ಕುಮಾರವ್ಯಾಸ ಹಾಗೂ ಭಗವದ್ಗೀತೆ  ಭಾಗ- ೧

ಕುಮಾರವ್ಯಾಸ ಹಾಗೂ ಭಗವದ್ಗೀತೆ  ಭಾಗ- ೧

ಕುಮಾರವ್ಯಾಸನು ಹಾಡಿದನೆಂದರೆ
ಕಲಿಯುಗ ದ್ವಾಪರವಾಗುವುದು
ಭಾರತ ಕಣ್ಣಲಿ ಕುಣಿವುದು! ಮೈಯಲಿ
ಮಿಂಚಿನ ಹೊಳೆ ತುಳುಕಾಡುವುದು
ಇದು ನಮ್ಮ ಯುಗದ ಕವಿಯೊಬ್ಬ ಜಗದ ಕವಿಗೆ ಕೊಟ್ಟ ಬಿರುದು! ಇದು ನಮ್ಮ ನಾರಣಪ್ಪನ ಪ್ರತಿಭೆಗೆ ಹಿಡಿದ ಕನ್ನಡಿ.. ಇಂದಿಗೂ ತನ್ನ ಜನಪ್ರಿಯತೆಯನ್ನು ಅಂದಿನOತೆಯೇ ಉಳಿಸಿಕೊಂಡಿರುವ “ಕರ್ಣಾಟಭಾರತಕಥಾಮಂಜರಿ”ಎOಬ ಸುಂದರ ಕೃತಿಯನ್ನು ಜನತೆಗೆ ಇತ್ತಂಥ ಸಾಹಿತ್ಯಶ್ರೇಷ್ಠನೇ ಈ ನಮ್ಮ ಗದುಗಿನ ನಾರಣಪ್ಪ ಎಂದರೆ ನಮ್ಮ ಕುಮಾರವ್ಯಾಸ!
ಕನ್ನಡ ಸಾಹಿತ್ಯದ ಎರಡು ಪ್ರತಿಭೆಗಳು ನಮ್ಮ ಸಾಹಿತ್ಯದ ಎರಡು ಪ್ರಮುಖ ಘಟ್ಟಗಳನ್ನು ಕಟ್ಟಿದವರು, ಮುನ್ನಡೆಸಿದವರಲ್ಲಿ ಒಬ್ಬನು ಪಂಪನಾದರೆ ಮತ್ತೊಬ್ಬ ಕುಮಾರವ್ಯಾಸ. ಪಂಪನು ಮಾರ್ಗದ ಮಾರ್ಗದರ್ಶಿಯಾದರೆ ಕುಮಾರವ್ಯಾಸನು ದೇಸಿಯ ಸಾರ್ವಭೌಮ. ಒಬ್ಬನು ಸಂಸ್ಕೃತದ ಮಾದರಿಯನ್ನು ಎದುರಿಗಿಟ್ಟುಕೊಂಡರೂ ಕನ್ನಡದ ಬದುಕಿನ ತಿರುಳನ್ನು ಅದರಲ್ಲಿ ಮೇಳೈಸಿದವನು, ತನ್ನದು ಮಾರ್ಗವಾದರೂ ದೇಸಿಯಲ್ಲಿ ಹೊಕ್ಕು ನವೀಕರಿಸಿಕೊಂಡ ಮಾರ್ಗ ಎಂಬುದನ್ನು ಅವನೇ ಸ್ಪಷ್ಟಪಡಿಸುತ್ತಾನೆ; ತನ್ನ ನಂತರದ ಎರಡು ಶತಮಾನಗಳ ಕನ್ನಡ ಸಾಹಿತ್ಯಕ್ಕೆ ಅವನೇ ಮಾದರಿಯಾದ. ಅದಕ್ಕೇ ಅವನು ಆದಿಕವಿಯಾದ. ಅದೇ ರೀತಿ ಕುಮಾರವ್ಯಾಸನೂ ಸಂಸ್ಕೃತದ ಕಾವ್ಯ ವಸ್ತುವನ್ನೇ ಆರಿಸಿಕೊಂಡರೂ ಅಲ್ಲಿರುವುದನ್ನೆಲ್ಲ ಮಕ್ಕಿ ಕಾ ಮಕ್ಕಿಯಾಗಿ ಕನ್ನಡಿಸದೆ ತನ್ನ ವೈಯಕ್ತಿಕ ನಿಲುವಿನ ಪ್ರತಿಪಾದಕ ಸಾಧನವಾಗಿ ಅದನ್ನು ಮಾರ್ಪಡಿಸಿಕೊಂಡ. ಪಂಪನು ಚಂಪೂ ಕವಿಯಾದರೆ ಕುಮಾರವ್ಯಾಸನು ಭಾಮಿನಿ ಷಟ್ಪದಿಯ ಕವಿ. ಇವರಿಬ್ಬರೂ ಆರಿಸಿಕೊಂಡದ್ದು ವ್ಯಾಸಭಾರತದ ಕಥಾಭಿತ್ತಿಯನ್ನೇ, ಆದರೆ ಇವರಿಬ್ಬರೂ ಚಿತ್ರಿಸಿದುದು ತಮ್ಮ ತಮ್ಮ ನೆಚ್ಚಿನ ದರ್ಶನಗಳನ್ನು. ಅದಕ್ಕೇ ಒಬ್ಬನಿಗೆ ನಮ್ಮ ಮಹಾಭಾರತವು ಲೌಕಿಕದ ಚಿತ್ರಣವಾದರೆ ಇನ್ನೊಬ್ಬನಿಗೆ ಇದು ಕೃಷ್ಣ ಕಥೆ. ಪಂಪನದು ಲೌಕಿಕವಾದ್ದರಿಂದ ಅಲ್ಲಿ ಭಕ್ತಿಗೆ ಅವಕಾಶವಿಲ್ಲ. ಅದಕ್ಕನುಗುಣವಾಗಿ ಕಥೆ ಸಾಗುತ್ತದೆ. ಆದರೆ ಇಲ್ಲಿ ನಮ್ಮ ನಾರಣಪ್ಪನಿಗೆ ಇದು ಸಂಪೂರ್ಣವಾಗಿ ವಿಸ್ತಾರಗೊಂಡ ಕೃಷ್ಣಮಹಿಮೆಯೇ!
ಕುಮಾರವ್ಯಾಸನು ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ ಹಾಗೂ ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಎಂದರೂ ತಪ್ಪಾಗಲಾರದು. ಕುಮಾರವ್ಯಾಸನ ಮೂಲ ಹೆಸರು ನಾರಣಪ್ಪ. ‘ಗದುಗಿನ ನಾರಣಪ್ಪ’ ಎಂದು ಸಾಮಾನ್ಯವಾಗಿ ಕುಮಾರವ್ಯಾಸನನ್ನು ಗುರುತಿಸಲಾಗುತ್ತದೆ. ಈತನ ಕಾವ್ಯನಾಮ ಕುಮಾರವ್ಯಾಸ. ವ್ಯಾಸ ಮಹಾಕವಿಯ ಸಂಸ್ಕೃತ ಮಹಾಭಾರತದ ಅತ್ಯದ್ಭುತ ಕನ್ನಡ ರೂಪವನ್ನು ರಚಿಸಿದ್ದರಿಂದ, ವ್ಯಾಸ ಮಹಾಕವಿಯ ಮಾನಸಪುತ್ರ ತಾನೆನ್ನುವ ವಿನೀತ ಭಾವದಿಂದಾಗಿ ನಾರಣಪ್ಪನು ಕುಮಾರವ್ಯಾಸನಾಗಿದ್ದಾನೆ. ಈ ಹೆಸರು ಕುಮಾರವ್ಯಾಸನಿಗೆ ಅನ್ವರ್ಥವಾಗಿದೆ.
