ಆಶ್ವಿಚ್ ನ ಕರುಣಕತೆ.

ಆಶ್ವಿಚ್

ಕ್ರಕಾವ್ ನಲ್ಲಿ ಇಳಿದುಕೊಂಡಿದ್ದ ನಮ್ಮ ಅಪಾರ್ಟ್ ಮೆಂಟಿನಿಂದ ಮುಂಜಾನೆ ನಾವು ಬುಕ್ ಮಾಡಿದ್ದ ಮಿನಿ ವ್ಯಾನ್ ಟೈಮಿಗೆ ಸರಿಯಾಗಿ ಆಶ್ವಿಚ್ ನತ್ತ ಹೊರಟಾಗ ಅದರ ಡ್ರೈವರ್ ಹೇಳುತ್ತಿದ್ದ ಸಂಗತಿಗಳ ಕಡೆಗೆ ಗಮನಿವಿತ್ತಿದ್ದೆ ನಾನು. ಯಾವುದೇ ದೇಶಕ್ಕೆ ಹೋದರೂ ಅಂತರ್ಜಾಲವಾಗಲಿ, ಇನ್ನಿತರ ಯಾವುದೇ ಪುಸ್ತಕವಾಗಲೀ ಕೊಡಲಾರದ ಸಂಗತಿಗಳನ್ನು ಅಲ್ಲಿನ ಡ್ರೈವರ್ ಗಳು ಕೊಡುತ್ತಾರೆ ಎನ್ನುವ ಮಾತು ನಿಜ. ಆದರೂ ನನ್ನ ಮನಸ್ಸು ಮಾತ್ರ‌ ವಿಚಿತ್ರವಾದ ಕ್ಷೋಭೆಯ ಮಡಿಲಾಗಿತ್ತು.ಯಾಕೆ ಹೋಗಬೇಕು ಆಶ್ವಿಚ್ ಗೆ? ಅದರಿಂದ ಆಗುವುದಾದರೂ ಏನು? ಲಕ್ಷಾವಧಿ ಜನ ಸಾಮೂಹಿಕವಾಗಿ ಹೀನ ಕೊಲೆಗೀಡಾಗಿ ನರಳಿ ಪ್ರಾಣ ಬಿಟ್ಟ ಆ concentration camp ಸ್ಥಳದ ದೃಶ್ಯವನ್ನು‌ ಸಹಿಸಲಾದೀತೆ? ಹೀಗೆ ಮನಸ್ಸು ಗೊಂದಲದ ಗೂಡಾಗಿತ್ತು.‌ ಕಳೆದ ಹಲವಾರು ವರ್ಷಗಳಲ್ಲಿ ಅನೇಕ ಸಲ ಯೂರೋಪಿನ ಬಹಳಷ್ಟು ದೇಶ, ಊರುಗಳನ್ನು ಕಂಡಿದ್ದರೂ ಒಮ್ಮೆ ಹಿಟ್ಲರ್ ನ ಹೆಸರಿಗೆ ಅರವತ್ತು‌ಲಕ್ಷ ಯಹೂದಿಗಳ ಪ್ರಾಣಾರ್ಪಣೆ ಆಗಿರುವುದನ್ನು‌ ಅನೇಕಾನೇಕ‌ ಬಗೆಯಲ್ಲಿ ತಿಳಿದು‌ ಒಮ್ಮೆ ನೋಡಲೇ ನೋಡಿ ಆ ಬಗ್ಗೆ ಏನನ್ನಾದರೂ ಬರೆಯಲೇ? ಎಂಬ ಹಂಬಲ ಹುಟ್ಟಿದ್ದು ನಿಜ.

ಕ್ರಕಾವ್ ನಿಂದ ಆಶ್ವಿಚ್ ವರೆಗೆ ಒಂದು ಗಂಟೆಯ ದಾರಿ ಕಳೆಯುವುದು ಅಕ್ಕಪಕ್ಕದಲ್ಲಿನ ಅತೀ ಸುಂದರ ಸಾಲುಸಾಲು
ಮನೆಗಳ ಮತ್ತು ಸ್ಪ್ರಿಂಗ್ ಬಂದಾಗಿನಿಂದ ಅರಳಿ ನಿಂತ ಅಸಂಖ್ಯ ಪುಷ್ಪ ರಾಜಿಯಿಂದಾಗಿ ತುಂಬ ಸುಂದರ ಅನುಭವ ಕೊಟ್ಟಿತ್ತು.

