ವ್ಯಾಲೆಂಟೈನ್ಸಿ ಡೇ ಅಥವಾ ಪ್ರೇಮಿಗಳ ದಿನ

ವ್ಯಾಲೆಂಟೈನ್ಸಿ ಡೇ ಅಥವಾ ಪ್ರೇಮಿಗಳ ದಿನ
ಬೆಳಗಿನ ಮಳೆಯ ತುಂತುರು ಹನಿಗಳು ಹೂಗಳ ಪಕಳೆಗಳನ್ನೆಲ್ಲ ತೋಯಿಸಿದಾಗ ಹೂಗಳೇನು ನಲುಗದೆ ಇನ್ನೂ ಕುಲುಕುಲು ನಗುವಂತೆ ಗಿಡಗಳಲ್ಲಿ ಅತ್ತಿತ್ತ ಹೊಯ್ದಾಡುತ್ತಿದ್ದರೆ ಬೆಳಗಿನ ಸೊಗಸಿನ ಪರಿಗೆ ಅಚ್ಚರಿ ಮೂಡುವಂತಾಯಿತು. ಪ್ರೇಮಿಗಳ ನಲ್ಮೆಯ ದಿನವಾದ ವ್ಯಾಲೆಂಟೈನ್ಸ್ ಡೇಯ ಆಗಮನ ಮನದಲ್ಲಿ ಹಸಿರು ಹೆಚ್ಚಿಸುತ್ತಿತ್ತು.
ವ್ಯಾಲೆಂಟೈನ್ಸ್ ಎಂಬ ಸಂತ ಕ್ರೂರರಾಜನ ವಿರುದ್ಧವಾಗಿ ಪ್ರೇಮಿಗಳನ್ನು ಒಂದುಗೂಡಿಸುತ್ತಿದ್ದ. ಅಂಥ ಸಂತನಿಗೆ ಗಲ್ಲುಶಿಕ್ಷೆ ವಿಧಿಸಲಾಯಿತು. ಸುಮಾರು ೩ನೇ ಶತಮಾನದಲ್ಲಿ ನಡೆದ ಘಟನೆ ಇದು. ನಂತರದ ದಿನಗಳಲ್ಲಿ ಪ್ರೇಮಿಗಳು ಆತನ ಸವಿನೆನಪಿಗಾಗಿ ಆ ದಿನವನ್ನು ಒಂದು ಪವಿತ್ರ ದಿನವನ್ನಾಗಿ ಆಚರಿಸಲು ಶುರು ಮಾಡಿದರು. ಆತನ ಮರಣದ ದಿನ ಫೆಬ್ರುವರಿ ೧೪. ಅದಕ್ಕಾಗಿ ಜಗತ್ತಿನಾದ್ಯಂತ ಆ ದಿನವನ್ನು ಪ್ರೇಮಿಗಳ ದಿನವೆಂದು ಆಚರಿಸಲಾಗುತ್ತಿದೆ.
ಇನ್ನು ಮುಂದೆ ಬಂದರೆ ಕ್ರಿ.ಶ.೧೩ರಲ್ಲಿಯ ಇಂಗ್ಲೀಷ್ ಕವಿ ಜಾಫರಿ ಚೌಸರ್ ತನ್ನ ಕವನದಲ್ಲಿ, “ಇದು ಪಕ್ಷಿಗಳು ತಮ್ಮ ಜೊತೆಗಾರರನ್ನು ಬೆಸೆಯುವ ಕಾಲ”ವೆಂದು ನಿರೂಪಿಸುತ್ತಾನೆ. ೧೭ನೇ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ಸ್ತ್ರೀಯರು ತಮಗೆ ಪ್ರಿಯರಾದವರ ಹೆಸರುಗಳನ್ನು ಒಂದು ಕಾಗದದಲ್ಲಿ ಬರೆದು ಕಟ್ಟಿಗೆಯ ರೋಲರ್ ಗಳಲ್ಲಿ ಅದನ್ನಿಟ್ಟು ನೀರಲ್ಲಿ ತೇಲಿಬಿಡುತ್ತಿದ್ದರಂತೆ. ಹೀಗೆ ನೀರಲ್ಲಿ ಮುಳುಗಿಸಿದಾಗ ಯಾವುದು ಮೊದಲು ನೀರಿನ ಪಾತಳಿಯಲ್ಲಿ ತೇಲುತ್ತದೋ ಅದರಲ್ಲಿ ನಮೂದಿಸಿದ ಹೆಸರೇ ತಮಗೆ ದೇವರು ನಿರೂಪಿಸಿದ ಜೊತೆಗಾರ ಎಂದು ನಂಬುತ್ತಿದ್ದರಂತೆ.
