
ರಂಗದಲ್ಲಿ ಅಂತರಂಗ
K.V. Subbanna
$12.00
Product details
Category | Area Studies |
---|---|
Author | K.V. Subbanna |
Publisher | Akshara Prakashana |
Book Format | Ebook |
Language | Kannada |
ಪ್ರಾಯಃ, ಜಗತ್ತಿನಲ್ಲೇ ಪ್ರಪ್ರಥಮವಾಗಿ ಅಭಿನಯ ಪ್ರಕ್ರಿಯೆಯನ್ನು ಶಾಸ್ತ್ರೀಯವಾಗಿ ವಿವೇಚಿಸಿ, ‘ಅಭಿನಯ ಶಾಸ್ತ್ರ’ಕ್ಕೆ ಅಸ್ತಿವಾರ ಹಾಕಿಕೊಟ್ಟ ಹಿರಿಮೆ ಸ್ತಾನಿಸ್ಲಾವ್‌ಸ್ಕಿಗೆ ಸಲ್ಲುತ್ತದೆ. ರಂಗಕಲೆ ಉಳಿದ ಕಲೆಗಳ ಹಾಗೇ ಇತಿಹಾಸದ ದಾಖಲೆಗೆ ಸಿಗದಷ್ಟು ಪ್ರಾಚೀನವಾದದ್ದು. ರಂಗಕಲೆಯ ವಿವೇಚನೆ ಕೂಡ ಸಾಕಷ್ಟು ಹಿಂದಿನಿಂದ ನಡೆದುಬಂದಿದೆ. ಕ್ರಿಸ್ತಶಕದ ಪ್ರಾರಂಭಕ್ಕಾಗಲೇ ನಮ್ಮಲ್ಲಿ ನಾಟ್ಯಶಾಸ್ತ್ರ ರೂಪುಗೊಳ್ಳತೊಡಗಿದ್ದಿರಬೇಕು. ಕ್ರಿ.ಶ. ಎರಡು ಮೂರನೇ ಶತಮಾನದ ಹೊತ್ತಿಗೆ ಸಮಗ್ರವಾಗಿ ಸಿದ್ಧಗೊಂಡಿದ್ದ ‘ಭಾರತೀಯ ನಾಟ್ಯಶಾಸ್ತ್ರ’, ನಿಜವಾಗಿ ಇವತ್ತಿಗೂ ಹೊಸದೆನ್ನುವ ಹಾಗಿದೆ; ತೀರ ಈಚಿನ ರಂಗಪ್ರಯೋಗ-ರಂಗಸಿದ್ಧಾಂತಗಳು ಕೂಡ ‘ನಾಟ್ಯಶಾಸ್ತ್ರ’ದ ರಂಗಕಲ್ಪನೆಯ ವ್ಯಾಪ್ತಿಯನ್ನು ಮೀರುವುದಿಲ್ಲವಲ್ಲ ಎನ್ನಿಸಿಬಿಡುವಷ್ಟು ಹೊಸದಾಗಿದೆ. ಇಷ್ಟಾದರೂ ಅಭಿನಯಶಾಸ್ತ್ರವೆಂಬುದು ಪ್ರತ್ಯೇಕವಾಗಿ ಬೆಳೆದುಕೊಳ್ಳಲಿಕ್ಕೆ ಈ ಇಪ್ಪತ್ತನೆಯ ಶತಮಾನದತನಕ ಕಾಯಬೇಕಾಯ್ತು.
