ವಜ್ರದ ಕವಚ

ವಜ್ರದ ಕವಚ!
ಸಂಧ್ಯಾ ಶೆಣೈ ನಮ್ಮ ಮನೆಗೆ ಹತ್ತಿರದವಳು. ಇಬ್ಬರೂ ಜೊತೆಯಾಗಿಯೇ ಶಾಲೆಯಿಂದ ಬರುವುದು ಹೋಗುವುದು ಮಾಡುತ್ತಿದ್ದೆವು. ಅವಳಿಗೂ ನನ್ನ ಮಾತನ್ನು ಕೇಳುತ್ತಾ ಬರುವುದು ಇಷ್ಟ. ಹೀಗಾಗಿ ಮತ್ತೆ ನನ್ನ ವರಸೆ ಶುರುವಾಯಿತು. ಒಂದಿನ ನಾನು ‘ನಮ್ಮ ಮನೆಯಲ್ಲಿ ನನ್ನದೇ ಆಕಾರದ ಮೂರು ಮೂರ್ತಿಗಳಿವೆ’ ಎಂದೆ. ‘ಎಂಥಾದ್ದು?’ ಎಂದಳಾಕೆ. ‘ಬಂಗಾರದ್ದೊಂದು, ಬೆಳ್ಳಿಯದೊಂದು ಮತ್ತು ವಜ್ರದ್ದು ಮೂರ್ತಿಗಳಿವೆ ಹಾಗೇ ಕವಚಗಳೂ.
ಆಕೆ ಇಷ್ಟಗಲ ಕಣ್ಣಗಲಿಸಿ ‘ಖರೇನ’ ಎಂದು ಕೇಳಿದಾಗ ನನಗೆ ಆಕೆ ಕೆಣಕಿದಂತಾಯಿತು. ಅವಳು ‘ಮತ್ತೆ ನಾ ಯಾವಾಗೂ ನೋಡೇ ಇಲ್ಲಾ ಅದಕ್ಕೆಂದೆ’ ಎಂದಳು. ‘ಹೇ ಯಾರರೇ ಎಲ್ಲಾರಿಗೂ ಕಾಣಿಸೂ ಹಂಗ ಹಾಕೋತಾರೇನು, ಮತ್ತೆ ಕಳ್ಳರು ಸುಮ್ಮನೇ ಬಿಡತಾರೇನ್ಲೇ. ನಮ್ಮನ್ಯಾಗ ದೊಡ್ಡ ಕಪಾಟ ಅದ ನೀ ನೋಡೀ ಇಲ್ಲೋ’ ಎಂದೆ. ಅದು ಇದ್ದದ್ದು ಖರೇ ಆದ್ದರಿಂದ ಆಕೆ ‘ಹೌದು ನೋಡೇನಿ’ ಎಂದಳು. ‘ಮತ್ತ ಅದಕ್ಕ ಲಠ್ಠ ಕೀಲಿ ಹಾಕಿರ್ತೀವಿ ನೋಡೀ ಇಲ್ಲೊ’ ಎಂದೆ. ಮತ್ತೆ ಅವಳು ಹ್ಞೂಂ ಗುಟ್ಟಿದಳು. ಆಗ ನಾನೂ ಬುರುಡೆ ಬಿಡಲಿಕ್ಕೆ ಶುರು ಮಾಡಿದೆ. ‘ನೋಡು ಆ ಕಪಾಟನ್ಯಾಗ ಅವನ್ನೆಲ್ಲ ಇಟ್ಟದ, ಥೇಟ ನನ್ನದೇ ಮಾರಿ, ಮೂಗು ಬಾಯಿ ಆಕಾರ’ ಎಂದೆ. ‘ಮತ್ತ ಹಲ್ಲು’ ಎಂದಳು. ಯಾಕೆಂದರೆ ಅವು ಸ್ವಲ್ಪ ದೊಡ್ಡೂ ಇದ್ದದ್ದರಿಂದ ಮುದ್ದಾಂ ಕೆಣಕಲಿಕ್ಕೆ ಹಾಗೆ ಕೇಳಿದ್ದಳು. ನಾನಂದೆ ಹಂಗೇನಿಲ್ಲ, ಹಲ್ಲ ಮಾತ್ರ ಛಂದ ದಾಳಿಂಬರಿ ಹಣ್ಣಿನ ಕಾಳಿನ ಗತ್ಲೆ ಮಾಡಸ್ಯಾರ ಬಂಗರದಲ್ಲೇ ನಮ್ಮ ತಂದಿ ಎಂದೆ. ‘ಅಲ್ಲಾ ಇವೆಲ್ಲಾ ಕವಚ ಮೂರ್ತಿಗಳನ್ನ ಯಾಕ ಮಾಡಸ್ಯಾರ ಅದೂ ನಿನ್ನ ಸೈಜದ್ದು’ ಕುತೂಹಲಿನೋ ಅಥವಾ ಬುರುಡೆ ಬಿಡ್ತಾಳಿವಳು ಅನ್ನೂ ಸಂಶೇನೋ ಒಟ್ಟ ಕೇಳಿದಳು.
‘ನೋಡ ಸಂಧ್ಯಾ, ಚಳಿಗಾಲದಾಗ ಭಾಳ ಚಳಿ, ಅವಾಗ ವಜ್ರದ ಕವಚ ಹಾಕ್ಕೋತೀನಿ, ಮಳಿಗಾಲದಾಗ ಬಂಗಾರದ್ದು ಹಾಗೂ ಬ್ಯಾಸಗೀ ಕಾಲದಾಗ ಬೆಳ್ಳಿದು ಕವಚ ಹಾಕ್ಕೊಂಡು ಮಲಕ್ಕೋತೀನಿ.’
•‘ಏನು ಹಾಕ್ಕೊಂಡ ಮಲಕ್ಕೋಳಿಕ್ಕೆ ಕವಚಾ ಮಾಡಸ್ಯಾರ ನಿಮ್ಮ ತಂದಿ? ನಮ್ಮನ್ಯಾಗೇನಿಲ್ಲವಾ ನಾವೆಲ್ಲ ದಿಪ್ಪ ರಗ್ಗು ಹೊತ್ಕೊಂಡು ಮಲಕೋತೀವಿ.’
•‘ಹಂಗೇನಿಲ್ಲ ನಮ್ಮ ಹೊಲದಾಗ ಬಂಗಾರದ ಗಟ್ಟಿ, ಬೆಳ್ಳಿ ಗಟ್ಟಿ ಸಿಕ್ಕಿದ್ದು. ಹಂಗ ವಜ್ರದ್ದೂನೂ. ಅವೆಲ್ಲಾ ಹಂಗ ಏನ ಮಾಡೋದು. ನಾ ಎಲ್ಲಾರಕ್ಕಿಂತಾ ಸಣ್ಣಾಕಿ. ಅದಕ್ಕ ನನ್ನ ಅಳತೀವನ ಮಾಡಸ್ಯಾರ ಎಂದೆ ಮೊಗಮ್ಮಾಗಿ. ಅಕೀಗೆ ಎಷ್ಟ ತಲ್ಯಾಗ ಹೋತೋ, ಏನೋ ಗೊತ್ತಾಗ್ಲಿಲ್ಲ, ಆದರೂ ಪ್ರಶ್ನೆ ಕೇಳೂದು ಮಾತ್ರ ಬಿಡಲಿಲ್ಲ. ‘ವಜ್ರದ ಕವಚಾ ಎಂದ್ರ ಎಂಥಾದ್ದು.’ ‘ಹ್ಯಾಂಗ ಅಂದರ, ನೀ ಸೂರ್ಯಾನ್ನ ನೋಡೀ ಇಲ್ಲೋ, ಹಂಗನ ಫಳಾ ಫಳಾ ಹೊಳೀತದ, ನಾ ಅದನ್ನು ಹಾಕ್ಕೊಂಡೆಂದ್ರ ನಮ್ಮನ್ಯಾಗ ಎಲ್ಲಿಯೂ ದೀಪಾನ ಹಚ್ಚುದಿಲ್ಲ. ಎಲ್ಲಿ ಬೆಳಕ ಬೇಕು ಅಲ್ಲಿ ಹೋಗಿ ನಿಂತ ಬಿಡತೀನಿ. ಮತ್ತ ಯಾರ ಮುಂದೂ ಹೇಳಬ್ಯಾಡ ಮತ್ತು ಮುಂದಿಂದು ನಾಳೆ ಹೇಳ್ತೀನಿ’ ಎಂದೆ. ಅಷ್ಟರಲ್ಲಿ ಮನೆ ಬಂದಿತ್ತು. ಮನೆಗೆ ಬಂದೆ.
ಮಧ್ಯಾಹ್ನ ಊಟಾ ಮಾಡಿ ಮತ್ತೆ ಶಾಲೆಗೆ ಹೋಗಬೇಕಾಗಿತ್ತು. ಸಂಧ್ಯಾ ಶಾಲೆಗೆ ಕರಿಯಲಿಕ್ಕೆಂದು ನಮ್ಮ ಮನೆಗೆ ಬಂದಳು. ಅವಳಿಗೆ ಒಂದೇ ಸಮನೆ ಚಡಪಡಿಕೆ ಶುರುವಾಗಿತ್ತು. ಅವಳ ಮುಂದೆ ಬುರುಡೆ ಬಿಟ್ಟು ನಾನು ನಿಶ್ಚಿಂತೆಯಾಗಿದ್ದೆ. ಆದರೆ ಅವಳಿಗೆ ಇವೆಂಥದು ನೋಡೇಬಿಡಬೇಕು ಎಂಬ ತವಕ ಜಾಸ್ತಿಯಾಗಿತ್ತು. ಅದಕ್ಕಾಗಿ ಆಕೆ ಬೇಗನೇ ಬಂದಿದ್ದಳು.
