ವೈದ್ಯೋ ನಾರಾಯಣೋ ಹರಿಃ

ವೈದ್ಯೋ ನಾರಾಯಣೋ ಹರಿಃ
ಡಾಕ್ಟರ ಎಂದಾಕ್ಷಣವೇ ಕಣ್ಣ ಮುಂದೆ ಸೂಟುಬೂಟು ಹಾಕಿದ, ಮೂಗಿನ ಮೇಲೆ ಕನ್ನಡಕವೇರಿಸಿದ, ಶುಭ್ರಬಟ್ಟೆ ತೊಟ್ಟು, ಕೊರಳಲ್ಲಿ ಮಾಲೆಯ ಹಾಗೆ ಸ್ಟತೋಸ್ಕೋಪ ಹಾಕಿಕೊಂಡ ಮನುಷ್ಯನ ಆಕೃತಿ ಅಲೆಅಲೆಯಾಗಿ ತೇಲಿ ಬರುತ್ತಿದ್ದಿರಬೇಕಲ್ಲವೇ. ಆದರೆ ನಾನು ಹೇಳಹೊರಟ ಡಾಕ್ಟರ ಎಂಥದೂ ಮುಚ್ಚಟೆ, ಹಮ್ಮುಬಿಮ್ಮು ಇರದ ಸೀದಾಸಾದಾ ಬಿಳಿಯ ಪಾಯಜಾಮ ಹಾಗೂ ಜುಬ್ಬಾ ತೊಟ್ಟ ಡಾಕ್ಟರ ಕೆರೆಮನೆ. ಆತನ ಮನೆಇರುವುದು ಒಂದು ವಿಶಾಲವಾದ ಕೆರೆಯ ದಂಡೆಯ ಪಕ್ಕದಲ್ಲಿ. ಎದುರಿಗೆ ಹನುಮಪ್ಪ ದೇವರ ಗುಡಿ. ಹೀಗಾಗಿ ಆತನಿಗೆ ಅಡ್ಡಹೆಸರು ಹನುಮಪ್ಪನ ಗುಡಿಯ ಡಾ. ಕೆರೆಮನೆ ಎಂದು. ಆತನ ನಿಜ ನಾಮಧೇಯ ‘ಪಾಂಡುರಂಗ ಕಾಖಂಡಕಿ’ ಎಂದು. ಆದರೆ ಎಲ್ಲರ ಬಾಯಲ್ಲೂ ‘ಡಾ. ಕೆರೆಮನೆ’ ಎಂದೇ ಪ್ರತೀತಿ.
ಈತ ಡಾಕ್ಟರ ಆಗಿದ್ದೂ ಒಂದು ಸೋಜಿಗವೇ. ಆತನಿರುವುದು ಚಿಕ್ಕ ಊರು. ಬೇಕಾದರೆ ಗ್ರಾಮ ಎಂದುಕೊಳ್ಳಿ. ಸುತ್ತಮುತ್ತಲೂ ರೈತರ ಹೊಲ ತೋಟ ಗದ್ದೆಗಳೇ. ಅವರಿಗೆ ಏನಾದರೂ ಬೇನೆ ಬೇಸರಿಕೆ ಬಂದರೆ ತೋರಿಸಲು ದವಾಖಾನೆ ಅಂತ ಅಲ್ಲಿ ಇರಲಿಲ್ಲ. ಹೀಗಾಗಿ ಆ ಜನರೆಲ್ಲ ಹೋಗಬೇಕಾಗಿದ್ದು ಎರಡು ಘಂಟೆಯ ಬಸ್ ಪ್ರವಾಸದ ನಂತರದ ಪಟ್ಟಣಕ್ಕೇ. ಇದರಿಂದ ಸರ್ಕಾರ ಜನರಿಗಾಗಿ ಪಟ್ಟಣದ ಒಬ್ಬ ಡಾಕ್ಟರನ್ನು ಇಲ್ಲಿ ವಾರಕ್ಕೆರಡು ದಿನ ಬರಲು ನೇಮಿಸಿತ್ತು. ಆತನ ಸೇವೆಗಾಗಿ ಊಟ ತಿಂಡಿಯ ವ್ಯವಸ್ಥೆ ಈ ಪಾಂಡುರಂಗನದೇ. ಇವನದೂ ಕೆಲಸವೇನಿರದೆ ಖಾಲಿಯಾಗಿದ್ದ. ಹೀಂಗಾಗಿ ವಾರಕ್ಕೆರಡು ದಿನ ಬರುವ ಪೇಟೆ ಡಾಕ್ಟರ್ ಕ್ಕಿಂತ ಈತನೇ ಊರಿನವರಿಗೆ ಅಚ್ಚುಮೆಚ್ಚಿನವನಾದ. ಹಾಗೇ ಒಂದಿನ ಪೇಟೆ ಡಾಕ್ಟರ್ ಪಾಂಡುರಂಗನಿಗೆ ‘ನೀನೇಕೆ ಆರ್. ಎಮ್.ಪಿ. ಮಾಡಬಾರದು?’ ಅಂತ ಕೇಳಿದ, ವಿಠ್ಠಲರಾವ್ ಪಿಯುಸಿ ಮುಗಿಸಿದ್ದ. ಚೂರುಪಾರು ಹೊಲಗಳಿದ್ದವು. ಇನ್ನೂ ಮದುವೆಯಾಗಿ ಕೊರಳಿಗೆ ಜವಾಬ್ದಾರಿ ಬಿದ್ದಿರಲಿಲ್ಲ. ತಾಯಿಗೆ ವಯಸ್ಸಾಗಿತ್ತು. ಹೀಂಗಾಗಿ ಅಷ್ಟೇನೂ ಆತನಿಗೆ ಹಣದ ತಾಪತ್ರಯ ಎದ್ದು ಕಂಡುಬರುತ್ತಿರಲಿಲ್ಲವಾದ್ದರಿಂದ ಬೇರೇನೂ ಮಾಡದೇ ಅಲೆಯುತ್ತಿದ್ದ. ಈಗ ಡಾಕ್ಟರ್ ಕೊಟ್ಟ ಸಲಹೆಯಿಂದ ಅವನಿಗೇನೂ ತೋಚದಂತಾಯಿತು. ‘ಅದರಿಂದೇನ್ರೀ ಉಪಯೋಗ’ ಅಮಾಯಕನಾಗಿ ಕೇಳಿದ. ‘ಏನಿಲ್ಲ ಆರು ತಿಂಗಳ ಕೋರ್ಸ್ ಇರ್ತದೆ, ಅಂದ್ರೆ ನೀನೂ ಡಾಕ್ಟರ್ ಆಗಬಹುದು’ ಎಂದಾಗ ಪಾಂಡುರಂಗನಿಗೆ ಮನದಲ್ಲಿ ಆಶಾಕಿರಣದ ಜ್ಯೋತಿ ಬೆಳಗಿದಂತಾಯಿತು. ತಕ್ಷಣವೇ ಡಾಕ್ಟರ್ ಸಲಹೆಯ ಪ್ರಕಾರ ಫಾರ್ಮ್ ತುಂಬಿ ಆರು ತಿಂಗಳಲ್ಲಿ ಕೋರ್ಸ್ ನ್ನು ಕಂಪ್ಲೀಟ್ ಮಾಡಿದ. ಈಗಾಗಲೇ ಡಾಕ್ಟರ ಹಿಂಬಾಲಕನಾಗಿ ಸಾಕಷ್ಟು ಔಷಧ ಗುಳಿಗೆಗಳ ಮಾಹಿತಿ ಪಡೆದಿದ್ದ. ಇನ್ನು ಇಂಜೆಕ್ಷನ್ ಮಾಡಲು, ಪ್ರಿಸ್ಕ್ರಿಪ್ಶನ್ ಬರೆಯಲು ಸ್ಟೆತೋಸ್ಕೋಪಿನ ಸಹಾಯದಿಂದ ರೋಗಿಯನ್ನು ಪರೀಕ್ಷಿಸುವುದು ಮುಂತಾದ ತರಬೇತಿ ಡಾಕ್ಟರ ಮುಖಾಂತರ ಪಡೆದ. ಅಂತೂ ಇಂತೂ ಡಾಕ್ಟರ ಅಂತ ಅನ್ನಿಸಿಕೊಂಡ!
ಮುಂದೆ ಬರುಬರುತ್ತಾ ಪೇಟೆ ಡಾಕ್ಟರರಿಗೆ ವಯಸ್ಸಾದಂತೆಲ್ಲ ಇಂಜೆಕ್ಷನ ಕೊಡಲು ಸಾಧ್ಯವಾಗದೇ ಕೈ ನಡುಕ ಹೆಚ್ಚಿ ಎಲ್ಲಿ ಚುಚ್ಚಬೇಕೋ ಅದರ ಅಕ್ಕಪಕ್ಕದಲ್ಲೆಲ್ಲೊ ಚುಚ್ಚಿ ರಕ್ತಬರಿಸಿ ರೋಗಿಯ ಕೈ ಬಾಯಿಗೆ ಒಯ್ಯುವಂತಾಗುತ್ತಿತ್ತು. ಇದು ಪದೇ ಪದೇ ನಡೆದಾಗ ಹಳ್ಳಿಯ ಜನರೂ ಮಹಾ ಬೆರಕಿ ಜನ, ಆತನ ವಿಜಿಟ್ಟಿದ್ದಾಗ ತಪ್ಪಿಸತೊಡಗಿದರು. ಪಾಂಡುರಂಗನಿದ್ದಾಗ ಬಂದು ಹೋಗಿ ಮಾಡತೊಡಗಿದರು. ಪಾಂಡುರಂಗ ನಯ ನಾಜೂಕಿನ ಮನುಷ್ಯ. ಜನರ ನಾಡಿ ಅರಿತವ. ಮೆತ್ತಗೆ ಮಾತಾಡಿ ಮಕಮಲ್ಲ ನುಂಗುವಂಥವ. ಅವನ ಮಾತಿನ ಮೋಡಿಯಿಂದಾಗಿ ಅರ್ಧರೋಗ ವಾಸಿ ಆಗಿರಬೇಕು. ಹಾಗಿದ್ದ ಆತ. ಯಾರ್ಯಾರ ಹೊಲದಲ್ಲಿ ಏನೇನು ಬೆಳೆದಿರುವರೋ ಅದನ್ನು ಸೂಕ್ಷ್ಮವಾಗಿ ಅರಿತುಕೊಂಡು ಗಾಳ ಬೀಸುವವ. ಆತ ಪೇಷಂಟನೇ ತನ್ನ ಹತ್ತಿರ ಬರಬೇಕು ಅಂತೇನೂ ಹಮ್ಮಿನಿಂದ ಬೀಗದೇ ಅವರಿದ್ದಲ್ಲಿಗೇ ಹೋಗಿ ಅವರ ಹೊಲಗಳಲ್ಲಿ ಮನೆ ಇದ್ದರೆ ಅಲ್ಲಿಯೇ ಭೆಟ್ಟಿ ಕೊಟ್ಟು ಬರುತ್ತಿದ್ದ. ಅದರಿಂದಾಗಿ ಆತ ಫೀಗಿಂತ ಎರಡು ಪಟ್ಟು ಕಾಳು ಕಡಿ ಪಲ್ಯ ಹಾಲು ಪಡೆದು ಧನ್ಯನಾಗತೊಡಗಿದ. ಮೇಲಾಗಿ ದೈವಭಕ್ತ . ಅಮಾಯಕ ಹಳ್ಳಿಯ ಜನ ಈತನ ಭಕ್ತಿಗೆ ಮರುಳಾಗಿ ಈತನ ಮೇಲೆ ಇನ್ನೂ ವಿಶ್ವಾಸವಿಡತೊಡಗಿದರು.
