ವೈದ್ಯೋ ನಾರಾಯಣೋ ಹರಿಃ

ವೈದ್ಯೋ ನಾರಾಯಣೋ ಹರಿಃ
ಎಲ್ಲಾ ರೋಗಗಳಿಗೂ ಮೂಲ ನಮ್ಮ ನಕಾರಾತ್ಮಕ ಭಾವನೆ ಎಂಬುದನ್ನು ವಿಜ್ಞಾನಿಗಳು ಸಿದ್ಧಪಡಿಸಿದ್ದಾರೆ. ಮನಸ್ಸಿನಲ್ಲಿಯೇ ನಾವು ನಕಾರಾತ್ಮಕವಾದಾಗ ಮೊದಲು ನಮ್ಮ ಮನಸ್ಸನ್ನು ಹಾಳುಗೆಡವಿಕೊಳ್ಳುತ್ತೇವೆ. ಅದರಿಂದ ವ್ಯಾಧಿಗಳು ಉತ್ಪನ್ನವಾಗಲು ಶುರುವಾಗುತ್ತದೆ. ಆರೋಗ್ಯವೊಂದು ಇಲ್ಲದಿದ್ದಲ್ಲಿ ಯಾವ ಸುಖಕ್ಕೂ ಅರ್ಥವಿಲ್ಲವಾಗುತ್ತದೆ ಎಂದರೆ ಆರೋಗ್ಯವೇ ಭಾಗ್ಯ. ಈ ಸುಖವನ್ನು ಕೆಡಿಸಲು ದೇಹ ಮನಸ್ಸಿಗಾಗುವ ಒಂದು ಪುಟ್ಟ ನೋವೂ ಸಾಕು. ಅದು ಕೂಡಲೇ ಮಾಯವಾಗುವಂತಿದ್ದರೆ, ಮತ್ತೆ ಸುಖದ ತೆರೆ ಮೇಲೆದ್ದೀತು. ಆದರೆ ಅನಾರೋಗ್ಯ ಮುಂದುವರೆದಾಗ ಅದೊಂದು ನರಕವೇ ಆಗಿ ಬಿಡುತ್ತದೆ.
‘ವೈದ್ಯೋ ನಾರಾಯಣೋ ಹರಿಃ’ ಎಂಬ ಉಕ್ತಿಯಂತೆ ವೈದ್ಯನಾದವನು ದೇವರಿಗೆ ಸಮಾನವಾದವನು. ಆತನು ರೋಗಿಯ ರೋಗವನ್ನು ಪರಿಹರಿಸುವಾತ. ಮುಚ್ಚುಮರೆ ಮಾಡದೇ ರೋಗಿಯು ತನ್ನ ಅಂತರಂಗವನ್ನು ಬಿಚ್ಚಿಡುವುದು ಕೇವಲ ವೈದ್ಯನ ಮುಂದೊಂದೇ. ಹೀಗಾಗಿ ಆತನು ಕೇವಲ ರೋಗ ಪರಿಹಾರಕನಾಗಿರದೇ ರೋಗಿಯ ಸಹಚಿಂತಕನೂ ಆಗಿರುತ್ತಾನೆಂದು ಹೇಳಬಹುದು.
ರಾಶಿ ಎಂಬ ಖ್ಯಾತಿಯ ಕನ್ನಡದ ಸಾರಸ್ವತ ಲೋಕದ ಹಾಸ್ಯ ಪಿತಾಮಹರಾದ ಡಾ.ಶಿವರಾಂ ಅವರ ಅಭಿಪ್ರಾಯದಲ್ಲಿ “ನಮ್ಮಲ್ಲಿ ಚಿಕಿತ್ಸೆಗೆ ಬರುವವರಲ್ಲಿ ಮಾನಸಿಕ ಅಸ್ವಾಸ್ಥ್ಯದಿಂದ ಬಳಲುವವರೇ ಹೆಚ್ಚು. ಆದ್ದರಿಂದ ರೋಗಿಯ ಕಾಯಿಲೆಯನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಅವರ ಮನಸ್ಸನ್ನು ಅರ್ಥಮಾಡಿಕೊಳ್ಳಬೇಕಾದದ್ದು ಅವಶ್ಯಕ. ಮನಸ್ಸು ಆರೋಗ್ಯವಾಗಿದ್ದರೆ ದೇಹವೂ ಆರೋಗ್ಯವಾಗಿರುತ್ತದೆ.”
