ಹಾಗೇ ಸುಮ್ಮನೇ

ಹಾಗೇ ಸುಮ್ಮನೇ
ಸ್ಕೂಟೀ ತೆಗೆದುಕೊಂಡ ಹೊಸದಾಗಿ ಲೈಸನ್ಸು ಮಾಡಿಸುವುದಿತ್ತು. ಆರ್.ಟಿ.ಓ. ಆಫೀಸಿಗೆ ಹೋದೆ. ಯಾರನ್ನು ಭೆಟ್ಟಿಯಾಗುವುದೆಂದು   ತಿಳಿಯದೆ ಅತ್ತಿತ್ತ ನೋಡುತ್ತ ನಿಂತಿದ್ದೆ.
ಅಲ್ಲಿ RTO (ಲೋಕಲ್ ಹೆಡ್ ಆಫೀಸರ) ಅಂತ ಬರೆದ ಬೋರ್ಡು ಕಾಣಿಸಿತು. ಅಲ್ಲಿ ಹೋಗಿ ನಿಂತೆ. ‘ಕನ್ನಡಕ ಹಾಕಿದ ಬೋಳು ತಲೆಯ ವ್ಯಕ್ತಿಯೊಂದು ‘ಏನ ಬೇಕಾಗಿತ್ತು’ ಎಂಬುದನ್ನು ತನ್ನ ಹುಬ್ಬನ್ನಷ್ಟೆ ಮೇಲಕ್ಕೇರಿಸಿ ಕೇಳಿದ.
‘ಲೈಸನ್ನರೀ’
‘ಹಂಗಾದ್ರೆ ಇನ್ನೊಂದು ಆ ಕಡೆ ಟೇಬಲ್ಲಿಗೆ ಹೋಗ್ರಿ’ ಎಂದು ತೋರಿಸಿ ತನ್ನ ಮುಂದಿನ ಪೈಲಿನಲ್ಲಿ ತಲೆ ಹುದುಗಿಸಿ ಕುಳಿತ. ಪಕ್ಕದ ಟೇಬಲ್ಲೇನೋ ಎಂದು ಪಕ್ಕಕ್ಕೆ ಹೋದರೆ ಆತ ಮತ್ತೆ ಅದೇ ಪ್ರಶ್ನೆ ಮತ್ತೆ ನನ್ನದು ಅದೇ ಉತ್ತರ. ಮತ್ತೆ ಆತ ಇನ್ನೊಂದು ಟೇಬಲ್ಲಿಗೆ ಕೈ ಮಾಡಿ ತೋರಿಸಿ ಅಲ್ಲಿ ಹೋಗ್ರಿ ಅಂತ ಹೇಳಿ ಮೊಬೈಲ್ಲಿನ ಬಟನ್ನನ್ನು ಒತ್ತುತ್ತಾ ಕುಳಿತಕೊಂಡ. ಅವ ತೋರಿಸಿದ ಟೇಬಲ್ಲಿಗೆ ಹೋದೆ. ಮತ್ತೆ ಅವನದು ಅದೇ ಪ್ರಶ್ನೆ ನನ್ನದು ಅದೇ ಉತ್ತರ. ಇಲ್ಲಿ ಮೊದಲಿಗೆ ಸ್ವಲ್ಪ ವಿನಮ್ರವಾಗಿ ‘ನಮಸ್ಕಾರ ಸರ್’ ಎಂದಿದ್ದೆ. ಪ್ರತಿ ನಮಸ್ಕಾರವೇನೋ ಹೇಳಿದ. ಅದರೆ ಆತನ ಮುಂದೆ ನಿಂತಾಗ ಕೆಂಪನೆಯ ಹಲ್ಲುಗಳಿಂದ ಅಥೋನಾಥ ದುರ್ಗಂಧ ಬರುತ್ತಿತ್ತು. ಆದರೂ ಸಹಿಸಿಕೊಂಡೆ. ‘ಏನು ಬೇಕಾಗಿತ್ತು ‘ಬಾಯಿ ಬಿಟ್ಟೇ ಕೇಳಿದ.
‘ಲೈಸೆನ್ನರಿ’
‘ಟೂವ್ಹೀಲರೋ ಫೋರ ವ್ಹೀಲರೋ’
‘ಟೂವ್ಹೀಲರ್ರೀ’
‘ಹಂಗಾರ ನಿಮಗ ಹೊಡೀಲಿಕ್ಕೆ ಬರ್ತದೇನ್ರಿ?’