ಒಂದಿನ ಸಾಬನ ಮೈ ಬೆಂಕಿಯಂತೆ ಸುಡುತ್ತಿತ್ತು. ಅವನ ಮಗ ಕಾಸಿಂ ಸೈಕಲ್ ಮೇಲೆ ಕೂರಿಸಿಕೊಂಡು ಡಾಕ್ಟರ್ ಮನೆಗೆ ಬಂದ. ಎದುರಿಗೆ ಪೇಟೆ ಡಾಕ್ಟರ್! ಅವರ ಇಂಜೆಕ್ಷನ್ ಪ್ರತೀತಿ ಊರಲ್ಲೆಲ್ಲ ಹಬ್ಬಿದ್ದರಿಂದ ಹೆದರಿದ ಸಾಬ ಸೈಕಲ ಬಿಟ್ಟೇ ಇಳಿಯಲಿಲ್ಲ. ಹಾಗೆ ಕಾಸೀಂ ಮನೆ ಕಡೆ ತಿರುಗಿಸಿದ. ‘ಯಾಕೋ ಸಾಬ, ಹಂಗೇ ಹೊಂಟೀ ಬಾ ಒಳಗೆ’ ಅಂತ ಡಾಕ್ಟರ ಪಾಂಡುರಂಗ ಕೂಗಿಕೊಂಡರೂ ಹಿಂತಿರುಗಿ ನೋಡಲೇ ಇಲ್ಲ. ಆ ದಿನ ಒಂದೂ ಪೇಷಂಟ ಇಲ್ಲದೇ ಡಾಕ್ಟರು ಬೇಗ ವಾಪಸ್ಸಾದರು. ಬಹಳ ಚಾಣಾಕ್ಷಮತಿಯಾದ ಡಾಕ್ಟರ ಪಾಂಡುರಂಗ ಪೇಟೆ ಡಾಕ್ಟರ ವಾಪಸ್ಸಾಗುತ್ತಿದ್ದಂತೇ ಸಾಬನ ಮನೆ ಕಡೆಗೆ ಧಾವಿಸಿದ. ನರಳುತ್ತಿದ್ದ ಸಾಬನಿಗೆ ‘ಯಾಕೋ ಸಾಬಾ, ಹಂಗ್ಯಾಕ ಓಡಿ ಬಂದೀ, ದೊಡ್ಡ ಡಾಕ್ಟರು ಬಂದಿದ್ದರು. ಅವರಿಗೆ ತೋರಿಸಬೇಕಿಲ್ಲೋ’ ಎಂದು ಅತ್ಯಂತ ಮೆಲುದನಿಯಿಂದಲೂ, ಅನುಕಂಪದಿಂದಲೂ ವಿಚಾರಿಸಿದ. ‘ಎಮ್ಮಿಗೇ ಇಂಜೆಕ್ಷನ್ ಚುಚ್ಚಿದ್ಹಾಂಗೆ ಚುಚ್ಚತಾರ್ರೀ. ಅವರ ಹಂತೇಕೇನ ತೋರಿಸೂದು……’ ಒಳಗೊಳಗೇ ಹಿಗ್ಗಿದ ಪಾಂಡು ಡಾಕ್ಟರ್. ‘ಇರಲಿ ಬಿಡು. ನಾ ಇದ್ದೇನಲಾ, ಅಪರಾತ್ರ್ಯಾಗಾದ್ರೂ ಕರಿ ಬರ್ತೀನಿ, ನಿನಗೇನಾಗೇದ ಪೈಲಾ ಹೇಳು’ ಎಂದು ಕೇಳಿದಾಗ ಪ್ರಫುಲ್ಲಿತನಾದ ಸಾಬ. ತನ್ನ ತೊಂದರೆಯನ್ನು ಒಂದೊಂದಾಗಿ ವಿವರಿಸಿದ. ‘ಕಣ್ಣ ಭಾಳ ಉರ್ಯಾಕತ್ತ್ಯಾವ್ರೀ, ಎರಡು ದಿನಾ ಆತು. ನಿದ್ದೀ ಇಲ್ಲಾ, ಮೈಕೈ ಎಲ್ಲಾ ಚೂಜಿ ಚುಚ್ಚಿದ್ಹಾಂಗ ಆಗಾಕತ್ತೈತಿ.’
“ನೀ ಏನೂ ಕಾಳಜೀ ಮಾಡಬೇಡ, ನಾ ಈಗ ನಿನಗ ಗುಳಿಗೆ ಕೊಡತೀನಿ, ಊಟಾ ಮಾಡಿ ಅದನ್ನು ತೊಗೊಂಡು ಮಲಗು, ಆರಾಮ ಆಗ್ತೀ” ಎಂದು ನಯವಾಗಿ ಹೇಳಿ ಎರಡು ನಿದ್ದೆ ಗುಳಿಗೆಗಳನ್ನು , ಕ್ರೋಸಿನ್ನನ್ನೂ, ಬ್ರುಫೆನ್ನನೂ ಕೊಟ್ಟ ಬಂದ. ಬರುವಾಗ ಆತನ ಹೊಲದಿಂದ ಬಂದ ಸೋರೆಕಾಯಿ ಪುಟ್ಟೀಕಾಯಿಗಳನ್ನು ಚೀಲತುಂಬಿ ತರುವುದನ್ನು ಮರೆಯಲಿಲ್ಲ!
ಎರಡು ದಿನ ಸಾಕಷ್ಟು ನಿದ್ದೆ ಮಾಡಿ ಎದ್ದ ಸಾಬ ಉಲ್ಲಸಿತನಾಗಿದ್ದ. ‘ಡಾಕ್ಟರ ಕೈಗುಣ ಭಾಳ ಪಾಡ ಐತಿ, ಎರಡ ದಿನಕ್ಕ ಆರಾಮಾತು ನೋಡ’ ಅಂತ ಪಂಚಾಯ್ತಿ ಕಟ್ಟೀಮ್ಯಾಲ ಕುತ್ತ ಹೇಳಿದ್ರ ಇವನ ಪ್ರಚಾರ ಊರ ತುಂಬೆಲ್ಲ ತಾನೇ ತಾನಾಗಿ ಹೋಯಿತು. ಮಂದೀ ಜಾಸ್ತಿ ಬರತೊಡಗಿದರು. ಆ ಊರಿನ ಸುತ್ತಮುತ್ತಲ ಮಂದೀನೂ ಇಲ್ಲೇ ಬರತೊಡಗಿದರು.
