ಉದ್ದಿನ ವಡೆಗಳೂ…ಶ್ರೀ ಕೃಷ್ಣನಿಗೆ ಅಭಿಷೇಕವೂ…

ಉದ್ದಿನ ವಡೆಗಳೂ…ಶ್ರೀ ಕೃಷ್ಣನಿಗೆ ಅಭಿಷೇಕವೂ…
ಉದ್ದಿನ ವಡೆ ಸಾಂಬಾರ್ ನನ್ನ ಬಹು ದೊಡ್ಡ weakness..ಹಾಗೆ ನೋಡಿದರೆ ನನ್ನ ಗಂಟಲಿಗದು ಅಷ್ಟೊಂದು ಮಾನಿಸುವದಿಲ್ಲ.ಆದರೆ ಆ ವಿಷಯದಲ್ಲಿ ನನ್ನ ಬುದ್ಧಿ / ಮನಸ್ಸುಗಳ ಮಧ್ಯೆ ಸದಾ ವೈಮನಸ್ಸು.ಇತ್ತೀಚೆಗೆ ಕೋವಿಡ್ನಿಂದಾಗಿ ಹೊರಗೆ ಹೋಗುವದೇ ದುಸ್ತರವಾಗಿ ನನ್ನ ಆಶೆ ಆಸೆಯಾಗಿಯೇ ಉಳಿದಿತ್ತು. ಈಗ ಕೆಲದಿನಗಳ ಹಿಂದೆ ಮನೆಯಲ್ಲಿ ಒಬ್ಬಳೇ ಇದ್ದೆ.Tiffin ಮಾಡಬೇಕೆಂದುಕೊಂಡಾಗ
ವಡೆಯ ತೀವ್ರ ನೆನಪಾಗಿ ಮನಸ್ಸು ಖಿನ್ನವಾಗಿತ್ತು. ಏನೋ ಒಂದು ಮಾಡೋಣವೆಂದು ಯೋಚಿಸುತ್ತಿರುವಾಗ ಹೊರಗೆ ಹೋದ ಮಗಳಿಂದ ಫೋನ್.” ನಮ್ಮದು break fast ಆಯ್ತು,ಈಗ ಮನೆಗೆ ಬರುತ್ತಿದ್ದೇವೆ. ನಿನಗೂ Pack ಕಟ್ಟಿಸಿಕೊಂಡು ಬರುತ್ತೇವೆ, ಏನೂ ಮಾಡಿ ಕೊಳ್ಳಬೇಡ “-ಎಂದು.ಮೊದಲೇ ತೂಕಡಿಸುತ್ತಿದ್ದೆ, ಹಾಸಿಗೆ ಸಿಕ್ಕಿತು.ಸಾಕಲ್ಲಾ, ಹದಿನೈದು ನಿಮಿಷಗಳಲ್ಲಿ ಅವರೆಲ್ಲ ಬಂದರು, ಜೊತೆಗೆ food pack ಸಹ… ಕಾಯುತ್ತಿದ್ದೆ, pack ಬಿಚ್ಚಿದೆ.ಬಿಸಿಬಿಸಿ/ ಗರಿಗರಿ ವಡಾ ಸಾಂಬಾರ್!!!!!
ನಾಡಿದ್ದು ( ೯ ನೇ ಫೆಬ್ರುವರಿ) ನನಗೆ ಎಪ್ಪತ್ತಾರು ಮುಗಿಯುತ್ತದೆ. ಎಪ್ಪತ್ತೇಳಕ್ಕೆ ಪಾದಾರ್ಪಣೆ.ಈ ಸಲ ಏನು ತೆಗೆದುಕೊಳ್ಳಲಿ ಎಂದು ಹಾಗೇ ಸುಮ್ಮನೇ ಯೋಚಿಸುತ್ತಿದ್ದೆ, ಬೇಕಿತ್ತು ಅನ್ನುವದಕ್ಕಿಂತ, ಆ ದಿನದ್ದೊಂದು ಪುಟ್ಟ ಖುಶಿಗೆ. ಎಷ್ಟು ಯೋಚಿಸಿದರೂ ಒಂದೂ ಬಗೆಹರಿಯಲಿಲ್ಲ. ಅಷ್ಟೊಂದು ಆಯ್ಕೆಗಳಿದ್ದವು ಎಂದಲ್ಲ,ಯಾವುದೂ ಬೇಕು ಅನಿಸದ ಒಂದೇ ಒಂದು ಕಾರಣಕ್ಕಾಗಿ.