ಉತ್ತರಾರ್ಧ- ಪುಸ್ತಕ_ಪರಿಚಯ

ಉತ್ತರಾರ್ಧ- ಪುಸ್ತಕ_ಪರಿಚಯ

ಜಯಶ್ರೀ ದೇಶಪಾಂಡೆಯವರ ಹೆಸರು ಕೇಳಿರದ ಕನ್ನಡ ಸಾಹಿತ್ಯಾಸಕ್ತರೇ ಇಲ್ಲವೆಂದೇ ಹೇಳಬಹುದು. ಅವರ ಹರಟೆಗಳೇ ಇರಲಿ, ಲಲಿತ ಪ್ರಬಂಧಗಳೇ ಇರಲಿ, ಕವನಗಳೇ ಇರಲಿ, ಕಥೇಗಳೇ ಇರಲಿ, ಕಾದಂಬರಿಗಳೇ ಇರಲಿ ಎಲ್ಲದರಲ್ಲೂ ಒಂದು ಹೊಸತನವಿರುತ್ತದೆ, ಅವರಿಗೆ ಇರುವ ಲೋಕಾನುಭವದ, ಜಗತ್ತಿನ ಮೂಲೆ ಮೂಲೆಗಳಲ್ಲಿಯೂ ತಿರುಗಿ, ಅಲ್ಲಿಯ ಜನಜೀವನ, ಆಚಾರ ವಿಚಾರಗಳನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿದ ಹಾಗೂ ಅವುಗಳನ್ನು ಅನೇಕ ಸಾಹಿತ್ಯ ಪ್ರಕಾರಗಳ ಮೂಲಕ ಜನಮಾನಸವನ್ನು ತಲುಪಿಸುವ ಗುರಿ ಹೊಂದಿರುವ ಇವರ ಕೃತಿಗಳನ್ನು ಓದುವುದೆಂದರೆ ಓದುಗರಿಗೆ ಒಂದು ರಸದೌತಣವಿದ್ದಂತೆ ಎಂದರೆ ಅತಿಶಯೋಕ್ತಿಯೇನಲ್ಲ!
ಉತ್ತರಾರ್ಧ ಕಥಾಸಂಕಲನದಲ್ಲಿಯ ಮೊದಲ ಕಥೆ “ಒಂದು ಡೈವೋರ್ಸ್ನ ಉತ್ತರಾರ್ಧ”. ಸಾಮಾನ್ಯವಾಗಿ ನಾವು ವಿಚ್ಛೇದನದ ಕೇಸುಗಳಲ್ಲಿ ಮಕ್ಕಳು ತಂದೆಯ ಪ್ರೀತಿಯು ದೊರಕದೆ ಒದ್ದಾಡುವುದನ್ನೂ, ತಾಯಿಯಾದವಳು ತಾಯಿ ಹಾಗೂ ತಂದೆ ಎರಡೂ ಆಗಿ ಮಗುವನ್ನು ಬೆಳೆಸುವುದನ್ನೂ ನೋಡುತ್ತೇವೆ. ಆದರೆ ಅದಕ್ಕೆ ವಿರುದ್ಧವಾಗಿ ಒಬ್ಬ ತಂದೆಯು ತಾಯಿ ಹಾಗೂ ತಂದೆ ಎರಡೂ ಆಗಿ ಪುಟ್ಟ ಬೊಮ್ಮಟೆಯನ್ನು ತನ್ನೊಂದಿಗೆ ಕರೆತಂದು ಅದನ್ನು ತಾಯಿಯಿಲ್ಲದ ಯಾವುದೇ ಕೊರತೆಯೂ ಕಾಣದಂತೆ ಹೇಗೆ ಬೆಳೆಸುತ್ತಾನೆ ಎಂಬುದನ್ನು ಇಲ್ಲಿ ನೋಡುತ್ತೇವೆ. ಮಗನ ಸಕಲ ಪ್ರಶ್ನೆಗಳಿಗೂ ತಂದೆಯಲ್ಲಿ ಉತ್ತರಗಳಿವೆ. ಆದರೆ ಯಾವುದೇ ಪ್ರಶ್ನೆಗೂ ಬಿಟ್ಟು ಹೋದಂಥ ತಾಯಿಯ ಬಗ್ಗೆ ಮಗುವಿನಲ್ಲಿ ಬೇಸರ ಹುಟ್ಟಿಸುವಂಥ ಸಂಗತಿಗಳಿಲ್ಲ. ಇದು ಈ ಕಥೆಯ ಹೈಲೈಟ್ ಎನ್ನಸುತ್ತದೆ ನನಗೆ!
