ವ್ಯಕ್ತಿಯ ಬದುಕು ಹಾಗೂ ತಾತ್ವಿಕತೆ.

ವ್ಯಕ್ತಿಯ ಬದುಕು ಹಾಗೂ ತಾತ್ವಿಕತೆ.
ಭಗವದ್ಗೀತೆಯ ಉದ್ದೇಶಗಳಲ್ಲಿ ಅತ್ಯಂತ ಮುಖ್ಯವಾದದ್ದು ವೈಯಕ್ತಿಕ ಬದುಕು ಮತ್ತು ಸಾಮುದಾಯಿಕ ಬದುಕುಗಳ ಮಧ್ಯೆ ಸಾಮರಸ್ಯತೆಯನ್ನು ಉಂಟುಮಾಡುವುದು, ವ್ಯಕ್ತಿ ಮತ್ತು ಸಮಾಜ ಆರೋಗ್ಯದಿಂದಿರಲು ಮತ್ತು ಬದುಕಿನ ಇತಿಮಿತಿಗಳನ್ನು ಮೀರಲು ಸಾಧ್ಯವಾಗುವಂತೆ ಇರಲು ಪ್ರೇರೇಪಿಸುವುದು. ಸಮಾಜದ ಸುಖ ಸಂತೋಷಗಳೊಂದಿಗೇ ವ್ಯಕ್ತಿಯ ಸುಖ ಸಂತೋಷಗಳೂ  ತಳುಕುಹಾಕಿಕೊಂಡಿರುತ್ತವೆ. ವ್ಯಕ್ತಿಯನ್ನು ಸಮಾಜದಿಂದ ಪ್ರತ್ಯೇಕಿಸಿ ಅಥವಾ ಸಮಾಜವನ್ನು ವ್ಯಕ್ತಿಯಿಂದ ಪ್ರತ್ಯೇಕಿಸಿ ವ್ಯಕ್ತಿಯ ಮತ್ತು ಸಮಾಜದ ಅಗತ್ಯಗಳನ್ನಾಗಲೀ, ಕೆಲಸಕಾರ್ಯಗಳನ್ನಾಗಲೀ ಅರ್ಥಮಾಡಿಕೊಳ್ಳ ಬಯಸಿದರೆ ಅದಕ್ಕೆ ಯಾವ ಬೆಲೆಯೂ ಇಲ್ಲ. ವ್ಯಕ್ತಿಯ ಮತ್ತು ಸಮಾಜದ ಆರೋಗ್ಯವು ದಿನನಿತ್ಯದ ಬದುಕನ್ನು ವ್ಯಕ್ತಿ ಹೇಗೆ ನಡೆಸುತ್ತಾನೆ ಎಂಬುದನ್ನು ಅವಲಂಬಿಸಿರುತ್ತದೆ ಎನ್ನುತ್ತದೆ ಭಗವದ್ಗೀತೆ. ಭಗವದ್ಗೀತೆಯ ದೃಷ್ಟಿಯಲ್ಲಿ ತಾತ್ತ್ವಿಕ ಬದುಕು ಮತ್ತು ದೈನಂದಿನ ಧಾರ್ಮಿಕ ನೈತಿಕ ಬದುಕು ಎಂಬುದು ಬೇರೆ ಬೇರೆ ಅಲ್ಲ, ಅವೆರಡೂ ಒಂದೇ. ಅವು ಪ್ರವೃತ್ತಿ ಮತ್ತು ನಿವೃತ್ತಿ ಮಾರ್ಗಗಳ ಸಮನ್ವಯತೆಯೇ ಆಗಿವೆ.
