Availability: In StockPrintbook

ಜಂಗ್ಲಿ ಕುಲಪತಿಯ ಜಂಗೀಕಥೆ

$2.92

ಈ ಆತ್ಮಕಥೆಯಲ್ಲಿ ಕಟ್ಟೀಮನಿ ಒಂದು ವಿಶ್ವವಿದ್ಯಾಲಯವನ್ನು ಹೇಗೆ ರಚನಾತ್ಮಕವಾಗಿ ಕಟ್ಟಬಹುದೆಂಬುದನ್ನು ಬಲು ವಿಸ್ತಾರವಾಗಿ ವಿವರಿಸಿದ್ದಾರೆ. ಅವರಿವರಂತೆ ಇವರೂ ಕೋಟಿಗಟ್ಟಲೆ ಹಣ ಪಡೆದು ನಿಶ್ಚಿಂತರಾಗಬಹುದಿತ್ತು. ಆದರೆ ಕಟ್ಟೀಮನಿ ತನಗೆ ಬಂದ ಈ ಅವಕಾಶವನ್ನು ರಚನಾತ್ಮಕವಾಗಿ ಉಪಯೋಗಿಸಿಕೊಂಡರು.
ಕಟ್ಟೀಮನಿಯವರ ಜೀವನವೇ ಒಂದು ಹೋರಾಟದ ಕಥೆ ಎಸ್.ಟಿ. ಜನಾಂಗಕ್ಕೆ ಸೇರಿದ ಒಬ್ಬ ಬಡಹುಡುಗ ಕುಲಪತಿಯ ಸ್ಥಾನದವರೆಗೆ ನಡೆದುಕೊಂಡು ಹೋಗಿರುವ ಹಿಂದೆ ಅನೇಕ ನೋವಿನ ಎಳೆಗಳಿವೆ. ಕಟ್ಟೀಮನಿಯವರ ಒಂದು ವೈಶಿಷ್ಟ್ಯವೇನೆಂದರೆ ಅವರು ಯಾರ ಬಗ್ಗೆಯೂ, ಯಾವುದರ ಬಗ್ಗೆಯೂ ಕಹಿಯನ್ನು ಇಟ್ಟುಕೊಳ್ಳಲಿಲ್ಲ. ತನಗೆ ಅವಮಾನಿಸಿದವರನ್ನು ಕರೆದು ಸನ್ಮಾನಿಸಿ ಅವರೇ ನಾಚಿಕೆಪಡುವಂತೆ ಮಾಡಿದರು. ತಮ್ಮ ಇಡೀ ಜೀವನವನ್ನು ಅವರು ಆತ್ಮಕಥೆಯನ್ನಾಗಿಸಿದರೆ ಅದು ಹಿಂದುಳಿದ ಯುವಜನರ ಸ್ಫೂರ್ತಿಯ ಗ್ರಂಥವಾಗಬಹುದು. ಕಟ್ಟೀಮನಿಯವರು ಹೆಸರಿನಂತೆಯೇ ಕಟ್ಟುವವರು; ಕೆಡವುವವರಲ್ಲ. ಅವರ ಕಟ್ಟುವಿಕೆಯ ಈ ಗುಣವು ಎಲ್ಲ ಹಿಂದುಳಿದ ವಿದ್ಯಾರ್ಥಿಗಳ ಅಭಿವೃದ್ಧಿಯ ಮಂತ್ರವಾಗಲಿ ಎಂದು ಹಾರೈಸುತ್ತೇನೆ.
-ಡಾ.ಸರಜೂ ಕಾಟ್ಕರ್

