” ಮತ್ತು “ಭಾರತ ಯಾತ್ರೆ”ಗಳ ಮುಂದುವರೆದ ಭಾಗವಾಗಿಯೂ ಓದಬಹುದು. “ಸ್ವಯಂವರ ಲೋಕ” ನಾಟಕವು ಹಳೆಯೂರು ಎಂಬ ದ್ವೀಪವೊಂದರಲ್ಲಿ ನಡೆಯುತ್ತದೆ. `ಅಭಿವೃದ್ಧಿ’ಗಾಗಿ ನದಿಯೊಂದಕ್ಕೆ ಅಣೆಕಟ್ಟು ಕಟ್ಟಿದ ಪರಿಣಾಮವಾಗಿ ಹಳೆಯೂರು ಒಂದು ದ್ವೀಪವಾಗಿದೆ. ಅದು ಒಂದು `ಹಿಂದುಳಿದ’ ಪ್ರದೇಶ. ಹೊರ ಜಗತ್ತು ವೇಗವಾಗಿ ಚಲಿಸುತ್ತಿದೆ. ಹಾಗಾಗಿ ವಿದ್ಯಾಭ್ಯಾಸ, ಉದ್ಯೋಗ, ಹೊಸಜೀವನಗಳನ್ನು ಅರಸಿ ಅಲ್ಲಿನ ಅನೇಕರು ಪಟ್ಟಣ ಸೇರುತ್ತಿದ್ದಾರೆ. ಈ ನಾಟಕದ ಕೇಂದ್ರ ಪಾತ್ರವಾದ ರಾಮಕೃಷ್ಣ ಜೋಯಿಸರ ಮಕ್ಕಳೂ ಈಗ ಆಧುನಿಕ ವಿದ್ಯಾಭ್ಯಾಸ ಪಡೆದು ನಗರಗಳಲ್ಲಿ ನೆಲೆಸಿದ್ದಾರೆ. ಜೋಯಿಸರು ತಮ್ಮ ಮಗಳು ಭಾಮೆ ಮತ್ತು ದೂರದ ಸಂಬಂಧಿ ಕಿಟ್ಟುವಿನೊಂದಿಗೆ ಹಳೆಯೂರಿನಲ್ಲಿಯೇ ಉಳಿದಿದ್ದಾರೆ. ಈ ನಾಟಕದಲ್ಲಿ ಭಾಮೆಗೆ ಒಂದು ಸ್ವಯಂವರ ಏರ್ಪಾಟಾಗುತ್ತದೆ. ಅಂತಿಮವಾಗಿ ಭಾಮೆ ಯಾರನ್ನೂ ಆರಿಸಿಕೊಳ್ಳುವುದಿಲ್ಲ. ನಾಟಕದ ಕೊನೆಯಲ್ಲಿ ರಾಮಕೃಷ್ಣ ಜೋಯಿಸರು ಬದರೀನಾಥಕ್ಕೆ ಯಾತ್ರೆ ಹೋಗಲು ನಿರ್ಧರಿಸುತ್ತಾರೆ. ಈ ಶೋಧ ಮುಂದಿನ ನಾಟಕ “ಭಾರತ ಯಾತ್ರೆ”ಯಲ್ಲಿ ಮುಂದುವರೆಯುತ್ತದೆ. ತಮ್ಮ ಮಕ್ಕಳ ಮನೆಗಳಿಗೂ ಭೇಟಿ ನೀಡಿ ಅವರ ಜೀವನಕ್ರಮವನ್ನು ಜೋಯಿಸರು ಖುದ್ದಾಗಿ ಕಾಣುತ್ತಾರೆ. ಅದಕ್ಕಿಂತ ಮುಖ್ಯವಾಗಿ, ವಿವಿಧ ವರ್ಗಗಳಿಗೆ, ಅಂತಸ್ತುಗಳಿಗೆ, ವೃತ್ತಿಗಳಿಗೆ ಸೇರಿದ ಹಲವಾರು ವ್ಯಕ್ತಿಗಳನ್ನು ಭೇಟಿಯಾಗುತ್ತಾರೆ. ಅಂದರೆ ಬಗೆಬಗೆಯ ಜೀವನಕ್ರಮಗಳು, ಸಮಸ್ಯೆ-ಸವಾಲುಗಳ ಮೂಲಕ ಜೋಯಿಸರು ಸಮಕಾಲೀನ ಭಾರತವನ್ನು ಕಂಡುಕೊಳ್ಳುವ ಒಂದು ವಿನ್ಯಾಸ ಈ ನಾಟಕದಲ್ಲಿದೆ. ನಾಟಕದ ಕೊನೆಯಲ್ಲಿ ಜೋಯಿಸರಿಗೆ ಸಿದ್ಧ ಉತ್ತರಗಳೇನೂ ದೊರೆಯದಿದ್ದರೂ ಅವರ ಅನುಭವ ಹಿಗ್ಗಿದೆ, ತಿಳಿವಳಿಕೆ ವಿಸ್ತಾರಗೊಂಡಿದೆ. ಅವರು ಹಳೆಯೂರಿಗೆ ಮರಳಲು ನಿರ್ಧರಿಸುತ್ತಾರೆ.