ಹಾಗಾದರೆ ಪ್ರವೃತ್ತಿ ಎಂದರೇನು? ನಮಗೆ ಸಾಮಾನ್ಯವಾಗಿ ಬೇಕಾಗುವ ವಿಷಯಗಳಿಗೆ ಪ್ರಥಮ ಪ್ರಾಶಸ್ತ್ಯ ಕೊಟ್ಟು ಅವುಗಳನ್ನು ಸಂಪಾದಿಸಲು ಸಮಾಜ ಒಪ್ಪಿಕೊಂಡ ರೀತಿಯಲ್ಲಿ ಕೆಲಸ ಮಾಡುವುದೇ ಪ್ರವೃತ್ತಿಮಾರ್ಗ. ಈ ಮಾರ್ಗದಲ್ಲಿ ನಾವು ಏನು ಕೆಲಸ ಮಾಡಬೇಕು, ಹೇಗೆ ಕೆಲಸ ಮಾಡಬೇಕು ಎನ್ನುವುದನ್ನು ಯೋಚಿಸಿ ಕೆಲಸ ಮಾಡುತ್ತೇವೆ. ಬೇಕಾಬಿಟ್ಟಿಯಾಗಿ ಏನನ್ನೂ ಮಾಡುವುದಿಲ್ಲ. ನಮ್ಮ ಆಸೆಗಳ ಮೇಲೆ, ಅವುಗಳನ್ನು ಪೂರೈಸಿಕೊಳ್ಳುವುದರ ಮೇಲೆ ಸಹಜವಾಗಿ ಹಿಡಿತ ಇರುತ್ತದೆ. ನಾವು ಸಂಯಮಿಗಳಾಗಿರಬೇಕು ಎಂದೇನೂ ಪ್ರತ್ಯೇಕವಾಗಿ ಯೋಚಿಸುವುದಿಲ್ಲ. ಇಲ್ಲಿ ವ್ಯಕ್ತಿ ಸಂಪೂರ್ಣವಾಗಿ ನಿಸ್ವಾರ್ಥಿ ಆಗಿರುವುದಿಲ್ಲ. ಸಮಷ್ಟಿಯ ಹಿತಕ್ಕಾಗಿ ತನ್ನ ಹಿತವನ್ನು ತ್ಯಾಗ ಮಾಡುವ ಮನಸ್ಸು ಇರಬೇಕು ಎಂದುಕೊಂಡಿರುವುದಿಲ್ಲ. ತನ್ನದೇ ಆದ ಸುಖ-ಸಂತೋಷಗಳ ಚೌಕಟ್ಟನ್ನು ಬಿಟ್ಟುಕೊಡುವುದಕ್ಕೆ ಆತ ಸಿದ್ಧನಿರುವುದಿಲ್ಲ. ಆದರೂ ಅವನು ಸಮಾಜಮುಖಿ. ತನ್ನ ಜೊತೆಗೆ ಮನೆಯಲ್ಲಿ ಇರುವವರನ್ನು, ಆತ ಸಮಾಜವನ್ನು ನಿರ್ಲಕ್ಷಿಸಲಾರ. ಸಮಾಜವನ್ನು ಮೀರಿ ತನ್ನ ಸುಖ, ಸಂತೋಷ, ಸಂತೃಪ್ತಿ, ಸಮಾಧಾನಗಳಿಗೆ ಅವನು ಸ್ಥಾನ ಕೊಡಲಾರ. ಕೆಲವೊಮ್ಮೆ ಸಮಾಜದ ಹಿತಕ್ಕಾಗಿ ತನ್ನ ಸ್ವಹಿತವನ್ನೂ ಮರೆಯಬೇಕಾಗುತ್ತದೆ.
ಇನ್ನು ನಿವೃತ್ತಿ ಮಾರ್ಗ ಎಂದರೇನು? ನಿವೃತ್ತಿ ಮಾರ್ಗದಲ್ಲಿ ವ್ಯಕ್ತಿ ತನ್ನ ದೇಹ, ಕುಟುಂಬ, ಊರು, ರಾಜ್ಯ, ದೇಶ ಕೋಶ ಇತ್ಯಾದಿ ಎಲ್ಲ ಪ್ರಾಪಂಚಿಕ ಚೌಕಟ್ಟುಗಳನ್ನು ಮೀರುವುದಕ್ಕೆ ಸಿದ್ಧ ಇರುತ್ತಾನೆ. ಕಾಯಾ ವಾಚಾ ಮನಸಾ ಸಂಯಮವನ್ನು ಸಾಧಿಸಬೇಕು ಎಂದುಕೊಳ್ಳುತ್ತಾನೆ. ಸಮಷ್ಟಿಗಾಗಿ ವ್ಯಷ್ಟಿಯನ್ನು ಪಕ್ಕಕ್ಕೆ ಸರಿಸುತ್ತಾನೆ. ಮೊದಲಿಗೆ ತನ್ನ ಅಂತಸ್ಸತ್ವವನ್ನು ವಿಕಾಸ ಪಡಿಸಿಕೊಳ್ಳುತ್ತಾನೆ. ಆನಂತರ ಇದೇ ದಿಕ್ಕಿನಲ್ಲಿ ಇರುವ ಇತರ ಸಾಮಾಜಿಕರಿಗೆ ಮಾರ್ಗದರ್ಶನ ನೀಡಬಯಸುತ್ತಾನೆ. ಇದು ನಿವೃತ್ತಿಮಾರ್ಗದ ಒಂದು ಮುಖ್ಯ ಆಶಯ. ಈ ಮಾರ್ಗವೂ ಸಮಾಜಮುಖಿಯೇ. ನಿವೃತ್ತಿ ಮಾರ್ಗದಲ್ಲಿ ಇರುವವರೂ ಸಮಾಜದ ಸದಸ್ಯರೇ. ಸಮಾಜದಲ್ಲಿ ಎಲ್ಲರೊಂದಿಗೆ ಇದ್ದೂ ಎಲ್ಲಾ ಚೌಕಟ್ಟುಗಳನ್ನು ಮೀರುವುದು ಮತ್ತು ಹಾಗೆ ಮೀರುವುದರಲ್ಲೇ ಸಂತೃಪ್ತನಾಗುವುದು ನಿವೃತ್ತಮಾರ್ಗಿಯ ಸಲ್ಲಕ್ಷಣ.
