ವಿಜ್ಞಾನ ಎಂಬುದೇ ಒಂದು ಹಿಂಸಾಸಾಧನವಾಗಿರಬಹುದು, ಸರ್ವಾಧಿಕಾರದ ಸಾಧನವಾಗಿರಬಹುದು – ಎಂಬ ಸಾಧ್ಯತೆಯನ್ನು ಆತ ಪರೀಕ್ಷಿಸುವುದಿಲ್ಲ. ಒಬ್ಬ ಏಕಾಕಿ ಬುಡಕಟ್ಟು ವ್ಯಕ್ತಿಯು ಇಂಡಿಯನ್ ಸ್ಟಾಂಡರ್ಡ್‌ ಟೈಮಿನ ಮೇಲೋ ಗಾಜಿನ ಕೇಸಿನಲ್ಲಿಟ್ಟ ಸ್ಟಾಂಡರ್ಡ್‌ ಮೀಟರಿನ ಮೇಲೋ ನಿಷ್ಪ್ರಯೋಜಕವಾದ ದಾಳಿ ನಡೆಸುವ ಸಾಧ್ಯತೆ ಆತನಿಗೆ ಕಾಣುವುದಿಲ್ಲ. ಅಂಥ ಕ್ರಿಯೆಯ ಮಾನವಶಾಸ್ತ್ರೀಯ ಗುಣ ಆತನಿಗೆ ತಟ್ಟದೆ ಹೋಯಿತು.

ಈ ಕ್ರಿಯೆಯ ಹಿಂದಿರುವ ರೂಪಕಶಕ್ತಿಯೇ ಈ ಲೇಖನಕ್ಕೊಂದು ಸಮರ್ಥನೆಯನ್ನು ಒದಗಿಸುತ್ತದೆ. ಇದರ ಹಿಂದೆ, ನನ್ನ ಪ್ರಕಾರ, ಮೂರು ಪ್ರತ್ಯೇಕ ಘೋಷಣೆಗಳಿವೆ – 1. ವಿಜ್ಞಾನವೆಂಬುದು ಯಜಮಾನಿಕೆ ಮತ್ತು ಹಿಂಸೆಯ ರೂಪಗಳನ್ನೊಳಗೊಂಡ ಸಂಕೀರ್ಣ; 2. ವಿಜ್ಞಾನದಿಂದ ಉದ್ಭವಿಸುವ ಹಿಂಸೆಯು ಅಣುವಿಜ್ಞಾನ ಅಥವಾ ಜೆನೆಟಿಕ್ ತಂತ್ರಜ್ಞಾನಗಳಂತಹ ಮುಂಚೂಣಿಯ ವಿಭಾಗಗಳಿಗೆ ಮಾತ್ರ ಸೀಮಿತವಾದದ್ದಲ್ಲ, ಬದಲು, ಅದರ ನಿತ್ಯಕ್ಷುಲ್ಲಕ ಅಸ್ತಿತ್ವದಲ್ಲೇ ಅಡಕವಾಗಿರುವಂಥದು; ಮತ್ತು 3. ಇದರ ವಿರುದ್ಧದ ಪ್ರತಿಭಟನೆಯ ಕ್ರಿಯೆಯು ‘ಕಿರು ಜ್ಞಾನಶಾಖೆಗಳು’ ಎಂದು ಕರೆಯಲಾಗುವುದರ ಪುನರಾವಾಹನೆಯೂ ಹೌದು. ಈ ಮೂರು ಘೋಷಣಾವಾಕ್ಯಗಳನ್ನು ನಾವೀಗ ವಿಜ್ಞಾನದ ಇತಿಹಾಸದ ವಿಶಾಲ ಭಿತ್ತಿಯ ಹಿನ್ನೆಲೆಯಲ್ಲಿ ವ್ಯಾಖ್ಯಾನಿಸಿಕೊಳ್ಳಬೇಕು.

