ಜಾತ್ರೆಯೆಂಬ ಮಾಯಾಲೋಕ

ಜಾತ್ರೆಯೆಂಬ ಮಾಯಾಲೋಕ

ಜಾತ್ರೆ ಎಂದ ಕೂಡಲೇ ಕಣ್ಣಮುಂದೆ ಬರುವುದು ವರ್ಷಕೊಮ್ಮೆ ನಡೆಯೋ ನಮ್ಮೂರಿನ ಗಣಪತಿ ದೇವರ ಜಾತ್ರೆ. ಅದು ನಮಗೆ ವಿಶೇಷದಲ್ಲಿ ವಿಶೇಷ. ಜಾತ್ರೆಗಿನ್ನೂ ತಿಂಗಳಿರುವಾಗಲೇ “ ಏ… ಜಾತ್ರೆ ಬಂತು ಕಣೋ…!” ಅಂತ ಕಣ್ಣರಳಿಸುತ್ತಲೇ ಎದುರಾದವರೊಂದಿಗೆ ಮಾತು ಮೊದಲಾಗುತ್ತಿತ್ತು. ಆಗ ಮೈಯಲ್ಲಿ ಆವಾಹನೆಯಾಗುವ ಗೆಲುವು, ಖುಷಿ, ಸಂಭ್ರಮ ಹೇಳುವುದೇ ಬೇಡ. ಮಜವೋ ಮಜ…!
ಒಂದು ವಾರಕ್ಕಿಂತಲೂ ಹೆಚ್ಚು ನಡೆಯುವ ಈ ಜಾತ್ರೆ ಊರವರ ಪಾಲಿಗೆ ಒಂದು ದೊಡ್ಡ ಹಬ್ಬದಂತಯೇ ಮನೆಗೆ ನೆಂಟರಿಷ್ಟರು, ಸಂಬಂಧಿಕರ ಆಗಮನದಿಂದ ಸಂತಸ ಆವರಿಸಿಬಿಡುವುದು ಖಚಿತ. ಹಬ್ಬದ ಸಂಭ್ರಮ, ಸಿಹಿ ಊಟ ಎಲ್ಲಾ ಸೇರಿ ಉಮೇದಿಯಿಂದ ಓಡುತ್ತಾ ಆಡುತ್ತಾ, ಮಾತಾಡುತ್ತಾ, ಕೈಗೆ ಸಿಕ್ಕಿದ್ದು ಮೆಲ್ಲುತ್ತಾ ಸಂಭ್ರಮಿಸುತ್ತಿದ್ದುದು ಈ ಜಾತ್ರೆಯಿಂದಾಗಿಯೇ.
ಜಾತ್ರೆಯೇ ಒಂದು ಮೋಜು. ಜಾತ್ರಾ ದೇವರ ಪೂಜೆ, ಪುನಸ್ಕಾರಗಳು ತಂದು ಕೊಡುವ ಪುಣ್ಯಕ್ಕಿಂತಲೂ ಪ್ರಿಯರ ಸಾನಿಧ್ಯ ಉಂಟು ಮಾಡುವ ಖುಷಿ, ಅಲ್ಲಿನ ನೋಟ, ಓಟ , ಮಾಟವೇ ನಮಗೆ ಮುಖ್ಯವಾಗಿತ್ತು, ಆ ಹೊತ್ತಿಗೆ ವರ್ಷದಿಂದ ಜಾತ್ರೆಗಾಗೇ ಕೂಡಿಟ್ಟ ಹುಂಡಿ ದುಡ್ಡು ಈಚೆ ಬರುತ್ತಿತ್ತು ಏನೆಲ್ಲಾ ನೋಡುವ, ತಿನ್ನುವ ಯೋಜನೆ, ಯೋಚನೆಗಳು ಆಗ ಅಲ್ಲಿ ಏನು ಕಂಡರೂ ಖುಷಿ, ಎಂತ ಕಂಡರೂ ಅಚ್ಚರಿಯೇ…! ಖುಷಿಗಳ ಪ್ರಪಂಚವೇ ಅಲ್ಲಿ ಒಟ್ಟಾದಂತೆ…! ಜಾತ್ರೆ ಅಂದಕೂಡಲೇ ಮೊದಲಿಗೆ ನೆನಪಿಗೆ ಬರುತ್ತಿದ್ದುದು ಪ್ಲಾಸ್ಟಿಕ್ ವಾಹನದ ಆಟಿಕೆಗಳು ಗಾಳಿ ತುಂಬಿದ ಬಲೂನು ಹಾಗೂ ಬಗೆ ಬಗೆಯ ತಿಂಡಿಗಳು.
