ಆ ದಿನಗಳ ಸಂತೆಯ ಸೊಗಡು: ಈ ಶಿಲಾ ತೋಟದಲ್ಲಿ ನೋಡು

ಆ ದಿನಗಳ ಸಂತೆಯ ಸೊಗಡು: ಈ ಶಿಲಾ ತೋಟದಲ್ಲಿ ನೋಡು

                                                                               — ರಘೋತ್ತಮ್ ಕೊಪ್ಪರ್

ಇಂದಿನ ದಿನಗಳಲ್ಲಿ ಹಳೆಯ ಕಾಲದ ಸಂತೆಗಳು ಸಿಗುವುದು ತೀರಾ ವಿರಳ. ಎಲ್ಲೊ ಹಳ್ಳಿಗಳಲ್ಲಿ, ಸಣ್ಣ ನಗರಗಳಲ್ಲಿ ಕಾಣಬಹುದು. ಈಗ ಎಲ್ಲಾ ಬದಲಾಗಿಬಿಟ್ಟಿದೆ. ಸೂಪರ್ ಮಾರ್ಕೆಟ್‍ಗಳು ಲಗ್ಗೆ ಇಟ್ಟು ಆ ಹಳೆಯ ಮಾರುಕಟ್ಟೆಯ ಸೊಗಡನ್ನು ನಮ್ಮಿಂದ ದೂರವಾಗಿಸಿಬಿಟ್ಟಿವೆ. ನಮ್ಮ ಮುಂದಿನ ಜನಾಂಗದವರಿಗೆ ಇವೆಲ್ಲವನ್ನು ಹೇಗೆ ತೋರಿಸಬೇಕು?

ಚಿಂತಿಸಬೇಡಿ ಅದಕ್ಕೆಂದೆ ಇದೆ ಒಂದು ಸೂಕ್ತ ಪ್ರವಾಸಿ ಕೇಂದ್ರ. ಅದರ ಹೆಸರು ಉತ್ಸವ ರಾಕ್ ಗಾರ್ಡನ್. ಜನೇವರಿ ತಿಂಗಳಲ್ಲಿ ಸ್ನೇಹಿತರ ಜೊತೆಗೆ ಭೇಟಿ ಮಾಡಿದ ಆ ಉದ್ಯಾನವನವನ್ನು ಮತ್ತೇ ಮೇ ನಲ್ಲಿ ಕುಟುಂಬದವರ ಜೊತೆಗೆ ನೋಡಲು ಹೋದೆ. ಹೋಗುವಾಗ ಅನಿಸಿದ್ದು ನೋಡಿದ್ದನ್ನೇ ಮತ್ತೆ ಮತ್ತೆ ಏನು ನೋಡುವುದು ಎಂದು. ಆದರೆ ಅಲ್ಲಿ ಹೋದಾಗ ಅನೇಕ ಬದಲಾವಣೆಗಳಾಗಿದ್ದವು. ಹಲವು ಶಿಲ್ಪಗಳು ನನಗೆ (ಜನೇವರಿ ಭೇಟಿ ನೀಡಿದ್ದೆ) ಹೊಸತಾಗಿದ್ದವು. ಅದರಲ್ಲಿ ನನಗೆ ಅದ್ಭುತ ಅನಿಸಿದ್ದು ಆಲದ ಮರ, ದನದ ಮಾರುಕಟ್ಟೆ ಮತ್ತು ತರಕಾರಿ ಮಾರುಕಟ್ಟೆ. ಆಲದ ಮರ ಇನ್ನೂ ನಿರ್ಮಾಣದ ಹಂತದಲ್ಲಿ ಇದೆ ಅಂತೆ. ಇಷ್ಟೆಲ್ಲ ಮಾಡಿದ ಮೇಲೂ ನಿರ್ಮಾಣದ ಹಂತ! ಎಂದನಿಸಿ ಸುಮ್ಮನಾಗಿ ಮುಂದೆ ಸಾಗಿದೆ.