ಪ್ರವೃತ್ತಿ ನಿವೃತ್ತಿಗಳ ಸಮನ್ವಯತೆಯನ್ನು ಸಾಧಿಸುವ ಬಗೆ ಯಾವುದು? ಪ್ರವೃತ್ತರಾಗಿರಲೀ, ನಿವೃತ್ತರಾಗಿರಲೀ ಎಲ್ಲರಿಗೂ ಪ್ರಾಪಂಚಿಕವಾದ ಆವರಣವೊಂದು ಸಹಜವಾಗಿ ಇರುತ್ತದೆ. ಅದಕ್ಕೆ ಅನುಗುಣವಾಗಿ ಕೆಲಸ ಕಾರ್ಯ, ಕರ್ತವ್ಯ ಜವಾಬ್ದಾರಿಗಳ ನಿರ್ವಹಣೆಯೂ ಇರುತ್ತದೆ. ಅದರಿಂದ ಉಂಟಾಗುವ ಫಲಗಳ ಪರಿಣಾಮಗಳನ್ನು ಮಾತ್ರ ಮಾನಸಿಕವಾಗಿ ತ್ಯಾಗ ಮಾಡಿದರೆ ಅವರು ತಮ್ಮನ್ನು ನಿರ್ಬಂಧಿಸುವ ಎಲ್ಲ ರೀತಿಯ ಚೌಕಟ್ಟುಗಳನ್ನು ನಿರಾಕರಿಸಿದಂತೆಯೇ. ಪ್ರವೃತ್ತರಾದರೂ ನಿವೃತ್ತರಾದಂತೆಯೇ. ನಿವೃತ್ತರಾದರೂ ಪ್ರವೃತ್ತರಾದಂತೆಯೇ. ಪ್ರವೃತ್ತಿ ಮತ್ತು ನಿವೃತ್ತಿ ಮಾರ್ಗಗಳೆರಡನ್ನೂ ಸಮನ್ವಯಗೊಳಿಸಿದಂತೆಯೇ. ವ್ಯಕ್ತಿಯ ಈ ರೀತಿಯ ಬದುಕು ಅವನ ಬದುಕಿಗೆ, ಪ್ರಪಂಚದಲ್ಲಿಯ ಅವನ ಅಸ್ತಿತ್ವಕ್ಕೆ ಪ್ರಾಮುಖ್ಯತೆಯನ್ನು ಒದಗಿಸಿಕೊಡುತ್ತದೆ, ಅದನ್ನು ಅರ್ಥಪೂರ್ಣವಾಗಿಸುತ್ತದೆ ಎಂದು ಹೇಳುವ ಭಗವದ್ಗೀತೆಯು ಪ್ರವೃತ್ತಿ-ನಿವೃತ್ತಿಗಳ ಪರಿಕಲ್ಪನೆಗೆ ಹೊಸ ಆಯಾಮವನ್ನು ನೀಡುತ್ತದೆ.
ದಿನನಿತ್ಯದ ಬದುಕಿನಲ್ಲಿ ವ್ಯಕ್ತಿ ಮತ್ತು ಅವನ ಸಮುದಾಯದ ಆಸೆ-ಆಕಾಂಕ್ಷೆಗಳ ನಡುವೆ ಸಾಮರಸ್ಯತೆ ಇರಬೇಕು. ಅವು ಸಮನ್ವಯಗೊಂಡಿರಬೇಕು. ಇಂಥ ಬದುಕನ್ನು ನಮ್ಮದನ್ನಾಗಿಸಿಕೊಳ್ಳಲು ಪರಮ ಪುರುಷಾರ್ಥಗಳು ಅಥವಾ ಪರಮ ಮೌಲ್ಯಗಳು, ಮಾನದಂಡ ಅಥವಾ ಮಾರ್ಗೋಪಾಯಗಳು ಭಾರತೀಯ ಚಿಂತಕರ ಪ್ರಕಾರ ಧರ್ಮಾರ್ಥಕಾಮಮೋಕ್ಷಗಳು. ಅವು ಜೀವನದ ಪರಮ ಪುರುಷಾರ್ಥಗಳು. ಭಗವದ್ಗೀತೆಯ ಪ್ರಕಾರ ಕೂಡ ಧರ್ಮ, ಅರ್ಥ, ಕಾಮ, ಮೋಕ್ಷಗಳೇ ಪರಮ ಪುರುಷಾರ್ಥಗಳು. ಒಬ್ಬನೇ ಸುಖ ಭೋಗಗಳನ್ನು ಅನುಭವಿಸಲು ಬಯಸುವುದು ಸ್ವಾರ್ಥ. ಅದು ಪಾಪವೂ ಹೌದು. ಇದನ್ನೂ ಭಗವದ್ಗೀತೆ ತನ್ನದೇ ಆದ ರೀತಿಯಲ್ಲಿ ವಿವರಿಸುತ್ತದೆ.