ಅವು ಒಂದೇ ಎರಡೇ…! ನೋಡು ನೋಡುತ್ತಿದ್ದಂತೆ ನಮ್ಮೆದುರೇ ಹತ್ತಿಯ ಮೋಡವಾಗಿ ಕಣ್ಸೆಳೆದು ಬಾಐಲ್ಲಿ ನೀರೂರಿಸುತ್ತಿದ್ದ ಬಾಂಬೆ ಮಿಠಾಯಿ, ಬೆಂಡು- ಬತ್ತಾಸುಗಳು ಕರಿದ ತಿಂಡಿಗಳು, ಬಗೆಬಗೆಯ ಬಣ್ಣ ಬಣ್ಣದ ಹಪ್ಪಳ ಮಸಾಲೆ ಮಂಡಕ್ಕಿ ಲಿಂಬೂ ಸೋಡಾಗಳ ನೆನಪುಗಳು.
ಹಲವಾರು ಆಕಾರ ಆಕೃತಿಗಳಲ್ಲಿ ಜೋಡಿಸಿಟ್ಟ ಸ್ವೀಟುಗಳು ತರತರ ಖಾರಗಳೂ ತಿನ್ನುವ ಆಸೆ ಕೆರಳಿಸುತ್ತಿದ್ದವು. ಇತ್ತ ತಿರುಗಿದರೆ ಕೊಳಲು ಬಣ್ಣದ ತುತ್ತೂರಿ ಆಟದ ಕಾರು, ಗೊಂಬೆ ಮಾರುವವರು. ಅತ್ತ ಪೀಪಿ, ಕನ್ನಡಕ ವಾಚು, ಉಂಗುರ ಕೀ ಕೊಡೊ ಆಟಿಕೆಗಳನ್ನು ಹೊತ್ತು ಮಾರುವ ಮಂದಿ, ದೊಡ್ಡ ದೊಡ್ಡ ಬೆಲೂನು ಊದಿ ಆಸೆ ಹುಟ್ಟಿಸುವವ ಇವನಾದರೆ ಸಾಬೂನು ನೊರೆಯಲ್ಲಿ ಗುಳ್ಳೆ ಹಾರಿಸುವವ ಮತ್ತೊಬ್ಬ… ಎಲ್ಲಾ ಹೀಗೆ ಆ ಹೊತ್ತಿಗೆ ಅಲ್ಲಿ ಮಾಯಾಲೋಕವೇ ಧರೆಗಿಳಿದಂತೆ ಬಣ್ಣ ಬಣ್ಣದ ದೀಪಗಳ ಅಲಂಕಾರದಿಂದ ಆಕರ್óಕವಾಗಿ ಜೋಡಿಸಿಟ್ಟಿರುವ ವಸ್ತುಗಳನ್ನು ಮುಗ್ಧ ಬೆರಗುಗಣ್ಣಿಂದ ನೋಡುತ್ತಾ ಬೆಪ್ಪನಾಗಿ ನಿಲ್ಲುವ ನಮ್ಮನ್ನು ಅಲ್ಲಿಂದ ಹೊರಡಿಸುವುದೇ ಕಷ್ಟವಾಗುತ್ತಿತ್ತು.
ಜಾತ್ರೆಯಿಂದ ಕೊಂಚ ದೂರದಲ್ಲಿ ಕಣ್ಣು ಕೋರೈಸುವ ದೀಪಗಳನ್ನು ಬೆಳಗುತ್ತಾ ಮಕ್ಕಳನ್ನು ಹೊತ್ತು ವೃತ್ತಾಕಾರವಾಗಿ ಗರಗರ ತಿರುಗುವ ಯಾಂತ್ರಿಕ ತೂಗುವ ತೊಟ್ಟಿಲು ಕುದುರೆ, ಕಾರು, ಬೈಕುಗಳ ಮಾದರಿಯ ತರಹೇವಾರಿ ತೂಗು ತೊಟ್ಟಿಲುಗಳು, ಚಿಕ್ಕ ಮಕ್ಕಳಿಗೆ ಚಿಕ್ಕ ತೊಟ್ಟಿಲಾದರೆ ದೊಡ್ಡವರಿಗೆ ಜಾಯಿಂಟ್ ವೀಲ್ ಗಳ ದುನಿಯಾ ಬಾವಿಯೊಳಗೆ ಬೈಕ್, ಕಾರಿನವರು ಮಾಡೋ ಮೈನವಿರೇಳಿಸುವ ಸರ್ಕಸ್ಸು, ಚಾಲನೆ ಮಾಡೋ ಅವರ ಚಾಕಚಕ್ಯತೆ, ಶರವೇಗದಿಂದ ಬಾವಿಯೊಳಗೆ ಎದುರುಬದುರಾಗಿ ನುಗ್ಗುವ ಬೈಕುಗಳು ಮೈ ಜುಂ ಎನ್ನಿಸುತ್ತಿದ್ದವು.