ಅಭಿನಯ ಮಾಧ್ಯಮ, ಉಳಿದ ಸಂಪರ್ಕ ಮಾಧ್ಯಮಗಳ ಜೊತೆ ಹೋಲಿಸಿದರೆ, ವಿಲಕ್ಷಣವೆನ್ನಿಸುವಂಥದು. ಒಬ್ಬ ಶಿಲ್ಪಿ ಎನ್ನಿ, ಚಿತ್ರಕಾರ ಎನ್ನಿ. ಆತ ಕಲ್ಲಿನಲ್ಲೋ ರೇಖೆವರ್ಣಗಳಲ್ಲೋ – ಅಂದರೆ, ತನ್ನ ವ್ಯಕ್ತಿತ್ವದ ಹೊರಗಿನ ನಿರ್ಜೀವವಾದ ಒಂದು ಸಂವಾಹಕ ವಸ್ತುವಿನಲ್ಲಿ – ತನ್ನ ಅನಿಸಿಕೆಗಳನ್ನು ಮೂಡಿಸಿಡುತ್ತಾನೆ. ಅನಂತರ ಪ್ರೇಕ್ಷಕ ಅದನ್ನು ನೋಡಿ, ಅದರ ಮೂಲಕ ಅವನ ಅನಿಸಿಕೆಗಳನ್ನು ಸ್ವೀಕರಿಸಿಕೊಳ್ಳುತ್ತಾನೆ. ಮಾತನ್ನು (ಶಾಬ್ದಿಕ ಭಾಷೆಗಳನ್ನು) ಬಳಸುವಾಗ ನಾವು, ಲಿಖಿತ ಅಥವಾ ಅಲಿಖಿತ ಶಬ್ದಸಂಕೇತಗಳ ಮೂಲಕ (ಪುನಃ, ಹೊರಗಿನ ನಿರ್ಜೀವವಾದ ಶಬ್ದಸಂಕೇತಗಳ ಮೂಲಕ) ಪ್ರತ್ಯಕ್ಷವಾಗಿ ಅಥವಾ ಅಪ್ರತ್ಯಕ್ಷವಾಗಿ ಕೂಡ ಸಂಪರ್ಕ ಸಾಧಿಸಿಕೊಳ್ಳುತ್ತೇವೆ. ಸಂಗೀತ-ನೃತ್ಯಗಳಲ್ಲಾದರೋ ನೇರವಾಗಿ ಪ್ರೇಕ್ಷಕರಿಗೆ ಮುಖಾಮುಖಿಯಾಗಿ ನಿಂತು ನಮ್ಮ ದೈಹಿಕ ಸಾಧನೆಗಳಿಂದಲೇ ಸಂಪರ್ಕ ಕಲ್ಪಿಸಿಕೊಳ್ಳಲು ಯತ್ನಿಸಬೇಕಾಗುತ್ತದೆ. ಹಾಗಿದ್ದರೂ ಇಲ್ಲಿನ ಮಾಧ್ಯಮ ಶೈಲೀಕೃತವಾದದ್ದು. ಸಾಂಕೇತಿಕವಾದದ್ದು, ಮನುಷ್ಯನ ಸಹಜವಾದ ನಡವಳಿಕೆಗಿಂತ ಭಿನ್ನವಾದದ್ದು. ಇನ್ನು ನಟನ ಕಾಯಕವನ್ನು ನೋಡುವುದಾದರೆ, ಆತ ಬಹು ಸಂಖ್ಯೆಯುಳ್ಳ ಪ್ರೇಕ್ಷಕ ಸಮೂಹದ ಎದುರು ಮುಖಾಮುಖಿಯಾಗಿ ನಿಲ್ಲಬೇಕು; ತನ್ನ ಸಮಸ್ತ ಅಂಗೋಪಾಂಗಗಳ ಸಮಸ್ತ ವ್ಯಾಪಾರಗಳನ್ನೂ ಬಳಸಿಕೊಳ್ಳಬೇಕು; ಆ ಅಂಥ ಅಸಹಜ ಸ್ಥಿತಿಯಲ್ಲಿಯೂ ಬಹುಮಟ್ಟಿಗೆ ತನ್ನ ಸಹಜ ನಡವಳಿಕೆಗಳನ್ನೇ ಮಾಧ್ಯಮವಾಗಿ ಮಾಡಿಕೊಳ್ಳಬೇಕು; ಹಾಗೆ, ಬಹಿರಂಗದಲ್ಲಿ ಅನಾವೃತ ನಗ್ನವಾಗಿ ನಿಂತು ತನ್ನ ಸಂವಹನವನ್ನು ಸಾಧಿಸಿಕೊಳ್ಳಬೇಕು.