ನನ್ನ ಪ್ರಕಾರ, ವಿಜ್ಞಾನದ ಇತಿಹಾಸಕಾರರು ಎರಡು ಸಮಾನಾಂತರ ತಃಖ್ತೆಗಳನ್ನು ಇರಿಸಿಕೊಳ್ಳುತ್ತ ಬಂದಿದ್ದಾರೆ. ಮೊದಲನೆಯದಾದ ಪಠ್ಯಪುಸ್ತಕ ಇತಿಹಾಸಗಳಲ್ಲಿ ವಿಜ್ಞಾನವನ್ನು ವಸ್ತುನಿಷ್ಠ ಪದ್ಧತಿಯೆಂದೂ ಸಮೂಹ ಸತ್ಯಗಳ ಶೋಧನೆಯ ಮೂಲಕ ಅದು ನಿಯತಕ್ರಮವೊಂದನ್ನು ಅನಾವರಣಗೊಳಿಸುತ್ತದೆಂದೂ ಬಿಂಬಿಸಲಾಗುತ್ತದೆ. ಇನ್ನು, ವಿಜ್ಞಾನದ ಕೆಲವು ಭಾಗಗಳನ್ನು – ಮಾನವಶಾಸ್ತ್ರದಲ್ಲಿ ಜನಾಂಗಭೇದದ ನೀತಿಯಿರುವ ಹಾಗೆ, ಮನಶ್ಶಾಸ್ತ್ರದಲ್ಲಿ ಐಕ್ಯೂ ಸಿದ್ಧಾಂತವಿರುವ ಹಾಗೆ, ರಾಜಕೀಯಶಾಸ್ತ್ರ ಮತ್ತು ಜೀವಶಾಸ್ತ್ರದಲ್ಲಿ ಸೋಷಿಯಲ್ ಡಾರ್ವಿನಿಸಂ ಇರುವ ಹಾಗೆ – ‘ಪೊಳ್ಳು ವಿಜ್ಞಾನ’ಗಳೆಂದೂ ಅವು ನಿಜವಾಗಿ ವಿಜ್ಞಾನದ ವಿಕೃತ ರೂಪಗಳೆಂದೂ ಅಂಥ ಇತಿಹಾಸಗಳಲ್ಲಿ ಪ್ರತ್ಯೇಕಿಸಿ ಬದಿಗಿರಿಸಲಾಗುತ್ತದೆ. ನಾನಿದಕ್ಕೆ ಬೇರೆಯೇ ಒಂದು ವ್ಯಾಖ್ಯಾನ ಕೊಡಬಯಸುತ್ತೇನೆ. ವಿಜ್ಞಾನವೆಂಬ ಕೊಳ್ಳೆಬಾಕ ಪ್ರತಿಭೆಗೆ ಇಂಥ ‘ಪೊಳ್ಳು ವಿಜ್ಞಾನ’ಗಳ ಅವಕಾಶ ಅಗತ್ಯ; ಆಗಲೇ ವಿಜ್ಞಾನವು ತನ್ನ ಲಹರಿಯನ್ನು ಸ್ವಚ್ಛಂದವಾಗಿ ಹರಿಸಬಲ್ಲುದು. ವಿಜ್ಞಾನದ ಈ ಸಂಚಿತ ಸುಪ್ತ ಚೇತನವು ವಿಜ್ಞಾನವೆಂಬ ಸಂಸ್ಥೆಯಲ್ಲಿ ಕೂಡಿಕೊಂಡಿರುವ ಒಂದು ಭಾಗ. ಅದನ್ನು ಪ್ರತ್ಯೇಕಗೊಳಿಸಿ ನೋಡುವುದರಿಂದ ವಿಜ್ಞಾನವೆಂಬ ಪ್ರಕ್ರಿಯೆಯನ್ನು ಕಾಪಾಡಿ ಉಳಿಸಿಕೊಳ್ಳಬಹುದು, ಆದರೆ, ಹಾಗೆ ಮಾಡುವುದರಿಂದ ವಿಜ್ಞಾನವನ್ನು ಕುರಿತ ನಮ್ಮ ತಿಳುವಳಿಕೆ ಬೆಳೆಯಲಾರದು. ಇಂಥ ಪೊಳ್ಳು ತತ್ತ್ವಗಳು ವಿಜ್ಞಾನದಲ್ಲಿ ಪದೇಪದೇ ಕಾಣಿಸಿಕೊಳ್ಳುವುದು ಯಾಕೆ – ಎಂಬುದೂ ಹಾಗೆ ಪ್ರತ್ಯೇಕಿಸಿದರೆ ನಮಗೆ ಗೊತ್ತಾಗಲಾರದು. ಪ್ರಗತಿಯನ್ನು ಕುರಿತ ಆಧುನಿಕ ತಾತ್ವಿಕ ಪ್ರಸ್ಥಾನದಲ್ಲಿಯೂ ಕೂಡ ಇಂಥದೇ ಸಮಸ್ಯೆ ಇರುವುದನ್ನು ನಾವು ನೋಡಬಹುದು. ಪ್ರಗತಿಯೆನ್ನುವುದನ್ನು ನಾವು ವಿಜ್ಞಾನದ ಕಾರ್ಯಕ್ರಮಗಳಲ್ಲೊಂದು ಎಂದೇ ಗ್ರಹಿಸಬೇಕು. ಇದು ಪ್ರಯೋಗಶಾಲೆಯಾಗಿ ಮಾರ್ಪಟ್ಟ ಸಮಕಾಲೀನ ಪ್ರಭುತ್ವದ ಆಧುನಿಕ ಕ್ರಿಯಾವಿಧಿಗಳಲ್ಲೊಂದು. ತಂತ್ರಜ್ಞಾನವೇ ಪ್ರಧಾನವಾಗಿರುವ ಆಧುನಿಕತೆಯಲ್ಲಿ, ಪಾಶ್ಚಿಮಾತ್ಯ ವಿಜ್ಞಾನದ ತಾರ್ಕಿಕತೆಯಲ್ಲಿ, ನಾಲ್ಕು ಪ್ರಮೇಯಗಳು ಅಡಕವಾಗಿವೆ. ಅವನ್ನು ಹೀಗೆ ಹೆಸರಿಸಿಕೊಳ್ಳಬಹುದು

Additional information

Book Format

Ebook

Reviews

There are no reviews yet.

Only logged in customers who have purchased this product may leave a review.