ಕ್ಲಾರಾ ಜೆಟ್‌ಕಿನ್ (೧೮೫೭-೧೯೩೩) ಜರ್ಮನ್ ಸಂಜಾತೆ. ವಕೀಲೆ. ಸಮಾಜವಾದದಲ್ಲಿ ನಂಬಿಕೆಯನ್ನಿಟ್ಟಿದ್ದವಳು. ಕ್ರಾಂತಿಕಾರಕ ವಿಚಾರಗಳನ್ನು ಮೈಗೂಡಿಸಿಕೊಂಡಳು. ಮಹಿಳಾ ಹಕ್ಕುಗಳ ಪ್ರತಿಪಾದಕಳಾಗಿ ವಿಶ್ವದ ಗಮನವನ್ನು ಸೆಳೆದಳು. ಶಾಂತಿಪ್ರಿಯೆಯಾದ ಈಕೆಯು ಹೆಣ್ಣಿನ ವಿಚಾರಗಳಿಗೆ ಧ್ವನಿಯಾದಳು. ಹೆಣ್ಣು ತನ್ನ ಹಕ್ಕುಗಳ ಬಗ್ಗೆ ಜಾಗೃತಳಾಗಲು ಇಂಬನ್ನು ಕೊಟ್ಟಳು. ಈ ಒಂದು ಕಿಡಿಯು ಮುಂದೆ ದೊಡ್ಡ ಪ್ರಮಾಣದ ಕಾಳ್ಗಿಚ್ಚಾಗಿ ಪುರುಷಾರಣ್ಯದಲ್ಲಿ ಹಬ್ಬಿತು. ವಿಶ್ವ ಮಹಿಳಾದಿನ ಆಚರಣೆಯು ರೂಪುಗೊಳ್ಳಲು ಕಾರಣವಾಯಿತು.

ಜಗತ್ತಿನ ಬಹುಪಾಲು ಸಂಸ್ಕೃತಿಗಳು ಹೆಣ್ಣನ್ನು ದ್ವಿತೀಯ ದರ್ಜೆಯ ಪ್ರಜೆಯನ್ನಾಗಿ ನೋಡುತ್ತಿತ್ತು. ಆಕೆಯು ಪುರುಷನಿಗೆ ಎಂದೂ ಸಮನಲ್ಲ ಎನ್ನುವ ಧೋರಣೆಯು ಎಲ್ಲೆಡೆ ಕಂಡುಬರುತ್ತಿತ್ತು. ದೈಹಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ ಹೆಣ್ಣು ಗಂಡಿಗೆ ಸಮನಲ್ಲ ಎಂಬ ವಿಚಾರದ ಹಿನ್ನೆಲೆಯಲ್ಲಿ ಹೆಣ್ಣಿಗೆ ಸರಿಸಮನಾದ ಕೂಲಿ / ಸಂಬಳ ದೊರೆಯುತ್ತಿರಲಿಲ್ಲ. ಆಸ್ತಿಹಕ್ಕು ಇರಲಿಲ್ಲ. ಮತದಾನದ ಹಕ್ಕು ಇರಲಿಲ್ಲ. ರಾಜಕೀಯದಲ್ಲಿ ಸಕ್ರಿಯವಾಗಿ ಪಾಲುಗೊಳ್ಳುವ ಸಮಾನಅವಕಾಶವು ಕನಸೇ ಆಗಿತ್ತು. ಓಸಿಪ್ ಜೆಟ್‌ಕಿನ್ ಕ್ಲಾರಾಳನ್ನು ಜರ್ಮನಿಯ ಸೋಶಿಯಲ್ ಡೆಮಾಕ್ರಟಿಕ್ ಪಕ್ಷಕ್ಕೆ ಪರಿಚಯಿಸಿದ. ಮುಂದೆ ಆತನನ್ನೇ ಮದುವೆಯಾದ ಕ್ಲಾರಾ ಪಕ್ಷದ ಕೆಲಸ ಕಾರ್ಯಗಳಲ್ಲಿ ತನ್ನನ್ನು ಗಂಭೀರವಾಗಿ ತೊಡಗಿಸಿಕೊಂಡಳು. ೧೮೯೧ರಿಂದ ೧೯೧೭ರವರೆಗೆ ಪಕ್ಷದ ಮಹಿಳಾ ಪತ್ರಿಕೆಯಾದ ‘ಡಿ ಗ್ಲೈಶ್‌ಹೈಟ್’ (ಈಕ್ವಾಲಿಟಿ=ಸಮಾನತೆ) ಎನ್ನುವ ಪತ್ರಿಕೆಗೆ ಸಂಪಾದಕಳಾದಳು. ಈ ಪತ್ರಿಕೆಯ ಮೂಲಕ ಮಹಿಳಾ ಕಾರ್ಮಿಕರನ್ನು ಸಮಾಜವಾದದತ್ತ ಸೆಳೆದು, ಅವರ ಮನಸ್ಸಿನಲ್ಲಿ ಕ್ರಾಂತಿಕಾರಕ ಬೀಜವನ್ನು ಬಿತ್ತಿದಳು. ೧೯೧೦ರಲ್ಲಿ ಡೆನ್ಮಾರ್ಕಿನ ಕೋಪನ್ ಹೇಗನ್ ನಗರದಲ್ಲಿ ನಡೆದ ಸಮ್ಮೇಳನದಲ್ಲಿ ಮಹಿಳೆಯರಿಗೆ ಸಾರ್ವತ್ರಿಕ ಮತದಾನದ ಹಕ್ಕು ದೊರೆಯಬೇಕು ಎನ್ನುವುದನ್ನು ಪ್ರತಿಪಾದಿಸುವುದರ ಜೊತೆಯಲ್ಲಿ, ಪ್ರತಿವರ್ಷ ಮಾರ್ಚ್ ೮ನೆಯ ದಿನವನ್ನು ‘ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ’ಯನ್ನಾಗಿ ಆಚರಿಸಬೇಕೆಂದು ಕರೆಕೊಟ್ಟಳು. ಕ್ಲಾರಾ ನೀಡಿದ ಸಲಹೆಯನ್ನು ಸಭೆಯು ಒಪ್ಪಿತು. ಮಾರ್ಚ್ ೮ನೆಯ ದಿನವನ್ನೆ ಆಯ್ಕೆಮಾಡಿಕೊಳ್ಳಲು ಕಾರಣವಿತ್ತು. ೧೯೦೮, ಮಾರ್ಚ್ ೮ರಂದು ಅಮೇರಿಕಾದ ಸಮಾಜವಾದೀ ಮಹಿಳೆಯರು, ನ್ಯೂಯಾರ್ಕಿನಲ್ಲಿ ಸಮಾನ ಅವಕಾಶ, ಸಮಾನ ವೇತನ ಹಾಗೂ ಮತದಾನದ ಹಕ್ಕಿಗಾಗಿ ದೊಡ್ಡ ಪ್ರಮಾಣದ ಮೆರವಣಿಗೆಯನ್ನು ಹೊರಡಿಸಿ ಅಂತಾರಾಷ್ಟ್ರೀಯ ಗಮನವನ್ನು ಸೆಳೆದಿದ್ದರು.

Additional information

Category

Author

Publisher

Book Format

Ebook

Pages

48

Language

Kannada

Reviews

There are no reviews yet.

Only logged in customers who have purchased this product may leave a review.