ಇತಿಹಾಸ ಎಂದರೆ ’ಘಟನೆ’ಗಳ ಕಥನ ಎಂಬ ಹತ್ತೊಂಬತ್ತನೇ ಶತಮಾನದ ರ‍್ಯಾಂಕೆಯನ್ ಪರಿಕಲ್ಪನೆ ಕರ್ನಾಟಕದ ಬಹುತೇಕ ’ಇತಿಹಾಸಕಾರ’ರ ನಡುವಲ್ಲಿ ಈಗಲೂ ಪ್ರಚಾರದಲ್ಲಿದೆ. ಇದೊಂದು ವಿಸ್ಮಯವೇ ಸರಿ. ಈ ವಿಸ್ಮಯಕ್ಕಿಂತ ಭಿನ್ನವಾಗಿ ಪ್ರಸ್ತುತ ಲೇಖನ ’ಪ್ರಕ್ರಿಯೆ’ಗಳಿಗೆ ಒತ್ತು ನೀಡುತ್ತದೆ. ಆದ್ದರಿಂದಲೇ ಇಲ್ಲಿ ಅಶೋಕ, ಪುಲಕೇಶಿ, ನೃಪತುಂಗ, ಪಂಪ, ಬಸವ, ಜಗದೇಕಮಲ್ಲ, ಕೃಷ್ಣದೇವರಾಯ ಮುಂತಾದ ನಾಮಾಂಕಿತಗಳಿಗಿಂತ ಕೃಷಿ, ಆವಾಸವ್ಯವಸ್ಥೆ, ದೇವಾಲಯಗಳು, ಆಚಾರಗಳು, ಅರಸೊತ್ತಿಗೆ, ಪ್ರದೇಶ, ಸಂಪರ್ಕ, ಉತ್ಪಾದನೆ, ವ್ಯಾಪಾರ, ಮಾರುಕಟ್ಟೆ, ಚಿಂತನೆ, ಭಾಷೆ, ಕಾವ್ಯ ಮುಂತಾದವುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕಲ್ಪಿಸಿದ್ದೇನೆ. ಈ ಅವಲೋಕನ ಎಲ್ಲ ಪ್ರಕ್ರಿಯೆಗಳನ್ನೂ ಆಯಾ ಕಾಲದ ಭೌತಿಕ ವಿದ್ಯಮಾನಗಳ ಸಂದರ್ಭದಲ್ಲೇ ಅರ್ಥೈಸಿಕೊಳ್ಳುವ ವಿಧಾನವನ್ನು (methodology) ಅನುಸರಿಸುವಂಥದ್ದು. ಈ ಅನ್ವೇಷಣಾ ವಿಧಾನ ಚರಿತ್ರಪರ ಭೌತಿಕತೆ (historical materialism) ಎಂಬ ಮಾರ್ಕ್ಸ್‌ವಾದಿ ಕ್ರಮದಿಂದ ಪ್ರೇರಿತವಾಗಿದ್ದು ಆ ಕ್ರಮವನ್ನೇ ಆಮೂಲಾಗ್ರ ಅನುಸರಿಸಿದೆ. ಆದರೆ ಮಾರ್ಕ್ಸ್‌ವಾದಿ ಕ್ರಮ ಭೌತಿಕ ಪರಿಸರಗಳ ವಿಶಿಷ್ಟತೆಗೂ ಆ ಪರಿಸರದಲ್ಲಿ ನಡೆಯುವ ಅರ್ಥೋತ್ಪಾದನೆಗೂ ಇರುವ ಸಂಬಂಧಗಳ ಬಗ್ಗೆ ಯಾವ ಕಾಳಜಿಯನ್ನೂ ವಹಿಸಿಲ್ಲವೆಂದೇ ಹೇಳಬೇಕು. ಆದ್ದರಿಂದ ಭೌತಿಕತೆಯ ಚೌಕಟ್ಟಿನಲ್ಲಿ ಅರ್ಥಗಳು ನಿರ್ಮಾಣಗೊಳ್ಳುವ ಪ್ರಕ್ರಿಯೆಯನ್ನೂ ಅಳವಡಿಸಿಕೊಳ್ಳುವ ಮೂಲಕ ಪ್ರಸ್ತುತ ಅವಲೋಕನ ವಿಧಾನದ ದೃಷ್ಟಿಯಿಂದ ಸಣ್ಣ ಮುನ್ನಡೆಯೊಂದನ್ನು ಸಾಧಿಸಲು ಹವಣಿಸುತ್ತದೆ. ಇಂದು ಇತಿಹಾಸದ ಅಧ್ಯಯನದಲ್ಲಿ ಸಂಕಥನ (discourse), ಪ್ರಾತಿನಿಧ್ಯ (representation), ಅನಾಲ್ಸ್ ಸಂಪ್ರದಾಯದ ವಕ್ತಾರರು ಇತ್ತೀಚೆಗೆ ಆವಿಷ್ಕರಿಸಿರುವ ಮನಸ್ಥಿತಿಯ ಅಧ್ಯಯನ (mentalities), ವ್ಯಾವಹಾರಿಕತೆಯ (empiricism) ಮೇಲಂಗಿಯೊಳಗೆ ತಲೆಮರೆಸಿಕೊಂಡಿರುವ ಜಾತ್ಯಾತೀತ (secular) ಗೃಹೀತಗಳೇ ಮೊದಲಾದ ಹಲವು ವಿಧಾನಗಳು ಪ್ರಚಾರದಲ್ಲಿವೆ. ಆದರೆ ಪ್ರಸ್ತುತ ಲೇಖನದಲ್ಲಿ ವಿವರಿಸಲು ಹೊರಟಿರುವ ಯಾವೊಂದು ಪ್ರಕ್ರಿಯೆಯನ್ನೂ ಈ ವಿಧಾನಗಳ ಮೂಲಕ ಗುರುತಿಸುವುದಾಗಲಿ ಸಮರ್ಪಕವಾಗಿ ಅರ್ಥೈಸಿಕೊಳ್ಳುವುದಾಗಲಿ ಸಾಧ್ಯವಿಲ್ಲದ ಕಾರಣದಿಂದಲೇ ಚರಿತ್ರಪರ ಭೌತಿಕತೆಯನ್ನೇ ವಿಧಾನವಾಗಿ ಸ್ವೀಕರಿಸಿ ಅದರಲ್ಲಿ ಅರ್ಥೋತ್ಪಾದನೆಯ ವಿಶ್ಲೇಷಣೆಗೆ ಸ್ಥಾನ ಒದಗಿಸಿಕೊಡಲು ಪ್ರಯತ್ನಿಸಿದ್ದೇನೆ.
ಕರ್ನಾಟಕದ ಬಗ್ಗೆ ನಮಗೆ ಸ್ಪಷ್ಟವಾದ ಮಾಹಿತಿಗಳನ್ನು ಒದಗಿಸುವ ಆಕರಗಳು ದೊರಕುವುದು ಕ್ರಿ.ಶ. ನಾಲ್ಕನೇ ಶತಮಾನದಿಂದ ಈಚೆಗೆ ಮಾತ್ರ. ಕದಂಬ ಮತ್ತು ಗಂಗ ವಂಶಗಳ ಶಾಸನಗಳಲ್ಲಿ ಅಂದಿನ ರಾಜಕೀಯ, ಆರ್ಥಿಕ ಮತ್ತು ಧಾರ್ಮಿಕ ಸ್ಥಿತಿಗತಿಗಳ ಬಗ್ಗೆ ಮಹತ್ವದ ವಿಷಯಗಳು ದಾಖಲುಗೊಂಡಿವೆ. ಆದರೆ ಕ್ರಿ.ಪೂ. ಮೂರನೇ ಶತಮಾನದಿಂದಲೇ ಸಣ್ಣ ಪ್ರಮಾಣದ ಮಾಹಿತಿಗಳು ಅಲ್ಲಲ್ಲಿ ಕಂಡುಬರುತ್ತವೆ. ಬ್ರಹ್ಮಗಿರಿ, ಮಸ್ಕಿ, ನಿಟ್ಟೂರು, ಸಿದ್ಧಾಪುರ, ಜಟಿಂಗ-ರಾಮೇಶ್ವರ ಮುಂತಾದಲ್ಲಿ ಪತ್ತೆಯಾದ ಅಶೋಕನ ಶಿಲಾ ಶಾಸನಗಳ ಆಧಾರದ ಮೇರೆಗೆ ಉತ್ತರಕರ್ನಾಟಕದ ಕೆಲವು ಪ್ರದೇಶಗಳು ಅಂದಿನ ಭಾರತದ ಪ್ರಮುಖ ಆರ್ಥಿಕ ವ್ಯವಸ್ಥೆಯೊಂದರ ಭಾಗವಾಗಿತ್ತು ಎಂಬುದು ತಿಳಿದುಬರುತ್ತದೆ.

Additional information

Category

Author

Book Format

Ebook

Language

Kannada

Publisher

Reviews

There are no reviews yet.

Only logged in customers who have purchased this product may leave a review.