ವೈವಾಹಿಕ ಜೀವನದ ಯಶಸ್ಸಿಗೆ ಹೊಂದಾಣಿಕೆ ಹಾಗೂ ಸಾಮರಸ್ಯ ಮುಖ್ಯ

ವೈವಾಹಿಕ ಜೀವನದ ಯಶಸ್ಸಿಗೆ ಹೊಂದಾಣಿಕೆ ಹಾಗೂ ಸಾಮರಸ್ಯ ಮುಖ್ಯ

ಬದುಕಿನ  ಪ್ರಮುಖ ನಿರ್ಧಾರಗಳಲ್ಲಿ ವಿವಾಹವೂ ಒಂದು. ಹೊಸದಾಗಿ ಮದುವೆ ಮಾಡಿಕೊಂಡು ತನ್ನ ಸಂಗಾತಿಯೊಂದಿಗೆ ಜೀವನ ಹಂಚಿಕೊಳ್ಳುವ ಉತ್ಸಾಹ ಒಂದು ಕಡೆಯಾದರೆ, ಮತ್ತೊಂದು ಕಡೆ  ಹೊಸ ಪರಿಸರ, ಹೊಸ ಸಂಗಾತಿಯೊಂದಿಗೆ ಅಪರಿಚಿತ  ವಾತಾವರಣದಲ್ಲಿ ವಾಸಿಸುವುದು ಸವಾಲಿನ ಸಂಗತಿಯಾಗಿರುತ್ತದೆ. ಇದು ಹೆಣ್ಣು ಹಾಗೂ ಗಂಡು ಇಬ್ಬರಿಗೂ ಕೂಡ ಅನ್ವಯವಾಗುತ್ತದೆ. ಆದರೂ ಹೊಸ ಬದುಕಿಗೆ ಹೊಂದಿಕೊಳ್ಳುವುದು ಎಂದರೆ ಗಂಡಿಗಿಂತಲೂ ಹೆಣ್ಣಿಗೇ ತೀವ್ರ ಒತ್ತಡಕರ ವಿಷಯ. ಏಕೆಂದರೆ ಗಂಡಿಗೆ ಕೇವಲ ಹೆಂಡತಿಯೊಬ್ಬಳೇ ಅಪರಿಚಿತಳಾದರೆ ಹೆಣ್ಣಿಗೆ ವಾತಾವರಣ, ಗಂಡ ಒಮ್ಮೊಮ್ಮೆ ಮನೆಯಲ್ಲಿ ವಾಸಿಸುತ್ತಿರುವವರು ಎಲ್ಲರೂ. ಅಪರಿಚಿತರು.   ನಮ್ಮ ಸಮಾಜದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಅನುಸರಣೆ ಮಾಡಬೇಕಾಗುತ್ತದೆ. ಈಗ ಸಮಾಜದ ರೂಢಿಗಳು ಬದಲಾಗುತ್ತಿವೆ. ಗಂಡು ಅವಳಿಗೆ ಹೊಂದಾಣಿಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತಾನೆ. ಆದರೂ ಕೂಡ ಆಕೆ ಭಾವನಾತ್ಮಕ, ದೈಹಿಕ ಮತ್ತು ಆರ್ಥಿಕ ವಿಷಯಗಳಿಂದ ಮಾನಸಿಕ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ವಿವಾಹದ ನಂತರ ಬದುಕಿನಲ್ಲಾಗುವ ಹಠಾತ್ ಬದಲಾವಣೆಗೆ ಅಡ್ಜಸ್ಟ್ ಮಾಡಿಕೊಳ್ಳಲು ಆಗದೆ ಮಹಿಳೆಯು  ಸಂಕಟ ಪಡುತ್ತಾಳೆ.  ಈ ಸಮಯದಲ್ಲಿ ಯಾವುದೇ ರೀತಿಯ ನಿಂದನೆ, ಟೀಕೆ, ಅಪಹಾಸ್ಯ, ಆರ್ಥಿಕ ಅಥವಾ ಇನ್ನಿತಿರ ತೊಂದರೆಗಳಿಂದ ಅವರ ಮಾನಸಿಕ ಆರೋಗ್ಯ ಕೂಡ ಒಮ್ಮೊಮ್ಮೆ ನಾಜೂಕಾಗಿ ಬಿಡುತ್ತದೆ.
ಹೊಸ ಜೀವನಕ್ಕೆ ಹೊಂದಿಕೊಳ್ಳುವುದು ಒಂದು ಸವಾಲಿನ ವಿಷಯ ಆಗಿರುವುದರಿಂದಲೇ ಇಬ್ಬರೂ ಒಬ್ಬರಿನ್ನೊಬ್ಬರನ್ನು ಅರಿಯಲಿ ಎಂದು ಇಬ್ಬರಿಗೇ ಇರಲು ಅವಕಾಶ ಮಾಡಿಕೊಡುತ್ತಾರೆ.