‘ಹೂಂನ್ರೀ’
‘ಹಂಗಾರ ಹೊಡದ ತೋರ್ಸಬೇಕಲ್ರಿ, ಟೆಸ್ಟ್ ಮಾಡಿದ ಮ್ಯಾಲೆ ಲೈಸನ್ಸು’ ಫೈಲಿನಲ್ಲಿ ತಲೆ ಹುದುಗಿಸಿ ಕುಳಿತುಬಿಟ್ಟ.
‘ಸರ್ ನಾ ಇವತ್ತ ಗಾಡಿ ತಂದಿಲ್ರೀ, ಲೈಸನ್ಸು ಇಲ್ಲ ಅಂತ.’
‘ಹಂಗಾರ ಗಾಡಿ ತೊಗೊಂಡು ಬಂದ ಮ್ಯಾಲೇನ ಲೈಸನ್ಸು’
ಮುಂದೆ ಮಾತನಾಡಲಿಕ್ಕೆ ಅವಕಾಶನ ಇಲ್ದ ಫೋನಿನಲ್ಲಿ ಮಾತನಾಡತೊಡಗಿದ. ಒಂದಿನಿತೂ ಲಕ್ಷ್ಯ ಕೊಡದೇ.
ಏನ ಮಾಡಬೇಕು ಅನ್ನು ದಿಗಿಲು ನನ್ನ ಕಾಡಲಿಕ್ಕತ್ತಿತ್ತು. ಅಷ್ಟರಲ್ಲಿ ನವಯುವಕ ಕೈ ಹೊಸೆಯುತ್ತ ನನ್ನ ಪಕ್ಕದಲ್ಲೇ ಬಂದು ನಿಂತು ‘ಲೈಸನ್ಸು ಬೇಕೇನ್ರೀ. ಒಂದ ತಾಸನ್ಯಾಗನ ನಿಮ್ಮ ಕೈಯ್ಯಾಗ ಇರ್ತದ.’
‘ಅದ್ಹ್ಯಾಂಗ್ರೀ’ ಕುತೂಹಲಭರಿತಳಾಗಿ ಕೇಳಿದೆ.
‘ನೋಡ್ರಿ ನಿಮಗ ಒಟ್ಟ ಲೈಸನ್ಸ್ ಬೇಕಿಲ್ಲೋ ಮುಗೀತು. ಸಿಕ್ಕಾಂಗ ಅಂತ ತಿಳ್ಕೋರ್ರಿ. ಆ ಬ್ರೆಕ್ ಇನ್ಸ್ ಪೆಕ್ಟರ್ ನ ಬೆನ್ನ ಹತ್ತಿದ್ರ ತಿಂಗಳಾದ್ರೂ ನಿಮಗ ಲೈಸನ್ಸು ಸಿಗೊದಿಲ್ಲ.’
‘ಅಂದ್ರ ನಿನಗೇನರ ಮತ್ತ…… ಕೊಡಬೇಕ್ತಾದೇನು? ಹಂಗ ಸುಮ್ಮನ ಕೇಳ್ದೆ…..’
‘ಹೂಂನ್ರಿ ಅದರಾಗ್ಯಾಕ ಮುಚ್ಚಮರಿ. ಈಗ ಕಮೀಶನ್ ಎಲ್ಲೆಲ್ಲೆ ಇಲ್ಲಾ….. ಪ್ರಧಾನಮಂತ್ರಿಯಿಂದ ಪಂಚಾಯ್ತಿ ಕ್ಲಾರ್ಕನತನಾನು……ನಾನು ಹೇಳಿ ಕೇಳಿ ಕಮೀಶನ್ ಏಜಂಟ್….. ನೀವು ಎಂಟು ದಿನಾನೋ ಹದಿನೈದು ದಿನಾನೋ ಅಡ್ಡ್ಯಾಡಿ ಅಡ್ಡ್ಯಾಡಿ ಹಂಗ ಚಪ್ಪಲಿ ಹರಕೋತೀರಿ, ಮೈಯ್ಯಾಗಿನ ಅರಿವಿ ಹರಕೋತಿರಿ. ಅದರ ನಿಮಗ ಲೈಸನ್ನು ಸಿಗೋದಿಲ್ಲ. ಆದ್ರ ನಮ್ಮ ಕೈಯಾಗ ಒಂದಿಷ್ಟ ಬಿಸಿ ಮಾಡಿದ್ರ ಒಂದ ಘಳಿಗ್ಯಾಗ ಲೈಸನ್ಸು ನಿಮ್ಮ ಕೈಯ್ಯಾಗ…… ಚಪ್ಪಲೀನೂ ಉಳಿತಾವೂ….. ಅರವಿನೂ ಉಳೀತಾವೂ…..’