ಎರಡು ಭಾಗದಲ್ಲಿ ಆಶ್ವಿಚ್ ನ ‌ಕಾನ್ಸ್ಂಟ್ರೇಶನ್ ಕಣ್ಣೆದುರಲ್ಲಿ ಹರಡಿತ್ತು. ಸುತ್ತಲೂ ಚೆಲ್ಲಿದ ಹಸಿರಿನ ನಡುವೆ ವಿಶಾಲವಾದ ಜಾಗದಲ್ಲಿ ಹರಡಿದ್ದ ಆ ಮರಣದ ಅಂಗಳಕ್ಕೆ ಕಾಲಿಟ್ಟಾಗ ಯೂರೋಪಿನ ಮನುಷ್ಯಕುಲದ ಇತಿಹಾಸದ ಕ್ರೂರ ಅಧ್ಯಾಯದ ಪುಟಗಳು ನನಗೆ ಎದುರಾದುವು.
ನಮಗಾಗಿ ಕಾಯುತ್ತಿದ್ದ ಗೈಡ್ ತುಂಬ ಅನುಭವಿ ಹೆಣ್ಮಗಳು. ತನ್ನನ್ನು ಪರಿಚಯಿಸಿಕೊಂಡು ಆ ಸ್ಥಳದ ಬಗ್ಗೆ ತನ್ನ ವೃತ್ತಿಪರ ಅನುಭವದ ಬಗ್ಗೆ ಹೇಳಿಕೊಂಡು ನಮ್ಮ ಗ್ರೂಪ್ ಒಳಗೆ ಕರೆದೊಯ್ದಳು.

“ಬರ್ಕೆನ್ ಹೌ ವಿಲೇಜ್ ಎನ್ನುವ ಹಳ್ಳಿ ಇದು” ಮಾಹಿತಿ ಕೊಟ್ಟಳು ನಮ್ಮ ‌ಗೈಡ್. “ಪೋಲೆಂಡ್ ನಾಝಿಗಳ ಮೊದಲ ಬಲಿ ಆಗಿ ಅವರ ಸಾಮೂಹಿಕ ನರಮೇಧದ ಆರಂಭವನ್ನು ಇದೇ ಬರ್ಕೆನ್ ಹೌ ಹಳ್ಳಿಯ ಕಾನ್ಸಂಟ್ರೇಶನ್ ಕ್ಯಾಂಪ್ ರೂಪದಲ್ಲಿ ಶುರು ಮಾಡಿತ್ತು.ಕ್ಯಾಂಪ್ ಒಂದು ಮತ್ತು ಎರಡು ಅನ್ನುವ ಎರಡು ಭಾಗಗಳಲ್ಲಿ ಇಲ್ಲಿ ಒಂದೂವರೆ ಮಿಲಿಯನ್ ಜನರನ್ನು ತಂದು ಕೂಡಿಹಾಕಿದ್ದರು. ಅನಂತರ ಅವರಾರೂ ಇಲ್ಲಿಂದ ಮರಳಿ ಹೋಗಲಿಲ್ಲ” ಎಂದಳು.
ಅಲ್ಲಿ ಒಂದು ಕ್ಷಣ ಸಂಪೂರ್ಣ ಸ್ತಬ್ಧತೆ ಆವರಿಸಿತು. ಮಾತು ಹೊರಡುವುದೇ ಅಸಾಧ್ಯವಾಗಿತ್ತು.

ಭಯೋತ್ಪಾದನೆ ಭಯೋತ್ಪಾದಕ ಸಂಘಟನೆ ಎಂಬ ಹೆಸರುಗಳು ಇತ್ತೀಚಿನ ವರ್ಷಗಳಲ್ಲಿ ನಮಗೆ ಚಿರಪರಿಚಿತ ಅನಿಸಿದರೂ ಇಂಥ ಒಂದು ಭಯೋತ್ಪಾದಕ ಕೃತ್ಯವನ್ನು ಎಂಬತ್ತು‌ ವರ್ಷಗಳ ಹಿಂದೆಯೇ ಮಾಡಿ ಮುಗಿಸಿತ್ತು ಗೆಸ್ಟಾಪೋ. ನಾಝಿ ಆಡಳಿತದ ಜರ್ಮನಿ ಹಿಟ್ಲರನ ಕೈಗಳಿಂದ ಜಗತ್ತಿನ ಇತಿಹಾಸವನ್ನು ತನ್ನ ರಕ್ತಸಿಕ್ತ ಕೈಗಳಿಂದ ಬರೆದಿತ್ತು.

ಐರೀನ್ ಫಾಗೆಲ್ ವಿಯೆಸ್ ಮತ್ತು ಆನ್ನೆ ಫ್ರಾಂಕ್ ಎಂಬ ಜ್ಯೂವಿಶ್ ಹೆಣ್ಮಕ್ಕಳು ಪ್ರಪಂಚಕ್ಕೆ ಇಲ್ಲಿನ ಅವರ್ಣನೀಯ ಕರಾಳತೆಯ ಪರಿಚಯ ಮಾಡಿಸಿದರು.‌ ಆನ್ನೆ ಫ್ರಾಂಕ್ ಆಶ್ವಿಚ್ ನ ಭೀಕರ ಕರಾಳ ನರಮೇಧದ ಸಂಗತಿಗಳನ್ನು ತನ್ನ ಡೈರಿಯಲ್ಲಿ ಬರೆದಿಟ್ಟು ತೀರಿ ಹೋದ ಎಳೆ ಹುಡುಗಿ. ಐರೀನ್ ಫಾಗೆಲ್ ಎರಡೂವರೆ ವರ್ಷಗಳ ವರೆಗೆ ಇದೇ ಬರ್ಕೆನ್ ಹೌ ವಿಲೇಜಿನ ಕ್ಯಾಂಪಿನಲ್ಲಿ ತನ್ನ ಸುತ್ತಲೂ ನಡೆದ ಮಾರಣಹೋಮದ ಘೋರ ಕತೆಗಳನ್ನು ‌ಜಗತ್ತಿಗೆ ಹೇಳಲು ‌ಬದುಕಿ ಉಳಿದಂತೆ ಜೀವ ಹಿಡಿದುಕೊಂಡು ಇಲ್ಲಿಂದ ಪಾರಾದವಳು.
ಇಲ್ಲಿನ ನೂರಾರು ಘೆಟ್ಟೋ – ಕಟ್ಟಡಗಳಲ್ಲಿ ಅಸಂಖ್ಯಾತ ಯಹೂದಿ ನಾಗರಿಕರನ್ನು ಬಂದೂಕಿನ ಮೊನೆಯ ತುದಿ ಚುಚ್ಚಿ ಬೆದರಿಸಿ ಫ್ಯಾಕ್ಟರಿ ದುಡಿಮೆ ಎಂದು ಹೇಳಿ ರೈಲಿನ ಬೋಗಿಗಳಲ್ಲಿ ಆಡು ಕುರಿಗಳನ್ನು ‌ತುಂಬಿದಂತೆ ತುರುಕಿ ಕರೆತರುತ್ತಿದ್ದರು. ಅನಂತರ ದುಡಿಯುವ ಶಕ್ತಿ ಮತ್ತು ವಯಸ್ಸು