ವಾತಾವರಣ ಹಾಗೂ  ಜೊತೆಯಲ್ಲಿರುವ ಅಕ್ಕ, ತಂಗಿಯರು,ಅಣ್ಣ ತಮ್ಮಂದಿರು ಬದಲಾದಾಗ, ಮನಸ್ಸಿನಲ್ಲಿ ಉಂಟಾಗುವ ಭಾವನೆಗಳ ಏರಿಳಿತಗಳನ್ನು ಇತರರೊಂದಿಗೆ  ಹೇಗೆ ಹೇಳಿಕೊಳ್ಳುವುದು? ಹಾಗೆ ಹೇಳಿಕೊಂಡರೆ ಏನೆಂದು ತಿಳಿಯುತ್ತಾರೆ ಎಂಬ ಹಿಂಜರಿಕೆಯಿಂದ  ಹೆಣ್ಣುಮಕ್ಕಳು  ಮುಕ್ತವಾಗಿ ಯಾರೊಂದಿಗೂ ಮಾತನಾಡುವುದಿಲ್ಲ. ಕೆಲವರು ಕುಟುಂಬದವರ  ಮತ್ತು ತನ್ನ ಸಂಗಾತಿಯ ಸಹಕಾರದೊಂದಿಗೆ ಅಗತ್ಯ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಆದರೆ ಕೆಲವರು ಈ ಹೊಸ ಪರಿಸರಕ್ಕೆ ಹೊಂದಿಕೊಳ್ಳಲಾಗದೇ ಒತ್ತಡ, ದುಃಖ ಮತ್ತು ಅಸಹಾಯಕತೆಗೆ ಒಳಗಾಗುತ್ತಾರೆ. ಈ ಪರಿಸ್ಥಿತಿ ಅಡ್ಜಸ್ಟ್ ಮೆಂಟ್ ಡಿಸಾರ್ಡರ್, ಖಿನ್ನತೆ ಮತ್ತು ಆತಂಕಕ್ಕೆ ದಾರಿ ಮಾಡಿಕೊಡುತ್ತದೆ.”