ದನದ ಮಾರುಕಟ್ಟೆ: ಆ ದಿನಗಳು ಇನ್ನೂ ನೆನಪಿನಲ್ಲಿವೆ. ನಾವು ಶಾಲೆಗೆ ಹೋಗುತ್ತಿದ್ದಾಗ ದನದ ಮಾರುಕಟ್ಟೆ ಸಿಗುತ್ತಿತ್ತು. ಪ್ರತಿ ಶುಕ್ರವಾರ ಬೆಳಗ್ಗೆ ಅಲ್ಲಿ ಹೇಗಿರುತ್ತಿತ್ತೋ ಹಾಗೆಯೇ ಇಲ್ಲಿ ನಿರ್ಮಿಸಿದ್ದಾರೆ. ಎಲೆ ಅಡಿಕೆ ಜಗಿಯುತ್ತ ಮಾರಾಟ ಮಾಡುತ್ತಿರುವ ಆ ರೈತನ ಭಂಗಿ, ಅದನ್ನು ಖರೀದಿಸಲು ನಿಂತಿರುವವನ ಶೈಲಿ, ಅಲ್ಲಿರುವ ವೈವಿಧ್ಯಮಯ ರಾಸುಗಳು, ಸ್ವಲ್ಪ ಮುಂದೆ ಹೋದರೆ ಅಲ್ಲಿ ದಲ್ಲಾಳಿ ತನಗೆ ಬರಬೇಕಾಗಿರುವ ಹಣವನ್ನು ಕರವಸ್ತ್ರದಡಿಯಲ್ಲಿ ಪಡೆಯುತ್ತಿರುವುದು, ಎತ್ತಿಗೆ ನಾಲು ಬಡಿಯುತ್ತಿರುವ ಶಿಲ್ಪಗಳು, ಒಬ್ಬ ಆ ರಾಸುವಿನ ಹಲ್ಲುಗಳನ್ನು ಪರೀಕ್ಷೆ ಮಾಡುತ್ತಿದ್ದಾನೆ. ಅದರಿಂದ ಆ ರಾಸುವಿನ ವಯಸ್ಸನ್ನು ಪತ್ತೆ ಹಚ್ಚುತ್ತಾರೆ. ರಾಸುವಿನ ಕೊಂಬು ಚೂಪು ಮಾಡುತ್ತಿರುವ ಶಿಲ್ಪ ಅದ್ಭುತವಾಗಿದೆ. ಕೊನಯಲ್ಲಿ ಒಬ್ಬ ಚುಲೊ ಗಿರಾಕಿನ ಬರವಲ್ರಲ್ಲಾ ಅಂತ ಕಾಯುತ್ತಿದ್ದಾನೆ. ಒಬ್ಬ ಬ್ರಾಹ್ಮಣ ಪಂಡಿತ ಅಲ್ಲಿ ಹಾದು ಹೋಗುತ್ತಿದ್ದಾನೆ. ಇಲ್ಲಿ ಮಾರುಕಟ್ಟೆಯಲ್ಲಿರುವ ಪ್ರತಿಯೊಬ್ಬ ಮನುಷ್ಯರ ವೇಷ ಭೂಷಣ, ಭಾವ ಭಂಗಿ, ಅವರ ಆ ಲುಂಗಿ ಮೇಲೆ ಉಟ್ಟಿದ್ದು, ಪಟಪಟಿ ಚಡ್ಡಿ, ರಾಸುಗಳು, ಅವುಗಳ ಮೈ ಬಣ್ಣ, ಕಣ್ಣು, ನಿಂತಿರುವ ಭಂಗಿ ಅಬ್ಬಾ ಎಷ್ಟು ಚೆನ್ನಾಗಿ ಮೂಡಿ ಬಂದಿವೆ. ಆ ಎಲ್ಲ ಕಲಾವಿದರಿಗೂ ನನ್ನ ಅಭಿನಂದನೆಗಳು. ಸಂಪೂರ್ಣ ಮಾರುಕಟ್ಟೆಯ ದೃಶ್ಯ ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ಮುಂದೆ ಸಾಗಿದಾಗ ಸಿಕ್ಕಿದ್ದು ತರಕಾರಿ ಮಾರುಕಟ್ಟೆ.