ಇರುವವರನ್ನು‌ ಒಂದೆಡೆ ತಳ್ಳಿ‌ ಉಳಿದ ಮಕ್ಕಳು, ವೃದ್ಧರು,‌ಅಶಕ್ತರನ್ನೆಲ್ಲ ನೇರವಾಗಿ ಒಯ್ದು ಗ್ಯಾಸ್ ಚೇಂಬರಿನಲ್ಲಿ‌ ವಿಷಾನಿಲ ಬಿಟ್ಟು ಉಸಿರು ಗಟ್ಟಿಸಿ‌ ಕೊಂದು ‌ಹೆಣಗಳನ್ನು ಅಗಾಧ ಗಾತ್ರದ ಬೆಂಕಿಗೂಡುಗಳಲ್ಲಿ ಸುಟ್ಟು ಭಸ್ಮ ಮಾಡಿದ ಕತೆಗಳನ್ನು ಕೇಳುತ್ತ ಆ ಜಾಗದಲ್ಲಿ ಹೆಜ್ಜೆ ಇಟ್ಟಾಗ ಮೈಯಿಡೀ ಸಂಕಟದ ನಡುಕ ತುಂಬಿತ್ತು…ಮನುಷ್ಯ ಇಷ್ಟು ಅಧ:ಪತನಕ್ಕೆ ಇಳಿಯುವುದೂ‌ ಸಾಧ್ಯವೇ?
ಆಶ್ವಿಚ್ ‘ಹೋಲೋಕಾಸ್ಟ್’ ನಡೆದ ಒಂದೊಂದೂ ಬ್ಲಾಕಿನ ಕಟ್ಟಡ ಲಕ್ಷಾವಧಿ ಸಾವುಗಳ ಕತೆ ಹೇಳಿ ಕಣ್ಣೀರು ಸುರಿಸಿದಂತನಿಸಿ ಎದೆ ಭಾರವಾಗಿತ್ತು.
“1939ರಿಂದ 1945 ವರೆಗೂ ನಡೆದ ಎರಡನೇ ಮಹಾಯುದ್ಧ ಹಿಟ್ಲರ್ ಮತ್ತವನ‌ ನಾಝೀ ಪಾರ್ಟಿ, ಎಸ್ ಎಸ್ ಎಂಬ ಅವನ ‌ಸೇನಾಪತಿಗಳ (ಜನರಲ್ ಗಳ)‌ ಪಡೆಯ ಅತಿಮಾನುಷ ಕ್ರೌರ್ಯದ ಹಾವಳಿಯಲ್ಲಿ ಇಂಥ ಅನೇಕಾನೇಕ ಕಾನ್ಸಂಟ್ರೇಶನ್ ಕ್ಯಾಂಪ್ ಗಳನ್ನು ಹುಟ್ಟು ಹಾಕಿ ಯುರೋಪಿನ ಹಲವಾರು ದೇಶಗಳಿಂದ ಯಹೂದ್ಯರನ್ನು ಹಿಡಿದೆಳೆದು ತಂದು ಕಾಲು ಚಾಚಲೂ ಸಾಧ್ಯವಿಲ್ಲದ ಹಂದಿಗೂಡುಗಳಲ್ಲಿ ಕೊಳೆಹಾಕಿ ಅಮಾನವೀಯ ದುಡಿತ, ಆಹಾರ, ಔಷಧಿ ಯಾವುದೂ ಇಲ್ಲದ ನೀಚ ಬದುಕನ್ನು ‌ಕೊಟ್ಟು ಕೊನೆಗೆ ಕೊಂದು ಹಾಕಿದ ಆ ನಿರ್ಭಾಗ್ಯರ ಸಂಖ್ಯೆ ಅರವತ್ತು ಲಕ್ಷ…”
ಮಾತನಾಡುತ್ತಿದ್ದ ನಮ್ಮ ಗೈಡ್ ಧ್ವನಿ ನೋವಿನಿಂದ ಭಾರವಾಗಿತ್ತು.

