ಕಾರ್ಪೊರೇಟ್ ಪ್ರಪಂಚದ ಗೆರಿಲ್ಲಾ ಕದನದಂತಿರುವ ‘ಬೇಟೆಯಲ್ಲ, ಆಟವೆಲ್ಲ’ ಕೇವಲ ರೋಚಕ ಕತೆಯಷ್ಟೆ ಅಲ್ಲ. ಇದು – ತಲೆಮಾರುಗಳ ಘರ್ಷಣೆಯಂತೆ ತೋರುತ್ತಲೇ, ಒಂದೇ ತಲೆಮಾರಿನೊಳಗೆ ಹುದುಗಿರುವ ವಿಭಿನ್ನ ಮನೋಧರ್ಮಗಳ ತುಮುಲಗಳು ಒಂದರ ಮೇಲೊಂದು ಸವಾರಿ ಮಾಡುತ್ತ, ಒಂದಕ್ಕೊಂದು ಹೆಣಿಗೆ ಹಾಕಿಕೊಳ್ಳುತ್ತ ತಲೆಮಾರುಗಳ ನಡುವಿನ ಗೆರೆಯನ್ನು ಸ್ವಲ್ಪ ಸ್ವಲ್ಪವೇ ಮಸುಕಾಗಿಸುವ ಕತೆ. ವ್ಯಾಪಾರೋದ್ಯಮದ ನವಸಂಸ್ಕೃತಿಯು ಧರ್ಮ, ರಾಜಕೀಯ, ಪ್ರೇಮ, ನೈತಿಕತೆಯನ್ನು ವಶಪಡಿಸಿಕೊಂಡು ಹೇಗೆ ಅವುಗಳನ್ನು ಮರುವ್ಯಾಖ್ಯಾನಿಸಿದೆ, ಇಂದಿನ ರಾಜಕೀಯ ಸನ್ನಿವೇಶವು ನಮ್ಮೊಳಗೆ ಹೊಸ ಬಗೆಯ ಪೂರ್ವಾಗ್ರಹಗಳನ್ನು ಹೇಗೆ ತುಂಬಿಸುತ್ತಿದೆ ಅನ್ನುವುದನ್ನು ನಿರೂಪಿಸುವ ಕತೆ. ಜೀವನ ನಿರ್ವಹಣೆಗೆ ಆಧುನಿಕತೆಯ ಲಗಾಮು ಹಿಡಿದು, ಜೀವನ ವಿಧಾನದಲ್ಲಿ ಧಾರ್ಮಿಕ ನಂಬಿಕೆಯ ಪೋಷಾಕುಗಳಿಗೆ ಮೊರೆಹೋಗುವ ಅಖ್ತರ್ ಒಂದು ತುದಿಯಲ್ಲಿ. ಧಾರ್ಮಿಕ ಸ್ಥಂಬಗಳನ್ನು ಒಡೆದು ಆಧುನಿಕ ಚಿಂತನದ ಪೋಷಾಕು ಧರಿಸಿರುವ ಅನಿರುದ್ಧ ಇನ್ನೊಂದು ತುದಿ. ಅಪ್ಪಟ ವ್ಯಾಪಾರೀ ಮನೋಧರ್ಮದ ಶಿವಾನಿ ಮತ್ತೊಂದೇ ತುದಿ. ಈ ತ್ರಿಕೋಣದ ನಡುವೆ ಸುಜಾತ ಮೂರೂ ಬಿಂದುಗಳನ್ನು ಎಂದೂ ಮುಟ್ಟಲಾಗದ ಒಳವರ್ತುಲವಾದರೆ, ಚಿನ್ಮಯ ಆ ಬಿಂದುಗಳ ಬೆಸೆಯುವ ಗೆರೆಗಳನ್ನು ಎಂದೂ ಮುಟ್ಟಲಾಗದ ಹೊರವರ್ತುಲ. ಇಂಥ ಪಾತ್ರಗಳ ಜಂಜಾಟಗಳೇ ಈ ಕಾಲದ ಜಟಿಲತೆಯನ್ನು ನನ್ನ ಮನಸ್ಸಿನ ಮೇಲೆ ಗಾಢವಾಗಿ ಅಚ್ಚೊತ್ತಿದೆ. ಶಿವಾನಿಯ ಪಾತ್ರ ಕನ್ನಡ ಜಗತ್ತಿನಲ್ಲಿ ಹೊಸತೊಂದು ಚರ್ಚೆಯನ್ನು ಹುಟ್ಟುಹಾಕವಷ್ಟು ಗರಿಗರಿಯಾಗಿದೆ. ಕತೆಗಾರ ಪಾತ್ರಗಳ ಜಗತ್ತನ್ನು ಆಕ್ರಮಿಸದಿದ್ದಾಗ ಆ ಪಾತ್ರ ಎಷ್ಟು ಪ್ರಖರವಾಗಿ ನಿಲ್ಲಬಹುದು ಅನ್ನುವುದಕ್ಕೊಂದು ಉದಾಹರಣೆ – ಶಿವಾನಿ. ಅರ್ಬನ್ ಜಗತ್ತಿನ ತಾಜಾ ಅನಾವರಣ ಇಲ್ಲೊಂದು ವಿಶಿಷ್ಟ ಮಾಹೊಲ್ ನಿರ್ಮಿಸಿದೆ. ಹಳೆಯ ರೂಪಕದಂತಿರುವ ಮಾಯಾಬಜಾರಿನಲ್ಲಿ ಹೊಸ ವ್ಯಾಪಾರೀ ಮಳಿಗೆಗಳ ಗಾಜುಗೋಡೆಗಳ ಮೇಲೆ ನಮ್ಮೆಲ್ಲರ ಆಚೆ‌ಈಚಿನದನ್ನು ಒಟ್ಟಿಗೇ ಕಾಣಿಸುವ ಕಲಸುಮೇಲೋಗರದಂಥ ಪ್ರತಿಫಲನವಿದೆ.

– ವಿಕ್ರಂ ಹತ್ವಾರ್

Reviews

There are no reviews yet.

Only logged in customers who have purchased this product may leave a review.