ತ್ಸುನಾಮಿ

ತ್ಸುನಾಮಿ
ತ್ಸುನಾಮಿ ಎನ್ನುವುದು ಜಪಾನೀ ಶಬ್ದ. ‘ತ್ಸು’ ಎಂದರೆ ಬಂದರು. ಹಾಗೂ ‘ನಾಮಿ’ ಎಂದರೆ ಅಲೆ, ಎಂದರೆ ಬಂದರಿನಲ್ಲಿಯ ಅಲೆಗಳು ಅಂತ ಅರ್ಥ. ಜಪಾನೀಯರು ಎಲ್ಲಾ ಅಲೆಗಳನ್ನೂ ಈ ರೀತಿಯಾಗಿ ಕರೆಯುವುದಿಲ್ಲ. ಊರಿಗೇ ಊರೇ ಕೊಳ್ಳೆ ಹೊಡೆಯುವಂತಿರುವ ಮರಣ ಸದೃಶ ಅಲೆಗಳಿಗೆ ಮಾತ್ರ ಈ ಹೆಸರು.
ಮೊದಲನೆಯದಾಗಿ ಸಮುದ್ರ ಎಂದರೇನು?
ಭೂಮಿ ಎಂಬ ಅಗಾಧಗೋಲದಲ್ಲಿನ ಅಗಾಧ ಗಾತ್ರದ ಕುಳಿಗಳಲ್ಲಿ ತುಂಬಿ ನಿಂತಿರುವ ನೀರೇ ಸಮುದ್ರ. ಭೂಮಿಯ ಚಲನೆ ಹಾಗೂ ಗುರುತ್ವಾಕರ್ಷಣೆಯ ಹೊಯ್ದಾಟಗಳಿಂದ ಈ ಸಮುದ್ರಗಳು ಸದಾ ಕುಲುಕುತ್ತಿರುತ್ತವೆ. ಆ ಕುಲುಕಾಟದಿಂದ ಹುಟ್ಟುವ ನೀರೇ ಅಲೆಗಳು. ಆಗೀಗ ಅಲ್ಪಸ್ವಲ್ಪ ಏರಿಳಿತಗಳನ್ನು ಬಿಟ್ಟರೆ ಅಲೆಗಳು ಸಾಮಾನ್ಯವಾಗಿರುತ್ತವೆ. ಆದರೆ ಯಾವಾಗಲಾದರೊಮ್ಮೆ ಸಾಗರದ ತಳದಲ್ಲಿ ಕಂಪನವೇರ್ಪಟ್ಟಾಗ ಸಾಗರದಾಳದ ಜ್ವಾಲಾಮುಖಿ ಸಿಡಿಯುತ್ತದೆ. ಆಗ ಹುಟ್ಟುತ್ತವೆ. ತ್ಸುನಾಮಿ ಎಂಬ ಕೊಲೆಗಡುಕ ಅಲೆಗಳು. ಹ್ಯಾಗೆ ಬಕೇಟಿನಲ್ಲಿ ನೀರು ತುಂಬಿಸಿಟ್ಟು ಸ್ವಲ್ಪವೂ ಹೊಯ್ದಾಡದಂತೆ ತೆಗೆದುಕೊಂಡು ಹೋಗಬಹುದು. ಆದರೆ ಯಾವಾಗ ಹೊಯ್ದಾಟವಾದಾಗ ಬಕೇಟ್ಟಿನ ನೀರು ಹೊರಚೆಲ್ಲುತ್ತದೆ. ಬಕೇಟ್ಟಿನ ಉದಾಹರಣೆಯನ್ನೇ ನಾವು ಸಮುದ್ರಕ್ಕೆ ಹೋಲಿಸಿದಾಗ ಅಲ್ಲಿ ಉಂಟಾಗುವ ಹೊಯ್ದಾಟದಿಂದ ಹೊರನೂಕಲ್ಪಡುವ ನೀರು ಅಗಾಧಪ್ರಮಾಣದಲ್ಲಿರುತ್ತದೆ.
ಈಗ ನಾವು ಬಾವಿಗೋ, ನದಿಯೋ ಕಲ್ಲೆಸೆದಾಗ ನಾವು ಎಷ್ಟು ದೊಡ್ಡ ಪ್ರಮಾಣದ ಕಲ್ಲನ್ನು ಎಸೆದಿರುತ್ತೆವೆಯೋ ಅಷ್ಟು ಪ್ರಮಾಣದಲ್ಲಿ ವೃತ್ತಾಕಾರವಾಗಿ ಅಲೆಗಳೇಳುತ್ತವೆ. ಹಾಗೆಯೇ ಹರಿಯುತ್ತವೆ ಈ ಅಲೆಗಳು. ಯಾವಾಗ ಸಾಗರದ ತಳದಲ್ಲಿ ಭೂಕಂಪವಾಗುತ್ತದೋ ಆಗ ಸಮುದ್ರವು ತುಳುಕಾಡಿ ಸ್ವಲ್ಪ ಪ್ರಮಾಣದ ನೀರು ಹೊರಹಾಕುತ್ತದೆ. ನಂತರ ಆಳದಲ್ಲಿ ಉಂಟಾದ ಕುಳಿಗಳನ್ನು ಮುಚ್ಚಲು ನೀರಿನ ಅವಶ್ಯಕವಾಗುತ್ತದೆ. ಹ್ಯಾಗೆಂದರೆ ಬಕೇಟ್ ನಲ್ಲಿ ನೀರು ಹೊಯ್ಯಲ್ಪಟ್ಟಾಗ ಲೆವೆಲ್ ಕಾಪಾಡಲು ಹ್ಯಾಗೆ ಉಳಿದೆಡೆ ಕೂಡ ಹಾಕಿದ ನೀರು ಹರಿಯುತ್ತದೋ ಹಾಗೇಯೇ ಸಮುದ್ರದ ಲೆವೆಲ್ ಕಾಪಾಡಲು ಉಂಟಾದ ಕುಳಿ ಮುಚ್ಚಲು ಬೇರೆಡೆಯಿಂದ ನೀರು ಕುಳಿಗಳೆಡೆಗೆ ಹೀರಲ್ಪಡುತ್ತದೆ. ಆನಂತರ ಕಂಪನದ ಪ್ರಕ್ರಿಯೆಯಲ್ಲಿ ಮತ್ತೆ ಎಳೆದುಕೊಂಡ ನೀರನ್ನೆಲ್ಲ ಹೊರಗುಗುಳುತ್ತದಲ್ಲಾ. ಆಗ ಹೊರಬಂದ ನೀರೆಲ್ಲಾ ಹಿಂದಿಗಿಂತ ಅತ್ಯಂತ ರಭಸದಿಂದ ಹೊರ ಹರಿಯುತ್ತದೆ. ಆ ಅಲೆಗಳು ಗಂಟೆಗೆ ೫೦೦ ರಿಂದ ೮೦೦ಕಿ.ಮೀ.ದಷ್ಟು ವೇಗದಲ್ಲಿರುತ್ತವೆ. ಆಗ ‘ತ್ಸುನಾಮಿ’ಯಂಥ ಭಯಂಕರತೆ ಸಮುದ್ರದಲ್ಲಿ ಸೃಷ್ಟಿಯಾಗುತ್ತದೆ.
ಈ ತ್ಸುನಾಮಿ ಅಲೆಗಳೇಳಲು ಸಾಗರದಾಳದ ಕಂಪನವೊಂದೇ ಕಾರಣವಲ್ಲ. ಭಾರೀ ಪ್ರಮಾಣದ ಭೂಕುಸಿತಗಳು, ಸ್ಫೋಟಗಳು, ಹಾಗೂ ಬೃಹತ್ ಗಾತ್ರದ ಉಲ್ಕೆಗಳು ಬಂದು ಸಮುದ್ರಕ್ಕೆ ಬಡಿದರೂ ಸುನಾಮಿ ಹುಟ್ಟಿಕೊಳ್ಳಬಹುದು. ಆಳದ ಸಮುದ್ರದಲ್ಲಿ ನಡೆಯಬಹುದಾದ ಈ ಕ್ರಿಯೆಯಿಂದ ಹುಟ್ಟುವ ಶಕ್ತಿಯ ಪ್ರಮಾಣ ಕಡಿಮೆ ಎಂದರೂ ೨೩೦೦೦ ನ್ಯೂಕ್ಲಿಯರ್ ಬಾಂಬುಗಳಿಗೆ ಸಮ ಎನ್ನುವುದು ಒಂದು ಅಂದಾಜು.
