ನಾಗೇಶ ಹೆಗಡೆ ಅವರು ೧೪ ಫೆಬ್ರವರಿ ೧೯೪೮ರಂದು ಉ.ಕ. ಜಿಲ್ಲೆ ಶಿರಸಿ ಬಳಿಯ ಬಕ್ಕೆಮನೆಯಲ್ಲಿ ಜನಿಸಿದರು. ಖರಗಪುರ ಐಐಟಿ ಮತ್ತು ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯಗಳಲ್ಲಿ ಭೂಗರ್ಭಶಾಸ್ತ್ರ ಮತ್ತು ಪರಿಸರವಿಜ್ಞಾನ ಕುರಿತು ಅಧ್ಯಯನ ನಡೆಸಿದ ಅವರು ಕೆಲಕಾಲ ನೈನಿತಾಲ್‌ನ ಕುಮಾವೋ ವಿ.ವಿ.ಯಲ್ಲಿ ಪ್ರಾಧ್ಯಾಪಕರಾಗಿದ್ದರು; ಬಳಿಕ ದೀರ್ಘಕಾಲ ಪ್ರಜಾವಾಣಿ ಪತ್ರಿಕೆಯಲ್ಲಿ ಕೆಲಸ ಮಾಡಿ ನಿವೃತ್ತರಾದರು. ಪರಿಸರವಿಜ್ಞಾನ ಕುರಿತ ಇವರ ಹಲವಾರು ಪುಸ್ತಕಗಳಲ್ಲಿ ‘ಇರುವುದೊಂದೇ ಭೂಮಿ’, ‘ನಮ್ಮೊಳಗಿನ ಬ್ರಹ್ಮಾಂಡ’, ‘ಮುಷ್ಠಿಯಲ್ಲಿ ಮಿಲೆನಿಯಂ’ ಪ್ರಮುಖವಾದವು. ಕುಸುಮಾ ಸೊರಬ ಅವರನ್ನು ಕುರಿತ ‘ಶತಮಾನದ ಕುಸುಮ’ ಮತ್ತು ನಾಲ್ಕು ಸಂಪುಟಗಳ ‘ಕರ್ನಾಟಕ ಪರಿಸರ ಪರಿಸ್ಥಿತಿ’ ಕೃತಿಗಳನ್ನೂ ಇವರು ಸಂಪಾದಿಸಿದ್ದಾರೆ. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಶಿವರಾಮಕಾರಂತ ಪ್ರಶಸ್ತಿ ಮೊದಲಾದ ಮನ್ನಣೆಗಳು ಇವರಿಗೆ ದೊರಕಿವೆ. ಪ್ರಸ್ತುತ ಬೆಂಗಳೂರು ಸಮೀಪದ ಹಳ್ಳಿಯೊಂದರಲ್ಲಿ ಬದುಕುತ್ತಿರುವ ನಾಗೇಶ ಹೆಗಡೆ ಲೇಖನ-ಅಧ್ಯಾಪನಗಳಲ್ಲಿ ತೊಡಗಿಕೊಂಡಿದ್ದಾರೆ.

ರನ್ನನ ಗದಾಯುದ್ಧದ ‘ಆ ರವಮಂ, ನಿರ್ಜಿತ ಕಂಠೀ-ರವ ರವಮಂ’ ಎಂಬ ಸಾಲುಗಳು ಇಂದಿಗೂ ನನ್ನ ಕಿವಿಯಲ್ಲಿ ಮೊಳಗುತ್ತಿರುತ್ತವೆ. ಹೈಸ್ಕೂಲಿನಲ್ಲಿ ಆ ಪದ್ಯವನ್ನು ಕಲಿಸಿದ ಆಜಾನುಬಾಹು ಶಿಕ್ಷಕ ಡಿ.ಎಸ್‌. ಭಟ್ಟರು ಈಗಲೂ ಕಣ್ಣುಮುಂದೆ ಸುಳಿಯುತ್ತಾರೆ. ಗಂಭೀರ ಧ್ವನಿಯಲ್ಲಿ ಅವರು ಆ ಒಂದು ಚರಣವನ್ನು ಓದಿ, ಪಠ್ಯದ ಪುಟವನ್ನು ಮಗುಚಿಟ್ಟು, ‘ರವ ರವಮಂ ಎಂದು ಎರಡೆರಡು ಬಾರಿ “ರವ” ಯಾಕೆ ಬಂತು? ಯಾರು ಹೇಳ್ತೀರಿ?’ ಎಂದು ತಮ್ಮ ದೊಡ್ಡ ಕಣ್ಣುಗಳನ್ನು ಅಗಲಿಸಿ ಇಡೀ ಕ್ಲಾಸನ್ನು ಸ್ಕ್ಯಾನ್ ಮಾಡುತ್ತಿದ್ದ ಅವರ ಚಿತ್ರಣ ಆಗಿದ್ದ ಹಾಗೇ ಈಗಲೂ ಮನಸ್ಸಿನಲ್ಲಿ ಮೂಡುತ್ತದೆ. ಹರವಾದ ಎದೆಯ, ವಿಶಾಲ ಕಾಯದ, ಶುಭ್ರ ಧೋತಿಯ, ಜುಬ್ಬಾ ಧರಿಸಿದ ಈ ಮಾಸ್ತರರಿಗೇ ಭುಜಕೀರ್ತಿ ಕಟ್ಟಿ, ಎದೆಹಾರ ಹಾಕಿ, ಕಿರೀಟ ಇಟ್ಟು, ಕೈಗೆ ಗದೆ ಹಿಡಿಸಿದರೆ ಹೇಗೆ ಎಂದು ನಾನು ಮನಸ್ಸಿನಲ್ಲೇ ಕಲ್ಪಿಸಿಕೊಳ್ಳುತ್ತ, ನನ್ನೆದುರು ಭೀಮನೇ ಪ್ರತ್ಯಕ್ಷನಾದಂತೆ ಊಹಿಸುತ್ತ ಕೂತಿರುತ್ತೇನೆ.

Additional information

Author

Publisher

Book Format

Ebook

Language

Kannada

Category

Editor

Venkatramana Aithala B.R.

Reviews

There are no reviews yet.

Only logged in customers who have purchased this product may leave a review.