ಇಂಥ ಅಭಿವ್ಯಕ್ತಿಗಳು ಇಂಗ್ಲೆಂಡಿನ ಮಟ್ಟಿಗೆ ಸರಿ ಎನ್ನಿಸಬಹುದು. ಆದರೆ ಪ್ರಾಚೀನ ಸಂಸ್ಕೃತಿಯ ನಮ್ಮ ಭಾರತದಲ್ಲಿ ಈ ರೀತಿಯ ದಿನವನ್ನು ಆಚರಿಸಿ ತಮ್ಮ ಜೀವನ ಸಂಗಾತಿಯನ್ನಾಗಿ ಆರಿಸಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ ಎಂದೆನಿಸುವುದಿಲ್ಲವೇ?
ನಮ್ಮ ಪ್ರಾಚೀನ ಭಾರತದ ಇತಿಹಾಸವನ್ನು ಕೆದಕಿದಾಗ ಪ್ರೇಮಿಗಳಿಗಿಲ್ಲಿ ಕೊರತೆಯಿಲ್ಲ. ನಳ-ದಮಯಂತಿ, ತಮ್ಮ ಪ್ರೇಮ ಸಂದೇಶವನ್ನು ಹಂಸಪಕ್ಷಿಯ ಮೂಲಕ ರವಾನಿಸಿ ಒಂದಾದರು.
ರಾಮ-ಸೀತೆಯರ ಪ್ರೇಮ ಅಗಾಧವಾದುದು. ಅದರ ಮೂಲ ಸೆಲೆ ಕೇವಲ ಕಾಮವೇ ಆಗಿರದೆ ಹೃದಯದಿಂದ ಉದ್ಭವಿಸಿದ ಪ್ರೇಮವದು.
ಹಾಗೆಯೇ ರಾಧಾಕೃಷ್ಣರದು ನಿರ್ಮಲ ಪ್ರೇಮ. ದುಶ್ಯಂತ ಶಕುಂತಲೆಯರ ಪ್ರೇಮ ಋಷಿಗಳ ಶಾಪದಿಂದ ಕುತ್ತುಂಟಾದರೂ ಮತ್ತೆ ಒಂದಾಗುವಲ್ಲಿ ಸಫಲರಾದರು. ಇವರೆಲ್ಲರೂ ಪುರಾಣ ಪ್ರಸಿದ್ಧರು.
ಇತ್ತೀಚೆಗಿನ ಪ್ರೇಮಮೂರ್ತಿಗಳು, ಸೋನಿ ಮಹೀವಾಲ, ಲೈಲಾ-ಮಜನೂ, ಹೀರ-ರಾಂಝೂ, ದುಃಖಾಂತ್ಯದಲ್ಲೂ ಒಂದಾಗಿ ಮೆರೆದವರು. ಅಕ್ಕಮಹಾದೇವಿ, ಮೀರಾಬಾಯಿ ತಮ್ಮ ಪ್ರೇಮವನ್ನು ಭಕ್ತಿಯ ಮೂಲಕ ತೋರ್ಪಡಿಸಿ ಅಮರರಾದರು. ಅಲ್ಲಿ ಕೇವಲ ನಿರ್ವ್ಯಾಜ, ನಿರ್ಮಲ, ನಿಷ್ಕಳಂಕ ಪ್ರೇಮವಿರುವುದು ಅಲ್ಲಿ ಕಾಮ, ಮೋಹ, ಮದಕ್ಕೆ ಆಸ್ಪದವಿಲ್ಲ. ಇದು ನಮ್ಮ ಪೂರ್ವಜರು ಹಾಕಿಕೊಟ್ಟ ದಾರಿ, ಅಂತೆಯೇ ನಮ್ಮ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವುದು. ಮದುವೆಯೆಂಬ ಅನುಬಂಧದಲ್ಲಿ ದಂಪತಿಗಳು ಒಂದಾದಾಗ ಅವರಿಬ್ಬರೂ ಕೊನೆಯವರೆಗೂ ಜೊತೆಗಾರರಾಗಿಯೇ ಇರುತ್ತಾರೆ. ಇಲ್ಲಿ ಪ್ರೇಮಿಗಳಿಗೇ ಒಂದಿನ ಬೇಕು ಎನ್ನುವ ಜರೂರಿ ಇಲ್ಲ. ಅದು ಪಾಶ್ಚಿಮಾತ್ಯರಿಗೆ ಅನಿವಾರ್ಯತೆಯಾಗಿದೆ. ಯಾಕೆಂದರೆ ಇಂದು ಇದ್ದ ಸಂಗಾತಿ ಮುಂದಿನ ವರ್ಷದಲ್ಲಿ ತನ್ನ ಜೊತೆಗೆ ಇರುತ್ತಾನೋ ಇಲ್ಲವೋ ಎಂಬ ವಿಶ್ವಾಸ ಅವರಲ್ಲಿಲ್ಲ. ಅದಕ್ಕೆ ಅವರು ಅದೇ ಕೊನೆಯ ದಿನವೆಂಬಂತೆ ವಿಜೃಂಭಣೆಯಿಂದ ಪ್ರೇಮಿಗಳ ದಿನವನ್ನು ಆಚರಿಸುತ್ತಾರೆ.