ಪ್ರಸ್ತುತ “ಸೇತು ಬಂಧನ” ಪ್ರಾರಂಭವಾಗುವುದು ಇಲ್ಲಿಂದ. ಜೋಯಿಸರು ಮನೆ ಬಿಟ್ಟು ಸುಮಾರು ಎರಡೂವರೆ ವರುಷಗಳು ಸಂದುಹೋಗಿವೆ. ಈ ಎರಡೂವರೆ ವರುಷಗಳಲ್ಲಿ ಹಳೆಯೂರು ಅನೇಕ ಕ್ಷಿಪ್ರ ವಿದ್ಯಮಾನಗಳಿಗೆ ಸಾಕ್ಷಿಯಾಗಿದೆ – ಹೊಸ ವಿದ್ಯಮಾನಗಳು ಅಡಿಕೆ ಕೃಷಿ ಮಾಡುತ್ತಿರುವ ಕಿಟ್ಟುಗೆ ಮಾರಕವಾಗಿ ಕಾಣುತ್ತಿವೆ. ತೋಟದ ಕೆಲಸಕ್ಕೆ ಕೂಲಿಗಳೇ ಸಿಗುತ್ತಿಲ್ಲವೆಂದು ಅವನ ಅಳಲು. ಕೃಷಿಕಾರ್ಮಿಕರ ವರ್ಗದಿಂದ ಬಂದಿರುವ ಚೌಡನಿಗೆ ಈ ಹೊಸ ವಿದ್ಯಮಾನಗಳಿಂದ ತಮ್ಮ ಜನರಿಗೆ ಒಳ್ಳೆಯದೇ ಆಯಿತು ಎನ್ನಿಸುತ್ತಿದೆ. ಬೇರೆ ಕೆಲಸಗಳಲ್ಲಿ ಹೆಚ್ಚಿನ ಸಂಪಾದನೆಯಾಗುತ್ತಿರುವುದರಿಂದ ಎಲ್ಲಕ್ಕೂ ತೋಟದ ಒಡೆಯರನ್ನೇ ಅವಲಂಬಿಸಬೇಕಾದ ಪರಿಸ್ಥಿತಿಯಿಂದ ಮುಕ್ತಿ ಸಿಕ್ಕಿದೆ. ಹಸಲರ ತಿಮ್ಮ ಯಾವುದಕ್ಕೂ ಬೇಡವಾಗಿದ್ದ ತನ್ನ ಕೊಂಚ ಜಾಗವನ್ನು ಮಾರಿ ತನ್ನ ಆರ್ಥಿಕ, ಸಾಮಾಜಿಕ ಅಂತಸ್ತನ್ನು ಹೆಚ್ಚಿಸಿಕೊಂಡು ಈಗ ತಿಮ್ಮಪ್ಪನಾಯ್ಕನಾಗಿದ್ದಾನೆ. ಸಂಕಯ್ಯ ಶೆಟ್ಟಿಯ ಮರಳು ಗಣಿಗಾರಿಕೆಯಿಂದ ಹಳೆಯೂರಿನ ಅರ್ಥವ್ಯವಸ್ಥೆಗೆ ಹಿಂದೆಂದೂ ಕಾಣದ ಚಲನೆ ಬಂದುಬಿಟ್ಟಿದೆ. ಈ ಮಧ್ಯೆ ಕೇವಲ `ಚೌಡಿ ಕಲ್ಲು’ ಅನ್ನಿಸಿಕೊಂಡಿದ್ದ ಜಾಗ ಈಗ `ಸಾಕ್ಷಾತ್ ಜಗದಂಬಿಕೆಯ ಅವತಾರವಾಗಿರೋ ಚಾಮುಂಡೇಶ್ವರಿ ದೇವಿ’ಯ ದೇವಸ್ಥಾನವಾಗಿ ಬೆಳೆದು ಪರವೂರುಗಳ ಸಹಸ್ರಾರು ಭಕ್ತಾದಿಗಳನ್ನು ಆಕರ್ಷಿಸಿ ತನ್ನ ಶ್ರೀಮಂತಿಕೆಯನ್ನೂ ಹೆಚ್ಚಿಸಿಕೊಂಡು ಊರಿನ ಪರ್ಯಾಯ ಆರ್ಥಿಕ ಶಕ್ತಿಯಾಗಿ ಪರಿವರ್ತಿತವಾಗಿದೆ. ಇದು ಊರಲ್ಲಿ ಹೊಸ ಸಂಘರ್ಷಗಳಿಗೆ ಕಾರಣವಾಗಿದ್ದರೂ ಹಳೆಯೂರಿನ ಇತಿಹಾಸ ಚಕ್ರ ಯಾರಿಗೂ ಕಲ್ಪಿಸಿಕೊಳ್ಳಲಾರದಷ್ಟು ವೇಗವಾಗಿ ಉರುಳಲಾರಂಬಿಸಿದೆ. ಈ ಸಂಕೀರ್ಣ ಪರಿಸ್ಥಿತಿಯನ್ನು