ಪ್ರತಿಯೊಬ್ಬರಿಗೂ ಅವರವರದೇ ಆದ ಸ್ವಭಾವ ಅಂದರೆ ಸ್ವಧರ್ಮ ಇದೆ; ಇಲ್ಲಿ ಧರ್ಮ ಎಂದರೆ ಜಾತಿಯಲ್ಲ. ಅದು ವೃತ್ತಿಧರ್ಮ. ಅದಕ್ಕೆ ಅನುಗುಣವಾಗಿ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಯೋಗ್ಯರೀತಿಯಿಂದ ವೃತ್ತಿ ನಿರ್ವಹಣೆ ಮತ್ತು ಜೀವನ ನಿರ್ವಹಣೆ ಮಾಡಿದರೆ ಧರ್ಮ ಮತ್ತು ಅರ್ಥಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಂತೆಯೇ. ವೈಯಕ್ತಿಕ ಮತ್ತು ಸಾಮುದಾಯಿಕ ಹಿತಕ್ಕೆ ಧಕ್ಕೆ ಬಾರದಂತೆ ಕಾಮನೆಗಳನ್ನು ಈಡೇರಿಸಿಕೊಂಡರೆ ಕಾಮ ಮೌಲ್ಯವನ್ನು ಬದುಕಿನಲ್ಲಿ ಅಳವಡಿಸಿಕೊಂಡಂತೆಯೇ, ಮೋಕ್ಷ ಮೌಲ್ಯವನ್ನು ಬದುಕಿನ ಅವಿಭಾಜ್ಯ ಅಂಗವಾಗಿಸಿಕೊಳ್ಳುವ ಹಾದಿಯಲ್ಲಿ ನಡೆಯಲಾರಂಭಿಸಿದಂತೆಯೇ ಎಂದು ಭಗವದ್ಗೀತೆ ಪುರುಷಾರ್ಥಗಳನ್ನು ಸರಳವಾಗಿ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ರೀತಿಯನ್ನು ಗಮನಕ್ಕೆ ತರುತ್ತದೆ.
ಅರ್ಥಪೂರ್ಣ ಬದುಕು ಎಂದರೇನು? ಅಂಥ ಬದುಕನ್ನು ಸಾಗಿಸಲು ಮಾನವನು ಯಾವ ಮಾರ್ಗವನ್ನು ಅನುಸರಿಸಬೇಕು? ಇದಕ್ಕೆ ಉತ್ತರವಾಗಿ ಆತ್ಮ ಕಲ್ಯಾಣದ ಸಾಧನೆಯೇ ಮಾನವನ ಪ್ರಮುಖ ಗುರಿಯಾಗಬೇಕೆಂಬುದೇ ಭಗವದ್ಗೀತೆಯ ಮುಖ್ಯ ಸೂಕ್ತಿಯು ಸಾರುತ್ತದೆ. ವರ್ತಮಾನದಲ್ಲಿ ನಾವು ಹೇಗೆ ಬದುಕುತ್ತೇವೆ ಎಂಬುದನ್ನು ಅವಲಂಬಿಸಿ ನಮಗೆ ಮೋಕ್ಷ ದೊರೆಯುತ್ತದೆಯೋ ಇಲ್ಲವೋ ಎಂಬುದು ನಿರ್ಧಾರವಾಗುತ್ತದೆ. ಮೋಕ್ಷ ಎಂದರೆ ಅರ್ಥಪೂರ್ಣ ಬದುಕು ಎಂದು ಅರ್ಥೈಸುವ ಭಗವದ್ಗೀತೆ ಬದುಕಿರುವಾಗಲೇ ಪಡೆಯಬಹುದಾದ ಜೀವನ್ಮುಕ್ತಿಯನ್ನು ಎತ್ತಿಹಿಡಿಯುತ್ತದೆ. ಬಹುಪಾಲು ಉಪನಿಷತ್ತುಗಳು, ಮೂರೂ ವೇದಾಂತ ಶಾಖೆಗಳೂ, ಬೌದ್ಧ ಹಾಗೂ ಜೈನ ಸಿದ್ದಾಂತಗಳೂ ಮರಣೋತ್ತರ ಮೋಕ್ಷದ ಸಾಧ್ಯತೆಯನ್ನೇ ನಮ್ಮ ಅರ್ಥಪೂರ್ಣ ಬದುಕಿನ ಸಾಧ್ಯತೆಯನ್ನಾಗಿ ನಮ್ಮ ಮುಂದಿಡುವುದು. ಆದರೆ ಇವುಗಳಿಗಿಂತ ವಿಭಿನ್ನವಾಗಿ ವಸ್ತುಸ್ಥಿತಿಯನ್ನು ಪರಿಶೀಲಿಸುತ್ತದೆ ಭಗವದ್ಗೀತೆ. ಮರಣವೆಂಬುದೇ ಇಲ್ಲದಿರುವಾಗ ಮರಣೋತ್ತರ ಎಂಬ ಪ್ರಶ್ನೆಯೇ ಹುಟ್ಟದು. ಎಲ್ಲರೂ ಅನಾದಿ ಕಾಲದಿಂದಲೂ ಇದ್ದಾರೆ; ಇಲ್ಲಿ  