ಮತ್ತೊಂದು ದಿನ ಮೂರು ಸಂಜೆಯ ಹೊತ್ತಿನಲ್ಲಿ ಇನ್ನೂ ಸೂರ್ಯ ಕಂತಿರಲಿಲ್ಲ. ಮುಗಿಲೆಲ್ಲ ಕೆಂಪಗೆ ಬಣ್ಣ ಗೊಜ್ಜಿದಂತೆ ಹರಡಿತ್ತು. ಸಂಧ್ಯಾವಂದನೆಗೆ ಕುಳಿತಿದ್ದ ಪಾಂಡು ಡಾಕ್ಟರ, ಮಾಧವಾಯ ಸ್ವಾಹಾ,. ನಾರಾಯಣಾಯ ಸ್ಟಾಹಾ….. ಎನ್ನುತ್ತಿದ್ದಂತೆ ಕರ್ಕಶ ಧ್ವನಿಯೊಂದು ಅಲೆಅಲೆಯಾಗಿ ಕಿವಿಗೆ ಅಪ್ಪಳಿಸಿತು. ಪಕ್ಕದಲ್ಲೆ ಕೆರೆ ಇದ್ದಿದ್ದರಿಂದ ಅಲ್ಲೆ ಯಾರಾದರೂ ಬಿದ್ದರೋ ಏನೋ ಎನ್ನುವ ಧಾವಂತದಿಂದ ಹಾಗೇ ಪಂಚೆಯ ಮೇಲೆ ಹೊರಗೋಡಿ ಬಂದ. ನಾಲ್ಕು ಜನರು ಒಬ್ಬ ಮೂವತ್ತಾರ ಆಸುಪಾಸಿನ ಧಡಿಯನನ್ನು ಹೊತ್ತುಕೊಂಡು ಇವರ ಕಡೆಗೇ ಬರುವುದು ಕಾಣಿಸಿತು. ಕಾಲಿಗೆ ಟವೆಲ ಸುತ್ತಿದ್ದರೂ ಧಾರಾಕಾರವಾಗಿ ರಕ್ತ ಸೋರುತ್ತಿತ್ತು. ಇದು ತನ್ನದೇ ಪೇಷಂಟ ಎಂದು ಹಿಗ್ಗುವುದರ ಬದಲಿ ಡಾಕ್ಟರ್ ಪಾಂಡುರಂಗನಿಗೆ ದಿಗಿಲು ಮೂಡಿತು. ಎಂಥಾ ಖತರನಾಕ ಪೇಷಂಟನನ್ನು ನನ್ನ ಕಡೆ ಕಳಿಸಿದ್ದಿಯಪ್ಪಾ ದೇವರೆ ಅಂತ ಮನಸ್ಸಿನಲ್ಲಿಯೇ ಅಲವತ್ತು ಕೊಂಡ. ಆ ಪೇಷಂಟನ ಕೈ ಬಾಯಿಗೆ ಅವ್ಯಾಹತವಾಗಿ ಬಡಿದುಕೊಳ್ಳುತ್ತಿತ್ತು. ಒಮ್ಮೊಮ್ಮೆ ಕರ್ಕಶವಾಗಿ ಕೂಗುವುದು ಅಳುವುದು ನಡೆದೇ ಇತ್ತು. ‘ಏನಾತೋ ಹೀಂಗ್ಯಾಕ ಒಂದಸಮನ ಹೊಯ್ಕೊಳ್ಳಾಕತ್ತೀ’ ಎಂದು ದಿಗಿಲುಕೊಂಡ ಡಾಕ್ಟರ ಪಾಂಡು ಕೇಳಿದಾಗ ಅವನನ್ನು ಹೊತ್ತುಕೊಂಡು ಬಂದ ಜನ ಆತನನ್ನು ಇಳಿಸಿ, ಏದುಸಿರು ಬಿಡುತ್ತಾ, ‘ಹೊಲದಾಗಿನ ಗಿಡಾ ಕಡ್ಯಾಕ ಹೋಗಿ ಕಾಲಿಗೆ ಕೊಡಲಿ ಏಟು ಬಿದ್ದೈತ್ತಿ, ಏನರೇ ಛೋಲೋ ಔಷಧಿ ಮಾಡ್ರೀ’ ಎಂದಾಗ ಡಾಕ್ಟರರಿಗೆ ಜೀವ ಅಂತ ಇದ್ದದ್ದು ನೆತ್ತೀಮ್ಯಾಲೇ ಬಂದಂಗಾತು. ಕೊಡಲೀ ಪೆಟ್ಟ ಅಂದರೆ ಸಾಮಾನ್ಯನ, ಟಿಟ್ಯಾನಸ್ ಇಂಜೆಕ್ಷನ್ ಕೊಡಬೇಕು. ಭಾಳ ಪೆಟ್ಟ ಬಿದ್ದಾಂಗದ, ಹೊಲಿಗೆ ಹಾಕಬೇಕು. ಹೆಚ್ಚು ಕಡಿಮೆ ಆದರ ಏನು ತೋಚಿತೋ ಧಿಡಂಗನೆ ಎದ್ದು ಎದುರಿಗಿನ ಹನುಮಪ್ಪನ ಮಂದಿರಕ್ಕೆ ಬಂದ, ಗರ್ಭಗುಡಿ ಹೊಕ್ಕ ಡಾಕ್ಟರರಿಗೆ ದೇವರ ಮೇಲಿನ ಭಕ್ತಿ ಇಮ್ಮಡಿ ಸ್ಫುರಿಸಿ ಕಣ್ಣಿನಿಂದ ಧಾರಾಕಾರವಾಗಿ ನೀರು ಎರಡೂ ಕಪೋಲದ ಮೇಲೆ ಹರಿಯತೊಡಗಿದವು. ಇವತ್ತು ತನ್ನ ಸತ್ವ ಪರೀಕ್ಷೆ, ಇದು ತನ್ನ ಅಳಿವು ಉಳಿವಿನ ಪ್ರಶ್ನೆಯಾಗಿ ಮನದಾಳದಿಂದ ದುಃಖ ಉಕ್ಕಿ ಉಕ್ಕಿ ಬರುತ್ತಿತ್ತು. ‘ಏನರೇ ಹಾದಿ ತೋರಿಸಪ್ಪ ಹನುಮಪ್ಪ’ ಎಂದು ದೀನನಾಗಿ ಇಲ್ಲಿ ಬೇಡುತ್ತಿದ್ದರೆ ಅಲ್ಲಿ ಮನೆಯಲ್ಲಿ ಕುಳಿತ ಪೇಷಂಟ ಎರಡೂ ಕೈಯಿಂದ ಜೋರಾಗಿ ಹೊಯ್ಯಕೊಳ್ಳುತ್ತಾ, ‘ಎಂಥಾ ಡಾಕ್ಟರೋ ಸೂ…. ಮಗ ನಾ….. ನಾ ಇಲ್ಲೆ ಸಾಯಾಕತ್ತೀನಿ, ಅಲ್ಲೆ ದೇವರ ಮುಂದ ಭಜನೀ ಮಾಡಾಕತ್ತೀಯಲ್ಲೋ…..’ ಎಂದು ಬೊಬ್ಬೆ ಇಡತೊಡಗಿದ.