ಹೌದಲ್ಲ ಅಂತ ಅನಿಸಿತು. ಮುಂದ ಒಂದ ತಾಸನ್ಯಾಗ ಯಾವ ಟೆಸ್ಟಿಂಗ್ ಇಲ್ಲ ಯಾವ ಪೇಪರ ಇಲ್ಲ. ಸಿಗ್ನಲ್ ಟೆಸ್ಟ್ ಇಲ್ಲನ ನನ್ನ ಕೈಯ್ಯಾಗ ಲೈಸನ್ಸು ಬಂತು. ಹಂಗ ಸುಮ್ಮನ ತೊಗೋರಿ ಅಂತ ಏಜೆಂಟಗ ಕಮೀಷನ್ ಜೋಡಿ ಒಂದ ಕಪ್ಪ ಚಹಾ ಕುಡಿಸಿದ್ರ ಅವನೂ ಖುಷಿ ನಾನೂ ಖುಷಿ.
ಮೊನ್ನೆ ಮನೀಗೆ ಹೋಗಲಿಕ್ಕೆ ವೇಳ್ಯಾ ಆಗಿತ್ತು. ಅವಸರದಿಂದ ಸ್ಕೂಟೀ ಸ್ಟಾರ್ಟ ಮಾಡಿ ಹೊರಟಿದ್ದೆ. ತಿಂಗಳಕೊನೀ ಬ್ಯಾರೇ, ಪರ್ಸಿನಲ್ಲಿ ಇರುವ ರೊಕ್ಕ ತುಸು ಕಮ್ಮೀನೇ. ಹೀಂಗಾಗಿ ಅಲ್ಲೆ ಇಲ್ಲೆ ಏನೂ ಖರೀದಿಸದೇ ಮನೆಯ ದಾರಿ ಹಿಡಿದಿದ್ದೆ. ಹಾದಿಯಲ್ಲಿ ಖಾಕಿ ಡ್ರೆಸ್ಸಿನವನು ಸೀಟಿ ಊದುತ್ತಾ ಮುಂದೆ ಬಂದ. ಇದೇನಪ್ಪ ಗ್ರಹಚಾರ ಎಂದು ಗಾಡಿಯನ್ನು ನಿಲ್ಲಿಸಿದೆ. ದಪ್ಪ ಹುರಿಮೀಸೆಯ , ಕೆಂಪು ಕಣ್ಣಿನ, ಗುಡಾನದಂತಹ ಹೊಟ್ಟೆಯ ಪಾಂಡು ಹವಾಲ್ದಾರ, ‘ಎಲ್ರೀ, ಪೇಪರ್ಸ, ಲೈಸನ್ಸು ತಗೀರಿ’ ಎಂದ ಗಡಸು ಧ್ವನಿಯಿಂದ, ಮುಗಿಲು ಕರಿ ಮೋಡಗಳನ್ನು ಹೊತ್ತೊಯ್ಯುತ್ತಿತ್ತು. ಈಗಲೋ ಆಗಲೋ ಮಳೆ ಬೀಳುವ ಆತಂಕ ಇತ್ತು. ಮನದಲ್ಲಿ ಮಳೆ ಬೀಳುವುದರಲ್ಲಿಯೇ ಮನೆ ಸೇರಬೇಕೆಂಬ ತವಕ ನನಗೆ. ಆದರೆ ಈ ಪೋಲಿಸಪ್ಪ ಬಿಡಬೇಕಲ್ಲ. ನಾನು ಪರ್ಸೆಲ್ಲಾ ಕಿತ್ತಾಡಿದೆ. ಲೈಸನ್ಸು ಸಿಗಲಿಲ್ಲ. ನಾನು ಪೆ…..ಪೆ….. ಮಾಡುತ್ತ ‘ಅಲ್ರೀ ಸಾಹೇಬ್ರ, ಪೇಪರ್ಸ, ಲೈಸನ್ಸು ಮರ್ತು ಮನ್ಯಾಗ ಬಿಟ್ಟಬಂದಿನ್ರೀ. ಈಗ ನನ್ನ ಹಂತೇಕಿಲ್ಲಾ.’