ತರಕಾರಿ ಮಾರುಕಟ್ಟೆ: ನಾವು ಚಿಕ್ಕವರಿದ್ದಾಗ ಅಂದರೆ ಇಪ್ಪತ್ತೈದು ವರ್ಷಗಳ ಹಿಂದೆ ಭಾನುವಾರ ಸಂತೆ, ಬುಧವಾರ ಸಂತೆ, ಶನಿವಾರ ಸಂತೆ ಅಂತ ಅಲ್ಲಲ್ಲಿ ನಡೆಯುತ್ತಿದ್ದವು. ಆಗ ನಾವು ತರಕಾರಿಗಳನ್ನು ತರಲು ಹೋಗಿ ಒಂದಿಷ್ಟು ಚೌಕಾಸಿ ಮಾಡಿ ಅಂದರೆ ನಮ್ಮ ಉತ್ತರ ಕರ್ನಾಟಕ ಭಾಷೆಯಲ್ಲಿ ಹೆಂಗ ಕೊಟ್ಟಿ…ಕೊಡು ಬೇ ಯಮ್ಮಾ ಯಾಕ ಬರಂಗಿಲ್ಲ… ಏ ಬರತೈತಿ ತುಗೋ…ಭಾರಿ ಆತು ಬಿಡು.. ಅನ್ನುತ್ತ ಉತ್ಸುಕತೆಯಿಂದ ವ್ಯಾಪಾರ ಮಾಡಿ ಸ್ವಲ್ಪ ದುಡ್ಡನ್ನು ನಮ್ಮ ಜೇಬಿಗಿಳಿಸಿಕೊಂಡು ಬರುತ್ತಿದ್ದೆವು. ಅಲ್ಲಿಯ ಒಟ್ಟಾರೆ ಚಿತ್ರಣ ತುಂಬಾ ಚೆನ್ನಾಗಿರುತ್ತಿತ್ತು. ಲಂಬಾಣಿಗಳು, ಹಳ್ಳಿಯ ಜನರು, ತಾವು ಬೆಳೆದ ತಾಜಾ ತಾಜಾ (ಇಂದು ಅದು ಕನಸೇ) ತರಕಾರಿಯನ್ನು ತಂದು ಗುಂಪಾಗಿ ಶೇಖರಿಸಿಟ್ಟು ಅಂದೇ ಮಾರಿ ತಮ್ಮ ದಾರಿ ಹಿಡಿಯುತ್ತಿದ್ದರು. ಸ್ವಲ್ಪ ಹೆಚ್ಚು ತರಕಾರಿ ಹಾಕ ಬೇ ಯಮ್ಮ ಅಂದರೆ ತುಗೊಳ್ಳೊಪಾ ಅಂತ ದಯಾಳು ಆಗಿ ಹಾಕುತ್ತಿದ್ದರು. ಅಷ್ಟು ದೊಡ್ಡ ಹೃದಯದವರಾಗಿದ್ದರು ಮತ್ತು ಆ ದಿನಗಳಲ್ಲಿ ಅವರ್ಯಾರು ಕಮರ್ಷಿಯಲ್ ಆಗಿರಲಿಲ್ಲ.

ಅಲ್ಲಿ ಕಾಣ ಸಿಗುವ ಸಾಮಾನ್ಯ ದೃಶ್ಯಗಳೆಂದರೆ ಒಂದು ಕಡೆಗೆ ಕೆಂಪು ಟೋಮಾಟೋ ಮತ್ತೊಂದು ಕಡೆಗೆ ಹಸಿರು ಟೋಮಾಟೋ, ಒಂದೆಡೆ ಕರಿಬೇವು, ಕೊತ್ತಬರಿ, ಒಂದೆಡೆ ಚುರುಮರಿ ಮಾರುವವರು, ಅವರ ಕೈಯಲ್ಲಿ ಕಬ್ಬಿಣದ ಕಪ್ಪು ಬಣ್ಣದ ಚಟಾಕ್, ಈ ಕಡೆಗೆ ನುಗ್ಗೆಕಾಯಿ, ಗಜ್ಜರಿ, ದಪ್ಪ ಮೆಣಸಿನಕಾಯಿ ಮಾರುವವರು, ಆ ಕಡೆಗೆ ಕಾಯಿ ಮಾರುವವರು, ಅಲ್ಲಲ್ಲಿ ಕೊಡಪಾ ಯಾಕ ಬರಂಗಿಲ್ಲಾ ಅಂತ ಕೂಗಾಟ, ಸ್ವಲ್ಪ ತುಕ್ಕು ಹಿಡಿದ ತಕ್ಕಡಿಗಳ ಕಟರ್ ಕಟರ್ ಸಪ್ಪಳ, ನಿಂಬೆ ಹಣ್ಣುಗಳನ್ನು ಮಾರುವ ಮುದುಕಿ, ಎಲೆ ಅಡಿಕೆ ಜಗಿಯುತ್ತ ಸೌತೆಕಾಯಿ ಮಾರುವ ಮುದುಕಿ, ತೆಂಗಿನಕಾಯಿ ಮಾರುವ ಮುದುಕ, ಮಸಾಲೆ ಸಾಮಾನುಗಳನ್ನು ಮಾರುವವ ಹೀಗೆ ಹೇಳುತ್ತ ಹೋದರೆ ಪಟ್ಟಿ ಬೆಳೆಯುತ್ತದೆ. ಇವೆಲ್ಲ ನೋಡಿದಾಗ ಇದು ನಿಜವಾದ ಮಾರುಕಟ್ಟೆ ಅನಿಸುತ್ತದೆ.