ಎರಡನೆಯ ಕಥೆ “ನೆಲಮುಗಿಲುಗಳ ನಡುವೆ”. ಇಲ್ಲಿ ಎರಡು ಪಾತ್ರಗಳಿವೆ. ಅನಂತ ಹಾಗೂ ಕಥಾನಾಯಕ. ಸ್ವಲ್ಪ ಆಳವಾಗಿ ಇದನ್ನು ವಿಶ್ಲೇಷಿಸುವುದಾದರೆ ಆ ಅನಂತ ಕೃಷ್ಣನು ಕಥಾನಾಯಕನಿಂದ ಬೇರೆಯವನಾಗಿಲ್ಲ. ಅವನದೇ ನೆರಳು. ಅಥವಾ ಒಂದು split ವ್ಯಕ್ತಿತ್ವ ಎಂದೂ ಹೇಳಬಹುದು. ಒಂದು ರೀತಿಯಲ್ಲಿ ಆತ್ಮವಿಶ್ಲೇಷಣೆಯನ್ನು ಮಾಡಿಕೊಳ್ಳುವ ರೀತಿಯದು. ಕಥಾನಾಯಕ ಜೀವನದ ಒಂದು ಕೊನೆಯಲ್ಲಿ ನಿಂತು ಬಾಲ್ಯದ ದಿನಗಳನ್ನು ಮೆಲುಕು ಹಾಕುತ್ತಾನೆ. ತನ್ನೊಂದಿಗೆ ಸ್ಪರ್ಧೆಗಿಳಿದ ಅನಂತಕೃಷ್ಣ, ಅವನ ತಾಯಿ ತನ್ನನ್ನು ಪುಂಡ ಎಂದು ಅವಹೇಳನ ಮಾಡಿದ್ದುದರಿಂದಾಗಿ ಅನಂತ ಕೃಷ್ಣನೊಂದಿಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸುತ್ತಾನೆ. ಜೀವನವಿಡೀ ಎಲ್ಲದರಲ್ಲಿಯೂ ಇಬ್ಬರೂ ಪೈಪೋಟಿಯಿಂದ ಸಾಧನೆ ಮಾಡುತ್ತಾರೆ. ಅವರಿಬ್ಬರೂ ಜೀವನದ ಎಲ್ಲಾ ಸುಖಗಳಿಂದ ವಂಚಿತರಾಗಿ ಉಳಿದು ಕೇವಲ ಸಾಧನೆಯ ಬೆನ್ನು ಹತ್ತುತ್ತಾರೆ. ಒಂದಾದ ನಂತರದ ಸಾಧನೆಗಳ ಅಮಲಿನಲ್ಲಿ ಕಥಾನಾಯಕನಿಗೆ ಜೀವನದ ಕೊನೆಯ ಘಟ್ಟದಲ್ಲಿ ಬಂದು ನಿಂತಿರುವುದರ ಅರಿವಾದಾಗ ತನ್ನ ಈ ಛಲದ ಬದುಕಿನಲ್ಲಿ ಗಳಿಸಿದ್ದ ಇಷ್ಟೆಲ್ಲಾ ಹಣ, ಕೀರ್ತಿ ಹಾಗೂ ಯಶಸ್ಸುಗಳಿಗೆ ವಾರಸುದಾರರಾರು ಎಂಬ ಪ್ರಶ್ನೆ ಕಾಡುತ್ತಿದ್ದಾಗ ಅನಂತಕೃಷ್ಣನೇ ಇದಕ್ಕೆಲ್ಲ ವಾರಸುದಾರನೆಂಬ ಸತ್ಯದ ಅರಿವಾಗುತ್ತದೆ. ಏಕೆಂದರೆ ಅವನ ಆಹ್ವಾನದಿಂದಾಗಿಯೇ ಅಲ್ಲವೇ ತಾನು ಬೌದ್ಧಿಕ ಸಮರಕ್ಕಿಳಿದುದು! ಹೀಗೆ ತಾನು ತನ್ನ ನೈಜ ಮಿತ್ರನನ್ನು ಅವನಲ್ಲೇ ಕಾಣಬೇಕೆಂಬ ತುಯ್ತಕ್ಕೊಳಗಾಗಿ ಅವನತ್ತ ಹೆಜ್ಜೆ ಹಾಕುತ್ತಾನೆ. ಅನಂತಕೃಷ್ಣನೂ ಅದೇ ಸಮಯದಲ್ಲಿ ಇಂಥದೇ ಆಲೋಚನೆಗಳಿಗೊಳಗಾಗಿ ಕಥಾನಾಯಕನತ್ತ ಹೆಜ್ಜೆ ಹಾಕುತ್ತಾನೆ. ಹೀಗೆ ಕಥಾನಾಯಕನು ತನ್ನ ಅಂತರಾತ್ಮದ ಕರೆಗೆ ಸ್ಪಂದಿಸುತ್ತಾನೆ.