‘ಹಾಂ ಇಲ್ಲ….. ಹಂಗಾರ ಈ ಗಾಡಿ ನಿಂದೋ ಚೋರೀ ಮಾಡಿದ್ದೋ….. ಬಾಯ್ಬಿಡು… ಇಲ್ಲಾಂದ್ರ, ಕೇಸು ಜಡಿದು ಒಳಗ ಹಾಕಸ್ತೇನು, ಹುಷಾರ’ ಎಂದು ಅಪ್ರತಿಮ ಸಾಧನೆ ಮಾಡಿದವರಂಗೆ ಹುರಿಮೀಸೆ ಮೇಲೆ ಕೈಯ್ಯಾಡಿಸುತ್ತ ನಿಂತ. ಮತ್ತಿಷ್ಟು ಕಂಗಾಲಾದ ನಾನು ‘ಅಲ್ರೀ ಸಾಹೇಬ್ರ, ಗಾಡಿ ನಂದ ಅದ. ಮಂದೀದ್ಯಾಕ ನಾ ತೊಗೊಳ್ಳೀ. ಲೈಸನ್ಸು ಬೇಕಾದ್ರೆ ನಾಳೆ ನಿಮಗ ತಂದು ತೋರಿಸ್ತೀನಿ.’
‘ಹಾಂ, ನಾಳೆ ಲೈಸನ್ಸು ತೋರ್ಸಲಿಕ್ಕೆ ನಾ ಇಲ್ಲೇ ಡ್ಯೂಟಿ ಮ್ಯಾಲ ಇರ್ಬೇಕಲ್ಲ…..ಅಲ್ಲದ ನೀ ನಾಳೆ ಬರ್ತೀ ಅಂತ ಏನು ಗ್ಯಾರಂಟಿ? ಅದೇನ ಬ್ಯಾಡಾ, ನೀ ಈಗ ದಂಡಾ ಕೊಟ್ಟಬಿಡು’
‘ಹಾಂ ದಂಡಾನ…. ಎಷ್ಟು?’ ಕ್ಷೀಣವಾಗಿ ಬಂತು ನನ್ನ ಧ್ವನಿ. ಅಷ್ಟೇ ಕರ್ಕಶವಾಗಿ ಅವನು ಹುರಿ ಮೀಸೆ ಮೇಲೆ ಕೈಯ್ಯಾಡಿಸುತ್ತ ‘ಒಂದ್ಸಾವಿರ’ ಕೊಡು ಅಂದ್ರ ಗಾಡೀ ಬಿಡ್ತಿನೀ’
‘ಅಯ್ಯೋ ಸಾಹೇಬ್ರ, ತಿಂಗಳ ಕೊನೀಗೆ ಅಷ್ಟ ರೊಕ್ಕಾ ನನ್ನ ಹಂತೇಕ ಇರ್ಬೇಕಲ್ಲಾ…. ಹುಡುಕ್ಯಾಡಿದ್ರ ಒಂದ ನೂರರೇ ಹೊಂಡ್ತಾವಿಲ್ಲೋ.’