ಪಾಂಡುರಂಗ ಮೊದಲಿನಿಂದಲೂ ದೈವಭಕ್ತ, ಸಾಯಿಬಾಬಾನ ಹವಾ ಚಾಲೂ ಇದ್ದಾಗ ಆತ ಸಾಯಿಬಾಬಾನ ಪರಮಭಕ್ತ. ಸಾಲಾ ಮಾಡಿ ಆದರೂ ಫುಟಪರ್ತಿಗೆ ಹೋಗಿ ಅವರ ದರ್ಶನ ತೆಗೆದುಕೊಂಡು ಬರುವವ. ಅವರ ಒಂದು ಫೋಟೋ ಗೋಡೆಗೆ ನೇತುಬಿಟ್ಟು ಅದರಿಂದ ಬೆಳಿಗ್ಗೆ ಎದ್ದಾಕ್ಷಣವೇ ಉದುರುವ ವಿಭೂತಿಯನ್ನು ಸಾಕ್ಷಾತ್ ಸಾಯಿಬಾಬಾನೇ ತಂದುಕೊಟ್ಟಿದ್ದಾನೆ ಎಂಬ ಭಯಭಕ್ತಿಯಿಂದ ಮನೆಮಂದಿಗೆಲ್ಲ ಹಚ್ಚುತ್ತಿದ್ದ. ಆನಂತರ ಬಂದ ಪೇಷಂಟಗಳಿಗೂ ಹಚ್ಚಿ ಅವರನ್ನೂ ಪಾವನಗೊಳಿಸುತ್ತಿದ್ದ!
ನಡುವೆ ಒಮ್ಮಿಂದೊಮ್ಮೆಲೇ ರಾಘವೇಂದ್ರ ಸ್ವಾಮಿಗಳ ಆವಾಹನೆ, ಮಾತು ಮಾತಿಗೂ ರಾಘವೇಂದ್ರ ರಾಘವೇಂದ್ರ ಎಂಬ ಉಚ್ಛಾರ. ರಾಯರ ಫೋಟೋ ಗೋಡೆಗೆ ನೇತಾಕಿ ಅದರ ಪೂಜೆ ನಿರಂತರವಾಗಿ ಮಾಡುತ್ತಿದ್ದ. ಭಕ್ತ ಕುಂಬಾರ ಸಿನೇಮಾ ಬಿಡುಗಡೆಯಾದಾಗ ಸಾಕ್ಷಾತ್ ವಿಠೋಬಾನ ಭಕ್ತನಾಗಿ ಪರಿಣಮಿಸುತ್ತಿದ್ದ. ತಾನೇ ಸ್ವತಃ ಭಕ್ತ ಕುಂಬಾರನಂತೆ ವರ್ತಿಸುತ್ತಿದ್ದ. ಹನುಮಪ್ಪನ ಗುಡಿ ಅಂತೂ ಎದುರಿಗೇ, ಹೀಂಗಾಗಿ ಯಾವಾಗರೆ ಡೇಂಜರ ಪೇಷಂಟ್ ಬಂದರೆ ಅವನ ನೆನಪು ಉಕ್ಕಿ ಉಕ್ಕಿ ಬರುವುದು. ತನ್ನ ಹಂತೇಕ ರೊಕ್ಕ ಹೆಚ್ಚ ಇದ್ದಾಗ ವೆಂಕಪ್ಪ ನೆನಪಾಗುತ್ತಿದ್ದ. ಆತನಿಗೆ ಮುಡಿಪು ಹಾಕಿ ತನ್ನ ಕೆಲಸ ಮಾಡಿಸಿಕೊಳ್ಳುವುದರಲ್ಲಿ ನಿಸ್ಸೀಮ. ಹೀಗೆ ಅವನ ದೈವಭಕ್ತಿಯ ಆವಾಂತರಗಳು ಚಾಲ್ತಿಯಲ್ಲಿದ್ದವು. ಆಗ ತಾನೇ ಬಿಡುಗಡೆಯಾದ ಜೈ ಸಂತೋಷಿ ಮಾ ಸಿನೇಮಾ ನೋಡಿ ಬಂದ ಮೇಲಂತೂ ಹೆಂಡತಿಯಿಂದ ಪ್ರತಿ ಶುಕ್ರವಾರ ಉಪವಾಸ ಇರಿಸಿ ಲಕ್ಷ್ಮೀ ಪೂಜೆ ಮೂರು ಸಂಜೆಯ ವೇಳೆ ಮಾಡಿಸಿ ಪುಠಾಣಿ ಸಕ್ಕರೆ ಹಂಚುತ್ತಿದ್ದ. ಸಿನೇಮಾ ಮಂದಿ ರೊಕ್ಕಾ ಗಳಿಸಲಿಕ್ಕೆ ಇಂಥ ಸಿನೇಮಾಗಳನ್ನು ಮಾಡಿದರೆ ಈತ ತನ್ನ ದುಡ್ಡು ಸಮಯಗಳನ್ನು ಕಳೆದುಕೊಳ್ಳುತ್ತಿದ್ದ.