ಮೂರನೆಯ ಕಥೆ “ರೆಫ್ಯೂಜಿ”. ಇದು ಒಬ್ಬ ಅಫಘಾನೀ ನಿರಾಶ್ರಿತಳ ಕಥೆ. ಹುಟ್ಟಿದ ನಾಡಿನಿಂದ ತನ್ನ ಬೇರುಗಳನ್ನು ಕಿತ್ತು ಮತ್ತೊಂದು ಅಪರಿಚಿತ ನೆಲದಲ್ಲಿ ಬೆಳೆಯುವ ತವಕದಲ್ಲಿರುವ ನಿರಾಶ್ರಿತರ ಬಗೆಗಿನ ಕಥೆಯಿದು. ಎಷ್ಟೋ ವರ್ಷಗಳಿಂದಲೂ ನಡೆದಿರುವಂಥ ಈ ಯುದ್ಧಗಳಲ್ಲಿ, ಭಯೋತ್ಪಾದಕರ ದೌರ್ಜನ್ಯಗಳಡಿಯಲ್ಲಿ ನೊಂದು ಬೆಂದು ಅಲ್ಲಿಂದ ತಪ್ಪಿಸಿಕೊಂಡು ಬಂದಿರುವಂಥ ಸಾವಿರಾರು ಜೀವಗಳಿಗೆ ಬದುಕು ಕೊಟ್ಟರೂ ಈ ಜನರಲ್ಲಿ ಅನೇಕರು ಉಂಡ ಮನೆಯದೇ ಕೇಡನ್ನು ಬಯಸುವವರು. ಆ ನಿರಾಶ್ರಿತೆಯ ಗಂಡ ಕೊನೆಗೊಮ್ಮೆ ಸಿಕ್ಕಿಬಿದ್ದುದೂ ಡ್ರಗ್ ಪೆಡ್ಲರುಗಳ ಜೊತೆಯಲ್ಲಿ! ಆ ದೇಶಗಳಲ್ಲಿಯ ಹೆಣ್ಣುಮಕ್ಕಳ ಬದುಕಿನ ಬಗ್ಗೆ ಈ ಕಥೆಯಲ್ಲಿ ವಿಶ್ಲೇಷಣೆಯಿದೆ. ಕಥಾನಾಯಕಿ ನಿಕಾಶಳ ತಂದೆ ತಾಯಿಯರು ಮನೆ ಮಾರು ಕಳೆದುಕೊಂಡು ಮೂರು ವರ್ಷದ ತಮ್ಮನೊಂದಿಗೆ ನಿರ್ಗತಿಕರಾದರೆ, ಅವಳ ಅಕ್ಕನನ್ನಂತೂ ಭಯೋತ್ಪಾದಕರು ಎತ್ತಿಕೊಂಡೇ ಹೋಗಿರುತ್ತಾರೆ. ಇವಳೋ ಮೂವತ್ತು ವರ್ಷಕ್ಕೇ ಮೂರು ಮಕ್ಕಳ ತಾಯಿ. ಇರಲು ಮನೆಯಿಲ್ಲ, ಉಣ್ಣಲು ಗಳಿಕೆಯಿಲ್ಲವಾದರೂ ಆತನ ಗಂಡು ದರ್ಪಕ್ಕೇನೂ ಕೊರತೆಯಿದ್ದಂತೆ ಎನ್ನಿಸಲಿಲ್ಲ ಲೇಖಕಿಗೆ! ಯಾರ ಸಲುವಾಗಿ ಈ ಯುದ್ಧಗಳು! ಯಾರ ಸುಖಕ್ಕಾಗಿ! ಎಂಬ ಆಲೋಚನೆಯೂ ಬರುವುದು ಸಹಜವೇ ಇಂಥ ಕಥೆಗಳನ್ನು ಓದಿದಾಗ..
ಇನ್ನು ಮುಂದಿನದು “ಒಂದು ಗಾಲಿಕುರ್ಚಿಯ ಕಥೆ”. ರಾಜಕೀಯ ದ್ವೇಷವೆನ್ನುವುದು ಯಾವ ಹಂತಕ್ಕಾದರೂ ಇಳಿದೀತೆಂಬುವುದರ ಒಂದು ಅಪಘಾತದ ವಿವರಣೆಯೊಂದಿಗೆ ಕಥೆಯು ಆರಂಭವಾಗುತ್ತದೆ. ಆ ಅಪಘಾತವು ಯೋಜನಾಬದ್ಧವಾಗಿದ್ದರೂ ಅದರಿಂದಾಗಿ ನಲುಗುವ ಜೀವಗಳ ಬಗ್ಗೆ ಯೋಚಿಸುವುದಕ್ಕೆ ಪುರಸೊತ್ತು ಯಾರಿಗಿದೆ? ಇಲ್ಲಿ ಲೇಖಕಿಯು ತನ್ನ ಸ್ನೇಹಿತೆ ಅದಿತಿ, ಎಂದರೆ ಆ ಅಪಘಾತಕ್ಕೊಳಗಾದ ಮ್ಯಾರಥಾನ್ ಓಟಗಾರ ವಲ್ಲಭನ ಹೆಂಡತಿ, ಅವನ ಪರ್ಸನಲ್ ಟ್ರೇನರಿಗಿಂತಲೂ ಹೆಚ್ಚಿನ ಕಾಳಜಿ ವಹಿಸುವವಳು-ಅವಳನ್ನು ಭೆಟ್ಟಿಯಾಗಲು ಹೋಗುತ್ತಾಳೆ. ಇಲ್ಲಿ ಸಮೂಹ ಮಾಧ್ಯಮಗಳು ತಮ್ಮ ಸುದ್ದಿಯನ್ನು ಹಂಚುವ ಆತುರದಲ್ಲಿ ಆ ಅಪಘಾತಕ್ಕೊಳಗಾದ ಜೀವಗಳಿಗೆ, ಅವರ ಹತ್ತಿರದ ಬಂಧುಗಳಿಗೆ ಎಷ್ಟು ತೊಂದರೆ ಕೊಡುತ್ತವೆ ಎಂಬುದರ ವಿವರಣೆಯೂ ಇದೆ. ಡ್ರಗ್ಸ್ ತೆಗೆದುಕೊಂಡಿದ್ದರೇ? ಕುಡಿದಿದ್ದರೇ? ಕುಡಿದಿರದಿದ್ದರೆ ಅಂಥ ಘಾಟ ಸೆಕ್ಶನ್ನಿನಲ್ಲಿ ಆ ಸ್ಪೀಡು ಹೇಗೆ ಸಾಧ್ಯ ಎಂದೆಲ್ಲ ಪ್ರಶ್ನೆಗಳು! ಇಂಥ ಒಬ್ಬ ಪ್ರಮುಖ ಅಥ್ಲೀಟ್‌ಗೆ ಅಪಘಾತವಾದಾಗ ಭೆಟ್ಟಿಯಾಗಲು ಬಂದ ರಾಜಕಾರಣಿಗಳು ಅಗತ್ಯವಾದಂಥ ಎಲ್ಲ ಸಹಾಯ ಕೊಡುವ ಭರವಸೆಯನ್ನು ನೀಡಿ ಹೋದವರು ನಾಪತ್ತೆ. ಲೇಖಕಿಯು ಇಲ್ಲಿ “ಬಿದ್ದ ಪೆಟ್ಟಿಗಿಂತ ನಕ್ಕ ಪೆಟ್ಟು… ಅನುಮಾನದ ಹುತ್ತ ಕಟ್ಟುವ ಪೆಟ್ಟಿನ ನೋವು ಹೆಚ್ಚು” ಎಂಬ ಮಾತು ಸತ್ಯ. ಸೆಲಿಬ್ರಿಟಿಗೆ ಖಾಸಗಿ ಬದುಕಿಲ್ಲ ಎನ್ನುವುದೂ ಸತ್ಯವೇ. ಆದರೂ ಆ ಜೀವಗಳ ನೋವು ಖಾಸಗಿಯೇ ಅಲ್ಲವೇ? ಇದನ್ನು ಬಹಳ ಮನೋಜ್ಞವಾಗಿ ವಿವರಿಸಿದ್ದಾರೆ ಲೇಖಕಿ. ತಾನೇಕೆ ಬದುಕಿದೆನೋ ಎಂದು ಸಂಕಟ ಪಡುತ್ತಾನೆ ವಲ್ಲಭ. ಗಾಲಿಕುರ್ಚಿಯ ಮೇಲೆ ಸದಾಕಾಲವೂ ಕುಳಿತಿರಬೇಕಾದ ಅನಿವಾರ್ಯತೆಯನ್ನು ಹೊಂದಿರುವ ಬದುಕಿನಲ್ಲಿ ಒಂದು ವರ್ಷದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ವಲ್ಲಭನು ಆ ಅನಿವಾರ್ಯತೆಗೆ ಹೊಂದಿಕೊಳ್ಳುವ ಹೋರಾಟದಲ್ಲಿ ನಿರತನಾಗಿದ್ದರೆ, ಅದಿತಿಯು ಆತನ ಒಂದೂವರೆ ಕಾಲುಗಳನ್ನು ಎರಡಾಗಿಸುವಂಥ ಚಿಕಿತ್ಸೆಗಳ ಬೆನ್ನಟ್ಟಿದ್ದಳು. ಆದರೆ ಕಥಾ ಲೇಖಕಿಗೆ ತಲುಪಿದ್ದ ಗಾಳಿಸುದ್ದಿಗಳಲ್ಲಿ ಒಂದು ತಮ್ಮ ದೀರ್ಘಕಾಲದ ಪ್ರೇಮವನ್ನು ಮದುವೆಯಲ್ಲಿ ಸಫಲಗೊಳಿಸಬೇಕಾಗಿದ್ದ ಅದಿತಿಯು ಒಬ್ಬ ವಿದೇಶದಲ್ಲಿ ಸೆಟ್ಲ್ ಆದಂಥ ಇಂಜಿನಿಯರನ ಜೊತೆಗೆ ಮದುವೆಯಾಗುತ್ತಿದ್ದಾಳೆ ಎನ್ನುವುದು! ಲೇಖಕಿಗೆ ಇದರಲ್ಲಿ ವಿಶ್ವಾಸವಾಗಲಿಲ್ಲ. ಆದರೂ ಅವರು ಅದಿತಿಯನ್ನು ಸಂಪರ್ಕಿಸಿ, ನಿನ್ನ ಎದುರು ಸುದೀರ್ಘವಾದ ಜೀವನವಿದೆ. ಇದರಲ್ಲಿ ಏನೂ ತಪ್ಪಿಲ್ಲವೆಂದೂ ಹೇಳಿದಾಗ, ಅದಿತಿ ತನ್ನ ಮೊಬೈಲಿನಲ್ಲಿಯ ಒಂದು ಫೋಟೋ ತೋರಿಸುತ್ತಾಳೆ, ಅದರಲ್ಲಿ ವೀಲ್ ಚೇರಿನಲ್ಲಿ ಕುಳಿತ ವಲ್ಲಭನ ಹಿಂದೆ ಆ ಕುರ್ಚಿಯ ಹಿಡಿಯನ್ನು ಹಿಡಿದು ನಿಂತ ಅದಿತಿಯ ಕಣ್ಣುಗಳಲ್ಲಿಯ ದೃಢ ನಿರ್ಧಾರ! ಪ್ಯಾರಾ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕವನ್ನು ಗೆದ್ದ ಸಂಭ್ರಮ ವಲ್ಲಭನ ಕಣ್ಣಲ್ಲಿ! ಇಲ್ಲಿ ಲೇಖಕಿಯ ಒಂದು ಮಾತು ಬಹಳ ಸಮಯೋಚಿತವೆನ್ನಿಸುತ್ತದೆ, “ಕಾಲು ಹೋದರೇನಾಯಿತು, ಕೈ ಇತ್ತಲ್ಲ, ಶಾಟ್ಪುಟ್ ಎಸೆಯಲು!” ನಿಜ, ಮನುಷ್ಯ ಎಂಥದೇ ಸಂದರ್ಭದಲ್ಲೂ ಎದೆಗುಂದಬಾರದಲ್ಲವೇ? ಕಥೆಯಲ್ಲಿ ಪ್ರೀತಿಯ ಘಮಲು ತ್ಯಾಗದಲ್ಲಿದೆ ಎಂಬ ಮಾತನ್ನು ಸಾಕಾರಗೊಳಿಸಲಾಗಿದೆ.