ಈಗಿನ ರೋಗಿಗಳನ್ನು ಅವಲೋಕಿಸಿದಾಗ ಎಂಬತ್ತು ಪರಸೆಂಟಿನಷ್ಟು ರೋಗಿಗಳು ಮಾನಸಿಕ ಪರಿಣಾಮದಿಂದ ಉದ್ಭವಿಸಿರುತ್ತಾರೆ. ಹಾಗೂ ಕೇವಲ ಇಪ್ಪತ್ತು ಪರಸೆಂಟ್ ರೋಗಿಗಳು ಕೇವಲ ದೈಹಿಕ ಪರಿಣಾಮದಿಂದ. ಹೀಗಾಗಿ ಈಗಿನ ರೋಗಿಗಳಿಗೆ ಕೇವಲ ಪ್ರಿಸ್ಕ್ರಿಪ್ಶನ್ ದಿಂದ ಮಾತ್ರ ಗುಣಪಡಿಸಲು ಸಾಧ್ಯವಿಲ್ಲವೆಂದೇ ಹೇಳಬಹುದು. ಅವರಿಗೆ ಮಾನಸಿಕವಾಗಿ ಸ್ಥೈರ್ಯ ತುಂಬಿ ಅವರಲ್ಲಿ ಜೀವನೋತ್ಸಾಹವನ್ನು ತುಂಬುವವನೇ ನಿಜವಾದ ವೈದ್ಯ ಎಂದು ಹೇಳಬಹುದು.
ಈಗಿನ ವೈದ್ಯರು ದುಡ್ಡಿಗೋಸ್ಕರ ಇಲ್ಲದ ರೋಗಗಳಿಗೂ ತಪಾಸಣೆಯನ್ನು ಹೇಳುತ್ತಾರೆ. ಆತನು ಕಲಿಯಲು ದುಡ್ಡು ಸುರಿದಿರುತ್ತಾನೇನೋ ನಿಜ. ಆದರೆ ಅದನ್ನು ತುಂಬಲು ರೋಗಿಗಳನ್ನು ಇನ್ನೂ ರೋಗಸ್ಥರನ್ನಾಗಿಸುತ್ತಾನೆ. ಮಾನಸಿಕವಾಗಿ ಅಧೀರನಾದ ರೋಗಿ ಇನ್ನೂ ಕೂಪಕ್ಕೆ ತಳ್ಳಲ್ಪಡುತ್ತಾನೆ. ಹೀಗೇ ಮುಂದುವರೆದರೆ ರೋಗ ಹರನಾದ ವೈದ್ಯನು ರೋಗಕರ್ತನಾಗುವದರಲ್ಲಿ ಸಂದೇಹವೇ ಇಲ್ಲ.
ಹಿಂದಿನ ಕಾಲದಲ್ಲಿ ಅಂದರೆ ಕೇವಲ ಹತ್ತಿಪ್ಪತ್ತು ವರ್ಷಗಳ ಹಿಂದೆ ಪ್ರತಿಯೊಂದು ಮನೆಗೂ ಫ್ಯಾಮಿಲಿ ಡಾಕ್ಟರರೆಂಬವರು ಇರುತ್ತಿದ್ದರು. ಅವರು ಯಾವುದೇ Specialisation ಇರದೇ ಇದ್ದರೂ ಜನರಲ್ ಪ್ರಾಕ್ಟಿಶನರ್ ಆಗಿ ಇರುತ್ತಿದ್ದರು.