‘ಹಾಂ ಅಪ್ಪ ಅವ… ನಡೀತದ. ನಂದೂ ತಿಂಗಳ ಕೋನೀನ ಅದ ಮತ್ತ, ಅಷ್ಟಕೊಟ್ಟು ಹೋಗು…’ ಎಂದು ಬಡಿಗೆ ತಿರುಗಿಸಿದಾಗ ಭಾಜೀಪಲ್ಲೆ ತೆಗೆದು ಕೊಂಡು ಹೋಗಬೇಕೆಂದು ಇಟ್ಟುಕೊಂಡಿದ್ದ ಇದ್ದಬಿದ್ದ ದುಡ್ಡನ್ನೆಲ್ಲ ತೆತ್ತು ಮನೆ ಕಡೆಗೆ ನಡೆದೆ. ಆದರೆ ಗಾಡೀ ಸ್ಟಾರ್ಟ ಆಗಲ್ದಕ್ಕ ಅಲ್ಲೆ ಕಿಕ್ ಹೋಡ್ಕೋತ ನಿಂತಾಗ ಸಾಲಾಗಿ ತುಂಬಿದ ಟ್ರಕ್ಕುಗಳು ಹಾಯ್ದು ಹೋಗುತ್ತಿದ್ದವು. ಪೋಲೀಸಪ್ಪನಿಗೆ ಲಾಟರೀ ಹೊಡೆದಷ್ಟು ಹುರುಪಾತು. ಹಂಗ ಸುಮ್ಮನ ಒಂದು ಸಿಟಿ ಹೊಡೆದು ಮುಂದಿನ ಟ್ರಕ ನಿಲ್ಲಿಸಿದ್ರ ಸಾಲಾಗಿ ಎಲ್ಲಾ ಟ್ರಕ್ಕೂ ನಿಂತು ಒಬ್ಬೊಬ್ಬನೇ ಡ್ರೈವರ್ ಕೆಳಗಿಳಿದು ತನ್ನ ಕಿಸೆದಾಗಿನಿಂದ ದುಡ್ಡು ತೆಗೆದು ಎಣಿಸಿ ಪೋಲಿಸಪ್ಪಗ ಕೊಡುತ್ತ ಹೋದರು. ನಾನೂ ಬೆಕ್ಕಸ ಬೆರಗಾಗಿ ನೋಡುತ್ತ ನಿಂತಿದ್ದೆ. ಪೋಲಿಸಪ್ಪನ ಎರಡು ಮೇಲಿನ ಕಿಸೆ ಎರಡು ಪ್ಯಾಂಟಿನ ಕಿಸೆ ಭರ್ತಿ ಆದವು. ಈತ ಆ ಟ್ರಕ್ಕಿನಾವರ ಲೈಸನ್ಸ ವಿಚಾರ ಮಾಡ್ಲಿಲ್ಲ. ಟ್ರಕ್ಕಿನ್ಯಾಗ ಯಾವ ಸಾಮಾನ ಅವ ಪರೀಕ್ಷಾ ಮಾಡ್ಲಿಲ್ಲ. ಲೀಗಲ್ಲೋ ಇಲ್ಲಿಗಲ್ಲೋ ಒಂದೂ ತನಗೆ ಬೇಕಾಗಿದ್ದಲ್ಲ. ದುಡ್ಡು ಧಂಡಿಯಾಗಿ ಸಿಕ್ಕಾಗ ಅವುಗಳನ್ನೆಲ್ಲ ಹಾಗೇ ಹೋಗಲಿಕ್ಕೆ ಅನುವು ಮಾಡಿದ. ಹಂಗ ಸುಮ್ಮನ ಸೀಟಿ ಊದುತ್ತಾ ಮತ್ತೊಂದು ಮಿಕದ ಹುಡುಕಾಟದಲ್ಲಿ ನಡೆದ. ನಾನೂ ಹಂಗ ಸುಮ್ಮ ಸುಮ್ಮನ ಪರ್ಸ ಖಾಲೀ ಮಾಡಿಕೊಂಡು ಮನೆ ಹಾದಿ ಹಿಡಿದೆ.
ನಮ್ಮ ಊರಾಗಿನ ಎಮ್.ಎಲ್.ಎ ಖಡಕ ಆಸಾಮಿ. ಎಲ್ಲಾ ಕೆಲಸಾನೂ ಸರಿಯಾಗಿ ಆಗಬೇಕು. ಇಲ್ಲದಿದ್ದರೆ ಖಡಕ ಯ್ಯಾಕ್ಷನ್ ತೋಗೋಳ್ಳಾಂವ. ಅಂತ ಪ್ರತೀತಿ.
ಒಂದಿನ ಹಳ್ಳಿಯವರು ಅವನ್ನು ಹಳ್ಳಿಗೆ ಕರೆದು ಮೀಟಿಂಗ ಮಾಡಿದರು. ಆ ಮೀಟಿಂಗಿನ ಉದ್ದೇಶ ಏನೆಂದರೆ ಆ ಹಳ್ಳಿಗೆ ಬಸ್ಸೇ ಬರುವುದಿಲ್ಲ ಎಂಬುದಾಗಿತ್ತು. ಅದಕ್ಕಾಗಿ ಎಮ್.ಎಲ್.ಎ., ಕೆ.ಎಸ್.ಆರ್.ಟಿ.ಸಿ. ಯ ಡಿಪೋ ಮ್ಯಾನೇಜರ, ಪಿಡಬ್ಲ್ಯೂಡಿಯ ಇಂಜಿನಿಯರ, ಗ್ರಾಮ ಪಂಚಾಯ್ತಿಯ ಅದ್ಯಕ್ಷರಿಗೆಲ್ಲ ನೋಟಿಸು ಕಳಿಸಿದ್ದರು.