ಇಂದು ಮಾತ್ರ ಆತ ನಿಜವಾಗಿಯೂ ದಿಗಿಲುಗೊಂಡಿದ್ದ. ಯಾವುದಾದರೂ ಪೇನ ಕಿಲ್ಲರ ಕೊಟ್ಟು ಕಳಿಸುವ ಹಾಗೂ ಇಲ್ಲ. ಏಟು ಜೋರಾಗಿಯೇ ಬಿದ್ದಿದೆ. ರಕ್ತ ಹರಿದ್ಹರಿದು ಬರುತ್ತಿದೆ…. ಹೊಲಿಗೆ ಹಾಕಬೇಕು ಎನ್ನುವುದೆಲ್ಲ ವಿಚಾರ ಮಾಡುತ್ತಿದ್ದಂತೆ ತಲೆ ಧಿಮ್ಮ ಎನ್ನತೊಡಗಿತು. ಏನದದ್ದಾಗಲೀ ದೇವರು ನನ್ನ ಕೈ ಬಿಡುವುದಿಲ್ಲವೆಂಬ ವಿಶ್ವಾಸದಿಂದ ದೇವರ ಅಂಗಾರವನ್ನೂ, ತೀರ್ಥವನ್ನೂ ತೆಗೆದುಕೊಂಡು ಮನೆಗೆ ಬಂದ. ಪೇಷಂಟನ ಕೂಗಾಟ ತೀವ್ರವಾಗಿತ್ತು. ಬಂದವನೇ ಆತನ ಹಣೆಗೆ ಅಂಗಾರವನ್ನು ಹಚ್ಚಿ ಬಾಯಲ್ಲಿ ತೀರ್ಥಬಿಟ್ಟು ಒಂದು ಪೇನ ಕಿಲ್ಲರ ಕೊಟ್ಟ. ಒಳಗಿನಿಂದ ಡೆಟಾಲ್ ಬಾಟಲಿಯನ್ನಿಡಿದು ತಂದ, ದೊಡ್ಡ ಹತ್ತಿಯ ಉಂಡೆಯೊಂದನ್ನು ತಂದು ಗಾಯವನ್ನು ಚೆನ್ನಾಗಿ ತೊಳೆದ, (ಅಷ್ಟೆಲ್ಲ ಪ್ರಿಲಿಮನರಿ ಉಪಚಾರ ಅರಿತುಕೊಂಡವನಾಗಿದ್ದ ಆತ!) ಆ ಪೇಷಂಟಿಗೆ ನಿಜವಾಗಿಯೂ ದೇವರೆ ಗತಿ ಎಂಬಂತಾಗಿತ್ತು. ಆತನ ಕೈ ಬಾಯಿಗೆ ಒಂದೇ ಸಮನೇ ಬಡಿದುಕೊಳ್ಳುತ್ತಿತ್ತು. ಹಾಗೂ ಗಂಟಲು ಮೀರಿ ಧ್ವನಿ ತಾರಕಕ್ಕೇರಿತ್ತು. ಆ ಕಡೆಯಲ್ಲಿ ಲಕ್ಷ್ಯಹರಿಸದೇ ಗಾಯದ ಮೇಲೆ ಔಷಧಿ ಸಿಂಪಡಿಸಿದ ಪಾಂಡು ಡಾಕ್ಟರ, ಒಂದು ಸೂಜಿಯಲ್ಲಿ ದಾರವನ್ನು ಪೋಣಿಸಿ, ಎರಡೂ ಕಡೆಯ ಹರಿದಂಥ ತೊಗಲನ್ನು ಸೇರಿಸಿ ಹೊಲಿಯತೊಡಗಿದ. ಪೇಷಂಟಿನ ಬಾಯಿಂದ ಅವ್ಯಾಹತವಾಗಿ ಅವಾಚ್ಯ ಶಬ್ದಗಳು ಉದರು ತೊಡಗಿದ್ದವು. ಇಬ್ಬರು ಪೇಷಂಟಿನ ಕಾಲನ್ನೂ ಇಬ್ಬರು ಆತನ ಕೈಯ್ಯನ್ನೂ ಗಟ್ಟಿಯಾಗಿ ಅದುಮಿ ಹಿಡಿದಿಟ್ಟುಕೊಂಡಿದ್ದರು. ಪಾಂಡು ಡಾಕ್ಟರ ಹೊಲಿಗೆ ಹಾಕುವುದರಲ್ಲಿ ಮಗ್ನನಾಗಿದ್ದ. ಇದು ಆತನ ಈ ಥರದ ಮೊದಲ ಪೇಷಂಟ ಆಗಿದ್ದರಿಂದ ಇವನ ಸತ್ವ ಪರೀಕ್ಷೆ ಇದಾಗಿತ್ತು. ಮನದಲ್ಲಿ ಎಲ್ಲ ದೇವರುಗಳೂ ಹಾಯ್ದು ಹೋಗುತ್ತಿದ್ದರು. ವೆಂಕಪ್ಪನನ್ನು ಮೊದಲ್ಗೊಂಡು. ಕೊನೆಗೂ ಹೊಲಿಗೆ ಹಾಕುವುದನ್ನು ಮುಗಿಸಿ ಗಾಯಕ್ಕೆ ಬ್ಯಾಂಡೇಜ ಮಾಡಿದ. ಎಲ್ಲ ಕಡೆಗೂ ಹುಡುಕಾಡಿ ಟಿಟ್ಯಾನಸ್ ಇಂಜೇಕ್ಷನ್ನ ಕೊಟ್ಟ. ಗೆದ್ದೆನೆನ್ನುವ ಹುಮ್ಮಸ್ಸು ಡಾ. ಪಾಂಡುನ ಮುಖದಲ್ಲಿ ರಾರಾಜಿಸುತ್ತಿದ್ದರೆ ಪಾರಾದೆನೆಂಬ ಹುರುಪು ಪೇಷಂಟನ ಮುಖದಲ್ಲಿ ತೇಲಾಡುತ್ತಿತ್ತು! ಮತ್ತೆ ಒಳಗೆದ್ದು ಹೋದ ಪಾಂಡು ಸಾಕಷ್ಟು ಸಾಯಿಬಾಬಾನ ವಿಭೂತಿ ತಂದು ಮೈ ಮುಖ ಕಾಲಿಗೆಲ್ಲ ಮೆತ್ತಿ ಹಲವಾರು ಗುಳಿಗೆಗಳನ್ನು ಕೊಟ್ಟು ಕಳಿಸಿದ! ಆತನ ಪುಣ್ಯ ಸಾಕಷ್ಟಿತ್ತೋ ಅಥವಾ ಡಾಕ್ಟರ್ ನ ದೇವರುಗಳು ಉಳಿಸಿದರೋ ಅಂತೂ ಆ ಪೇಷಂಟು ಉಳಕೊಂಬಿಟ್ಟ! ಮುಂದೆ ಪಾಂಡುನ ದೈವ ತೆರೆಯಿತು. ಮನೆ ಮುಂದೆ ಪೇಷಂಟಗಳ ಸಾಲು ಹೆಚ್ಚಿ ಮನೆಯಲ್ಲಿ ಧನಲಕ್ಷ್ಮೀ, ಧಾನ್ಯ ಲಕ್ಷ್ಮೀ ಓಡಾಡತೊಡಗಿದರು.