ಇಷ್ಟು ಕಾಲದ ವರೆಗೂ ಅಂದರೆ 25-30 ವರ್ಷ ಸ್ವತಂತ್ರ ಆಲೋಚನೆಗಳೊಂದಿಗೆ ಬೆಳೆದವರಿಗೆ ಮದುವೆ ಎಂಬುದು ಒಂದು ದೊಡ್ಡ ಬದಲಾವಣೆ. ತಮ್ಮದೇ ಸ್ವಂತ ಅಭಿಪ್ರಾಯ, ವೃತ್ತಿಯ ಆಯ್ಕೆ ಇರುವಾಗ ಇದ್ದಕ್ಕಿದ್ದಂತೆ ಮದುವೆಯಾಗಿ ಪತಿಯ ಕುಟುಂಬದವರು ವಿರುದ್ಧ ಮನಸ್ಥಿತಿಯವರಾಗಿದ್ದರೆ ಅಥವಾ ಸಮಾನತೆಯನ್ನು ಒಪ್ಪದ ಸಂಗಾತಿ ಸಿಕ್ಕರೆ, ಮಹಿಳೆಯರು ತಮ್ಮ ಐಡೆಂಟಿಟಿ ಕಳೆದುಕೊಳ್ಳಲು ಆರಂಭಿಸುತ್ತಾರೆ. ತಮ್ಮ ಹತಾಶೆ ಮತ್ತು ಅಸಹಾಯಕತೆಯನ್ನು ಹೇಳಿಕೊಳ್ಳಲು ಆಗದೇ ಒತ್ತಡಕ್ಕೆ ಒಳಗಾಗುತ್ತಾರೆ. ಹಾಗೆಯೇ ಗಂಡನಾದವನು ಕೂಡ ಇಂಥ ಬದಲಾವಣೆಗಳಿಂದಾಗಿ ಖಿನ್ನತೆಗೊಳಪಡುತ್ತಾನೆ. ನಿರೀಕ್ಷೆಗಳೇ ಬೇರೆ. ಆದರೆ  ವಾಸ್ತವವೇ ಭಿನ್ನವಾಗಿರುತ್ತದೆ.
ವಿವಾಹದ ನಂತರ ಎದುರಾಗುವ ಹಲವಾರು ಮನೋವೇದನೆಗೆ ಪರಸ್ಪರ ಹೊಂದಾಣಿಕೆ ಇಲ್ಲದಿರುವ ಅಥವಾ ಅತಿಯಾದ ನಿರೀಕ್ಷೆಗಳು ಕಾರಣವಾಗುತ್ತವೆ. ಮದುಮಕ್ಕಳು ಪರಸ್ಪರ ಬಹಳ ನಿರೀಕ್ಷೆಯನ್ನು  ಇರಿಸಿಕೊಂಡಿರುತ್ತಾರೆ. ಮದುವೆಯ ನಂತರ ದಂಪತಿಗಳಿಗೆ, ತಮ್ಮೆಲ್ಲಾ ನಿರೀಕ್ಷೆಗಳ ಬಗ್ಗೆ ಚರ್ಚಿಸಲು ಮತ್ತು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಮಯ ಬೇಕು. ಮದುವೆ ಭಿನ್ನ ಭಾವನೆ, ಭಿನ್ನಾಭಿಪ್ರಾಯ, ಬೇರೆ ಬೇರೆ ಕುಟುಂಬದ ಇಬ್ಬರು ವಿಭಿನ್ನ ವ್ಯಕ್ತಿಗಳನ್ನು ಬೆಸೆದಿರುತ್ತದೆ. ಒಬ್ಬರನ್ನೊಬ್ಬರು ಅರಿಯುವುದು ಮುಖ್ಯವಾಗಿರುತ್ತದೆ.  ವೈವಾಹಿಕ ಜೀವನದಲ್ಲಿ ಎದುರಾಗತಕ್ಕಂಥ ಬದಲಾವಣೆಗಳನ್ನು ಅರಿಯಬೇಕು. ಒಂದು ವೇಳೆ ಏನಾದರೂ ಕಿರಿಕಿರಿ ಉಂಟಾದರೆ ಸಂಗಾತಿಯೊಂದಿಗೆ ಚರ್ಚಿಸಬೇಕು. ಇಬ್ಬರಿಗೂ ಸ್ವಂತ ಅಭಿಪ್ರಾಯ, ಆಲೋಚನೆಗಳಿರುತ್ತವೆ ಎಂಬುದರ ಅರಿವು ಸಂಗಾತಿಗೆ ಇರಬೇಕು.
ಒಟ್ಟಿನಲ್ಲಿ ಇಬ್ಬರೂ ಒಬ್ಬರಿನ್ನೊಬ್ಬರ ಭಾವನೆಗಳಿಗೆ, ಅವರ ತಂದೆ ತಾಯಿಗಳು, ಬಂಧುಗಳು, ಸ್ನೇಹಿತರು ಎಲ್ಲರಿಗೂ ತಕ್ಕಂತೆ ಮರ್ಯಾದೆ ಕೊಟ್ಟು ಅರಿತು ನಡೆದರೆ ಸ್ವರ್ಗಕ್ಕೆ ಕಿಚ್ಚು ಹಚ್ಚುವ ಸಂಸಾರ ಅವರದಾಗುತ್ತದೆ. ವಿವಾಹ ಎನ್ನುವುದು ಎರಡು ಕುಟುಂಬಗಳ ಮಿಲನವಾಗಿದೆ. ಎರಡು ಹೃದಯಗಳದಷ್ಟೇ ಅಲ್ಲ.

ಮಾಲತಿ ಮುದಕವಿ

Leave a Reply