ಆ ಮೀಟಿಂಗು ಆಗುವುದೆಂಬ ವಿಷಯವನ್ನು ಮೊದಲೇ ಹಳ್ಳಿಯ ಜನ ಬಾಯಿ ಬಿಟ್ಟಿದ್ದರಿಂದ ಚಾಣಾಕ್ಷ ಇಂಜನಿಯರರು ನಾಲ್ಕೈದು ಲೋಡು ಮಣ್ಣು ಒಗೆಸಿ, ಅಲ್ಲಲ್ಲಿ ಡಾಂಬರು ಗೊಜ್ಜಿದಂತೆ ಮಾಡಿ ರೋಡು ಆದಂತೆ ತೋರಿಸಿದ್ದರು. ಆದರೆ ತಮ್ಮ ರಿಕಾರ್ಡಿನಲ್ಲಿ ಮಾತ್ರ ಆರು ಇಂಚಿನ ಡಾಂಬರು ರಸ್ತೆ ಇಂಥಾ ಹಳ್ಳಿಯಲ್ಲಿ ಮಾಡಿದೆ ಎಂಬುದನ್ನು ನಮೂದಿಸಿ ಅಂತರ ಬರುವ ಬಿಲ್ಲಿನ ಹಣವನ್ನು ಜೇಬಿಗೆ ಚೆಲ್ಲಿ ಸುಮ್ಮನಾಗಿದ್ದರು. ಆದರೆ ಆ ರೋಡು ಎಂದರೆ ಎಂಥಾದ್ದು ಅಂತೀರಿ. ಒಂದೇ ಒಂದು ಮಳೆ ಬಂದರೂ ಇದ್ದ ಡಾಂಬರು, ಮಣ್ಣು ಎಲ್ಲ ಕೊಚ್ಚಿಕೊಂಡು ಅಲ್ಲಿ ಉಳಿವುದು ತೆಗ್ಗುದಿನ್ನೆಯ ನೆಲ, ಹೊಂಡಗಳ ರಸ್ತೆ, ಅದೂ ಪೈಪೋಟಿಗಿಳಿದಂಥ ಹೊಂಡಗಳು ಉಳಿಯುವವು ಎಂಬುದು ಹಳ್ಳಿಯವರಿಗೂ ಗೊತ್ತು. ಸ್ವತಃ ಇಂಜನೀಯರ ಸಾಹೇಬ್ರಿಗೂ ಖಾತ್ರಿ ಗೊತ್ತು ಆದರೂ ತಮ್ಮ ಕಿಸೆ ಭರ್ತಿಯಾಗುವುದಕ್ಕಾಗಿ ಇಂಥ ಉಪದ್ವ್ಯಾಪಗಳನ್ನೆಲ್ಲ ಹಂಗೇ ಸುಮ್ಮನೆ ಅಂತ ಮಾಡಿದ್ದರು ಇಂಜನೀಯರರು.