ಪತ್ರಿಗೌಡ ಮತ್ತು ಸಾಹೇಬನ ನಾಯಿ.. ಈ ಕಥೆಯಲ್ಲಿ ಜಗತ್ತಿನಲ್ಲಿ ರೂಪಕ್ಕೆ ಜನರು ನೀಡುವ ಆದರವು ಒಮ್ಮೊಮ್ಮೆ ಹೊಟ್ಟೆಕಿಚ್ಚಾಗಿಯೂ ಪರಿಣಮಿಸಿ ಜೀವನವೇ ಬೇಸರವಾಗುವಂತೆ ಮಾಡುತ್ತದೆ ಎನ್ನುವುದನ್ನು ಸುಂದರನಾದ ಪತ್ರಿಗೌಡ ಹಾಗೂ ಕುರೂಪಿಯಾದ ಅವನ ಬಾಸ್- ಇವರಿಬ್ಬರ ನಡುವಿನ ಅನೇಕ ಪ್ರಸಂಗಗಳಲ್ಲಿ ಚಿತ್ರಿಸಿದ್ದಾರೆ. ಇದು ಹಾಸ್ಯ ಹಾಗೂ ವಿಡಂಬನೆಗಳ ನಡುವಿನ ಒಂದು ಎಳೆಯ ಅಂತರವನ್ನಿಟ್ಟುಕೊಂಡೇ ನಡೆದರೂ ಕೊನೆ ಮಾತ್ರ ಅತ್ಯಂತ ಮಾರ್ಮಿಕವಾಗಿದೆ.
“ಯುದ್ಧ”. ಇದು ಒಬ್ಬ ಸೈನಿಕನದಲ್ಲ, ಪ್ರತಿಯೊಬ್ಬ ಸೈನಿಕನ ಕಥೆ ಎಂದೇ ಲೇಖಕಿಯು ಕಥೆಯನ್ನು ಆರಂಭಿಸುತ್ತಾರೆ. ಸೈನಿಕನ ಜೀವನವನ್ನು ಹತ್ತಿರದಿಂದ ಕಂಡಂಥ, ಕೇಳಿದಂಥ ಲೇಖಕಿಯ ಅನುಭವವು ಇಲ್ಲಿ ಕಥೆಯಾಗಿ ಅರಳಿದೆ ಎನ್ನಬಹುದು. ಸೈನಿಕರ ಜೀವನದ ನಿಷ್ಠೆಯು ಯಾವಾಗಲೂ ತನ್ನ ದೇಶದ ರಕ್ಷಣೆಗಾಗಿಯೇ ಎನ್ನುವದರ ನಿದರ್ಶನ ಇಲ್ಲಿದೆ. ಸೈನಿಕರ ಜೀವನದ ಒಂದು ಅನಿಶ್ಚಿತತೆಯ ವಿವರಣೆ ಬಹಳ ಚೆನ್ನಾಗಿ ವಿವರಿತವಾಗಿದೆ. ಮನೆಗೆ ರಜೆಯ ಮೇಲೆ ಹೊರಟಿದ್ದ ತರುಣ ಸೈನಿಕ ಪ್ರತಾಪನು ತನ್ನ ದೇಶದ ರಕ್ಷಣೆಯ ಸಲುವಾಗಿ ತನ್ನ ರಜೆಯನ್ನು ರದ್ದುಗೊಳಿಸಿ ಶತೃಸೈನ್ಯದೊಂದಿಗೆ ಹೋರಾಡುವಾಗಲೇ ತನ್ನ ಜೀವವನ್ನು ತೆರುವಂಥ ಕಥೆಯು ಕನಸುಗಣ್ಣಿನ ಹುಡುಗನ ಕನಸುಗಳು ಸುಟ್ಟುಹೊಗಿದ್ದವು ಎಂಬ ಶರಾದೊಂದಿಗೆ ಮುಕ್ತಾಯಗೊಳ್ಳುತ್ತದೆ.
