ಚೈತ್ರದ ಚಿತ್ತಾರ
ಚೈತ್ರದ ಚಿಗುರಿನ ಮರೆಯಲಿ
ಅವಿತೊಂದು ಹಕ್ಕಿ ಹಾಡು ಹೇಳುತಲಿ
ಮನಕೆ ಎಂಥದೋ ಆನಂದ
ಪ್ರಕೃತಿ ಸೌಂದರ್ಯದ ಆಹ್ಲಾದ.
ಮುಗಿಲ ಮಾಳಿಗೆಯಲಿ ಬೆಳ್ಳಕ್ಕಿಗಳ ಸಾಲು
ಭೂ ತಾಯಿಯ ಧೂಳು ಗೋವಿನ ಪಾಲು
ಕೆಂಪಡರಿದ ಮುಗಿಲು
ಎಲ್ಲೆಲ್ಲೂ ಹರಸೀತು ಚೆಲುವಿನ ಹೊನಲು.
ಚೈತ್ರದ ಚಿತ್ತಾರದಿ
ಹೊಸಚಿಗುರು ಮರದಿ
ಇಣುಕೀತು ಸವಿನೆನಪು
ಕಾಡೀತು ಮನದಿ ಒನಪು.
ಕೋಗಿಲೆಯ ತಾರುಣ್ಯ
ನವಿಲಿನಾ ಲಾವಣ್ಯ
ಕಾಡಿನ ಗಂಧ
ಅರಳಿದಾ ಹೂವಿನ ಸುಗಂಧ.
ಸ್ವಚ್ಛಂದ ಗಗನ
ಮೂಡಿಸಿದೆ ಅಲ್ಲಿ ತನ್ನಯ ನಯನ
ಎಲ್ಲೆಲ್ಲೂ ಚುಕ್ಕೆಗಳ ಪಯಣ
ಚುಕ್ಕೆಗಳ ರಾಜ ಚಂದ್ರಮನ ಆಗಮನ.
ಮೋಡವಿಲ್ಲದ ಮುಗಿಲು
ಅಂಧಕಾರದಲೂ ನಕ್ಷತ್ರಗಳ ಹೊನಲು
ವಜ್ರಗಳ ಪೇರಿಸಿಟ್ಟ ತೆರದಿ
ಎಲ್ಲೆಲ್ಲೂ ಸುಂದರತೆಯ ಲಯದಿ.
ಸಮುದ್ರಕೂ ಸೊಕ್ಕಿಲ್ಲ
ಉಕ್ಕಿ ಹರಿವ ಚಪಲವಿಲ್ಲ
ಲಯವಾಗಿ ಹರಿಯುತಿಹ ತೆರೆಗಳ ಸಾಲು
ಒಂದನ್ನು ಹಿಂದಿಕ್ಕಿ ಇನ್ನೊಂದರ ಪಾಲು.
ಸೃಷ್ಟಿ ಸೊಬಗಲಿ
ಚೈತ್ರದ ಚೆಲುವಲಿ
ವಸಂತನಾಗಮನದಲಿ
ಭೂತಾಯಿ ನಕ್ಕು ನಲಿಯುತಲಿ
ಎಲ್ಲೆಲ್ಲೂ ಆನಂದದ ಚಿಲುಮೆ
ಮನಕಾನಂದದ ಒಲುಮೆ.