ಮರುದಿನ ಮೀಟಿಂಗು, ಸರಿಯಾದ ಸಮಯಕ್ಕೆ ಎಮ್.ಎಲ್.ಎ. ತನ್ನ ದಂಡಿನೊಂದಿಗೆ ಹಾಜರಿ ಹಾಕಿದ. ಹಳ್ಳಿಯ ಜನರೆಲ್ಲ ಒಂದೊಂದೇ ಕಂಪ್ಲೇಂಟನ್ನು ಹೇಳತೊಡಗಿದು. ಮಾದ ಮೇಲೆದ್ದು ನಿಂತು ಹೇಳಿದ. “ಅಲ್ರೀ ಸಾಹೇಬ್ರ ನಮ್ಮ ಹಳ್ಳಿಗೆ ಬರೋಬ್ಬರಿ ರೋಡ ಇಲ್ಲರೀ, ಹದಿನೈದು ಮೈಲು. ಹೋಗಬೇಕಾದ್ರ ಬರೋಬ್ಬರಿ ದೀಡತಾಸ ಆಗ್ತದ್ರೀ. ನಾವೇನ ಮಾಡಬೇಕ್ರೀ. “ಎಮ್.ಎಲ್.ಎ. ಸಾಹೇಬ್ರು ಗರಮ್ಮಾದ್ರು, “ಯಾಕ್ರೀ ಇಂಜನೀಯರ ಸಾಹೇಬ್ರ, ರೋಡ ಯಾಕ ಮಾಡಿಲ್ಲ, ಹಳ್ಳಿಗೇ ಅಂತನ ಗ್ರ್ಯಾಂಟ ಸ್ಯಾಂಕ್ಷನ್ ಆಗಿತ್ತಲ್ಲ”. ‘ಅಲ್ರೀ ಸಾಹೇಬ್ರ, ನೋಡ ಬರ್ರೀ, ನಿನ್ನೇನೇ ರೋಡು ಮಾಡು ಮುಗಿಸೀವಿ, ಅವ್ರು ಸುಳ್ಳು ಹೇಳಾಕತ್ತ್ಯಾರು.’
‘ಅಲ್ರೀ ರೋಡು ಮಾಡ್ಯಾರು…ಎಂಥಾ ರೋಡರೀ ಅದು…ಸೂಳೀ ಮಗಂದು ಮಣ್ಣ ಒಗದಾರು…ಅಲ್ಲೇಲ್ಲೆ ತ್ಯಾಪೀ ಬಡದ್ಹಾಂಗ್ ಡಾಂಬರು ಗೊಜ್ಜ್ಯಾರು….ಒಂದ ಮಳೀ ಹೊಡೀತಂದ್ರ ಹಾಕಿದ್ದ ಮಣ್ಣು, ಡಾಂಬರೂ ಕೂಡೇ ಕಿತ್ಕೊಂಡು ಹೊಕ್ಕೈತಿ’ ಬೀರ ಸಿಟ್ಟಿನಿಂದ ಚೀರುಧ್ವನಿಯಿಂದಲೇ ಹೇಳಿದ.
ಆಗ ಎಮ್.ಎಲ್.ಎ. ಸಿಟ್ಟಿನಿಂದ ಇಂಜನೀಯರ ಕಡೆ ಕಣ್ಣು ಹೊರಳಿಸಿದರು. ಆಗ ಆತ ಎದ್ದು ನಿಂತು, ‘ನಾವರೇ ಏನ ಮಾಡ್ಬೇಕ್ರೀ… ಸಾಹೇಬ್ರ, ಮ್ಯಾಲಿನವರು ನಮ್ಮ ಕುತಿಗೀ ಹಿಡಿದು ಕೇಳಾಕ ಶುರು ಮಾಡ್ತಾರ. ನಾವೆಲ್ಲಿದಂತ ತರೂಣ್ರೀ…. ಹೀಂಗ ಅಡ್ಜಸ್ಟ ಮಾಡಬೇಕಾಗ್ತದರಿ….
ತನ್ನ ಬುಡಕ್ಕೇ ಇದು ಬರ್ತಾ ಇದೆ ಎಂದು ಅರಿತ ಎಮ್.ಎಲ್.ಎ. ಸುಮ್ಮನಾದ. ಅಷ್ಟರಲ್ಲಿ ಮತ್ತೊಬ್ಬ ಸಾಬ ಎದ್ದು ನಿಂತು, ‘ನಮ್ಮ ಊರಿಗೆ ಬಸ್ಸು ಒಟ್ಟ ಸರಿಯಾಗಿ ಬರೂದಿಲ್ಲರೀ, ಸಾಹೇಬ್ರ.’
ಎಮ್.ಎಲ್.ಎ. ಸಾಹೇಬ್ರು ಡಿಪೋ ಮ್ಯಾನೇಜರನೆಡೆಗೆ ನೋಡಿದರು.