“ನಗೆಯೇ ನಿನ್ನ ಹೆಸರೇನೇ”.. ಇದು ಒಂದೇ ಕಥೆಯಲ್ಲಿ ಹೆಣ್ಣಿನ ಅನೇಕ ಮುಖಗಳನ್ನು ಪರಿಚಯಿಸುವ ಕಥೆ. ಕಥೆಯಲ್ಲಿ ಮೊದಲ ಪರಿಚಯವಾಗುವುದು ತೆಳುವಾದ ಶರೀರದ, ನಾಲ್ಕಡಿಯ ಮೂರ್ತಿ ಆಯಿಯದು. ಅವಳು ಕೆಲಸಕ್ಕೆ ಬಂದವಳು. ತನ್ನ ದುಡಿಮೆಯಿಂದ ಕಥಾನಾಯಕಿಯ ಮನ ಗೆದ್ದವಳು. ಅವಳು ತನ್ನ ಗಂಡನ ಸುದ್ದಿಯನ್ನು ಹೇಳುವಾಗ, “ಭಾಳೇನ ಕೆಟ್ಟ ಇರಲಿಲ್ಲಂವಾ” ಎನ್ನುತ್ತಿದ್ದಳು. ‘ಕುಡೀತಿದ್ದಾ, ಹುಣ್ಣಿಮೀ, ಅಮಾಸೀ ಅಂದ್ರ ಕುಡೀಲಾರದ ಗಂಡಸರೇ ಇಲ್ಲ’ ಎಂದು ಅವಳು ಇಡೀ ವರ್ಷ ಕುಡಿದು ಬಡಿಯುವವನಿಗಿಂತ ಇವನೇ ಚೆನ್ನ ಎಂದು ಹೇಳುವ, ಗಂಡನಾದವನು ಇನ್ನೊಬ್ಬ ಹೆಣ್ಣಿನ ಕಡೆಗೆ ಹೊರಳಿದರೆ ಸಂಸಾರದಲ್ಲಿ ಸ್ವಾರಸ್ಯವಿಲ್ಲ ಎನ್ನುವವಳು. ಐದು ವರ್ಷಗಳ ದಾಂಪತ್ಯದಲ್ಲಿ ಅವಳು ಕಂಡ ಅವಳ ಗಂಡನ ಸ್ವಭಾವದ ಬಗ್ಗೆ ಹೇಳುತ್ತ, ಅನ್ನ ಬೆಂದಿದೆಯೇ ಎಂದು ನೋಡಲು ಒಂದಗುಳು ಹಿಸುಕಿದರೆ ಸಾಕಲ್ಲವೇ ಎಂಬ ಸಾದೃಶ. ಅದೇ ರೀತಿಯಲ್ಲಿಯೇ ಕಾಂತಿಯ ಪಾತ್ರವೂ ಕೂಡ. ಅವಳ ಗಂಡ ಕಿರಣ್ ಅನೇಕ ಬಾರಿ ಅನೇಕ ಹೆಣ್ಣುಗಳ ಜೊತೆಗೆ ಸಿಕ್ಕಿಬಿದ್ದವ, ತನ್ನ ತಪ್ಪನ್ನೇ ಸಮರ್ಥಿಸಿಕೊಂಡವ. ಕಾಂತಿ ಡೈವೋರ್ಸಿಗೆ ಬೇಡಿಕೆ ಇತ್ತವಳು. ಇನ್ನೊಂದು ಕೇಸು. ಅಲ್ಲಿ ನ್ಯಾಯಾಧೀಶೆಯಾದವಳು, ವಿಚ್ಛೇದನಗಳಿಗೆ ತೀರ್ಪು ಬರೆಯುವವಳು.. ಅವಳೇ ಗಂಡನ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ. ತುಟಿ ಪಿಟ್ಟೆನ್ನದೆ ತನ್ನ ಕೈಯಲ್ಲಿಯೇ ಅಧಿಕಾರವಿದ್ದರೂ ಅವನ ದೌರ್ಜನ್ಯಗಳನ್ನು ಸಹಿಸಿಕೊಂಡಿದ್ದಾಳೆ. ಆಯಿಯ ಸೊಸೆ! ಅವಳ ಗಂಡನು ಕುಡಿದು ಬಂದು ತನ್ನ ಮೇಲೆ ಕೈಮಾಡಿದನೆಂಬ ಕಾರಣಕ್ಕೆ ವಿಚ್ಛೇದನವನ್ನು ಬಯಸುತ್ತಾಳೆ! ಸಮಾಜವು ಬದಲಾಗಿದೆಯೇ ಎಂದು ಪ್ರಶ್ನಿಸುವ ಲೇಖಕಿಯು ಅವರವರ ಆಯ್ಕೆ ಅವರವರ ಬದುಕು ಎಂಬ ನಿರ್ಧಾರಕ್ಕೆ ಬರುತ್ತಾರೆ!