ಬರ್ಕೆನ್ ಹೌ ವಿಲೇಜಿನಲ್ಲಿಂದು‌ ಆ ಜ್ಯೂವಿಶ್ ಜನರ ಕಣ್ಣೀರು, ನಿಟ್ಟುಸಿರು, ಆಕ್ರಂದನ‌, ನರಳಿಕೆ‌ ಸಾವಿನ ಕ್ಷಣಗಳ ಘೋರ ಸಂಕಟದ ಪಳಿಯುಳಿಕೆಗಳನ್ನು ಹೊತ್ತು ನಿಂತ‌ ಅವಶೇಷಗಳಿವೆ. ಎರಡನೇ ಭಾಗದಲ್ಲಿ‌ ಲಕ್ಷಾವಧಿ‌ ಯಹೂದ್ಯರನ್ನು ತುಂಬಿಸಿ ತಂದ ರೈಲು ಬಂಡಿ‌ ಮತ್ತು‌ ಅದರ‌ ಹಳಿಗಳು, ಕಾವಲಿನ ಎತ್ತರದ ಟವರ್ ಗಳು, “ಪ್ರಯೋಜನವಿಲ್ಲದ” ಕೈದಿಗಳನ್ನು‌ಹಿಂದೆ ಕೈ ಕಟ್ಟಿ ಗುಂಡು ಹಾರಿಸಿ ಕೊಂದ ಗೋಡೆಗಳು ‌ಇದ್ದು‌ ಎರಡನೇ ಮಹಾಯುದ್ಧದ ಕರಾಳ ಅಧ್ಯಾಯದ ಕತೆಗಳಿಗೆ ಸಾಕ್ಷಿ ಹೇಳುತ್ತಿವೆ.

ಯುದ್ಧದಲ್ಲಿ ಸೋಲುತ್ತಿದ್ದ ಹಾಗೆ 1944-45ರ ಸುಮಾರಿಗೆ ಹಿಟ್ಲರ್ ಹಿಮ್ಮೆಟ್ಟುತ್ತ ಹೋಗುವಾಗ
ಇಲ್ಲಿನ ಬಹುತೇಕ ನರಮೇಧದ ಕಟ್ಟಡಗಳನ್ನು‌ ಕೆಡವಿ ನಾಶಪಡಿಸಿದ್ದರು. ಇಲ್ಲಿನ ಅನೇಕ ಸಂಖ್ಯೆಯ ಹೆಣ ಸುಟ್ಟ ಕುಲುಮೆಗಳ ಚಿತ್ರಗಳು ಮನಸ್ಸನ್ನು‌ ಇರಿಯುತ್ತವೆ.
ಒಂದೊಡೀ ಜನಾಂಗವನ್ನೇ ನಿರ್ನಾಮ ಮಾಡುವ ಪೈಶಾಚಿಕ ಮನಸ್ಸಿನ ಹಿಟ್ಲರ್ ಅತ್ಯಂತ ಸುಲಭವಾಗಿ ಒಂದು ಗುಂಡಿಗೆ ತನ್ನನ್ನೇ ಮುಗಿಸಿಕೊಂಡು ಇದಕ್ಕೆ ಅಂತಿಮ ತೆರೆ ಹಾಡಿದ್ದನ್ನು‌ ಕೇಳುತ್ತ ಅವನಿಗೆ ಶಿಕ್ಷೆಯೇ ಆಗಲಿಲ್ಲವಲ್ಲ ಎಂದು ಮನಸ್ಸು ಮರುಗುತ್ತದೆ.
ಇನ್ನೊಮ್ಮೆ ಜಗತ್ತಿನಲ್ಲಿ ಹಿಟ್ಲರ್ ಹುಟ್ಟದಿರಲಿ ಎಂದು ಕೋರುತ್ತ ಅಲ್ಲಿಂದ ಮರಳುತ್ತಿರುವಾಗ ಹಿಟ್ಲರ್ ಅಲ್ಲದಿದ್ದರೇನು‌ ಅವನಿಗಿಂತ ಕ್ರೂರ ಮನಸ್ಸಿನ ಅಸಂಖ್ಯ ಭಯೋತ್ಪಾದಕ ಮನುಷ್ಯರಿಗೆ ಜಗತ್ತು ಸಾಕ್ಷಿಯಾಗುತ್ತಿದೆಯಲ್ಲ… ಮನುಷ್ಯ ಮನುಷ್ಯನಾಗಿಯೇ ಬದುಕುವ‌ ಸಾಧ್ಯತೆಗಳೇ ಮುಗಿದು ಹೋದುವೇ ಎಂಬ ಕಳವಳ ಹಳಹಳಿಕೆ ವಿಷಾದಗಳ ಕಣ್ಣೀರು ಹನಿಯಿತು.

Auschwitz Poland (2019)

Leave a Reply