ಕನ್ನಡಸಾಹಿತ್ಯದಲ್ಲಿ ಮೇರುಕೃತಿಯಾಗಿ ಪರಿಗಣಿತವಾಗಿರುವ ಈ ಕನ್ನಡ ಭಾರತವು ಸಂಸ್ಕೃತ ಮಹಾಭಾರತದ ಮೊದಲ ಹತ್ತು ಪರ್ವಗಳು, ೧೫೨ ಸಂಧಿಗಳು, ೮೨೪೪ ಪದ್ಯಗಳನ್ನು ಒಳಗೊಂಡಿದೆ. ನಡುಗನ್ನಡದ ಭಾಷೆಯಲ್ಲಿಯ ಈ ಸಂಪೂರ್ಣ ಕಾವ್ಯವು ಭಾಮಿನೀ ಷಟ್ಪದಿಯಲ್ಲಿ ರಚಿತವಾಗಿದ್ದು ಕುಮಾರವ್ಯಾಸನ ಕಾವ್ಯ ಪ್ರತಿಭೆ ಓದುಗರನ್ನು ದಂಗುಬಡಿಸುತ್ತದೆ. ಅವನ ಕಾವ್ಯಪ್ರತಿಭೆ ಪೂರ್ಣಶಕ್ತಿಯಲ್ಲಿ ಹೊರಹೊಮ್ಮುವುದು ಅವನ ರೂಪಕಗಳಲ್ಲಿ. ಕುಮಾರವ್ಯಾಸನ ರೂಪಕಗಳ ವೈವಿಧ್ಯತೆ ಮತ್ತು ಆಳ ಅಪಾರವಾದದ್ದು. ಇದೇ ಕಾರಣಕ್ಕಾಗಿ ಕುಮಾರವ್ಯಾಸನು ‘ರೂಪಕ ಸಾಮ್ರಾಜ್ಯ ಚಕ್ರವರ್ತಿ’ ಎಂದೇ ಖ್ಯಾತಿ ಪಡೆದಿದ್ದಾನೆ.
ನಾನು ಇಲ್ಲಿ ಎತ್ತಿಕೊಂಡಿರುವ ಭಾಗವು ಕುಮಾರವ್ಯಾಸನ ಲೇಖನಿಯಿಂದ ಚಿತ್ರಿತವಾಗಿರುವ ಭಗವದ್ಗೀತೆ! ಕುಮಾರವ್ಯಾಸನದು ಕೃಷ್ಣಕಥೆಯೇ. ಅಲ್ಲದೆ ಅವನು ವ್ಯಾಸರ ಮಾನಸಪುತ್ರನೆಂದು ತನ್ನನ್ನು ತಾನು ಗುರುತಿಸಿಕೊಂಡವ. ವೇದವ್ಯಾಸರು ಮಹಾಭಾರತದಲ್ಲಿ ಹದಿನೆಂಟು ಅಧ್ಯಾಯಗಳನ್ನೂ, ಸುಮಾರು ೭೦೦ ಶ್ಲೋಕಗಳನ್ನೂ ಹೊಂದಿರುವ ಭಗವದ್ಗೀತೆಯನ್ನು ರಚಿಸಿ ಜೀವನ ಗೀತೆಯನ್ನೇ ಬರೆದರೆ ಯಾಕೋ ಈ ನಮ್ಮ ನಾರಣಪ್ಪ ಭಗವದ್ಗೀತೆಯನ್ನು ಸಂಕ್ಷೇಪಿಸಿಬಿಟ್ಟಿದ್ದಾನೆ ಎಂದು ನನ್ನ ಎನಿಸಿಕೆ. ಆದರೂ ಇಲ್ಲಿ ಅವನು ಎರಡು ರೀತಿಯ ಜೀವನ ನೀತಿಗಳನ್ನು ಓದುಗರೆದುರು ಇರಿಸಿದ್ದಾನೆ. ಮೊದಲನೆಯದು ವಿದುರನೀತಿ.