ಇಂತಹ ಬೃಹತ್ ಗಾತ್ರದ ಅಲೆಗಳು ಭಾರತಕ್ಕೆ ಅಪ್ಪಳಿಸಿದ್ದು ಮೂರು ಬಾರಿ. ಕ್ರಿ.ಪೂ. ೩೨೬ರಲ್ಲಿ ಅಲೆಗ್ಜಾಂಡರ್ ಭಾರತಕ್ಕೆ ಬಂದಾಗ ಸಮುದ್ರದ ಮೂಲಕ ಆತ ತೆರಳಬೇಕೆಂದಾಗ ಆತನ ಯೋಜನೆಯನ್ನು ಬುಡಮೇಲು ಮಾಡಿದ್ದೇ ಈ ಸುನಾಮಿ. ಕಚ್ಚ ಪ್ರದೇಶದಲ್ಲಿ ಆಗ ಈ ರೀತಿಯ ಭೂಕಂಪ ಸಂಭವಿಸಿತ್ತು.
ಇತಿಹಾಸದ ಪುಟಗಳಲ್ಲಿ ನಮೂದಿಸಿದ ಸುನಾಮಿ ಕ್ರಿ.ಶ.೧೮೮೩ ಆಗಸ್ಟ್ ೮ ರಂದು. ಆಗಿನ ಮದ್ರಾಸ್ ಕರಾವಳಿಗೆ ಬಡಿಯಿತು. ಆದರೆ ಆಗ ಕರಾವಳಿಯಲ್ಲಿ ಇಷ್ಟೊಂದು ಜನನಿಬಿಡ ಇರದೇ ಇರುವ ಕಾರಣದಿಂದ ಹೆಚ್ಚಿಗೆ ಅಪಾಯ ಸಂಭವಿಸಲಿಲ್ಲ. ಸಾವು ನೋವು, ಆಸ್ತಿ ಪಾಸ್ತಿ ಹಾನಿ ಹೆಚ್ಚಿಗೆ ಆಗಲಿಲ್ಲ. ಅನಂತರ ೧೯೪೫ ನವೆಂಬರ್ ೨೭ ಕ್ಕೆ ಭಾರತದ ಕಚ್ಚ ಪ್ರದೇಶದ ಕರಾವಳಿಗೆ ಈ ರೀತಿಯ ಅಗಾಧ ಪ್ರಮಾಣದ ಅಲೆಗಳು ಬಡಿದವು. ೧೯೪೧ರಲ್ಲಿಯೂ ಸುನಾಮಿ ಸೃಷ್ಟಿಯಾದರೂ ಅದರ ಕುರಿತಾಗಿ ದಾಖಲೆಗಳಿಲ್ಲ.
ಇಂಥ ಭಯಂಕರ ಸುನಾಮಿಗೆ ಉಂಟಾಗುವ ಅನಾಹುತಕ್ಕೆ ಕಾರಣವೇನೆಂದರೆ ಅದು ಬರುವ ವೇಗ. ಘಂಟೆಗೆ ೫೦೦ ರಿಂದ ೮೦೦ಕಿ.ಮೀ. ಅಂದರೆ ನಿಮಿಷಕ್ಕೆ ಅಪ್ರಾಕ್ಸಿಮೇಟ್ ಆಗಿ ೮ ರಿಂದ ೧೩ ಕಿ.ಮೀ. ಅಷ್ಟೊಂದು ವೇಗವಾಗಿ ಓಡಲು ಸಾಧ್ಯವಾಗದೇ ಇರುವುದರಿಂದಲೂ, ಇತ್ತೀಚೆಗೆ ಕರಾವಳಿಯ ಸುತ್ತಮುತ್ತಲೇ ಜನವಸತಿ ಹೆಚ್ಚಿರುವುದರಿಂದಲೂ ಕೂಡ ಇಷ್ಟೊಂದು ಅಗಾಧ ಪ್ರಮಾಣದ ಸಾವು ನೋವುಗಳು ಉದ್ಭವಿಸುತ್ತಿವೆ.