ಇನ್ನು ಹೆಣ್ಣು ಮಕ್ಕಳಿಗೆ ಅತ್ಯಂತ ಪ್ರಿಯವಾದ ವಿವಿಧ ಬಣ್ಣ, ಆಕಾರದ ಬಳೆಗಳ ಸಾಲು ಸಾಲು ಅಂಗಡಿಗಳು, ಬಣ್ಣ ಬಣ್ಣದ ರಿಬ್ಬನ್ ಹೇರ್ ಕ್ಲಿಪ್ಪುಗಳ ಬಟ್ಟೆಗಳ, ಪಾತ್ರೆ- ಪಗಡಿಗಳ ಮೇಳ. ಅಲ್ಲಿ ಕಾಲಿಡಲೂ ಆಗದಷ್ಟು ರಷ್ಯು. ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಿದ ಮಾತು, ಸಂತೋಷ ಅಲ್ಲಿ ಕೆನೆ ಕಟ್ಟಿತ್ತು. ತಹರೇವಾರಿ ಜನಗಳಿಗೆ ತಹರೇವಾರಿ ಅಂಗಡಿಗಳು…! ಆಸ್ತಿಕರಿಗೆ ಪೂಜಾ ಸಾಮಗ್ರಿಗಳ ಬಂಡಾರ ಅಲ್ಲಿ ಚಿಕ್ಕ ಗಂಧ ತೇಯುವ ಕಲ್ಲಿನಿಂದ ಹಿಡಿದು, ವಿವಿಧ ಘಂಟೆ, ಆರತಿ ತಟ್ಟೆಗಳು, ಸ್ಫಟಿಕದ ಮಣಿ ಸರಗಳು, ರುದ್ರಾಕ್ಷಿ ಮಾಲೆಗಳು. ವಿವಿಧ ದೇವರ ಪಟಗಳು. ಆಯ್ಕೆಗಿದ್ದದ್ದು ಒಂದೇ ಎರಡೇ…! ಇವೆಲ್ಲ ಸಂಭ್ರಮಗಳ ಜೊತೆಗೆ ರೈತರಿಗೆ ಉಪಯುಕ್ತವಾಗುವ, ಕೃಷಿ ಸಂಬಂಧಿ ವಸ್ತು ಪ್ರದರ್ಶನ. ವ್ಯವಸಾಯಕ್ಕೆ ಅನುಕೂಲವಾಘುವ ಹೊಸ ತಂತ್ರಜ್ಞಾನದ ಸಾಮಗ್ರಿಗಳ ಪ್ರಾತ್ಯಕ್ಷಿಕೆಗಳು. ಪಕ್ಕದಲ್ಲೇ ಸಾಂಸ್ಕøತಿಕ ವೇದಿಕೆ ಅಲ್ಲಿ ಯಕ್ಷಗಾನ, ನಾಟಕ, ಮಿಮಿಕ್ರಿ, ರಸಮಂಜರಿ… ಹೀಗೆ ಅನೇಕ ಕಲೆಗಳ ಸಂಗಮ.
ಬಾಲ್ಯ ಕಾಲಕ್ಕೆ ಜಾತ್ರೆ ತೆರೆದು ತೋರಿದ ಮಾಂತ್ರಿಕ ಜಗತ್ತು ಒಂದೆಡೆಯಾದರೆ, ನಂತರ ಯೌವನದ ಜಾತ್ರೆಯ ಸೊಬಗು ಸಂಭ್ರಮ ಬೇರೆಯದೇ ಆಗಿತ್ತು. ಕಣ್ಣು ಅರಸುತ್ತಿದ್ದ ಆಪ್ತರು ಸಿಕ್ಕು ಜೊತೆಯಾಗಿ ಜನಜಂಗುಳಿಯಲ್ಲಿ ಕಳೆದುಹೋಗುವುದು ಬೇರೆಯದೇ ಅದೊಂದು ಸುಖ. ತೇರಿಗೆ ಬಾಳೆಹಣ್ಣು ಎಸೆಯುವ ನೆಪ ಒಡ್ಡಿ, ಅದು ಬೀಳಬೇಕಾದವರ ತಲೆ ತಾಗಿದಾಗ ಗೆಳೆಯರ ಗುಂಪಿನಲ್ಲಿ ಸ್ಫೋಟಿಸುವ ಖುಷಿ ವರ್ಣನೆಗೆ ನಿಲುಕದ್ದು. ಆಕಸ್ಮಿಕವೆಂಬಂತೆ ಡಿಕ್ಕಿ ಹೊಡೆದದ್ದು, ಬೇಕಂತಲೇ ಭುಜ ತಾಗಿಸಿ ಅಮಾಯಕ ಮುಖಹೊತ್ತು ನಿಂತದ್ದಕ್ಕೆ ಲೆಕ್ಕ ಇಟ್ಟವರಾರು!? ಸಂಬಂಧಗಳು ಮತ್ತೂ ಗಾಢವಾಗಲೂ ಆಗ ಜಾತ್ರೆ ಕಾರಣವಾದದ್ದು ಗುಟ್ಟಲ್ಲ. ಈಗ ನೆನೆಸಿಕೊಂಡ್ರೆ ಪುಳಕಗಳು ಸುಳ್ಳಲ್ಲ. ಜಾತ್ರೆಯ ನೆನಪಿಗಂತಲೇ ಪೋಟೋ ತೆಗೆಯಿಸಿಕೊಳ್ಳುವ ಸಂಭ್ರಮ ಆಗೆಲ್ಲಾ ಈಗಿನಂತೆ ವಾಹನಗಳು ಇರಲಿಲ್ಲ. ಹಾಗಾಗಿ ರಟ್ಟಿನ ಕಾರು, ಬೈಕು, ಇಷ್ಟದ ಹೀರೋನ ರಟ್ಟಿನ ಆಕೃತಿಗಳ ಜೊತೆಗೆ ಒಂದೊಂದು ಸ್ನ್ಯಾಪ್
ಪರಿಚಿತರು, ಚಡ್ಡಿ ದೋಸ್ತುಗಳು, ನೆಂಟರು ಕಲಿಸಿದ, ಕಲಿಸುತ್ತಿರುವ ಗುರುಗಳು ಸಿಗುವ ಏಕೈಕ ತಾಣ ಎಂದರೆ ಅದು ಜಾತ್ರೆಯೊಂದೇ…!
“ಏನಲೇ ಆಣ್ತಮ್ಮ…!” ಅಂತ ಕಣ್ಣರಳಿಸಿ ಬಂದು ತಬ್ಬಿಕೊಳ್ಳುವ ಗೆಳೆಯರ ಅನಿರೀಕ್ಷಿತ ಭೇಟಿ ಸಾಧ್ಯವಾಗುವುದು ಇಲ್ಲಿಯೇ.ಒಟ್ಟಿಗೆ ಓದಿ, ಹೊಟ್ಟೆಪಾಡಿಗಾಗಿ ಎಲ್ಲೆಲ್ಲೋ ಚದುರಿಹೋದ ಗೆಳೆಯರ, ಹಳೆಬೇರು, ಹೊಸ ಚಿಗುರುಗಳ ಸಂಗಮ ಇಲ್ಲಿ ಮಾತ್ರ ಸಾಧ್ಯ. ಈಗ ಕಾಂಕ್ರೀಟ್ ಕಾಡಿನಲ್ಲಿ ಮಾರಿಗೊಂದು ಮೊಳಕ್ಕೊಂದು ಕಾಳಿಗೆ ತೊಡರುವ ಹವಾನಿಯಂತ್ರಿತ ಮಾಲುಗಳು, ಸೂಪರ್ ಮಾರ್ಕೆಟ್ ಗಳು ಸಿಕ್ಕರೂ ನಮ್ಮೂರ ಜಾತ್ರೆ ಕೊಡುವ ಖುಷಿ ಅಲ್ಲಿ ಅರಸಲು ಸಾಧ್ಯವೇ…? ಬದಲಾದ ಕಾಲಘಟ್ಟದಲ್ಲಿ ಸಾಂಸ್ಕøತಿಕ ಕೊಂಡಿಯಂತಿದ್ದ ಜಾತ್ರೆ ತನ್ನ ಮೊದಲಿನ ಮಹತ್ವವನ್ನು ಕಳೆದುಕೊಳ್ಳುತ್ತಿರುವುದು ವಿಷಾದದ ಸಂಗತಿ, ಸಂತಸ,ಮುಗ್ಧತೆಯ ಜಾಗದಲ್ಲೀಗ ಆಡಂಬರ, ಅಟ್ಟಹಾಸಗಳದ್ದೇ ಕಾರುಬಾರು. ಮುಗ್ಧ ಕನಸುಗಳನ್ನು ಬಿತ್ತಿ ಸಂಭ್ರಮವನ್ನು ತಂದು ಕೊಟ್ಟ ಜಾತ್ರೆಗೆ ಥ್ಯಾಂಕ್ಸ್ ಹೇಳೋಣ…! ಹಾಗೆ ನೋಡಿದರೆ ಇಡಿಯ ಬದುಕೇ ಒಂದು ಜಾತ್ರೆ ಎನ್ನುವ ಅನುಭಾವಿಗಳ ಮಾತು ಕೂಡಾ ನಿಜ ಅಲ್ಲವೇ…!?

ಹೊಸ್ಮನೆ ಮುತ್ತು

Leave a Reply