ಮಹಾಭಾರತದಲ್ಲಿ ವಿದುರನದು ವಿಶಿಷ್ಟವಾದಂಥ ಒಂದು ಸಾತ್ವಿಕ ಆದರೆ ಅಷ್ಟೇ ನಿಷ್ಠುರವಾದಂಥ ವ್ಯಕ್ತಿತ್ವವೆಂದೇ ಹೇಳಬಹುದು. ಅವನು ಯಾರಿಗೇ ಅನ್ಯಾಯವಾಗಿರಲಿ, ಅದನ್ನು ಎತ್ತಿ ಹೇಳುವಲ್ಲಿ ಹಿಂಜರಿಕೆಯಿಲ್ಲದOಥವನು. ಇಲ್ಲಿ ಧೃತರಾಷ್ಟ್ರ  ಹಾಗೂ ವಿದುರರ ನಡುವಿನ ಸಂಭಾಷಣೆಯ ನೆಪದಲ್ಲಿ ಕುಮಾರವ್ಯಾಸನು ಸಮಾಜಕ್ಕೆ ಕೆಲವು ನೀತಿಸಂಹಿತೆಗಳನ್ನು ಬೋಧಿಸುತ್ತಾನೆ. ಉದ್ಯೋಗ ಪರ್ವದ ೧೮೪ ಪದ್ಯಗಳನ್ನು ಕುಮಾರವ್ಯಾಸನು ವಿದುರ ನೀತಿಗೆ ಮೀಸಲಿಟ್ಟಿದ್ದಾನೆ. ಇಲ್ಲಿ ನಮಗೆ ಈ ರೂಪಕ ಚಕ್ರವರ್ತಿಯು ಒಬ್ಬ ತತ್ವಜ್ಞಾನಿಯಾಗಿ ಕಂಡಿದ್ದಾನೆ.
ಕುಮಾರವ್ಯಾಸನ ಗದುಗಿನ ಭಾರತದ ಉದ್ಯೋಗ ಪರ್ವದಲ್ಲಿನ ಮೂರನೆಯ ಸಂಧಿಯೇ ವಿದುರ ನೀತಿ. ಧೃತರಾಷ್ಟ್ರನಿಗೆ ವಿದುರ ಬೋಧಿಸುವ ನೀತಿಶಾಸ್ತ್ರ, ನಿರ್ದಾಕ್ಷಿಣ್ಯವಾಗಿ ಧೃತರಾಷ್ಟ್ರನನ್ನು ತರಾಟೆಗೆ ತೆಗೆದುಕೊಂಡು ನಿದ್ದೆಬರದ ಧೃತರಾಷ್ಟ್ರನಿಗೆ ತಥ್ಯದರ್ಶನ ಮಾಡುವ ಭಾಗವಿದು.
ಸಂಜಯನು ವಿರಾಟನ ನಗರಿಯ ಹತ್ತಿರದ ಉಪಪ್ಲಾವ್ಯ ನಗರಿಯಿಂದ ತನ್ನ ರಾಯಭಾರವನ್ನು ತೀರಿಸಿ ಮತ್ತೆ ಹಸ್ತಿನಾಪುರಕ್ಕೆ ಹಿಂದಿರುಗಿ ಧೃತರಾಷ್ಟ್ರನಲ್ಲಿ ಸಂಕ್ಷಿಪ್ತವಾಗಿ ಅಲ್ಲಿ ಭೀಮಾರ್ಜುನರು ಮತ್ತುಳಿದ ಪಾಂಡವರ ಅಭಿಮತವನ್ನು ಹೇಳುತ್ತಾನೆ. ಧೃತರಾಷ್ಟ್ರನಿಗೆ ನಿದ್ದೆ ಹತ್ತುವುದಿಲ್ಲ.