ಮತ್ತೊಮ್ಮೆ ಊರ ದೇಸಾಯರ ಸೊಸೆ ಲಕ್ಕವ್ವ ಮೈಮೇಲೆ ದೆವ್ವ ಬಂದಂತೆ ಚೀರಾಡುತ್ತಿದ್ದಳು. ಏನು ಮಾಡಿದರೂ ಮೈಮೇಲಿನ ದೆವ್ವ ಹೋಗದಂತಾಗಿತ್ತು. ಮನ್ಯಾಗಿನ ಎಲ್ಲಮ್ಮನ ಭಂಡಾರ ಹಚ್ಚಿದರು, ಯಾರು ಉರಿಯುವ ಕಟಿಗೆ ತೋರಿಸಿದರು. ಮೆಟ್ಟಿದ ಚಪ್ಪಲಿ ತೋರಿಸಿದರು, ನೀರು ಉಗ್ಗಿದರೂ ಕೂಡ ದೆವ್ವ ಹೋಗದಂತಾಗಿತ್ತು. ಊಟ ನಿದ್ದೆ ಇಲ್ಲದೇ ಲಕ್ಕವ್ವ ನಿತ್ರಾಣ ಆಗಿದ್ದಳು. ಹಾಗೇ ಗೋಡೆಗೆ ಒರಗಿದಾಗ ಆಕೆಯ ಗಂಡ ತರಾತುರಿಯಿಂದ ಡಾ.ಪಾಂಡುನನ್ನು ಕರೆಯಲು ಬಂದ. ಊಟಕ್ಕೆ ಕುಳಿತ ಪಾಂಡು ಲಗುಬಗೆಯಿಂದ ಊಟ ಮುಗಿಸಿ ದೇಸಾಯಿಯವರ ಮನೆ ಕಡೆ ಬಂದ. ನಡುಮನೆಯಲ್ಲೇ ಒರಗಿದ ಲಕ್ಕವ್ವ ಅಕರಾಳ ವಿಕರಾಳವಾಗಿದ್ದಳು. ತಲೆಗೂದಲಿನ ಜಡೆ ಬಿಚ್ಚಿಕೊಂಡು ಒಪ್ಪರವಾರಣವಿಲ್ಲದ ಸೀರೆ ಉಟ್ಟು ತದೇಕ ಚಿತ್ತವಾಗಿ ಗೋಡೆ ಕಡೆಗೆ ಇಂಗಿ ಹೋದ ಕಣ್ಣುಗಳನ್ನು ನೆಟ್ಟು ನೋಡುತ್ತಿದ್ದಳು. ಮನೆಯಲ್ಲಿ ಅಲ್ಲಲ್ಲಿ ಚೆಲ್ಲಾಚೆದುರಾದ ಸಾಮಾನುಗಳು ವಿಷಯದ ಗಂಭೀರತೆಯನ್ನು ಅರುಹುತ್ತಿದ್ದವು. ಸೂಕ್ಷ್ಮವಾಗಿ ಅವಲೋಕಿಸಿದ ಡಾಕ್ಟರ ಪಾಂಡು ಆಕೆಯೆಡೆಗೆ ನಡೆದು ‘ಯಾಕವ್ವಾ ಲಕ್ಕವ್ವ ಎಲ್ಲಾ ಪಾಡೈತೀ?’ ಎನ್ನುವುದೇ ತಡ ಧೀಡಂಗನೇ ಎದ್ದು ಕೂತು ‘ರಂಡೆಗಂಡ, ಪಾಡೇತಿ ಅಂತ ಕೇಳ್ತೀ, ಕಾಣಾಂಗಿಲ್ಲ ನಮ್ಮವ್ವನ ಹಂತೆಕ ಹೋಗಾಕ್ಕಿದೀನಿ. ಅಕೀ ಕರಕತ್ತಾಳು’ ಮತ್ತೆ ಮಣಮಣವೆಂದು ಬಡಿಬಡಿಸುತ್ತಾ ಅತ್ತ ಕಡೆ ವಾಲಿದಳು ಈಗ ಡಾ. ಪಾಂಡು ಆಕೆಯ ಪತಿ ಕಡೆಗೆ ತಿರುಗಿ, ‘ಶಿವಪ್ಪ ಈಕಿ ಹೀಂಗ ಯಾವಾಗಿಂದ ಅನ್ನಾಕತ್ತಾಳು?’’