ಪ್ರೊ. ತೇಜಸ್ವಿ ಕಟ್ಟೀಮನಿಯವರ ‘ಜಂಗ್ಲಿ ಕುಲಪತಿಯ ಜಂಗೀಕತೆ’ ಆತ್ಮಕಥನ ಸಾಮಾಜಿಕ ಸಂಕಥನವೂ ಉನ್ನತ ಶಿಕ್ಷಣ ಸಂಸ್ಥೆಯನ್ನು ಕಟ್ಟುವಾಗ ಕೆಳಸಮುದಾಯದಿಂದ ಬಂದ ಶಿಕ್ಷಣ ಆಡಳಿತಾಧಿಕಾರಿಗಳು ಎದುರಿಸುವ ಸವಾಲುಗಳ, ಕ್ಷಣ ಕ್ಷಣಕ್ಕೂ ಅವರು ಸ್ವೀಕರಿಸಬೇಕಾಗಿ ಬರುವ ಪಂಥಾಹ್ವಾನಗಳ ಹಾಗೂ ಕಷ್ಟ- ಕಾರ್ಪಣ್ಯಗಳ ಕಥೆಯೂ ಆಗಿದೆ. ಆದಿವಾಸಿ ಜನರು ಎದುರಿಸುವ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ನೈತಿಕ ಸವಾಲುಗಳ, ಸಮಸ್ಯೆಗಳ ಸ್ವರೂಪ ಬಹಳ ಭಿನ್ನವಾಗಿರುತ್ತದೆ. ಆದಿವಾಸಿಯೊಬ್ಬ ಆದಿವಾಸಿ ವಿಶ್ವವಿದ್ಯಾಲಯ ಕಟ್ಟುವ ಸಂದರ್ಭದಲ್ಲಿ ಎದುರಿಸುವ ಸಮಸ್ಯೆಗಳೂ ಅಷ್ಟೇ ವಿಭಿನ್ನವೂ, ಜಟಿಲವೂ, ಸಂಕೀರ್ಣವೂ ಆಗಿರುತ್ತವೆ. ಇಂಥ ಅನೇಕ ಜಟಿಲ ಸಂಕೀರ್ಣ ಅನುಭವಗಳು ಇಲ್ಲಿ ಸಂಕಥನದ ಶೈಲಿಯಲ್ಲಿ, ನೇರ ಭಾಷೆಯಲ್ಲಿ ವ್ಯಕ್ತಗೊಂಡಿವೆ. ಇವು ಕಲ್ಪಿತ ಕಥೆಗಳಲ್ಲ, ವೈಭವೀಕರಣಗೊಂಡ, ರೋಮ್ಯಾಂಟೀಕರಣಗೊಂಡ ಅನುಭವಗಳೂ ಅಲ್ಲ. ಕಟ್ಟೀಮನಿಯವರು ಅನುಭವಿಸಿದ ಘಟನೆಗಳು, ಸಂದರ್ಭಗಳು ಇಲ್ಲಿ ಕಲಾತ್ಮಕತೆಯ ಸ್ಪರ್ಶದಿಂದ ಮರುಹುಟ್ಟು ಪಡೆದಿವೆ. ಈ ದೇಶದ ಜ್ವಲಂತ ಸಮಸ್ಯೆಗಳನ್ನು ತಟಸ್ಥವಾಗಿ ನೋಡಿ, ಅವುಗಳನ್ನು ಸಮರ್ಥವಾಗಿ ಎದುರಿಸಿ, ಅವುಗಳಿಗೆ ಸೃಜನಶೀಲತೆಯ ಸ್ಪರ್ಶ ನೀಡಿದ್ದರಿಂದ ಕಟ್ಟೀಮನಿಯವರ ಆತ್ಮಕತೆ ವಿಶಿಷ್ಟವಾಗಿ ಮೂಡಿಬರಲು ಸಾಧ್ಯವಾಗಿದೆ.

ಅಪ್ಯಾಯಮಾನವಾದ ಶೈಲಿ, ರೂಪಾತ್ಮಕತೆ ಬಿಟ್ಟು ಕೊಡದ, ನೇರವಾದ ಭಾಷೆ, ಮನೋಜ್ಞ ನಿರೂಪಣೆ, ಎದೆಗೆ ಭಾರವಾಗದ ಹಾಗೆ ಅಂತರಂಗ ತಟ್ಟುವ, ತಲೆಗೆ ಭಾರವಾಗದ ಹಾಗೆ ಬುದ್ಧಿಗೆ ಸವಾಲು ಹಾಕುವ, ನಮ್ಮ ನೈತಿಕ ಪ್ರಜ್ಞೆ ಎಚ್ಚರಿಸುವ, ವಿವೇಕದ ಕಣ್ಣು ತೆರೆಯಿಸುವ ‘ಜಂಗೀಕತೆ’ ಭಾರತೀಯ ಆತ್ಮಕತೆಗಳಲ್ಲಿ ವಿಭಿನ್ನ ದಾರಿ ತುಳಿದಿದೆ ಮತ್ತು ಓದುಗರ ಮನಸ್ಸಿನಲ್ಲಿ ವಿಷಾದದ, ನವಿರಾದ ಮತ್ತು ಭರವಸೆಯ ಭಾವನೆಗಳನ್ನು ಹುಟ್ಟಿಸುತ್ತದೆ.

ಡಾ. ಸಿದ್ಧಲಿಂಗಯ್ಯ
ಹಿರಿಯ ಕವಿಗಳು

Additional information

Author

Publisher

Book Format

Printbook

Language

Kannada

Pages

204

Year Published

2021

ISBN

978-81949940-8-4

Category

Reviews

There are no reviews yet.

Only logged in customers who have purchased this product may leave a review.