ಅದೇ ತರಹ ಇಲ್ಲಿಯೂ ಕೂಡ ಒಂದು ತರಕಾರಿ ಮಾರುಕಟ್ಟೆಯ ಎಲ್ಲ ಚಿತ್ರಣಗಳನ್ನು ಶಿಲ್ಪಗಳ ಮೂಲಕ ಚೆನ್ನಾಗಿ ಅನಾವರಣಗೊಳಿಸಿದ್ದಾರೆ. ಇಡೀ ಚಿತ್ರಣವನ್ನು ಸ್ವಲ್ಪ ದೂರದಿಂದ ನೋಡಿದರೆ ಇಲ್ಲಿ ನಿಜವಾಗಿಯೂ ಒಂದು ಸಂತೆಯೇ ನಡೆಯುತ್ತಿದೆಯೇನೋ ಎಂದನಿಸುತ್ತದೆ. ಅಲ್ಲಿ ಎಲ್ಲ ತರಹದ ತರಕಾರಿಗಳನ್ನು ಮಾರುವವರ ಮತ್ತು ತರಕಾರಿಗಳ ಶಿಲ್ಪಗಳು ಇವೆ. ನಿಂಬೆಹಣ್ಣು ಮಾರುವ ಮುದುಕಿ, ಎಲೆಗಳನ್ನು ಮಾರುವವ, ಮಸಾಲೆ ಸಾಮಾನು ಮಾರುವವ, ತೆಂಗಿನ ಕಾಯಿ ಮಾರುವವರು ಮತ್ತು ಕೊಳ್ಳುವವರು ಅಷ್ಟೆ ಅಲ್ಲ ಅಲ್ಲಿರುವ ಪ್ರತಿಯೊಂದು ತರಕಾರಿಗಳ ಆಕೃತಿಗಳು ಮತ್ತು ಬಣ್ಣ ನೋಡಿದರೆ ಇವು ನಿಜವೇ ಎಂಬ ಭಾವನೆ ಬರುತ್ತದೆ. ಕೂತುಹಲವನ್ನು ತಾಳಲಾರದೇ ಅವುಗಳನ್ನು ಮುಟ್ಟಲು ಪ್ರಯತ್ನಿಸಬೇಕು ಎಂಬ ತುಂಟ ಯೋಚನೆ ಮನದಲ್ಲಿ ಬಂತು ಆದರೂ ಅಲ್ಲಿಯೇ ಸಿಬ್ಬಂದಿಯನ್ನು ವಿಚಾರಿಸಿದಾಗ ಅವು ಕೃತಕ ಎಂದು ತಿಳಿಯಿತು. ಈ ಮಾರುಕಟ್ಟೆಗಳ ದೃಶ್ಯ ನಮ್ಮ ಬಾಲ್ಯ, ನಮ್ಮ ತಂದೆ ತಾಯಿಯರೊಡನೆ ಮಾಡಿದ ಆ ಕನ್ನಡದ ವಿಭಿನ್ನ ಶಾಪಿಂಗ್ ನ ಅನುಭವವನ್ನು ಮೆಲುಕು ಹಾಕುವಂತೆ ಮಾಡಿತು. ಇದೆಲ್ಲ ಯಾರು ಮಾಡಿದ್ದು ಎಂದು ವಿಚಾರಿಸಿದಾಗ ಕಲಾವಿದರಾದ ಪ್ರೊ. ಟಿ.ಬಿ. ಸೊಲಬಕ್ಕನವರ ಮತ್ತು ಹುಬ್ಬಳ್ಳಿಯ ಉದ್ಯಮಿಗಳಾದ, ದಾಸನೂರ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಶ್ರೀ ಪ್ರಕಾಶ ದಾಸನೂರ ಎಂಬ ವಿಷಯ ತಿಳಿಯಿತು.

Leave a Reply