ಕೇವಲ ಒಳ್ಳೆಯದು-ಕೆಟ್ಟದ್ದು, ಪ್ರತಿಗಾಮಿ- ಪ್ರಗತಿಗಾಮಿ ಎಂಬ ಸರಳ ದ್ವಿದಳ ವರ್ಗೀಕರಣದ ಪರಿಭಾಷೆಯಲ್ಲಿ ಅರ್ಥೈಸಲಾಗದೆಂದು ರಾಮಕೃಷ್ಣ ಜೋಯಿಸರಿಗೆ ತಮ್ಮ ಲೋಕ ಸಂಚಾರದಿಂದಲೂ ಲೋಕಾನುಭವದಿಂದಲೂ ಮನದಟ್ಟಾಗಿದೆ. ನಮ್ಮ ಅನುಭವಗಳನ್ನು ಕಥನವಾಗಿಸುವ ಮೂಲಕ ಮಾತ್ರ ನಾವು ಅದರ ಒಳಸುಳಿಗಳನ್ನು, ವಿರೋಧಾಭಾಸಗಳನ್ನು, ಅಸಂಗತೆ-ಅಸಂಬದ್ಧತೆಗಳನ್ನು ಕಂಡುಕೊಳ್ಳಲು ಸಾಧ್ಯ ಎಂಬ ನಂಬಿಕೆ ಅವರದು.
“ಸ್ವಯಂವರ ಲೋಕ”ದಲ್ಲಿ ಭಾರತಯಾತ್ರೆಗೆ ಹೋಗುವ ಮುನ್ನ ಜೋಯಿಸರು ಕಿಟ್ಟು ಮತ್ತು ಭಾಮೆಯನ್ನು ಉದ್ದೇಶಿಸಿ, `ಕಥೆ ಕಟ್ಟುವ ಉದ್ಯೋಗವನ್ನು ನೀವಿಬ್ಬರೂ ನಿಲ್ಲಿಸಬೇಡಿ. ಕಥೆ ಕಟ್ಟತಾ ಕಟ್ಟತಾನೇ ವಾಸ್ತವದಲ್ಲಿ ಕಾಣದಿರೋ ಸತ್ಯಗಳು ನಮಗೆ ಕಾಣಿಸೋದಕ್ಕೆ ಸಾಧ್ಯವಿದೆ’ ಎಂದು ಹೇಳುತ್ತಾರೆ. “ಭಾರತ ಯಾತ್ರೆ”ಯಲ್ಲಿ ಅವರು ಸ್ವತಃ ನಮ್ಮ ಸಮಾಜದ ಬಹುಸ್ತರಗಳಿಂದ ಮೂಡಿದ ಕಥನಗಳನ್ನು ಕೇಳಿಸಿಕೊಳ್ಳುತ್ತಾರೆ. “ಸೇತು ಬಂಧನ”ದಲ್ಲಿ ಎಷ್ಟೋ ವರುಷಗಳ ನಂತರ ಊರಿಗೆ ಮರಳುವ ಜೋಯಿಸರು ಹೊಸ ಕಥನಗಳಿಗೆ ಎದುರಾದಾಗ ಅವುಗಳನ್ನು ಅನುಸಂಧಾನ ಮಾಡಬೇಕಾದ ಹೊಸ ಪ್ರಯತ್ನಗಳಿಗೆ ಮುಂದಾಗ ಬೇಕಾಗುತ್ತದೆ. ಅದೆಂದರೆ ನಮ್ಮ ಅನುಭವಗಳನ್ನೇ ನಾಟಕಗಳಾಗಿ ಪ್ರಯೋಗಿಸುವುದು. ಹಾಗೆ ಮಾಡುವ ಮೂಲಕ ನಮ್ಮ ಅನುಭವಗಳೇ ನಮ್ಮ ಕಥನಗಳಲ್ಲಿ ಪಡೆಯುವ ಪರಿವರ್ತನೆಗಳನ್ನು ಎಲ್ಲರ ಗಮನಕ್ಕೆ ತರುತ್ತಾರೆ. ಅಂಥ ಒಂದು ಪ್ರಯೋಗದ ನಂತರ ಜೋಯಿಸರು ಹೇಳುವ ಈ ಮಾತುಗಳು ಮನನೀಯವಾಗಿವೆ: “ನಾಟಕ ಅಂದರೇನು? ಅದು ಆಗಿಹೋಗಿರೋ ಭವವನ್ನು ಆಡಿತೋರಿಸೋ ಪುನರಾವರ್ತನೆ ಅಲ್ಲ; ಆ ಭವದಿಂದ ಹುಟ್ಟಿರುವ ಅನುಭವವನ್ನು ಕಂಡುಕೊಳ್ಳುವ ಆವಿಷ್ಕಾರ! ಅರ್ಥಾತ್, ನಾಟಕ ಅನ್ನೋದು ಭವ ಮತ್ತು ಅನುಭವದ ಮಧ್ಯೆ ನಡೆಯೋ ಸೇತುಬಂಧನ!”