ಸಾವು ಎಂಬುದು  ಕೇವಲ ಭೌತಿಕ ಶರೀರಕ್ಕೆ ಮಾತ್ರ. ಎಲ್ಲರಲ್ಲೂ ಇರುವ ಆತ್ಮವೆಂಬುದು ಶಾಶ್ವತವಾದದ್ದು; ಮಾನವ ಜೀವನ ಅಖಂಡವಾದದ್ದು. ಅವನ ಇಂದಿನ ಮತ್ತು ಮುಂದಿನ ಜೀವನಗಳ ನಡುವೆ (ಬದುಕು ಮತ್ತು ಸಾವಿನ ನಡುವೆ) ಘರ್ಷಣೆ ಇಲ್ಲ. ಈ ಐಹಿಕ ಜೀವನವು ತಾತ್ಕಾಲಿಕ ವಸತಿತಾಣವಾಗಿ, ಮಾಯಾತ್ಮಕವಾಗಿ ಕಂಡುಬಂದರೂ ಒಳ್ಳೆಯ ಬದುಕನ್ನು ನಡೆಸಲು ಆಶಿಸುವ ಸಜ್ಜನರಿಗೆ ಈ ಲೌಕಿಕ ಬದುಕು ಆತ್ಮಕಲ್ಯಾಣದ ಹಾದಿಯಲ್ಲಿ ಒಂದು ಮುಖ್ಯವಾದ ಘಟ್ಟವೇ ಎನ್ನುತ್ತದೆ. ನಾವು ಮಾಡಿದ ಕರ್ಮಗಳ ಫಲವನ್ನು ಈ ಜನ್ಮದಲ್ಲಿಯೇ ಅನುಭವಿಸಬೇಕು.. ಈ ಕೈಯಲ್ಲಿ ಮಾಡುವುದು, ಇನ್ನೊಂದು ಕೈಯಲ್ಲಿ ಉಣ್ಣುವುದು ಎಂದು ಹಿರಿಯರು ಅದಕ್ಕಾಗಿಯೇ ಹೇಳುತ್ತಾರೆ. ‘ಮರ್ತ್ಯ ಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ’,  ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯ’ ಎಂದು ಹೇಳಿರುವುದಕ್ಕೆ ಕಾರಣವೇ ಈ ಕರ್ಮಭೂಮಿ!
ವಾಸ್ತವಿಕವಾಗಿ ಪ್ರಪಂಚವನ್ನಾಗಲೀ, ಪ್ರಪಂಚದಲ್ಲಿ ದೊರಕುವ ಸುಖ ದುಃಖಗಳನ್ನಾಗಲೀ, ಪ್ರಾಪಂಚಿಕ ಇತಿಮಿತಿ, ಚೌಕಟ್ಟುಬಂಧವನ್ನಾಗಲೀ ಒಪ್ಪಿಕೊಳ್ಳದೇ ಇರಲು ಸಾಧ್ಯವಿಲ್ಲ. ಪ್ರಪಂಚದಲ್ಲಿ ಬಾಳನ್ನು ಸಾಗಿಸಲೇಬೇಕು, ಜವಾಬ್ದಾರಿಗಳನ್ನು ನಿರ್ವಹಿಸಲೇಬೇಕು; ಅದೇ ಸಹಜವಾದದ್ದು. ವ್ಯಕ್ತಿ ತನಗಾಗಿ, ತನ್ನ ಕುಟುಂಬ, ಸಮಾಜ, ರಾಜ್ಯ, ಸುತ್ತಲಿನ ಪರಿಸರಕ್ಕಾಗಿ ಅತ್ಯಾವಶ್ಯಕವಾಗಿ ಮಾಡಬೇಕಾದ ಕರ್ಮ, ಕರ್ತವ್ಯಗಳನ್ನು ನಿರ್ವಹಿಸುತ್ತಾ ಕರ್ಮಾನುಷ್ಠಾನಿ ಆಗಲೇಬೇಕು. ವ್ಯಕ್ತಿಯ ಕರ್ತವ್ಯಗಳು ಮಾನವ ಸಮಾಜಕ್ಕೆ ಮಾತ್ರ ಸೀಮಿತವಾದದ್ದು ಅಲ್ಲ, ಸಮಸ್ತ ಚರಾಚರ ಜಗತ್ತನ್ನು ಅವು ವ್ಯಾಪಿಸುತ್ತವೆ. ನೈತಿಕ ಪ್ರಜ್ಞೆ ಇಲ್ಲದಿರುವವುಗಳಿಗೆ ತಾವೇ ತಿಳಿದು ಮಾಡಬೇಕಾದ ಕರ್ತವ್ಯಗಳು ಇಲ್ಲದಿರಬಹುದು. ಆದರೆ ಅವುಗಳಿಗೆ ಸಲ್ಲಿಸಬೇಕಾದ ಯಾವ ಕರ್ತವ್ಯಗಳೂ ಮನುಷ್ಯನಿಗೆ ಇಲ್ಲ ಎಂದು ಎನ್ನಲಾಗುವುದಿಲ್ಲ. ಲೋಕಕಲ್ಯಾಣಕ್ಕಾಗಿ ಕರ್ಮ-ಕರ್ತವ್ಯವನ್ನು ಮಾಡಲೇಬೇಕು ಎಂದು ಭಗವದ್ಗೀತೆ ಒತ್ತಾಯಿಸುತ್ತದೆ.