‘ಇವತ್ತ ಮುಂಜಾನೆ ಎದ್ದಾಗಿಂದರೀ ಡಾಕ್ಟರ’
‘ನಿನ್ನೆ ಏನರೇ ತಕರಾರ ಆಗೈತೇನು ನಿನ್ನ ಜೋಡಿ?’
‘ಹಂಗೇನೂ ಇಲ್ರೀ’
ದೆವ್ವನ ಬಂದದ ಅಂತ ನಿಮಗ್ಹ್ಯಾಂಗ ತಿಳೀತು?
ನೀರ ಕಾಸೂ ಒಲೀಮುಂದ ಮುಂಜಾನೆ ಕುತ್ತಿದ್ದಳ್ರೀ, ಒಮ್ಮೆಲೇ ಕಿಟಾರನೆ ಕಿರುಚಿ, ಕಣ್ಣ ಬೆಳ್ಳಗೆ ಮಾಡಿ ಒದರಾಕತ್ತಿದ್ಲು.
‘ಏನಂತ?’
“ನನ್ನವ್ವ ಬಾ ಅನಾಕತ್ತಾಳು, ನಾ ಹೋಗಾಕೀನ ಅಂತಾಳ. ಅದರ ಅವಳವ್ವ ಸತ್ತು ಹತ್ತು ವರ್ಷಾತು ಹೀಂಗಾಗಿ ಏನೂ ತಿಳೀವಾಲ್ತು” ಎಂದ ಆಕೆಯ ಪತಿ ಶಿವಪ್ಪ.
‘ತಿಳಿದ್ಹಾಂಗ ಆತ ಬಿಡು, ನೀನು ಆಕೀನ್ನ ತೌರುಮನೀಗೆ ಕಳಿಸೇ ಇಲ್ಲೇನು’
‘ಹೌದ್ರೀ ಅಕೀ ಅವ್ವನ ಇಲ್ಲಂದ್ರ ಅಲ್ಲಿ ಹೋಗಿ ಏನ ಮಾಡಾಕೀ.’
‘ಒಂದ ಕೆಲ್ಸಾ ಮಾಡು, ಆಕೀನ್ನ ನೀನ ಇವತ್ತ ಕರಕೊಂಡು ತೌರುಮನಿಗೆ ಹೊಗಿ ಬಾ. ಎರಡು ದಿನಾ ಇದ್ದೂ ಬಾ. ಎಲ್ಲಾ ಆರಾಮ ಆಕೈತಿ’ ಎಂದ ಪಾಂಡು ಈಗ ಪರಿಣಿತ ವೈದ್ಯನಾಗಿ ರೂಪುಗೊಂಡಿದ್ದ. ಕೆಲವು ನಿದ್ದೆ ಮಾತ್ರೆಗಳನ್ನು ಕೊಡಲು ಮರೆಯಲಿಲ್ಲ. ಅದರಿಂದ ಆಕೆಯ ಆಯಾಸ ಪರಿಹಾರವಾಗುವುದು ಎನ್ನುವುದು ಈತನ ನಿಲುವು.
ಅಂತೂ ಅವಳು ಎಚ್ಚರಾದ ಮೇಲೆ ಶಿವಪ್ಪ ಅತ್ಯಂತ ಪ್ರೀತಿಯಿಂದ ಅವಳೊಂದಿಗೆ ಆಕೆಯ ತೌರುಮನೆಗೆ ಹೋಗುವ ವಿಚಾರ ಮಾತನಾಡಿದಾಗ ಅವಳ ಮೈಯ್ಯಲ್ಲಿಯ ದೆವ್ವ ಮಂಗ ಮಾಯ!
ಅಂತೂ ಇಂತೂ ಡಾ. ಪಾಂಡುನ ಕೈಗುಣ, ಬಾಯ್ಗುಣ ಎಲ್ಲಾ ಸೇರಿ ಪೇಷಂಟಗಳ ವಿಶ್ವಾಸ ಗಳಿಸಿ ಸುತ್ತಲಿನ ಊರುಗಳಲ್ಲಿಯೂ ತನ್ನ ಪ್ರತೀತಿ ಬೆಳೆಸಿಕೊಂಡ.
ಮೊನ್ನೆ ಪೇಟೆಯಲ್ಲಿ ಭೆಟ್ಟಿಯಾದಾಗ ಆತನ ಗುರ್ತು ಸಿಗದಷ್ಟು ಬದಲಾಗಿದ್ದ. ತೆಳ್ಳಗೆ ಬಡಿಗೆಯಂತಿದ್ದವ ನಂಬರ ಎಂಟಾಗಿದ್ದ. ಕಣ್ಣಿಗೆ ಕನ್ನಡಕವೇರಿಸಿ ಮೂಗಿನ ಮೇಲೆ ಜಾರಿಸಿ ನನ್ನೆಡೆಗೇ ಬಿಟ್ಟು ಕಣ್ಣು ಬಿಡದಂತೆ ನೋಡತೊಡಗಿದ. ‘ಯಾಕೋ ಪಾಂಡು, ಗುರ್ತು ಸಿಗಲಿಲ್ಲೇನು?” ಎಂದೆ. ‘ಹೂಂನವಾ ನನಗ ನಿಂದು ಗುರ್ತು ಸಿಗಲ್ದಾಂಗ ಆಗೀವಾ’ ಎಂದ. ನಾನು ಕೂಡ ಆತನಿಗೆ ‘ನಿಂದೇನು ಮತ್ತ ಗುರ್ತ ಸಿಗುವಾಂಗ ಇದ್ದಿಯೇನು? ನಾ ಅಂತ ನಿನ್ನ ಗುರ್ತಾ ಹಿಡದೇನಿ ಮತ್ತ’ ಎಂದೆ. ಇಬ್ಬರೂ ಖುಲಾಸಾಗಿ ನಗುತ್ತಾ ದೋಸೆ ಡೆನ್ನಿಗೆ ಹೊಕ್ಕಿವೆನ್ನಿ.

 

Leave a Reply