’ತಲೆಗಳಿ’ಯ ಕಥಾನಾಯಕ ಕವಲುಕೊಪ್ಪದ ಸುಬ್ರಾಯ ಹೆಗಡೆ. ಅವನು ನಡೆದು ಬಂದ ದಾರಿಯನ್ನು ಶೋಧಿಸುವಾಗ ವಿ.ಟಿ.ಯವರು ಬಳಸಿಕೊಳ್ಳುವ ಸಂಗತಿಗಳೆಲ್ಲ ಹವ್ಯಕರ ನಿತ್ಯ ಸಂಸ್ಕೃತಿಯ ಆಪ್ತವಾದ ತಿಳಿವಿನಿಂದ ಪ್ರಾಪ್ತವಾದ್ದು. ಸುಬ್ರಾಯ ಹೆಗಡೆ ಔದಾರ್ಯದ ಅತ್ಯುತ್ಸಾಹದಲ್ಲಿ ತನ್ನ ಸಂಪತ್ತನ್ನೆಲ್ಲ ವಿವೇಚನೆಯಿಲ್ಲದ ಕೆಲಸಗಳಲ್ಲಿ ಕಳೆದುಕೊಂಡು ದೈವೀನೆರವಿನಿಂದ ಪುನಃ ಆರ್ಥಿಕವಾಗಿಯೂ, ಸಾಮಾಜಿಕವಾಗಿಯೂ ಮೇಲೇರುತ್ತಾನೆ. ಮತ್ತು ವಿವೇಚನೆಯಿಂದ ಕೂಡಿದ ಆದರ್ಶಗಳನ್ನು ಪಾಲಿಸುತ್ತ ಕೊನೆಗೆ ಜೀವನದಲ್ಲಿ ಹೆಚ್ಚಿನ ಅರ್ಥ ಕಾಣದೆ ಗತಿಸಿಹೋದ ಹೆಂಡತಿ ಸರಸ್ವತಿಯ ಅಸ್ಥಿವಿಸರ್ಜನೆಗೆ ಗಂಗಾನದಿಯಲ್ಲಿ ಇಳಿದು ನದಿಯೊಳಗೆ ಹೊರಟೇಹೋಗುತ್ತಾನೆ. ಇಂದಿನ ವಿಮರ್ಶೆಯ ದೃಷ್ಟಿಯಲ್ಲಿ ಇದು ನಾಟಕೀಯವಾಗಿ ಕೊನೆಗೊಳ್ಳುವ ಅತಿಯಾದ ಭಾವುಕತೆಯ ಕಾದಂಬರಿ. ಕಥೆಯ ಈ ರೇಖಾ ಚಿತ್ರದಿಂದ ಕಾಣುವುದು ಕೂಡ ಇಷ್ಟೇ ಆಗಿದೆ. ಮೇಲುನೋಟಕ್ಕೆ ಕೂಡ ಕಾದಂಬರಿಯ ಘಟನೆಗಳು ಕಥಾನಾಯಕನ ಸುತ್ತಲೇ ಹೆಣೆದುಕೊಂಡಿದೆ. ಆದರೆ ಕೃತಿಯಿಂದ ಓದುಗ ಪಡೆಯುವ ಅನುಭವವೇ ಬೇರೆ. ಭಾವುಕತೆಯ ಶೀಘ್ರ ಪರಿಣಾಮಗಳನ್ನು ಮೀರಿ ನಿಲ್ಲುವುದು ಕೃತಿಗೆ ತನ್ನ ವಿವರಗಳಿಂದಲೇ ಸಾಧ್ಯವಾಗುತ್ತದೆ. ಕೃಷಿಯನ್ನೇ ಕಚ್ಚಿಕೊಂಡು ಬದುಕು ಸಾಗಿಸುವ ಶಿರಸಿ-ಸಿದ್ದಾಪುರ ಭಾಗದ ಜನರ ಚಟುವಟಿಕೆಗಳು, ಅವರ ಆರ್ಥಿಕ ನೆಲೆ, ಅದರ ಮಿತಿ, ಧಾರ್ಮಿಕ ನಂಬುಗೆಗಳು, ರಾತ್ರಿಯ ಗ್ಯಾಸಲೈಟಿನ ಬೆಳಕಿನಲ್ಲಿ ಯಕ್ಷಗಾನದ ಅಲೌಕಿಕ ಸನ್ನಿವೇಶಗಳಿಗಾಗಿ ಕಾಯುವ ಸ್ವಪ್ನಶೀಲ ಕಾತುರಗಳು, ಅವರವರ ಮನೆದೇವರು, ಗ್ರಾಮದೇವತೆ, ಗುಪ್ತಾರಾಧನೆಗಳು, ಇಷ್ಟಸಿದ್ಧಿಗಳು-ಇವೆಲ್ಲ ’ತಲೆಗಳಿ’ ಯಲ್ಲಿ ಫಲಿತವಾಗುವ ನಿಜಗಳು. ಕಷ್ಟ-ಸುಖಗಳನ್ನು ಒಂದೇ ಗಿಡದ ಹಣ್ಣೆಂಬಂತೆ ಆಯ್ದುಕೊಳ್ಳುವುದು ಈ ಗುಡ್ಡಗಾಡು ಜನರಿಗೆ ಧಾರ್ಮಿಕ ಪರಂಪರೆ ಮತ್ತು ನಂಬುಗೆಗಳಿಂದಲೇ ಪ್ರಾಪ್ತವಾಗಿದೆ.
ಆಧುನಿಕತೆಯ ಹೊಡೆತದಲ್ಲಿ ನಾಶವಾಗಿರುವ ಅನೇಕ ಕಸುಬುಗಳಲ್ಲಿ ಕತೆಗಾರಿಕೆಯೂ ಒಂದು. ಒಂದು ಪಕ್ಷ ಕತೆ ಹೇಳುವವರಿದ್ದರೂ ಕೇಳುಗರಿಲ್ಲ; ಹೇಳುಗರೂ ಕೇಳುಗರೂ ಇರುವೆಡೆ ದೂರದರ್ಶನ, ಕೆಲಸದ ಒತ್ತಡ ಮತ್ತು ಇಂಥ ಅನೇಕ ಇತರ ಧಾವಂತಗಳಿಂದಾಗಿ ಕತೆಗೆ ವ್ಯವಧಾನವಿರುವವರು ಕಡಿಮೆ. ಇದೆಲ್ಲದರ ಅರಿವಿದ್ದೂ ಕೂಡ ವಿ.ಟಿ.ಯವರಿಗೆ ಇಷ್ಟು ವಿವರವಾದ ನೋಟಗಳಿರುವ ಕಾದಂಬರಿಯನ್ನು ಬರೆಯುವ ಉತ್ಸಾಹವಿತ್ತು ಎಂದ ಮೇಲೆ ಅವರ ಉದ್ದೇಶ ಬರಿಯ ಕತೆಗಾರಿಕೆಯ ಖಾಸಗಿ ಉಮೇದಿನದು ಎಂದು ಹೇಳಲಾಗದು.

Additional information

Author

Publisher

Book Format

Ebook

Language

Kannada

Category

Reviews

There are no reviews yet.

Only logged in customers who have purchased this product may leave a review.