ಎರಡು ವರ್ಷಗಳ ಕೊರೋನಾ ಕಾಲ ಒಂದು ರೀತಿ ದೈಹಿಕ ಜಾಡ್ಯದೊಂದಿಗೆ ಮಾನಸಿಕ ಜಡತ್ವವನ್ನೂ ಸಾಕಿದೆ ಅನಿಸಿತು.ಕೊನೆಗೆ ದೇವರಿಗೆ ಒಂದು ಸಣ್ಣ ಪೂಜೆ ಸಾಕು ಈ ಸಲ ಎನ್ನುವ ನಿರ್ಧಾರ ದೊಂದಿಗೆ ಪೂರ್ಣ ವಿರಾಮ ಹಾಕಿದೆ. ಮತ್ತೆರಡು ದಿನಕ್ಕೆ ನನ್ನ WhatsApp ಗೆ ಎರಡು ಮೆಸೇಜುಗಳು.ಅದರಲ್ಲಿ ಒಂದು ಮುದ್ದಾದ ಆಕಳು/ ಕರುವಿನ ಫೋಟೋ, ನನ್ನ ಹೆಸರಿನಲ್ಲಿ ಉಡುಪಿಯ ಶ್ರೀ ಕೃಷ್ಣನಿಗೆ ‘ಹಾಲು- ಬೆಣ್ಣೆ’ ಅಭಿಷೇಕದ ರಸೀತಿಯ ಜೊತೆಗೆ ಒಂದು ಒಕ್ಕಣೆ-
” ಕೃಷ್ಣ ಮಠ”ದಲ್ಲಿ ಕಾಲಿಟ್ಟ ಕೂಡಲೇ ‘ ಕೃಷ್ಣಾ’- ಹೆಸರು ತಲೆಯಲ್ಲಿ ಬಂತು, ಏಕೋ ಗೊತ್ತಿಲ್ಲ, ನಿಮ್ಮ ಹೆಸರಿನಲ್ಲಿ ಒಂದು ಸೇವೆ ಮಾಡಿಸಬೇಕೆಂದು ತೀರ್ಮಾನಿಸಿದೆವು. ಇದು ನಿಮ್ಮ ಹೆಸರಿನಲ್ಲಿ ಮಾಡಿಸಿದ ಸೇವೆಯ ವಿವರ…”- ಕ್ಷಣ ಕಾಲ ಮೈ ಜುಮ್ಮೆಂದಿತು. ಪುಳಕದ ಅನುಭವ ಮುಗಿದ ಮೇಲೆ ಅವರಿಗೊಂದು ಧನ್ಯವಾದದ Note ಬರೆದೆ.ಇನ್ನೂ ಮುಖತಃ ಭೇಟಿಯೇ ಆಗಿರದ face book ನ ಸ್ನೇಹಿತರವರು…
‌ಖಂಡಿತವಾಗಿಯೂ Sixth sense (ಆರನೇಯ ಇಂದ್ರಿಯ) ಅಂತ ಒಂದಿದೆ ,ಅದು ಪಂಚ- ಜ್ಞಾನೇಂದ್ರಿಯಗಳಿಗೆ ಪೂರಕವಾದದ್ದೋ,
ಹೊರತಾದದ್ದೋ ನನಗೆ ತಿಳಿಯದು.ಆದರೆ ಆಗಾಗ ಅದು ನಮಗೇ ಗೊತ್ತಿಲ್ಲದೇ ತನ್ನ ಇರುವನ್ನು ತೋರಿಸುತ್ತಲೇ ಇರುತ್ತದೆ…

1 Comment

  1. Really you are blessed 🙏

Leave a Reply