ಮುಂದಿನದು “ಮಸ್ತಾನಿ”. ಇಲ್ಲಿರುವುದು ಐತಿಹಾಸಿಕ ಕಥೆಯೊಂದರ ಹೊಳಹು. ಮಸ್ತಾನಿ ಎಂಬ ಛತ್ರಸಾಲನ ಪರ್ಶಿಯನ್ ಮಗಳನ್ನು ಕಾಣಿಕೆಯಾಗಿ ಸ್ವೀಕರಿಸಿದ್ದ ಬಾಜೀರಾವ್‌ನ ಪ್ರಣಯ ಪ್ರಸಂಗದ ಮೆಲುಕು. ಭಿನ್ನ ಧರ್ಮೀಯ ವಿವಾಹದಲ್ಲಿಯ ನೋವು-ನಲಿವುಗಳ ಜೊತೆಗೆ ರಾಜಕೀಯದಲ್ಲಿ ಆ ಎರಡೂ ಜೀವಗಳೂ ಅನುಭವಿಸಿದಂಥ ಯಾತನೆ ಇಲ್ಲಿದೆ.
“ಸ್ವಯಂಸಿದ್ಧ..” ಇಲ್ಲಿ ಚಿಕ್ಕಂದಿನಲ್ಲಿಯ ಹುಡುಗಾಟದಲ್ಲಿ ನಡೆದಂಥ ಒಂದು ಘಟನೆ. ಗಿಡವನ್ನು ಏರಿ ಮಾವಿನಕಾಯಿಗಳನ್ನು ಹರಿಯುವ ಆತುರದಲ್ಲಿದ್ದಾಗ ತೋಟ ಕಾಯುವವನು ಬಂದನೆಂದು ಕೂಗಿದಾಗ ಗಿರಿಧರನೆಂಬ ಹುಡುಗನು ಮಾವಿನಗಿಡದಿಂದ ಕೆಳಕ್ಕೆ ಜಿಗಿಯುವ ಸಂದರ್ಭದಲ್ಲಿ ಕಾಲುಗಳನ್ನೇ ಕಳೆದುಕೊಂಡಿರುತ್ತಾನೆ. ಮನುವಿಗೆ ಮುಂದೆ ಅದು ತಿಳಿದಾಗ ಗಿರಿಧರನನ್ನು ಮರವನ್ನು ಹತ್ತಲು ಒತ್ತಾಯಿಸಿದವಳೇ ತಾನು. ಅವನು ತನ್ನಿಂದಲೇ ಈ ಸ್ಥಿತಿಗೆ ಬಂದನೆಂಬ ನೋವಿಗೆ ಪ್ರಾಯಶ್ಚಿತ್ತವೆಂದು ಅವನನ್ನೇ ಮದುವೆಯಾಗಿ ಅವನಿಗೆ ಆಸರೆಯಾಗಿ ನಿಲ್ಲುವ ಕಥೆಯಿದು. ಮನು ಸುಂದರಿ. ದೊಡ್ಡ ಶ್ರೀಮಂತರ ಮಗಳು. ಅವಳು ಬಯಸಿದ್ದರೆ ಇದನ್ನೆಲ್ಲ ಮರೆತು ಬೇರೆ ಯಾರನ್ನೋ ಮದುವೆಯಾಗಿ ತನ್ನ ಸಂಸಾರದಲ್ಲಿ ಸುಖದಿಂದ ಇರಬಹುದಿತ್ತು. ಆದರೆ ಅವಳು ಎಂದೂ ತನ್ನ ನಿರ್ಧಾರಕ್ಕಾಗಿ ಮರುಗಿಲ್ಲ. ತನ್ನ ಆಯ್ಕೆಯ ಬದುಕಿನಲ್ಲಿ ಅವಳು ಸುಖವಾಗೇ ಇದ್ದಳು. ಈ ಕಥೆಯಲ್ಲಿ ಲೇಖಕಿಯ ಮನಸ್ಸು ಮನುವು ಮಾಡಿದ ನಿರ್ಧಾರವು ಸರಿಯೋ ತಪ್ಪೋ ಎಂದು ಚಿಂತಿಸುತ್ತಲೇ ಇತ್ತು ಎಂದು ಹೇಳುವ ಮೂಲಕ ಅವರವರ ಜೀವನ.. ಅವರವರ ನಿರ್ಧಾರ ಎಂದು ಸಮಾಧಾನ ಪಟ್ಟುಕೊಳ್ಳುತ್ತದೆ.
ಇನ್ನು ಮುಂದಿನ ಕಥೆ ಗತ. ಇಲ್ಲಿ ಮಲತಾಯಿಯ ದ್ವೇಷದ ಪರಾಕಾಷ್ಠೆಯನ್ನು ವರ್ಣಿಸುವ ಲೇಖಕಿಯು ಆ ದ್ವೇಷವು ಒಂದು ಜೀವವನ್ನೇ ಬಲಿ ತೆಗೆದುಕೊಂಡಂಥ ಪ್ರಸಂಗವನ್ನು ಮನಮುಟ್ಟುವಂತೆ ಹೇಳಿದ್ದಾರೆ. ಮನೆಯ ಮಗನನ್ನು ಆಳಿಗಿಂತ ಕಡೆಯಾಗಿ ದುಡಿಸಿಕೊಳ್ಳುವ, ಮುಂದೆ ಒಂದು ಲಾಟರಿ ಟಿಕೆಟ್ಟಿಗಾಗಿ ಅವನ ಜೀವವನ್ನೇ ತೆಗೆಯುವ ಕಟುಕ ತಾಯಿ ಮಗನ ಕಥೆ ಇದು. ಆದರೆ ಆ ಟಿಕೆಟ್ಟು ಅವರಿಗೆ ಕೈಗೇ ಸಿಗದೆ ಅವನಿಗಾಗಿ ಮಿಡುಕುವ ಜೀವವಾದ ಕಾವೇರಿಯು ಆ ಟಿಕೆಟ್ಟನ್ನು ಹರಿದೆಸೆದು ಆ ತಾಯಿ ಮಗನಿಗೆ ಶಾಪವನ್ನೂ ಕೊಡುವುದರೊಂದಿಗೆ ಕಥೆ ಮುಗಿಯುತ್ತದೆ.