ರಚನೆ/ನಿರ್ದೇಶನ – ಅಕ್ಷರ ಕೆ.ವಿ.

ವಿನ್ಯಾಸ/ಸಹನಿರ್ದೇಶನ – ಮಂಜು ಕೊಡಗು

ಪಾತ್ರವರ್ಗ
ಕಿಟ್ಟು – ಶ್ರೀಹರ್ಷ ಜಿ.
ಜೋಯಿಸ – ಪ್ರಸನ್ನ ಜಿ.ವಿ., ಸಂದೇಶ್ ಹೆಚ್.ಆರ್.
ಭಾಮೆ – ಪ್ರತಿಭಾ ಬಿ.ಜಿ., ಕಾಜೋಲ್ ಚಿನ್ನಾಪುರ್, ಸುನೀಲ,
ಛಾಯಾ ಎಂ.ಎಸ್., ಪಯಸ್ವಿನಿ ಶೆಟ್ಟಿ
ಮದನ – ಸಂತೋಷ್ ಟೊಣಪೆ, ಗಂಗಪ್ಪ ಪಾಟೀಲ
ತಿಮ್ಮ – ಮಂಜಪ್ಪ ಹುಲಗಿ
ಸಂಕಯ್ಯ ಶೆಟ್ಟಿ, ಟ್ಯಾಕ್ಸಿಯವ – ರಿತೇಶ್ ವಕ್ವಾಡಿ
ಆಚಾರ್ಯ, ಪ್ರಯಾಣಿಕ – ಶ್ರೀನಿಧಿ ಆಚಾರ್ ಕೆ.ಎಸ್.
ಚಂದನಾ – ಪಯಸ್ವಿನಿ ಶೆಟ್ಟಿ
ಚೌಡಪ್ಪ, ಟ್ಯಾಕ್ಸಿಯವ – ಶ್ರೀನಿವಾಸ ಮೂರ್ತಿ ಜಿ.ಎಸ್.
ಮಹಾಲಕ್ಷ್ಮಿ – ಸುನೀಲ
ಸಾವಿತ್ರಿ – ಕಾಜೋಲ್ ಚಿನ್ನಾಪುರ್
ಜಯರಾಮ, ಜನ – ಸದಾಶಿವ ಯಕ್ಕುಂಡಿಮಠ
ಜಗನ್ನಾಥ, ಗಂಡ – ಗಂಗಪ್ಪ ಪಾಟಿ¯
ಹೆಂಡತಿ – ಛಾಯಾ ಎಂ.ಎಸ್.
ಜನ – ಪೀರಪ್ಪ
ಪೋಲಿಸ್ – ಅರಣ್ಯ ಸಾಗರ್ ವಿ.