ಕುಟುಂಬ ವೈದ್ಯನೆಂಬುವನು ಪ್ರತಿಯೊಂದು ಮನೆಗೂ ಅವಶ್ಯಕವಾಗಿರುತ್ತಾನೆ. ಹಾಗೆಯೇ ಇದು ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ. ಮೊದಲಾದರೆ ಕುಟುಂಬ ವೈದ್ಯನಾದವನು ಮನೆಯ ಸದಸ್ಯನಂತಾಗಿರುತ್ತಿದ್ದ ಮನೆ ಮಂದಿಯ ಸ್ವಭಾವ, ಆರೋಗ್ಯ ಅನಾರೋಗ್ಯದ ಕಾರಣಗಳನ್ನು ಅಭ್ಯಸಿಸುತ್ತಿದ್ದನಾದ್ದರಿಂದ ಅದು ಚಿಕಿತ್ಸೆ ನೀಡಲು ಸಹಾಯವಾಗುತ್ತಿತ್ತು. ಯಾವ ಔಷಧಿ ಆಗಿ ಬರುತ್ತದೆ. ಯಾವ ಔಷಧಿಯಿಂದ ರಿಯಾಕ್ಷನ್ ಆಗುತ್ತದೆ ಎನ್ನುವುದು ಗೊತ್ತಿರುತ್ತಿತ್ತು. ಇದರಿಂದ ಚಿಕಿತ್ಸೆಗೆ ಅನುಕೂಲವಾಗುತ್ತಿತ್ತು. ಆದರೆ ಇಂದಿನ ಪರಿಸ್ಥಿತಿ ಅವಲೋಕಿಸಿದಾಗ ಪ್ರತಿಯೊಂದು ಅವಯವಗಳಿಗೂ ಒಬ್ಬೊಬ್ಬ ಡಾಕ್ಟರು ಗಂಟಲು ನೋವಾದರೆ ಎಷ್ಟೇ ದೂರವಿದ್ದರೂ ಗಂಟಲು ಡಾಕ್ಟರ್ ರ ಹತ್ತಿರವೇ ಹೋಗಬೇಕು. ಬೇರೆ ಡಾಕ್ಟರು ಉಪಚರಿಸುವ ಹಾಗಿಲ್ಲ. ಹಾಗೆಯೇ ಸಾದಾಜ್ವರ ಬಂದರೂ ರಕ್ತ, ಮೂತ್ರ, ತಪಾಸಣೆಯ ರಿಪೋರ್ಟು ಬೇಕೇ ಬೇಕು. ಅದರ ಅವಶ್ಯಕತೆ ಇಲ್ಲದೇ ಇದ್ದಾಗಲೂ ಕೂಡ. ಒಟ್ಟು ದುಡ್ಡು ಹಿರಿಯುವುದೊಂದೇ ಈಗಿನ ಡಾಕ್ಟರ್ ಉದ್ಯೋಗ. ಸಲೈನು ಏರಿಸುವುದೆಂದರೆ ಗಂಟಲಿನಲ್ಲಿ ನೀರು ಹೊಯ್ದುಕೊಂಡಷ್ಟೇ ಸಲೀಸು ಇವರಿಗೆ. ಅದರ ಅವಶ್ಯಕತೆ ಇದೆಯೋ ಇಲ್ಲವೋ ಎಂಬ ವಿವೇಚನೆಯೇ ಇಲ್ಲ ಅವರಿಗೆ. ಇನ್ನೂ ಡೆಲಿವರಿ ವಿಭಾಗಕ್ಕೆ ಹೋದರಂತೂ ಸರಿಯೇ ಸರಿ. ಯಾರದೂ ನಾರ್ಮಲ್ ಡೆಲಿವರಿ ಆಗಿದೆ ಎಂದು ಕೇಳಲೂ ಸಿಗುವುದಿಲ್ಲ. ಡೆಲಿವರಿ ಇದು ನೈಸರ್ಗಿಕ ಕ್ರಿಯೆ. ಪ್ರತಿಯೊಂದು ಜೀವಿಗೂ ತನ್ನ ಸಮಯವಾದ ನಂತದ ದೇಹದಿಂದ ಹೊರಬರಲೇಬೇಕು. ಯಾವುದೇ ಪ್ರಾಣಿಪಕ್ಷಿಗಳನ್ನು ನೋಡಿದರೆ ಎಷ್ಟೊಂದು ಸಹಜವಾಗಿ ಮರಿಗಳು ಅದರಲ್ಲೂ ಒಂದಕ್ಕಿಂತ ಹೆಚ್ಚು ಹೇಗೆ ಅತ್ಯಂತ ಸಹಜರೀತಿಯಿಂದ ತಾಯಿ ಗರ್ಭದಿಂದ ಹೊರಬರುತ್ತವೆ. ಅವುಗಳಿಗೆ ಹಿಂದಿನಿಂದ ಯಾರೂ ಇಂಜೆಕ್ಷನ್ ಟ್ಯೂಬನ್ನೊ ಆಪರೇಷನ್ ಪರಿಕರಗಳನ್ನೋ ತೆಗೆದುಕೊಂಡು ಬೆನ್ನು ಬಿದ್ದಿರುವುದಿಲ್ಲ. ಆದರೂ ಅವು ಸುಖಪ್ರಸವ ಮಾಡುತ್ತವೆಯೋ ಇಲ್ಲವೋ? ಆದರೆ ಇಂದು ಡಾಕ್ಟರ್ ಗಳು ತಮ್ಮ ಬಿಲ್ಡಿಂಗ್ ಕಟ್ಟಿಸಿಕೊಳ್ಳುವ ಭರದಲ್ಲೋ, ಅತೀ ದುಡ್ಡಿನ ಆಸೆಗಾಗಿಯೋ ಅಶಕ್ತಳೆಂದೋ, ಮಗು ಉಳಿಯುವುದಿಲ್ಲವೆಂದೋ ಭೀತಿ ಹುಟ್ಟಿಸಿ ಸೀಜರೀನ್ ನ್ನು ಕಂಪಲ್ಸರಿ ಮಾಡುತ್ತಿದ್ದಾರೆ. ಇದರಿಂದ ಬಾಣಂತಿ ಕೊನೆಯವರೆಗೂ ಅಶಕ್ತಳಾಗೇ ಇರಬೇಕಾಗುತ್ತದೆ. ಆದರೆ ಡಾಕ್ಟರ್ ರ ದುಡ್ಡಿನ ಥೈಲಿ ಮಾತ್ರ ಉಬ್ಬುತ್ತದೆ. ಇನ್ನೂ ಕೆಲವು ಡಾಕ್ಟರ್ ಗಳು ಸಾದಾ ನೆಗಡಿಯೇ ಇರಲಿ, ಕೆಮ್ಮೇ ಇರಲಿ ಎಲ್ಲದಕ್ಕೂ ಇಷ್ಟುದ್ದದ ಆಂಟಿಬಯೋಟಿಕ್ ಗಳ ಪಟ್ಟಿಯನ್ನೇ ನೀಡುತ್ತಾರೆ. ಈ ಆಂಟಿಬಯೋಟಿಕ್ ಗಳನ್ನು ನುಂಗಿ ನುಂಗಿಯೇ ಮನುಷ್ಯ ತನ್ನ ರಜಿಸ್ಟನ್ಸ್ ಪವರ್ ನ್ನೇ ಕಳೆದುಕೊಂಡು ಬಿಡುತ್ತಾನೆ. ಇದರಿಂದ ಡಾಕ್ಟರುಗಳಿಗೆ ದುಡ್ಡುಗಳಿಸಲು ಇನ್ನೂ ಅನುಕೂಲ. ಹೀಗಾಗಿ ಮನುಷ್ಯನ ದೇಹ ರೋಗಗಳ ಗೂಡಾಗಿ ಪರಿಣಮಿಸಲ್ಪಡುವುದು. ಹಳ್ಳಿಗಳಲ್ಲಿ ಜನರು ಅತ್ಯಂತ ಸಹಜವಾಗಿ, ನೈಸರ್ಗಿಕವಾಗಿ ಜೀವಿಸುತ್ತಾರೆ. ಹೀಗಾಗಿ ರೋಗಗಳ ಹಳ್ಳಿಗಳಲ್ಲಿ ಸುಳಿಯುವುದೇ ಇಲ್ಲ.