ಮುಂದಿನ ಕಥೆ “ಬೇರುಗಳು”. ಇಲ್ಲಿ ಕಥಾನಾಯಕನು ತನ್ನ ಬುದ್ಧಿಶಕ್ತಿಯ ಬಲದಿಂದ ಸಾಕಷ್ಟು ವಿದ್ಯೆಯನ್ನು ಗಳಿಸಿ, ವಿದೇಶದಲ್ಲಿ ಒಂದು ಒಳ್ಳೆಯ ನೌಕರಿಯನ್ನು ಸಂಪಾದಿಸಿ ಸಾಕಷ್ಟು ಗಳಿಸಿದರೂ ಜೀವನದ ಸಹಜ ಸುಖಗಳಿಂದ ವಂಚಿತನಾಗಿ ಸ್ವದೇಶದ ತನ್ನ ಬೇರುಗಳಿಂದ ದೂರವಾದವನು. ಇದು ಅವನ ಎತ್ತರವಾದರೆ ಅವನ ಗೆಳೆಯ ಹಳ್ಳಿಯಲ್ಲಿಯೇ ಇದ್ದು ತನ್ನ ಬುದ್ಧಿಶಕ್ತಿಯು ತನ್ನವರಿಗೆ ಉಪಯೋಗವಾಗಬೇಕೆಂದು ಬಯಸಿದವನು. ಇದು ಅವರವರ ಎತ್ತರ. ಮುಂದೆ ವಿದೇಶವನ್ನು ಬಿಟ್ಟು ಹಳ್ಳಿಯಲ್ಲಿಯೇ ತನ್ನ ಬೇರುಗಳನ್ನು ಅರಸುವ ಕೊನೆಯು ಈ ಕಥೆಯಲ್ಲಿದೆ.
ಕತೆಗಾರ್ತಿ ಶ್ರೀಮತಿ ಜಯಶ್ರೀ ದೇಶಪಾಂಡೆಯವರದು ನುರಿತ ಶೈಲಿ. ಕಥಾವಸ್ತು ಯಾವುದೇ ಇರಲಿ, ಅದನ್ನು ತಮ್ಮ ಸುಂದರವಾದಂಥ ಕಾವ್ಯಮಯ ಶೈಲಿಯಲ್ಲಿ ಉಣಬಡಿಸುವ ಇವರು ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಕಥಾಸಂಕಲನಗಳು, ಕಾದಂಬರಿಗಳು, ಕಾವ್ಯ ಸಂಕಲನಗಳಿಂದಾಗಿ ಹೆಸರು ಪಡೆದವರು. ಈ ಸಂಕಲನದ ಕಥೆಗಳಲ್ಲೂ ಅವರ ಅದಮ್ಯ ಜೀವನಪ್ರೀತಿ ವ್ಯಕ್ತವಾಗಿದೆ. ಬಾಲ್ಯದ ಸವಿ ಸವಿ ನೆನಪುಗಳು ಎಲ್ಲರೂ ತಮ್ಮ ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುವಂತೆ ಮಾಡಿವೆ. ಅವರ ಭಾಷೆಯಂತೂ ಅತ್ಯಂತ ಆಕರ್ಷಕ. ಆಡುಭಾಷೆಯ ಸೊಗಡು ಕೆಲವು ಕಥೆಗಳಲ್ಲಿ ವ್ಯಕ್ತವಾದರೆ, ಇನ್ನೂ ಕೆಲವೆಡೆ ನಾಗರಿಕತೆಯ ಟಚಪ್ಪು ಇದೆ. ಪ್ರಸಂಗಾನುಸಾರವಾಗಿ ಭಾಷೆಯನ್ನು ಉಪಯೋಗಿಸಿಕೊಳ್ಳುವ ಜಾಣ್ಮೆ ಅವರದು. ಒಟ್ಟಿನಲ್ಲಿ ಎಂದಿನಂತೆ ಒಮ್ಮೆ ಓದಿದರೆ ಮತ್ತೊಮ್ಮೆ ಮಗದೊಮ್ಮೆ ಓದಬೇಕೆನ್ನಿಸುವ, ಅನುಭವದ ಆಳಕ್ಕಿಳಿಯಬೇಕೆನ್ನಿಸುವಂಥ ಕಥನಕಲೆಯನ್ನೊಳಗೊಂಡ ಶೈಲಿ ಎಂದು ಹೇಳಬಹುದು.
**

Leave a Reply