ಇತ್ತೀಚೆಗಿನ ದಿನಗಳಲ್ಲಿ ಪಾಶ್ಚಾತ್ಯರ ಪ್ರಭಾವ ನಮ್ಮ ನಾಡಿನ ಮಕ್ಕಳಲ್ಲಿ ವಿಪರೀತವಾಗುತ್ತಿದ್ದು ಅದರ ನೇರ ಪರಿಣಾಮ ನೈತಿಕತೆಯ ಅಂಧಃಪತನಕ್ಕೆಳೆಯುವ ಇಂಥ ದಿನಗಳನ್ನಾಚರಿಸಿ ಕಾಲೇಜು ಶಾಲೆಯ ಮಕ್ಕಳಲ್ಲಿಯ ಓದಿನ ಲಕ್ಷ್ಯವನ್ನು ತೊಡೆದು ಅಡ್ಡಹಾದಿಗೆ ಎಳೆಯುವ, ಆಧರದ ಭಾವನೆಯನ್ನು ಉದ್ದೇಪಿಸುವ ಕುಸಂಸ್ಕೃತಿಗೆ ನಾವು ಎಡೆಮಾಡಿಕೊಡಬೇಕೆ?
ಸ್ವೇಚ್ಛಾಚಾರಕ್ಕೂ ಸ್ವಾತಂತ್ಯ್ರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ನಮ್ಮ ಸಂಸ್ಕೃತಿಗೆ ಎರವಾಗದಂತೆ, ನಮ್ಮ ಸಂಸ್ಕಾರಕ್ಕೆ ಪೆಟ್ಟುಬೀಳದಂತೆ ನಮ್ಮನ್ನಾಳುವ ದೊರೆಗಳು, ನಮ್ಮಲ್ಲಿಯ ಬುದ್ಧಿಜೀವಿಗಳು, ಚಿಂತಕರು ಸರಿಯಾದ ಕ್ರಮವನ್ನು, ಪದ್ಧತಿಯನ್ನು ಬೆಳೆಸಬೇಕಾದದ್ದು ಅವಶ್ಯಕವಲ್ಲವೆ? ಎಂದಿಗೂ ಮಕ್ಕಳು ತಾಯ್ತಂದೆಯರನ್ನು ಅಗಲದೇ ಇರುವುದರಿಂದ ಇಲ್ಲಿ ತಾಯಿ ದಿನ, ತಂದೆಯ ದಿನ ಎಂಬ ಅಭಾಸಗಳ ಅವಶ್ಯಕತೆಯಿಲ್ಲ. ಹಾಗೆಯೇ ಪ್ರೇಮಿಗಳ ದಿನವೂ ಕೂಡ.
ಪ್ರೇಮ ಮೂಡಿದಾಗ ಕೊನೆಯವರೆಗೂ ನಿಭಾಯಿಸುವ ಕರ್ತವ್ಯಗಾರಿಕೆ, ಎದೆಗಾರಿಕೆ ನಮ್ಮ ಭಾರತೀಯ ರಕ್ತದಲ್ಲಿ ಉಂಟು, ಅಂತೆಯೇ ಇಂಥ ದಿನಗಳಿಗೆ ತಿಲಾಂಜಲಿಯನ್ನಿಡುತ್ತಾ ಪೂರ್ವಿಕರು ಹಾಕಿಕೊಟ್ಟ ಪರಸ್ಪರ ದ್ವೇಷ ಮರೆಸಿ ಪ್ರೇಮ ಸುದಿನಗಳನ್ನು ಆಚರಿಸುವಲ್ಲಿ ಬದುಕನ್ನು ಸಾರ್ಥಕ್ಯಗೊಳಿಸುವುದು ಸರಿ ಅಲ್ಲವೇ. ಇಲ್ಲವೇ ಅವರನ್ನು ಬಿಟ್ಟು ಇವರು, ಇವರನ್ನು ಬಿಟ್ಟು ಮತ್ತೊಬ್ಬರು ಎಂದೆನ್ನುತ್ತಾ ದಾಂಪತ್ಯ ಜೀವನಕ್ಕೆ ಕೊಡಲಿ ಪೆಟ್ಟು ಕೊಡುತ್ತಾ ಪಾಶ್ಚಾತ್ಯರ ಸಂಸ್ಕೃತಿಗೆ ನಾವು ಒಗ್ಗಿಕೊಳ್ಳಬೇಕೆ? ಅಥವಾ ಇಂಗ್ಲೀಷರು ತುಳಿದ ಹಾದಿಯೇ ಸುವರ್ಣಹಾದಿ ಎಂದು ನಾವು ತಿಳಿಯಬೇಕೆ? ನೀವೇ ವಿಚಾರ ಮಾಡಿ.

Leave a Reply