ಸಾಮಾಜಿಕ ಜೀವನದ ಬಗ್ಗೆ ಜಿಗುಪ್ಸೆ ಇರಬಾರದು; ಅದರ ಬಗ್ಗೆ ಉದಾಸೀನತೆ ತೋರಬಾರದು; ಕರ್ಮಾನುಷ್ಠಾನದಲ್ಲಿ ಸೂಚ್ಯವಾಗಿರುವ ನಿರ್ಲಿಪ್ತತೆಯನ್ನು, ಸ್ವಾರ್ಥತ್ಯಾಗವನ್ನು ರೂಢಿಸಿಕೊಳ್ಳಬೇಕು; ಜೊತೆಗಾರರ ಬಗೆಗೆ ಪ್ರೀತಿ-ದಯೆ-ಅನುಕಂಪಗಳನ್ನು ಹೊಂದಿರಬೇಕು; ಸಮಸ್ತ ಜೀವ ಹಾಗೂ ನಿರ್ಜೀವರಾಶಿಯನ್ನು ಒಳಗೊಳ್ಳುವ ವಿಸ್ತಾರವಾದ ಸಮಷ್ಟಿಯ ಬಗೆಗೆ ಮೈತ್ರಿಭಾವ ಇರಬೇಕು; ಅಹಿಂಸೆ, ಕರ್ಮಾನುಷ್ಠಾನ ಮತ್ತು ದೇವೋಪಾಸನೆಗಳಿಂದ ಕೂಡಿಕೊಂಡು ಆಸುರೀ ಗುಣಗಳಿಂದ ದೂರ ಸರಿಯುತ್ತಾ ಹೋಗಬೇಕು; ದೈವೀಗುಣಗಳನ್ನು ಸಂಪಾದಿಸಬೇಕು; ತಾಮಸಿಕ ಗುಣದ ಜಡತ್ವವನ್ನು ಕೊಡವಿಕೊಳ್ಳಬೇಕು; ರಾಜಸಿಕ ಗುಣದ ಕ್ರಿಯಾಶೀಲತೆಗೆ ತನು-ಮನ-ಧನಗಳನ್ನು ಒಡ್ಡಿಕೊಳ್ಳಬೇಕು; ಶ್ರದ್ಧೆ-ರೂಢಿ-ಅಭ್ಯಾಸಗಳನ್ನು ತರ್ಕ-ಅನುಭವ-ಅನುಭಾವಗಳ ಒರೆಗಲ್ಲಿಗೆ ಹಚ್ಚಿ, ಅರಿವು ಪಡೆದು, ಸಾತ್ವಿಕ ಗುಣಗಳಾದ ಔದಾರ್ಯ, ಶಾಂತಿ, ನಿರಾಳತೆಗಳ ವ್ಯಕ್ತಿತ್ವವನ್ನು ತನ್ನದಾಗಿಸಿಕೊಳ್ಳಬೇಕು ಎನ್ನುವ ಗುರಿಯನ್ನು ಭಗವದ್ಗೀತೆ ನಮ್ಮ ಮುಂದಿಡುತ್ತದೆ. ಇದೇ ಲೋಕಕಲ್ಯಾಣಕ್ಕಾಗಿ ರೂಪಿಸಿಕೊಂಡ ಮತ್ತು ಮೋಕ್ಷ ಮೌಲ್ಯವನ್ನು ಸಿದ್ಧಿಸಿಕೊಂಡ ಪರಮ ಸಾರ್ಥಕ ಬದುಕು ಎಂದು ಸ್ಪಷ್ಟಪಡಿಸುತ್ತದೆ. ದಯೆಯೇ ಧರ್ಮದ ಮೂಲವಾಗಿದ್ದುದೇ ಈ ಹಂತದಲ್ಲಿ!