ತಾಂತ್ರಿಕ ವರ್ಗ
ರಂಗ ನಿರ್ವಹಣೆ – ಶ್ರೀನಿಧಿ ಆಚಾರ್ ಕೆ.ಎಸ್.

ತಾಲೀಮು ನಿರ್ವಹಣೆ – ರಿತೇಶ್ ವಕ್ವಾಡಿ

ರಂಗಸಜ್ಜಿಕೆ – ಸಂದೇಶ್ ಹೆಚ್.ಆರ್., ಕಾಜೋಲ್ ಚಿನ್ನಾಪುರ್,
ಛಾಯಾ ಎಂ.ಎಸ್., ಪೀರಪ್ಪ, ಗಂಗಪ್ಪ ಪಾಟಿಲ್

ವಸ್ತ್ರ – ಅರಣ್ಯ ಸಾಗರ್ ವಿ., ಶಿವರಾಜ್ ಕೆ.

ಪ್ರಸಾಧನ – ಪ್ರತಿಭಾ ಬಿ.ಜಿ.

ಬೆಳಕು – ಶ್ರೀಹರ್ಷ ಜಿ., ಪ್ರಸನ್ನ ಜಿ.ವಿ., ಶ್ರೀನಿವಾಸ ಮೂರ್ತಿ
ಜಿ.ಎಸ್., ಮಂಜಪ್ಪ ಹುಲಗಿ, ಸದಾಶಿವ ಯಕ್ಕುಂಡಿಮಠ

ಪರಿಕರ – ಸುನೀಲ

ಸಂಗೀತ – ಸಂತೋಷ್ ಟೊಣಪೆ, ಪಯಸ್ವಿನಿ ಶೆಟ್ಟಿ,
ಶಿವರಾಜ್ ಕೆ.

ಪೋಸ್ಟರ್ – ರಿತೇಶ್ ವಕ್ವಾಡಿ, ಶ್ರೀಹರ್ಷ ಜಿ.

ಸಂಗೀತ ವಿನ್ಯಾಸ ಮತ್ತು ನಿರ್ವಹಣೆ – ಅರುಣ್‍ಕುಮಾರ್‍ಎಮ್.,
ಎಂ.ಪಿ. ಹೆಗಡೆ, ವಿದ್ಯಾ ಹೆಗಡೆ, ಶಿಶಿರ ಕೆ.ವಿ.

ಬೆಳಕಿನ ವಿನ್ಯಾಸ ಮತ್ತು ನಿರ್ವಹಣೆ – ಮಂಜು ಕೊಡಗು

ಆಭಾರ
ಬಿ.ಆರ್. ವೆಂಕಟರಮಣ ಐತಾಳ, ಪಣಿಯಮ್ಮಎಚ್.ಎಸ್.,
ಭಾರ್ಗವ ಕೆ.ಎನ್., ಚನ್ನಕೇಶವ ಎಸ್.ಎಚ್.,
ನೀನಾಸಮ್ ಸದಸ್ಯರು

Leave a Reply