‘ಯಾಕ್ರೀ ಬಸ್ಸ ಬಿಡೂದಿಲ್ಲ ಈ ಊರಿಗೆ ಡಿಪೋ ಮ್ಯಾನೇಜರ, ಮಾರ್ಮಿಕವಾಗಿ ‘ನಾವೇನ್ರೀ ಮಾಡೋಣು ಸಾಹೇಬ್ರ, ಬಸ್ಸು ಬಿಡತ್ತಿದ್ವಿ, ಬಸ್ಸು ಬಂದ್ರ ನಟ್ಟ ನಡು ರೋಡನ್ಯಾಗ ಗೂಟಾ ಬಡದು ಎಮ್ಮಿನೋ ಎತ್ತೋ ಕಟ್ಕೊಂಡು ಕೂತ್ತಿರ್ತಿದ್ದರು. ಬಸ್ ಬಂದು ಡ್ರೈವರ್ ಹಾರ್ನ್ ಮಾಡಿದ್ರ ಆ ಎಮ್ಮಿಗೋಳು ಹೆದರ್ಕೊಂಡು ಓಡಲಿಕ್ಕೆ ನೋಡೋವು. ಈ ಊರ ಮಂದಿ ಡ್ರೈವರಗ ನೂರಾ ಎಂಟು ಶಾಪಾ ಹಾಕಾವ್ರು. ಡ್ರೈವರುಗಳು ಈ ಊರಿಗೆ ಹೋಗಲಿಕ್ಕೆ ತಕರಾರು ಮಾಡಾಕತ್ತಿದ್ರು, ಹ್ಯಾಂಗ ಬಿಡಬೇಕ್ರಿ ಇಂಥಾ ಊರಿಗೆ ಬಸ್ಸು.’
‘ಥೋ ನಿನ, ನೀವು ಪೈಲಾ ಸುಧಾರಿಸ್ಕೋಳ್ರಿ ಆಮ್ಯಾಲೆ ರೋಡು ಬಸ್ಸು ಎಲ್ಲಾ ಬಿಡೂಣಂತ’ ಅಂತ ಹೇಳಿ ಎದ್ದು ಹೊರ ನಡೆದ ಎಮ್.ಎಲ್.ಎ. ಸಾಹೇಬ, ಅವನಿಗೆ ಇನ್ನೊಂದು ಕಡೆಗೆ ಭೆಟ್ಟಿ ಕೊಡುದಿತ್ತಲ್ಲ. ಹಂಗ ಸುಮ್ಮನ ಬಂದು ಹಂಗ ಕೈ ಬೀಸ್ಕೊಂಡು ಎದ್ದು ಹೋದ ಎಮ್.ಎಲ್.ಎ. ಹಳ್ಳಿಯ ಜನ ತಲೆ ಮೇಲೆ ಕೈ ಹೊತ್ಕೊಂಡು ಕುತ್ತ ಬಿಟ್ರು.
ಹೀಂಗ ಎಲಿಟ್ರಿಯವ್ರು ಹಂಗ ಸುಮ್ಮನ ವೈರಿ ದೇಶದಾವ್ರು ಫೈರಿಂಗ್ ಮಾಡ್ಯಾರ ಅಂತೇಳಿ ಮದ್ದುಗುಂಡಿನ ಖರ್ಚಿನ ಬಾಬತ್ತನ್ನು ಕಿಸೇಕ್ಕ ಒಕ್ಕೊತ್ತಾರ. ಪೆಟ್ರೋಲ್ ಬಂಕದವರು ಹಂಗ ಸುಮ್ಮನ ಕಲಬೆರಕಿ ಮಾಡಿ ಮಾರ್ತಾರ ಶಾಲಿ ಕಾಲೇಜಿನ್ಯಾಗ ಹಂಗ ಸುಮ್ಮನ ಬಿಲ್ಡಿಂಗ ಫಂಡು, ಡೆವಲಪಮೆಂಟ್ ಚಾರ್ಜು, ಕ್ಯಾಪಿಟೇಶನ್ನು ಅಂತ ನೂರಾ ಎಂಟು ಕಾರಣ ಹೇಳಿ ಹಂಗ ಸುಮ್ಮನ ರೊಕ್ಕಾ ಜಗ್ಗತಾರ. ಎಲ್ಲೆದರಿ ಖರೇ ಅನ್ನೂದು. ಎಲ್ಲಾ ಕಡೆ ಹಂಗ ಸುಮ್ಮನಮಯಾ ನಾನು ಇದನ್ನ ಹಂಗ ಸುಮ್ಮನನ ಬರ್ದಿದ್ದೀನ್ರಿ. ನೀವೂ ಹಂಗ ಸುಮ್ಮನ ಓದಿಬಿಡ್ರಿ.

Leave a Reply