ವಿದುರನು ನಿರ್ದಾಕ್ಷಿಣ್ಯವಾಗಿ ಧೃತರಾಷ್ಟ್ರನಿಗೆ ಯಾರಿಗೆ ನಿದ್ದೆ ಬರುವುದಿಲ್ಲ ಎಂದು ಹೀಗೆ ಹೇಳುತ್ತಾನೆ:
ಬಲವಿಹೀನನು ಬಲ್ಲಿದನ ಕೂ
ಡೊಲಿದು ತೊಡಕವಲಂಗೆ ಕಾಮದ
ಕಳವಳದೊಳಿರ್ದಂಗೆ ಧನದಳಲಿನೊಳು ಮರುಗುವಗೆ|
ಕಳವಿನೊಳು ಕುದಿವಂಗೆ ದೈವದ
ನೆಲೆಯನರಿಯದವಂಗೆ ದಿಟವಿದು
ತಿಳಿಯೆ ಬಾರದು ನಿದ್ರೆಯೆಂದನು ಭೂಪತಿಗೆ ವಿದುರ||
“ಬಲಶಾಲಿಯೆದುರು ಹಗೆ ಸಾಧಿಸಿ ಯುದ್ಧ ಮಾಡುವಂಥ ದುರ್ಬಲನಿಗೆ, ಕಾಮುಕನಿಗೆ, ಹಣವನ್ನು ಕಳೆದುಕೊಂಡು ಕಳವಳಿಸುವವನಿಗೆ, ದೈವದ ಸ್ವರೂವನ್ನು ತಿಳಿಯದವನಿಗೆ, ಕಳ್ಳತನ ಮಾಡಲು ಹವಣಿಸುತ್ತಲಿರುವವನಿಗೆ-ಹೀಗಿರುವವರಿಗೆ ರಾತ್ರಿ ನಿದ್ದೆ ಬರುವುದಿಲ್ಲ” ಎಂದು ವಿದುರ ಹೇಳುತ್ತಾನೆ.
ವಿದುರನು ಈ ರೀತಿಯ ನಿಷ್ಠುರವಾದ ಮಾತುಗಳಿಂದ ಧೃತರಾಷ್ಟ್ರನು ತನ್ನ ಮಕ್ಕಳಿಗೆ ಕೊಟ್ಟ ಬೆಂಬಲವನ್ನು ವಿರೋಧಿಸುತ್ತಾನೆ. ಧೃತರಾಷ್ಟ್ರನಿಗೆ ಭೀಮಾರ್ಜುನರ ಬಲದ ಅರಿವಿದೆ. ತನ್ನ ಮಕ್ಕಳ ಗುಣಹೀನತೆಯ ಅರಿವೂ ಇಲ್ಲದಿಲ್ಲ. ಆದರೂ ಪುತ್ರವ್ಯಾಮೋಹಿಯಾದ ಧೃತರಾಷ್ಟ್ರನು ಪಾಂಡವರೊಡನೆ ಹಗೆತನ ಸಾಧಿಸುವ ಕೌರವನಿಗೆ ಬೆಂಬಲವಾಗಿ ನಿಲ್ಲುತ್ತಾನೆ. ಇದರಿಂದಾಗಿಯೇ ನಿದ್ದೆಯು ದೂರವಾಗುತ್ತದೆ.
ಇದು ವಿದುರನಿಗೆ ಚೆನ್ನಾಗಿ ಗೊತ್ತಿದ್ದುದರಿಂದ ಮುಂದಿನ ಅನಾಹುತವನ್ನು ಎದುರಿಸಲು ಧೃತರಾಷ್ಟ್ರನಿಗೆ ಉಪದೇಶ ಮಾಡಲು ಸರಿಯಾದ ಸಮಯವೆಂದು ತಿಳಿದು ತನ್ನ ನೀತಿಯನ್ನು ಮತ್ತು ಆತ್ಮ ತತ್ವಜ್ಞಾನವನ್ನು ತಿಳಿಹೇಳಲು ಸನತ್ಸುಜಾತರನ್ನು ಪ್ರಾರ್ಥಿಸುವಂತೆ ಧೃತರಾಷ್ಟ್ರನನ್ನು ಕೇಳಿಕೊಳ್ಳುತ್ತಾನೆ.

