ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು
ಡಿಕ್ಷನರಿಗಳಲ್ಲಿ ಅನೇಕ ಪರಿಯ ಡಿಕ್ಷನರಿಗಳಿರುವುದುಂಟು. ಬಹುಪಾಲು ಡಿಕ್ಷನರಿಗಳು ಪದ-ಅರ್ಥಗಳ ಕೋಶಗಳಾಗಿದ್ದರೆ ಇನ್ನು ಕೆಲವು ನುಡಿಗಟ್ಟು-ಉಕ್ತಿ-ಉಲ್ಲೇಖಗಳ ಸಂಗ್ರಹವೋ ಪ್ರಸಂಗ-ಸನ್ನಿವೇಶಗಳ ಸಂಗ್ರಹವೋ ಆಗಿರುವುದುಂಟು. ಕೆಲವು ಕೋಶಗಳು ಸರ್ವಜನ ಸಾಮಾನ್ಯಭಾಷೆಗೆ ಸಂಬಂಧಿಸಿರುವಂಥವಾದರೆ, ಇನ್ನು ಕೆಲವು ತಜ್ಞಜನಪರಿಭಾಷೆಗೆ ಸೀಮಿತವಾಗಿರುತ್ತವೆ. ಕೆಲವು ಅರ್ಥಕೋಶಗಳು ಶಾಸ್ತ್ರಗಂಭೀರ ಭಾಷ್ಯದ ಶೈಲಿಯಲ್ಲಿ ಮಾತನಾಡಿದರೆ, ಇನ್ನು ಕೆಲವು (ಅನರ್ಥ) ಕೋಶಗಳು ವೈನೋದಿಕ ಲಾಸ್ಯದ ಧಾಟಿಯಲ್ಲಿ ಮಾತನಾಡುತ್ತದೆ. ಇವುಗಳ ನಡುವೆ ಕೆಲವು ಅಪರೂಪದ ಕೋಶಗಳು ಪದಗಳ ಚರಿತ್ರೆಯ ಆಖ್ಯಾನಗಲನ್ನು ಹೇಳುತ್ತ ಹೇಳುತ್ತ ಅವುಗಳ ಚರಿತವನ್ನು ವ್ಯಾಖ್ಯಾನಿಸುವುದೂ ಉಂಟು. ಇಂತಹ ವಿಶಿಷ್ಟ ರೂಪದ ಒಂದು ನಿಘಂಟು- ಈ ಪುಸ್ತಕ. ಕನ್ನಡ ಅಕಾರಾದಿಯಲ್ಲಿ ಜೋಡಿಸಲ್ಪಟ್ಟಿರುವ ಈ ಪರಿಭಾಷಾ ಕೋಶದಲ್ಲಿ ‘ಅರ್ಥಶಾಸ್ತ್ರ’ದಿಂದ ‘ಬಾಲಿವುಡ್’ನವರೆಗೆ, ‘ಇಸ್ಲಾಮ್’ನಿಂದ ‘ಕೋಕಾಕೋಲಾ’ದವರೆಗೆ, ‘ಮಾರ್ಕ್ಸ್‌ವಾದ’ದಿಂದ ‘ಯಾಹೂ’ದವರೆಗೆ ನಾನಾ ವಿಚಾರ ಕುರಿತು ಕಿರುಲೇಖನಗಳಿವೆ.
ಹಾಗಂತ, ಇದು ಪರಿಭಾಷೆಗಳ ಪರಿಚಯವಿಲ್ಲದವರಿಗೆ ತಾಂತ್ರಿಕ ಪದಪ್ರಯೋಗಗಳ ಹಿನ್ನೆಲೆಯನ್ನು ಅರ್ಥಮಾಡಿಸುವ ಪ್ರಯತ್ನ ಅಲ್ಲ; ಅದಕ್ಕಿಂತ ಘನವಾದೊಂದು ಉದ್ದಿಶ್ಯ ಈ ಕೋಶದ ಹಿಂದಿದೆ. ಒಂದು ಕಡೆಯಿಂದ, ಈ ಕೋಶವು ನಮ್ಮ ಕಾಲ-ದೇಶಗಳ ಕೆಲವು ಮುಖ್ಯ ಪದ-ಪದಾರ್ಥ-ಪರಿಕಲ್ಪನೆ-ಪ್ರಕ್ರಿಯೆಗಳ ಕಥೆಯನ್ನು ಹೇಳುತ್ತಲೇ ಜತೆಜತೆಗೇ, ಅವುಗಳ ಹಿಂದಿನ ಸೂಕ್ಷ್ಮ ಸಾಂಸ್ಕೃತಿಕ ರಾಜಕಾರಣವನ್ನು ಅನಾವರಣಗೊಳಿಸುತ್ತದೆ. ಮತ್ತು, ಆ ಮೂಲಕ ಅರ್ಥಕಾರಣ, ಜ್ಞಾನಕಾರಣಗಳ ವಿವಿಧ ಅಪರಿಚಿತ ಆಯಾಮಗಳನ್ನು ಕುರಿತಂತೆ ಅಸಾಧಾರಣವಾದ ಒಳನೋಟಗಳನ್ನು ನೀಡುತ್ತದೆ ಕೂಡ. ಆದ್ದರಿಂದಲೇ, ವಿಷಯದಲ್ಲಿ ತುಂಬ ವೈವಿಧ್ಯವನ್ನೊಳಗೊಂಡಿರುವಂತಹ ಈ ಲೇಖನಮಾಲಿಕೆಯಲ್ಲಿ ಸ್ಪಷ್ಟವಾದ ಒಂದು ಸ್ಥಾಯಿಸೂತ್ರವೂ ಇದೆ-ಅದು, ಇವತ್ತಿನ ಆಧುನಿಕ (ಮತ್ತು ‘ಆಧುನಿಕೋತ್ತರ’) ಜಗತ್ತುಗಳು ‘ಸಾಮಾನ್ಯಜ್ಞಾನ’ವೆಂಬಂತೆ ರೂಢಿಗೊಳಿಸಿಕೊಂಡಿರುವ ಸಿದ್ಧಯೋಚನಾಕ್ರಮಗಳ ವಿಮರ್ಶೆ; ಅರ್ಥಾತ್, ಬೌದ್ಧಿಕ ಸಿದ್ಧಮಾದರಿಗಳ ನಿರಾಕರಣೆ.

Additional information

Category

Author

Publisher

Language

Kannada

Book Format

Ebook

Reviews

There are no reviews yet.

Only logged in customers who have purchased this product may leave a review.