ನಟ, ತನ್ನದೇ ಅಂಗೋಪಾಂಗಗಳ ಸಹಜ ಚೇಷ್ಟೆಗಳಲ್ಲವನ್ನೂ (ಆಂಗಿಕ) ತನ್ನ ಮಾಧ್ಯಮವಾಗಿ ಬಳಸಿಕೊಳ್ಳುತ್ತಾನೆ; ಮಾತನ್ನು (ವಾಚಿಕ) ಬಳಸಿಕೊಳ್ಳುತ್ತಾನೆ; ಪ್ರಸಾಧನ, ವೇಷಭೂಷಣ ಹಾಗೂ ಪರಿಸರ ಸೂಚಕವಾದ ದೃಶ್ಯ-ರಂಗವಸ್ತು (ಆಹಾರ್ಯ) ಮುಂತಾದವನ್ನು ಬಳಸಿಕೊಳ್ಳುತ್ತಾನೆ. ಇವು ಕಣ್ಣಿಗೆ ಕಾಣುವಂಥವು. ಆದರೆ ಇಷ್ಟೇ ಸಾಲುವುದಿಲ್ಲ. ಅಂಗೋಪಾಂಗ ವಿನ್ಯಾಸ ಮಾತ್ರದಿಂದ ಕಣ್ಣೀರು ಹೊರಡುವುದಿಲ್ಲ, ಮೆಯ್ಯಲ್ಲಿ ರೋಮಾಂಚನ ಮೂಡಿಕೊಳ್ಳುವುದಿಲ್ಲ, ಇಂಥ ‘ಅಪ್ರಯತ್ನಜ’ ಪ್ರತಿಕ್ರಿಯೆಗಳನ್ನು ತನ್ನಲ್ಲಿ ಮೂಡಿಸಿಕೊಳ್ಳಲಿಕ್ಕೆ ಆತ, ತನ್ನ ಅಂತರಂಗದ ಕ್ರಿಯೆಗಳನ್ನು ಚೋದಿಸಿಕೊಳ್ಳಬೇಕಾಗುತ್ತದೆ.
ಬೃಹತ್ ಸಮೂಹವೊಂದರ ಎದುರಿನಲ್ಲಿ ಬಹಿರಂಗವಾಗಿ (ಅತ್ಯಂತ ಅಸಹಜವಾದ ಆವರಣದಲ್ಲಿ) ನಿಂತು ಆತ ತನ್ನ ಸಹಜ ಆಂತರಂಗಿಕ ಕ್ರಿಯೆಗಳನ್ನು ಪ್ರಕಟಿಸಿ ಕಾಣಿಸಬೇಕಾಗುತ್ತದೆ. ಒಂದು – ಬಹಿರಂಗದಲ್ಲಿ ಅಂತರಂಗವನ್ನು ಪ್ರಕಟಿಸಿ ಕಾಣಿಸಬೇಕಾದ್ದು, ಇನ್ನೊಂದು – ತನ್ನ ವೈಯಕ್ತಿಕವಾದ ಅಂತರಂಗವನ್ನು ಹತ್ತಿಕ್ಕಿಕೊಂಡು ಆ ಅವಕಾಶದಲ್ಲಿ ತನಗೆ ಹೊರಗಿನದಾದ ಬೇರೆಯೊಂದು ವ್ಯಕ್ತಿತ್ವವನ್ನು ರೂಪಿಸಿ ಕಾಣಿಸುವುದು. ಹೀಗೆ, ನಟನ ಕಾಯಕವೆನ್ನುವುದು ಸಂಕೀರ್ಣವಾದ ಅಂತರಂಗಿಕ ಕ್ರಿಯೆಗಳನ್ನೆಲ್ಲ ಒಳಗೊಂಡದ್ದಾಗಿರುತ್ತದೆ.
Customers also liked...
-
T.P.Ashok
$12.00 -
Vinay Lal and Ashis Nandy
$9.99 -
U.R. Ananthamurthy
$8.00 -
Vivek Shanbhag
$8.00 -
Akshara K V
$5.00 -
Akshara K V
$9.99