ಇಂಥ ಅವಘಡಗಳನ್ನು ತಪ್ಪಿಸಲು ಕರಾವಳಿಯಿಂದ ಜನರನ್ನು ವಕ್ಕಲೆಬ್ಬಿಸಬೇಕೆ? ಛೇ ಇಲ್ಲ. ಯಾಕೆಂದರೆ ಜನರ ಬದುಕೇ ಅಲ್ಲಿ ರೂಪುಗೊಂಡಿರುತ್ತದೆ. ಪ್ರವಾಸೋದ್ಯಮ, ಮೀನುಗಾರಿಕೆ ಇತ್ಯಾದಿ. ಆದರೆ ಸಾಗರದಂಚಿನ ನೆರೆಹೊರೆ ದೇಶಗಳೇ ಸುಸಜ್ಜಿತವಾದ ಮುನ್ಸೂಚನಾ ವ್ಯವಸ್ಥೆ ಮಾಡಿಕೊಳ್ಳಬಹುದಲ್ಲವೇ. ಅಂತೆಯೇ ಇತ್ತೀಚೆಗೆ ಓಡಿಸಾದಲ್ಲಿ ಘಟಿಸಿದ ಚಂಡಮಾರುತಕ್ಕೆ ಯಾವುದೇ ರೀತಿಯ ಜನ ಹಾನಿ ಸಂಭವಿಸಲಿಲ್ಲ. ಇಂಥ ಒಂದು ಮುಂಜಾಗರೂಕತೆ ಅವಶ್ಯಕವೇ
ಯದಾ ಯದಾ ಹೀ ಧರ್ಮಸ್ಯ
ಗ್ಲಾನಿರ್ಭವತೀ ಭಾರತ
ಅಭ್ಯುತ್ಥಾನಾಂ ಅಧರ್ಮಸ್ಯ
ತದಾತ್ಮಾನಾಮ ಸೃಜಾಮ್ಯಹಂ
ಯಾವಾಗ್ಯಾವಾಗ ಅನ್ಯಾಯ ಅನೀತಿಗಳು ಹೆಚ್ಚುತ್ತವೆಯೇ ಆಗ ಶ್ರೀಕೃಷ್ಣನು ಜನ್ಮತಾಳಿ ಅಧರ್ಮಗಳನ್ನೆಲ್ಲ ಅಳಿಸಿಹಾಕುತ್ತಾನೆ.
ಇಲ್ಲಿ ಪ್ರಕೃತಿಯೇ ದೇವರು ಎಂದುಕೊಂಡಾಗ ಪ್ರಕೃತಿಯ ಮೇಲೆ ಎಷ್ಟೊಂದು ಅನಾಚಾರ ಅತ್ಯಾಚಾರಗಳು ಅವಿರತವಾಗಿ ಸಾಗುತ್ತಿವೆ. ಅದರ ಪರಿಣಾಮವೇ ಇಂಥ ಪ್ರಾಕೃತಿಕ ಅವಘಡಗಳು.
Global warming ಎನ್ನುವ ಭೂತ ಕೂಡ ನಮ್ಮನ್ನು ಸಮೀಪಿಸುತ್ತಿದೆ. ಎಂದರೆ Ozone ಪದರಿನ ಛಿದ್ರತೆಯಿಂದ ಸೂರ್ಯನ ಉಷ್ಣತೆ ಜಾಸ್ತಿಯಾಗಿ ಭೂಮಿ ಕಾಯ್ತಾ ಇದೆ. ಇದರಿಂದ ಏನಾಗ್ತದೆ? ಭೂಮಿಯ ಮೇಲಿರುವ ಹಿಮಗಡ್ಡೆಗಳು ಬಹುಬೇಗನೆ ಕರಗುತ್ತವೆ. ಹಾಗೇ ಹಳ್ಳಕೊಳ್ಳ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತದೆ. ಹಾಗೆಯೇ ಸಮುದ್ರದಲ್ಲಿಯೂ ಕೂಡ. ಆಗಲೂ ಕೂಡ ಪ್ರಳಯ ಸದೃಶ ವಾತಾವರಣವೇರ್ಪಡಬಲ್ಲದು.
ಯಾವಾಗ ಪ್ರಕೃತಿಯಲ್ಲಿ ಜನಸಂಖ್ಯೆಯ ಪತ್ತಡದಿಂದ ಭೂಭಾರ ಉಂಟಾಗುತ್ತದೋ ಆವಾಗೆಲ್ಲ ಇಂಥ ಪ್ರಕೋಪಗಳುಂಟಾಗಿ ಭೂಮಿ ತಾಯಿಯ ಸಮತೋಲನ ಕಾಪಾಡಲ್ಪಡುತ್ತದೆ. ಪರಿವರ್ತನೆಯೇ ಸಂಸಾರದ ನಿಯಮವಲ್ಲವೇ?

Leave a Reply