ಒಂದು ಮುಖ್ಯವಾದ ಪ್ರಶ್ನೆ ನಮಗೆ ಬೇಕಾದಂತೆ ನಮ್ಮ ಜೀವನವನ್ನು ಅರ್ಥಪೂರ್ಣವಾಗಿಸಿಕೊಳ್ಳುವ, ಶಾಂತತೆಯ ಆನಂದದ ಅನುಭವವನ್ನು ಪಡೆಯುವ ಸ್ವಾತಂತ್ರ‍್ಯ ನಮಗೆ ಇದೆಯೇ ಎಂಬುದು. ಭಗವದ್ಗೀತೆಯು ವ್ಯಕ್ತಿ ಎಂಬುವವನು ದೇಹ, ಮನಸ್ಸು ಮತ್ತು ಅವುಗಳ ಕ್ರಿಯೆಗಳ ಒಂದು ಸಂಕೀರ್ಣತೆ; ವ್ಯಕ್ತಿಯು ಸತ್ತಾಗ ಅವನ ಸೂಕ್ಷ್ಮ ಶರೀರದ ಜೊತೆಗೆ ಅವನ ವಿದ್ಯಾ (ಜ್ಞಾನ) ಮತ್ತು ಕರ್ಮ (ಆಸೆ) ಗಳೂ ಅವನ ಸ್ಥೂಲ ಶರೀರದಿಂದ ಹೊರಬೀಳುತ್ತವೆ; ಅವು ಅವನ ಮುಂದಿನ ಜೀವನಗತಿಯನ್ನು ನಿರ್ಧರಿಸುತ್ತವೆ; ವ್ಯಕ್ತಿಯ ಜೀವನಗತಿ ಬಂಧನಕಾರಿಯೋ ಅಥವಾ ವಿಮೋಚನಕಾರಿಯೋ ಎಂಬುದು ವ್ಯಕ್ತಿಯನ್ನೇ ಅವಲಂಬಿಸಿರುತ್ತದೆ ಎನ್ನುತ್ತದೆ.
ವ್ಯಕ್ತಿ ಮೂಲಭೂತವಾಗಿ ಕರ್ತೃ ಭೋಕ್ತ ಜ್ಞಾತೃ. ಒಬ್ಬನ ವಿಚಾರಕ್ಕೆ, ನಡೆವಳಿಕೆಗೆ, ಭಾವನೆಗಳಿಗೆ ಅವನೇ ಕಾರಣ. ಅವನ ತಪ್ಪು ಗ್ರಹಿಕೆಯಾಧಾರಿತ ಕರ್ಮ, ಅವನ ಕರ್ಮವು ಉಂಟುಮಾಡುವ ಸೀಮಿತ ಜ್ಞಾನ ಎರಡೂ ಅವನನ್ನು ಬಂಧಿಸುತ್ತವೆ. ಅವನು ಎಲ್ಲಿಯವರೆಗೆ ತನ್ನ ಆಸೆ-ಆಕಾಂಕ್ಷೆ, ಲಾಭ-ನಷ್ಟ, ಸುಖ-ದುಃಖ ಇವುಗಳ ದೃಷ್ಟಿಕೋನದಿಂದ ಕರ್ಮವನ್ನು ಮಾಡುತ್ತಿರುತ್ತಾನೆಯೋ ಅಲ್ಲಿಯವರೆಗೂ ಅವನ ಗ್ರಹಿಕೆ ಮತ್ತು ಕರ್ಮಗಳೆರಡೂ ಸೀಮಿತ ವ್ಯಾಪ್ತಿಯನ್ನು ಹೊಂದಿರುತ್ತವೆ. ಆ ಸೀಮಿತತೆಯೇ ಅವನ ಬಂಧನ. ಅವನೇ ನಿರ್ಮಿಸಿಕೊಂಡದ್ದು. ವ್ಯಕ್ತಿಗೆ ಅವನ ಬಂಧನವೇ ಸುಖಕರವಾಗಿರಬಹುದು. ಅವನು ಯಾವ ರೀತಿಯಲ್ಲಿ ಯೋಚಿಸುವನೋ ಹಾಗೆಯೇ ಅವನ ಜೀವನ. ಅವನ ಸುಖ-ದುಃಖ, ಸಂತೋಷ-ಅಸಂತೋಷ, ಸಮಾಧಾನ-ಅಸಮಾಧಾನಗಳಿಗೆ ಅವನ ಮನಸ್ಸೇ ಕಾರಣ. ಅವನು ಸ್ವ-ದೃಷ್ಟಿಕೋನವನ್ನು ಕೈ ಬಿಟ್ಟು ಎಲ್ಲವನ್ನು ಅವು ಇರುವಂತೆಯೇ ಒಪ್ಪಿಕೊಂಡರೆ ಅವನ ಗ್ರಹಿಕೆಯ ಕರ್ಮಗಳು ವ್ಯಾಪಕತೆಯನ್ನು ಪಡೆಯುತ್ತಾ ಹೋಗುತ್ತವೆ. ಅವನ ಬಂಧನದ ವ್ಯಾಪ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ಇದೂ ಅವನೇ ನಿರ್ಮಿಸಿಕೊಂಡದ್ದು.
