Your Cart

Need help? Call +91 9535015489

📖 Print books shipping available only in India. ✈ Flat rate shipping

ಅವತಾರ

Madhura Karnam
$0.80

Product details

Category

Stories

Author

Madhura Karnam

Publisher

Mangala Prakashana

Book Format

Ebook

ಮಧುರಾ ಕರ್ಣಮ್ ಅವರ ಹೊಸ ಕಥಾಸಂಕಲನ ‘ಅವತಾರ’ಕ್ಕೆ ಹಾಗೆ ನೋಡಿದರೆ ಮುನ್ನುಡಿಯ ಅಗತ್ಯವಿಲ್ಲ. ಬರವಣಿಗೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಮಧುರಾ ಈಗಾಗಲೇ ತಮ್ಮ ಕಥೆಗಳಿಂದ ಕನ್ನಡದ ಓದುಗರಿಗೆ ಪರಿಚಿತರೇ ಆಗಿದ್ದಾರೆ. ಬರವಣಿಗೆ ಮಧುರಾ ಅವರಿಗೆ ಕಲಾತ್ಮಕ ಅಭಿವ್ಯಕ್ತಿಗಿಂತ ಹೆಚ್ಚಾಗಿ ಬದುಕನ್ನು ಸಹ್ಯಗೊಳಿಸಿಕೊಳ್ಳುವ, ಮಾನವೀಯವಾಗಿಸುವ ಹುಡುಕಾಟದ ಪ್ರಕ್ರಿಯೆಯೂ ಆಗಿರಬಹುದೆ ಎನ್ನಿಸುತ್ತದೆ. ಅವರ ಕಥೆಗಳನ್ನು ಓದಿದಾಗ ಎಂದರೆ, ಕಲೆಯೆನ್ನುವುದು, ಕತೆಗಾರಿಕೆಯೆನ್ನುವುದು ಲೋಕದೊಂದಿಗೆ ನಡೆಸುವ ಸಂವಾದಕ್ಕಿಂತ ಹೆಚ್ಚಾಗಿ ತನ್ನೊಂದಿಗೆ, ತನ್ನ ಪರಿಸರದೊಂದಿಗೆ ಸ್ವಗತದ ಧಾಟಿಯಲ್ಲಿ ನಡೆಸುವ ಪಿಸುಮಾತು.
ಈ ದೃಷ್ಟಿಕೋನವೇ ಮಧುರಾ ಅವರ ಕಥೆಗಳ ಸ್ವರೂಪ, ಆಶಯ ಮತ್ತು ಭಿತ್ತಿ ಎಲ್ಲವನ್ನೂ ನಿರ್ಧರಿಸುತ್ತದೆ. ಕಾಲ ಬದಲಾಗಿದೆ ಎನ್ನುವುದು ಒಟ್ಟೂ ಲೋಕದ ಮೇಲೆ ಬೀರಿರುವ ಪರಿಣಾಮ ಏನು ಎನ್ನುವುದನ್ನು ಬೀಸಿನಲ್ಲಿ ಹಿಡಿಯುವದರಲ್ಲಿ ಇವರಿಗೆ ಆಸಕ್ತಿಯಿಲ್ಲ. ಕುಟುಂಬಗಳಲ್ಲಿ, ಕೌಟುಂಬಿಕ ನೆಲೆಗಳಲ್ಲಿ ಇದು ಮಾಡಿರುವ ಪರಿಣಾಮವನ್ನು ಇಡಿಯಾಗಿ ಅಲ್ಲ, ಬಿಡಿಬಿಡಿಯಾಗಿ ನೋಡಿ ಅರ್ಥೈಸಿಕೊಳ್ಳುವುದರಲ್ಲಿ ಇವರಿಗೆ ಆಸಕ್ತಿಯಿದೆ. ಅದು ಜಾಗತೀಕರಣದ ಸಂದರ್ಭವಾಗಿರಬಹುದು. ಸಂಬಂಧಗಳ ನಡುವಿನ ಸಂಘರ್ಷವಿರಬಹುದು. ಮೌಢ್ಯದ ಸಂಗತಿಯಿರಬಹುದು. ಮನುಷ್ಯನ ಒಳ ತಲ್ಲಣಗಳ ಸಂಗತಿಯಿರಬಹುದು… ಹೀಗೆ ಯಾವುದೇ ಸಂಗತಿಯಿರಬಹುದು. ಇವುಗಳನ್ನೆಲ್ಲ ಮಧುರ ವ್ಯಾಧಾರಣೀಕರಣಕ್ಕಿಂತ ಹೆಚ್ಚಾಗಿ ವೈಯಕ್ತಿಕ ನೆಲೆಯಲ್ಲಿಯೇ ಶೋಧಿಸುತ್ತಾ ಹೋಗುತ್ತಾರೆ. ಈ ಕಾರಣಕ್ಕಾಗಿಯೇ ಇವರ ಕತೆಗಳು ತೀರ್ಮಾನದ ಕಡೆಗೂ ಚಲಿಸುವದಿಲ್ಲ. ಸರಿ, ತಪ್ಪುಗಳನ್ನು ಕಪ್ಪು, ಬಿಳುಪು ಎನ್ನುವ ಸರಳೀಕರಣದಲ್ಲಿ ನೋಡದೇ ಮಾನವಾನುಭವದ ಹಿನ್ನೆಲೆಯಲ್ಲಿ ನೋಡುವದರಿಂದ ಈ ಕಥೆಗಳಿಗೆ ಒಂದು ಬಗೆಯ ಗಾಂಭಿರ್ಯವೂ ದಕ್ಕಿದೆ.
‘ಸೌದಾಮಿನಿಯ ರಂಗವಲ್ಲಿ’ ಈ ಸಂಕಲನದ ಒಳ್ಳೆಯ ಕಥೆಗಳಲ್ಲಿ ಒಂದು. ಹೆಣ್ಣಿನ ಸ್ಥಿತಿಗತಿಗಳ ಒಂದು ‘ಗತಿಶೋಧ’ದ ಹಾಗೆ ಈ ಕಥೆಯಿದೆ. ವಿದ್ಯೆ, ಪ್ರತಿಭೆ, ಅನಿವಾರ್ಯತೆ ಇಂಥ ಯಾವುದೇ ಹಿನ್ನೆಲೆಯಲ್ಲಿಯೂ ಹೆಣ್ಣು ಎದುರಾಗುವ ಸನ್ನಿವೇಶಗಳ ಒಂದು ಕಾಲಾತೀತ ಗುಣವೂ ಇದೆಯೇ ಎನ್ನುವ ಪ್ರಶ್ನೆಯನ್ನು ಈ ಕಥೆ ತನ್ನ ಒಡಲಲ್ಲಿ ಇಟ್ಟುಕೊಂಡಿದೆ. ಕೊನೆಗೂ ಹೆಣ್ಣು ‘ಸರಕು ಸಂಸ್ಕೃತಿ’ಯ ಸರಕಾಗುವದು ಈ ವ್ಯವಸ್ಥೆಯಲ್ಲಿ ಇಂದಿಗೂ ಎಷ್ಟು ಸುಲಭ. ಹೆಣ್ಣನ್ನು ಹಾಗೆ ಮಾರಾಟದ ಸರಕಾಗಿಸುವಲ್ಲಿ ಸಮುದಾಯಕ್ಕೆ ನಾಚಿಕೆಯಾಗಲೀ, ಸಂಕೋಚವಾಗಲೀ ಇಲ್ಲ. ಬದಲಿಗೆ ಅದು ತನ್ನ ಆಜನ್ಮಸಿದ್ಧ ಹಕ್ಕೋ ಎನ್ನುವಂತೆ ನಿಸ್ಸೀಮ ಭಂಡತನದಲ್ಲಿ ಯಾವ ಎಗ್ಗಿಲ್ಲದೇ ವರ್ತಿಸುವುದನ್ನು ಈ ಕಥೆ ಹೇಳುತ್ತದೆ. ಸದಾ ಸನ್ನದ್ಧವಾದ ಹಸಿದ ಹುಲಿಯ ಹಾಗೆ ಪುರುಷಲೋಕ ಹೆಣ್ಣನ್ನು ಬಳಸಿಕೊಳ್ಳಲು, ಬಂಡವಾಳವಾಗಿ ಹೂಡಲು ಸಜ್ಜಾಗಿರುತ್ತದೆ. ಅಪರೂಪಕ್ಕೆಂಬಂತೆ ಈ ಕಥೆಯ ನಾಯಕಿ ವಿಷವ್ಯೂಹದಿಂದ ಪಾರಾಗಿ ನೆಮ್ಮದಿಯ ಬದುಕಿಗೆ ಮರಳುತ್ತಾಳೆ. ಯಶಸ್ವಿ ಬದುಕಿಗೂ ಅನೇಕ ಬಾರಿ ಹೆಣ್ಣು ತೆರಬೇಕಾದ ಬೆಲೆ ಅದೆಷ್ಟು ದುಬಾರಿ ಮಾತ್ರವಲ್ಲ ಅದನ್ನು ದಿಟ್ಟವಾಗಿ ಎದುರಿಸಿ ಬದುಕುವದು ಅದೆಷ್ಟು ಕಷ್ಟದ್ದು ಎನ್ನುವುದನ್ನೂ ಈ ಕಥೆ ತೋರಿಸುತ್ತದೆ. ಇದೊಂದು ಆಕಸ್ಮಿಕ ಭಾಗ್ಯ ಎನ್ನುವುದನ್ನು ಈ ಕಥೆ ಸೂಚಿಸುವದು ಈ ಕಥೆಗೊಂದು ದಟ್ಟ ವಿಷಾದದ ಛಾಯೆಯನ್ನೂ ತಂದುಕೊಡುತ್ತದೆ. ತನ್ನೆಲ್ಲ ನಾಟಕೀಯತೆಯ ಜೊತೆಗೂ ಈ ಕಥೆ ಓದುಗರನ್ನು ಸೆಳೆಯುತ್ತದೆ.