ಹಳದಿ ಪಟ್ಟಿಯ ಹಾರ್ನೆಟ್….!
ಪ್ರಾಣಿ-ಪಕ್ಷಿಗಳು ವಾಸಕ್ಕಾಗಿ ವಸತಿಯನ್ನು ನಿರ್ಮಿಸಿಕೊಳ್ಳುವುದು ಸಹಜ. ಹೀಗೆ ವಸತಿ ನಿರ್ಮಿಸಿಕೊಳ್ಳುವ ಕೀಟ ಜಗತ್ತಿನ ಕಣಜದ ಗೂಡು ವಿಸ್ಮಯಕಾರಿಯಾದ್ದು! ಗೀಜಗನ ಹಕ್ಕಿಯ ಗೂಡಿನಷ್ಟೇ ಸೋಜಿಗ ಅರ್ಧದಿಂದ ಮೂರು ಅಡಿ ಸುತ್ತಳತೆಯ ಗೂಡು ನಿರ್ಮಿಸುವ ಕಣಜ ತನ್ನ ಕುಟುಂಬದ ಸಂಖ್ಯೆಗನುಗುಣವಾಗಿ ಗೂಡನ್ನು ನಿರ್ಮಿಸಿಕೊಳ್ಳುತ್ತದೆ. ಸಗಣಿ, ಸೂಕ್ತವಾದ ಮೆದು ಮಣ್ಣನ್ನು ಉಂಡೆಯ ರೂಪದಲ್ಲಿ ಕಟ್ಟಿ ಹೊತ್ತು ತಂದು, ಬಾಯಿ ಮೂಲಕ ಹೊರಡುವ ಜೊಲ್ಲನ್ನು ಬಳಸಿ ಕಟ್ಟಿದ ಗೂಡು ನೋಡಲು ಚೆಂದ. ನೆಲ ಮನೆಯ ಮಾಡು ಎತ್ತರದ ಮರದ ಕೊಂಬೆಯ ಸಂದುಗಳಲ್ಲಿ ಗೂಡು ಕಟ್ಟುತ್ತವೆ. ಕಣಜಗಳು ಜೇನುನೊಣಗಳಂತೆ ಸಂಘ ಜೀವಿಗಳು ಹೆಜ್ಜೇನಿನಂತೆ ದೊಡ್ಡ ಗೂಡನ್ನು ನಿರ್ಮಿಸುವ ಈ ಕಣಜಗಳು ತಮ್ಮ ಗೂಡಿನಲ್ಲಿ ಮಾಡಿಕೊಂಡಿರುವ ವ್ಯವಸ್ಥೆಗಳು ಅಚ್ಚರಿ ಹುಟ್ಟಿಸುತ್ತವೆ. ಈ ಗೂಡಿಗೆ ಎಂತಹುದೇ ಮಳೆ- ಗಾಳಿಗಳನ್ನು ಕೂಡಾ ಸಹಿಸಿಕೊಳ್ಳುವ ಸಾಮರ್ಥ್ಯವಿದೆ. ಹಕ್ಕಿ ಅಥವಾ ಇತರ ಪ್ರಾಣಿಗಳಿಗೆ ಇದನ್ನು ಛಿದ್ರಗೊಳಿಸುವುದು ಕಷ್ಟಸಾಧ್ಯ.
ಈ ಕೀಟದ ಮೈ ಮೇಲೆ ಇರುವ ಗಾಢ ಹಳದಿ ವರ್ಣದ ಪಟ್ಟಿಯು ಹುಲಿಯ ಮೈಯ ವಿನ್ಯಾಸವನ್ನು ನೆನಪಿಸುವ ಕಾರಣ ಇದಕ್ಕೆ ಹುಲಿ ಕಡಿಜಿರೆ ಎಂತಲೂ ಕರೆಯುವರು. ಸಾಮಾನ್ಯವಾಗಿ ತಮ್ಮ ಪಾಡಿಗೆ ತಾವು ಸದ್ದಿಲ್ಲದೆ ಬದುಕುವ ಈ ಕೀಟಗಳು ಬಹಳ ಅಪಾಯಕಾರಿ ಕೂಡಾ ಯಾರಾದರೂ ಗೂಡು ಅಥವಾ ಕೀಟ ಸಮೂಹಕ್ಕೆ ಹಾನಿಯುಂಟು ಮಾಡಿದರೆ ಮಾತ್ರ ಗುಂಪು ಗುಂಪಾಗಿ ದಾಳಿ ಮಾಡುತ್ತವೆ. ತನ್ನ ದೇಹದ ಹಿಂಭಾಗದಲ್ಲಿರುವ ಮೊನಚಾದ ಮುಳ್ಳಿನಿಂದ(ಸ್ಟಿಂಗ್) ಚುಚ್ಚಿದರೆ ಅತಿಯಾದ ಉರಿ, ತುರಿಕೆ, ಊತ ಹಾಗೂ ಇನ್ನೂ ಗಂಭೀರ ಸ್ವರೂಪದ ಅಲರ್ಜಿಯ ಸಮಸ್ಯೆಗಳು ಕಾಣಿಸುವುದರ ಜೊತೆಗೆ ಪ್ರಾಣಾಂತಿಕ ಪರಿಸ್ಥಿತಿಯೂ ಉಂಟಾಗುತ್ತದೆ. ಇವುಗಳ ಗೂಡಿನ ಬಳಿ ಒಂದು ಹುಳುವನ್ನು ಕೊಲ್ಲುವುದು ಅಪಾಯಕಾರಿ ಎನ್ನಲಾಗುತ್ತದೆ. ಕಾರಣ ಆ ಕಣಜ ಎಚ್ಚರಿಕೆ ನೀಡುವ ಹಾರ್ಮೋನ್ ಅನ್ನು ಸ್ರವಿಸಿ ತನ್ನ ಸಂಗಾತಿಗಳಿಗೆ ದಾಳಿ ಮಾಡಲು ಸಂಕೇತವನ್ನು ನೀಡುತ್ತದಂತೆ ಕೆಲವೇ ಕೀಟಗಳು ಕಚ್ಚಿದರೂ ಸಾಕು, ಮನುಷ್ಯನ ಪ್ರಾಣಕ್ಕೇ ಕುತ್ತು ಬರಬಲ್ಲದು. ಸಾಮಾನ್ಯ ಜೇನುಹುಳುಗಳಿಗಿಂತಲೂ ಇವು ಎರಡು ಪಟ್ಟು ಅಪಾಯಕಾರಿ.
ಜೀವ ಸರಪಣಿಯಲ್ಲಿ ಈ ಕೀಟವೂ ಒಂದು ಇವು ಅನೇಕ ಸಸ್ಯಗಳಲ್ಲಿ ಪರಾಗಸ್ಪರ್ಶ ನಡೆಸಿ ಬೀಜೋತ್ಪತ್ತಿಗೆ ಕಾರಣವಾಗುತ್ತವೆ. ಕಾಯಿ ಬೀಡುವ ಹೂ-ಗಿಡ-ಮರಗಳ ಸಂತಾನೋತ್ಪತ್ತಿಗೆ ಇದು ಸೇತುವೆ. ರೈತರ ಬೆಳೆ ಹಾನಿಗಳಿಗೆ ಕಾರಣವಾಗುವ ಅನೇಕ ಕೀಟಗಳು ಇದರ ಆಹಾರವಾಗುವುದರಿಂದ ಪ್ರಾಕೃತಿಕ ಸಮತೋಲನವನ್ನು ಕಾಪಾಡುವಲ್ಲಿ ಇವು ಬಹು ಮುಖ್ಯ ಪಾತ್ರವನ್ನು ನಿರ್ವಹಿಸುತ್ತವೆ. ಇತ್ತೀಚೆಗೆ ಹೆಚ್ಚುತ್ತಿರುವ ಅರಣ್ಯ ನಾಶ ಹಾಗೂ ಅತಿಯಾದ ಕೀಟ ನಾಶಕಗಳ ಬಳಕೆಯು ಇವುಗಳ ಸಂತತಿಯನ್ನು ಸಂಕಷ್ಟಕ್ಕೆದೂಡಿದೆ.
ಹೊಸ್ಮನೆ ಮುತ್ತು