ಇರುಳ ಬೆಳಕಿನ ಮಗ್ಗುಲಲ್ಲಿ
ಕನಸುಗಳ ಕೊಂದು
ಇರಳಲಿ ಮನನೊಂದು
ಬೆಳಕಿನ ಬಸಿರಲಿ
ನಿಡುಸುಯ್ಯುತಲಿ
ಭಾವನೆಗಳೇ ಇಲ್ಲವಾಗಿ
ನೀರಸ ಬದುಕಿನಲಿ
ನೆನಪುಗಳೇ ಮುತ್ತಿ
ಬದುಕಿನ ಭಾಗವೇ ಬತ್ತಿ
ಕಾಲನ ಸುಳಿಯಲಿ ಸತ್ತ ಹೆಣದಂತೆ
ಬೇಯುತ ನಿಡುಸುಯ್ಯುತಲಿ
ದೂರದಿಗಂತದಿ
ಆಸೆಯ ಕಿರಣವೊಂದು
ದೂರದಿಂದಲೇ ಸನ್ನೆ ಮಾಡಿ
ಹತ್ತಿರ ಸುಳಿದು
ಮನಸ್ಪರ್ಶಿಸುತ
ನಿರಾಶೆಯ ಕಣ ಇಲ್ಲವಾಗಿಸುತ
ಬದುಕಿನ ಬಯಕೆ ಹೆಚ್ಚಿಸುತ
ಹರ್ಷದ ಹೊನಲು ಹರಿದಾಗ
ಇರುಳ ಕನಸು ಕರಗಿ
ಮನದ ಬೆಳಕು ಮುದವಾಗಿ
ಜೀವನದ ಅಗಾಧತೆ ಅರಿವಾಗಿ
ಎಲೆಲ್ಲೂ ಸೌಂದರ್ಯದ ಒರತೆ
ನೀಗೀತು ಅಜ್ಞಾನದ ಕೊರತೆ
ಜೀವನಾನಂದದ ಸಾರ್ಥಕತೆ ಕಾಣುವುದರಲ್ಲಿ
ಇರುಳು ಬೆಳಕಿನ ಮಗ್ಗುಲಲ್ಲಿ.