ಹೊರಗಡೆ ಹಾಲ್ ನಲ್ಲಿ ನಮ್ಮ ಅಕ್ಕ ಕುಳಿತಿದ್ದಳು. ನಾನು ಒಳಗಡೆ ಊಟಕ್ಕೆ ಕುಳಿತಿದ್ದೆ. ಆಗಲೇ ಹದಿನೈದು ನಿಮಿಷದ ಕೆಳಗೆ ನನ್ನ ಹಾಗೂ ನಮ್ಮ ಅಕ್ಕನ ನಡುವೆ ಒಂದು ಚಿಕ್ಕ ಜಗಳದಂತಾಗಿತ್ತು. ಅವಳು ಮುಯ್ಯಿ ತೀರಿಸಲು ದಾರಿ ಕಾಯುತ್ತಿರುವಂತೆ ಕುಳಿತಿದ್ದಳು. ಒಳಗೆ ಬಂದ ಸಂಧ್ಯಾ ನಮ್ಮ ಅಕ್ಕನ ಜೊತೆ ಹರಟುತ್ತಾ ಕುಳಿತಿದ್ದಳು. ನನಗೋ ಮಹಾ ವೇದನೆ ಶುರುವಾಗಿತ್ತು. ಎಲ್ಲಿ ನನ್ನ ಹೂರಣ ಹೊರಬೀಳುತ್ತದೋ ಎಂದು. ಕಾಲಘಟ್ಟ ಸಮೀಪಿಸಿತು. ಸಂಧ್ಯಾ ಬಾಯ್ತೆರೆದಳು. ‘ಅಲ್ರೀ ಅಕ್ಕಾ, ನಿಮ್ಮ ಸುಜಾತಾನ (ತವರು ಮನೆ ಹೆಸರು) ಕವಚ ಮೂರ್ತಿಗಳಿವೆಯಂತಲ್ಲ; ಎಂದಾಗ ಆಕೆ ಎಂಥಾ ಕವಚವಾ’ ಎಂದು ರಾಗವಾಗಿ ಕೇಳಿದಾಗ ಸಂಧ್ಯಾ, ‘ಬಂಗಾರದ್ದು , ವಜ್ರದ್ದು, ಬೆಳ್ಳಿದು’ ಎಂದು ಹೇಳಿದಾಗ ಛಾವಣಿ ಹರಿದು ಹೋಗುವಂತೆ ನಮ್ಮಕ್ಕ ನಗತೊಡಗಿದಳು. ಜೋರಾಗಿ ಧಾಪುಗಾಲು ಹಾಕುತ್ತ ನಾನು ಹೊರಬರುವುದಕ್ಕೂ ನಮ್ಮ ಅಕ್ಕ ‘ಏ ಅಕೀದೇನ ಕೇಳತೀ, ಅಕೀ ಬರೇ ಸುಳ್ಳೇ ಹೇಳತಿರತಾಳ, ಅಕೀ ಮಾತ ನಂಬಿದ್ರ ಕತ್ತಿಗೂ ಉರಿ ಬರ್ತಾವ’ ಎನ್ನಬೇಕೆ. ಆಗ ಯಾವ ಸಂಧ್ಯಾ ನನ್ನ ಮಾತನ್ನೆಲ್ಲ ಸತ್ಯವೆಂಬಂತೆ ನಂಬಿ ಹ್ಞೂಂ ಗುಟ್ಟುತ್ತಿದ್ದಳೋ ಅವಳೂ ಈಗ ಜೋರಾಗಿ ನಗುತ್ತಿದ್ದಳು. ಅಷ್ಟೇ ಅಲ್ಲ, ಶಾಲೆಯಲ್ಲಿ ಅವಳ ಮನೆಯಲ್ಲಿ ಇದೇ ಪ್ರಸ್ತಾಪವಾಗಿ ನನ್ನ ಬುರುಡೆಗೆ ಕಡಿವಾಣ ಬಿತ್ತೆನ್ನಿ. ಅವತ್ತಿನಿಂದ ಇವತ್ತಿನವರೆಗೂ ಸತ್ಯವೇ ನಮ್ಮ ತಾಯಿ ತಂದೆ, ಸತ್ಯವೇ ನಮ್ಮ ಬಂಧು ಬಳಗ, ಸತ್ಯ ಮಾತನು ತಪ್ಪಿನಡೆದರೆ ಮೆಚ್ಚನಾ ಪರಮಾತ್ಮನು ಎಂಬ ನುಡಿಯಂತೆ ನಡೆಯುತ್ತಿರುವೆ. ಇದಕ್ಕೆ ನೀವೇನಂತೀರಿ!

 

Leave a Reply