ವ್ಯಕ್ತಿಯು ಇಲ್ಲದಿದ್ದರೂ ಅವನಿಲ್ಲದ ಜಗತ್ತು ಯಾವಾಗಲೂ ಇದ್ದೇ ಇರುತ್ತದೆ. ಅದು ಅವನನ್ನು ಕಟ್ಟಿಹಾಕುವುದೂ ಇಲ್ಲ, ಅವನು ಅದರಿಂದ ಬಿಡಿಸಿಕೊಳ್ಳುವುದೂ ಇಲ್ಲ. ಅವನು ಸ್ವೇಚ್ಛೆಯಾಗಿರಲೂ ಅದು ಬಿಡುವುದಿಲ್ಲ, ಅದರ ಪಾಡಿಗೆ ಅದು, ನನ್ನ ಪಾಡಿಗೆ ನಾನು ಎಂದು ಅದರಿಂದ ಪ್ರತ್ಯೇಕಿತನಾಗಿ ಇರಲೂ ಅದು ಬಿಡುವುದಿಲ್ಲ. ಅವನು ಅದನ್ನು ಕುರಿತು ಭಾವಿಸಿ ಅರಿವನ್ನು ಪಡೆಯುತ್ತಲೇ ಇರುತ್ತಾನೆ, ಆ ಅರಿವಿಗೆ ಅನುಗುಣವಾಗಿ ಪ್ರಪಂಚದಲ್ಲಿ ಕೆಲಸ, ಕರ್ಮ ಮಾಡುತ್ತಲೇ ಇರುತ್ತಾನೆ, ಆ ಕರ್ಮಫಲವನ್ನು ಅನುಭವಿಸುತ್ತಲೇ ಇರುತ್ತಾನೆ. ಕಾರ್ಯ-ಕಾರಣಾತ್ಮಕವಾದ ಜಗತ್ತಿನ ವಿದ್ಯಮಾನಗಳನ್ನು ಪರಿಶೀಲಿಸಿದಾಗ ಅವೆಲ್ಲವೂ ಅತ್ಯುಚ್ಚ ಮೌಲ್ಯವೂ, ಸಕಲ ಚರಾಚರಗಳ ಸೃಷ್ಟಿ ಸ್ಥಿತಿ ಲಯ ಕರ್ತೃವೂ, ಎಲ್ಲದರ ಕ್ರಿಯಾತ್ಮಕ ತತ್ತ್ವವೂ ಮತ್ತು ಅವೆಲ್ಲವುಗಳಿಗಿಂತ ಮಿಗಿಲಾದ, ಅವೆಲ್ಲವುಗಳಿಗೆ ಅತೀತವಾಗಿ ಇರುವ ಭಗವಂತನ, ಪರಮ ವಾಸ್ತವಿಕತೆಯ ಕಡೆಗೆ ನಿರ್ದೇಶಿತವಾಗಿವೆ ಎಂಬ ಅರಿವು ಹೃದಯವನ್ನು ತುಂಬುತ್ತದೆ. ವಿಶ್ವವನ್ನು ಕುರಿತು ಒಂದು ವಿಲಕ್ಷಣವಾದ ಭರವಸೆ ಉಂಟಾಗುತ್ತದೆ. ಜೀವನವನ್ನು ಅದರ ಎಲ್ಲಾ ಸಂಕೀರ್ಣತೆ, ವ್ಯಾಪಕತೆಯೊಂದಿಗೆ ಶಾಂತಿಯುತವಾಗಿ ಒಪ್ಪಿಕೊಳ್ಳುವ ಮನಸ್ಥಿತಿ ಉಂಟಾಗುತ್ತದೆ ಮತ್ತು ಮೋಕ್ಷಸಾಧನೆಯ ಪಥದಲ್ಲಿ ವ್ಯಕ್ತಿ ಸದೃಢ ಹೆಜ್ಜೆ ಇರಿಸುತ್ತಾನೆ, ಮಾನವೀಯವಾಗಿರುತ್ತಾನೆ ಎಂದು ಭಗವದ್ಗೀತೆ ಭರವಸೆ ನೀಡುತ್ತದೆ.
**

Leave a Reply