ಬ್ಲಡ್ ಪ್ರೆಶರ್, ಡಯಾಬಿಟಿಸ್ ಮುಂತಾದವುಗಳು ಮಾನಸಿಕ ಏರುಪೇರಿನಿಂದಾಗಿ ಉದ್ಭವಿಸುವಂಥವು, ಅದಕ್ಕಾಗಿ ಇಂದಿನ ವೈದ್ಯರು ಕೇವಲ ರೋಗ ನಿವಾರಣೆ ಗುಳಿಗೆಗಳನ್ನಷ್ಟೇ ನೀಡದೇ ಅದರ ಜೊತೆ ಜೊತೆಗೆ ರೋಗಿಯ ಮನಸ್ಸನ್ನು ಮುದಗೊಳಿಸಿ ಅವರಲ್ಲಿ ಜೀವನೋತ್ಸಾಹವನ್ನು ತುಂಬುವುದೇ ವೈದ್ಯನ ಅತ್ಯಂತ ಪ್ರಾಮಾಣಿಕ ನಿಷ್ಠೆಯ ಕರ್ತವ್ಯ ಇದನ್ನು ರೂಢಿಸಿಕೊಂಡರೆ ಮಾತ್ರ ವೈದ್ಯನು ದೇವರ ಸಮಾನನಾಗಬಲ್ಲ.
ದುಡ್ಡು ದುಡ್ಡು ದುಡ್ಡು ಜೀವನದಲ್ಲಿ ದುಡ್ಡೇ ಸರ್ವಸ್ವಲ್ಲ. ಒಂದು ಲಿಮಿಟ್ಟಿನವರೆಗೆ ದುಡ್ಡು ಬೇಕು ನಿಜ. ಅದರೆ ನಂತರ ದುಡ್ಡಿನ ಹೊರತಾಗಿಯೂ ಜೀವನದಲ್ಲಿ ಬೇರೆ ಏನಾದರೂ ಇದೆ ಎಂದರೆ ಅದು ಆತ್ಮತೃಪ್ತಿ, ಪ್ರತಿಯೊಬ್ಬ ವೈದ್ಯನಾದವನು ವಾರಕ್ಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆಯಾದರೂ ಆರ್ಥಿಕವಾಗಿ ಅತ್ಯಂತ ನಿಕೃಷ್ಟನಾದ ಕನಿಷ್ಠ ಹತ್ತು ಜನರಿಗಾದರೂ ಅವರ ಜರೂರತ್ತಿಗನುಗುಣವಾಗಿ ಪುಕ್ಕಟೆ ಚಿಕಿತ್ಸೆ ನೀಡಿದರೆ ಆ ರೋಗಿಯಾದವನು ಕೃತಜ್ಞಭರಿತನಾಗಿ ನೀಡುವ ಆಶೀರ್ವಾದವಿದೆಯಲ್ಲ ಅದು ಕೋಟಿರೂಪಾಯಿ ಗಳಿಕೆಗೂ ಹೆಚ್ಚಿನದು ಎನ್ನುವುದು ನನ್ನ ಅಭಿಪ್ರಾಯ.

Leave a Reply