“ಜೀವನದಲ್ಲಿ ಕಷ್ಟಗಳು ಬರುತ್ತವೆ. ಎಲ್ಲರೂ ತಮ್ಮ ಯೋಜನೆಯಂತೆಯೇ ಜೀವನ ಸಾಗಬೇಕು ಎಂದು ಬಯಸುತ್ತಾರೆ. ಇದು ಸಹಜ. ಅದಾಗದಿದ್ದರೆ ಖೇದ ಪಡುವುದೂ ಸಹಜವೇ ಸರಿ. ದೈವವನ್ನೂ ಹಳಿಯುತ್ತೇವೆ. ಯಾವಾಗಲೂ ಸಜ್ಜನರಿಗೇ ಯಾಕೆ ಕಷ್ಟಗಳು ಬರುತ್ತವೆ? ದೈವದ ಚಿಂತೆಯಲ್ಲೇ ನಾವು ದಿನಗಳೆಯುತ್ತಿದ್ದರೂ ನಮಗೆ ಮಾತ್ರ ಯಾಕೆ ಕಷ್ಟಗಳು ಎಂದು ದೈವವನ್ನು ನಿಂದಿಸುತ್ತೇವೆ.” ಎಂಬುದನ್ನು ವಿದುರನ ಮಾತಿನಲ್ಲಿ ಕುಮಾರವ್ಯಾಸನು ಹೀಗೆ ವಿವೇಚಿಸುತ್ತಾನೆ-
“ತನ್ನ ಚಿಂತೆಯದೊOದು ದೈವದ
ಗನ್ನಗತಕವದೆರಡು ಭಾವದ
ಬನ್ನಣೆಯಬಗೆ ಮೂರು ದೈವದ
ಭಿನ್ನ ಮುಖ ನಾಲ್ಕು| ತನ್ನ
ನೆನಹೆಂತOತೆ ಕಾರ್ಯವು ಚೆನ್ನಹಡೆ ಲೋಕಕ್ಕೆ ತಾ ಬೇ
ರಿನ್ನು ದೈವವದೇಕೆ ತಾನೇ ದೈವರೂಪೆಂದ||
ತನ್ನ ಆಲೋಚನೆಯೇ ಒಂದು ಬಗೆಯದಾಗಿದ್ದಲ್ಲಿ ಆ ಆಲೋಚನೆ ನೆರವೇರದಿದ್ದರೆ ದೇವರನ್ನು ದೂಷಿಸುವುದು ಎರಡನೆಯದು. ತನ್ನ ಆಲೋಚನೆ ಅನುಷ್ಠಾನವಾಗದಿದ್ದುದರಿಂದ ತಾನು ಪಡುವ ಬೇಸರ ಮೂರನೆಯದು; ಆದರೆ, ದೈವದ ಚಿಂತನೆ ನಾಲ್ಕನೆಯದು-ದೈವದ ಮುಖ ಭಿನ್ನವಾಗಿರುತ್ತದೆ. ಇವು ನಾವು ಮಾಡುವ ಕಾರ್ಯಕ್ಕಿರುವ ನಾಲ್ಕು ಮುಖಗಳು.”
ಕೊನೆಗೆ ವಿದುರನು ಎಲ್ಲವೂ ತಾನೆಂದುಕೊOಡOತೆ ನೆರವೇರಿದರೆ ಬೇರೆ ದೈವ ಯಾಕೆ ಬೇಕು? ತಾನೇ ದೈವದ ರೂಪವಾಗಬಹುದಲ್ಲವೇ ಎಂದು ಹೇಳುತ್ತಾನೆ.

ಮುಂದುವರೆಯುತ್ತದೆ

Leave a Reply