ಮುಂಬರುವ ಗಳಿಗೆಗಳು ಜಾರುವ ಮುನ್ನವೇ ಹಿಡಿದಿಟ್ಟುಕೊಳ್ಳಿ…
ಒಂದು ಅವಶ್ಯಕ ಕೆಲಸಕ್ಕಾಗಿ ಅಲಾರಾಂ ಇಟ್ಟು ಕೊಂಡಿರುತ್ತೀರಿ…. ಸರಿಯಾದ ಸಮಯಕ್ಕೆ ಅಲಾರಾಂ ಆಗುತ್ತದೆ. ನಿಮ್ಮ ನಿದ್ರೆಯ ಗುಂಗು ಇಳಿದಿಲ್ಲ. ಅದನ್ನು ಬಂದುಮಾಡಿ ಒಂದೆರಡೇ ನಿಮಿಷ ಮತ್ತೆ ಮುಸುಕೆಳೆಯುತ್ತೀರಿ… ಬದುಕಿನಿಂದ ಕದ್ದ ಆ ಎರಡು ನಿಮಿಷಗಳು. ಆಹಾ!!
ಈಗ ಮಾವಿನ ಸುಗ್ಗಿ… ಗುಳಂಬವೋ, ಉಪ್ಪಿನಕಾಯಿಯೋ, ಚಟ್ನಿಯೋ…. ಮಾಡುತ್ತೀರಿ. ಜಾರ್ ತುಂಬಿ ಎತ್ತಿಡುತ್ತೀರಿ. ಪಾತ್ರೆ ತೊಳೆಯಲು ಇಡಬೇಕು. ಪಾತ್ರೆಯಲ್ಲಿ ಅಲ್ಲಲ್ಲಿ ಹತ್ತಿದ ಆ ವ್ಯಂಜನದ ರಸವನ್ನು ಬೆರಳಿನಿಂದ ಗೀರಿ ಚೀಪುತ್ತೀರಿ…. ಆಹಾಹಾ!!!
ಮಗ/ಮಗಳು ದ್ವೀತೀಯ ವಷ ದ ಪರೀಕ್ಷೆಯ ತಯಾರಿಯ tension ನಲ್ಲಿ ಸರಿಯಾಗಿ ಉಂಡು, ತಿಂದು ಮಾಡುತ್ತಿಲ್ಲ ಸದಾ ದುಗುಡ… ಇಂದು ಕೊನೆಯ paper ಮುಗಿಸಿ ಮನೆಗೆ ಬರುವುದನ್ನು ನಿರೀಕ್ಷಿಸುತ್ತ ಬಾಗಿಲಲ್ಲಿ ನಿಂತಿದ್ದೀರಿ ….. ಅವಳು ಬರುವುದು ಕಾಣುತ್ತದೆ. ನಡೆಯುತ್ತ ಅಲ್ಲ… slow motion ನಲ್ಲಿ ಹಾರುತ್ತಾ…. ಹಾಡುತ್ತಾ…. ಹಗುರಾಗಿ… ಆಹಾ!!
ಮೊಮ್ಮಗು ದಿನಕ್ಕೊಂದು ಚಟುವಟಿಕೆ ಕಲಿಯುತ್ತಿದೆ…. ಇಂದು ಅದಕ್ಕೆ ಮೆಟ್ಟಿಲು ಇಳಿಯಬೇಕಾಗಿದೆ…. ಕಟ್ಟೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಕಾಲುಗಳನ್ನು ಕೆಳಗಿಳಿಸುತ್ತದೆ… ನೆಲೆ ನಿಲುಕುವದಿಲ್ಲ. ಮತ್ತೆ ಕಾಲು ಮೇಲೇರುತ್ತದೆ. ಜಾಗರೂಕತೆಯಿಂದ ಮುಂದಕ್ಕೆ ಸರಿದು ಕಟ್ಟೆಯ ತುದಿ ಹಿಡಿದು ನೆಲ ಮುಟ್ಟಲು ಪ್ರಯತ್ನ ಮಾಡುತ್ತದೆ. ಊಹೂ… ನೆಲವಿಲ್ಲ…. ಈ ಪಯತ್ನ ಮಾಡುತ್ತದೆ. ಊಹೂ… ನೆಲವಿಲ್ಲ… ಈ ಪಯತ್ನ ಎರಡು ಮೂರು ಸಲ ನಡೆದು ಕೊನೆಗೊಮ್ಮೆ ನೆಲ ನಿಲುಕಿದಾಗ
ಆ ಮಗುವಿನ ಚಪ್ಪಾಳೆ, ಕೇಕೆ, ನಗು, ನೋಡಿದ್ದೀರಾ….. ಒಹೋ!!
ಎಲ್ಲಿಂದಲೋ ಇಷ್ಟ ಪಟ್ಟು ಒಂದು ಹೂವಿನ ಗಿಡ ತಂದು, ನೀರುಣಿಸಿ ಆರೈಕೆ ಮಾಡಿ ಪೋಷಿಸುತ್ತಿದ್ದೀರಿ… ಕೆಲಕಾಲ ಊರಲ್ಲಿಲ್ಲದೇ ಹೋಗಿ ಬಂದು ನೋಡಿದಾಗ ಅದರ ತುಂಬಾ ಮೊಗ್ಗು, ಹೂಗಳು ಅರಳಿವೆ… ನಿಮ್ಮ ಮುಖವನ್ನೊಮ್ಮೆ ಕನ್ನಡಿಯಲ್ಲಿ ನೋಡಿಕೊಳ್ಳಿ!
ಪ್ರೀತಿಯ ಮಗಳನ್ನು ಅವಳೇ ಮೆಚ್ಚಿದ ಹುಡುಗನಿಗೆ ಧಾರೆಯರೆದು ಕೊಟ್ಟಿದ್ದೀರಿ… ಅವಳು ಹೊರಟು ನಿಂತು ಕಾರೇರಿದ್ದಾಳೆ…. ಒಂದೇ ಕ್ಷಣ ಹೊರಟಕಾರು ನಿಲ್ಲಿಸಿ ಕೊನೆಯದಾಗಿ ಹಣೆಗೆ ಮುತ್ತನ್ನೊತ್ತೀರಿ…. ಆ ಹಾರ್ದಿಕ ಕ್ಷಣ …. My God!
ಮೇಲಿನ ಯಾವೂ ಅಪರೂಪದ ಘಟನೆಗಳಲ್ಲ. ಇವು ನಡೆಯದಿದ್ದರೆ ಬದುಕಿನಲ್ಲಿ ಏನೋ ಕಳೆದುಕೊಳ್ಳುತ್ತೇವೆ ಅಂತಲೂ ಅಲ್ಲ. ಘಟಿಸಿದರೆ ಯಾವುದೋ ‘ಪಟ್ಟ’ ಸಿಕ್ಕಂತಲೂ ಅಲ್ಲ. ಆದರೂ ಈ ಗಳಿಗೆಗಳು ಕೊಡುವ ಸುಖ Mood ನ್ನು ಬದಲಿಸಬಲ್ಲದು. ಉತ್ಸಾಹ ತುಂಬಿಸ ಬಲ್ಲದು. ಮನೆಯಲ್ಲಿ ಮನಗಳಲ್ಲಿ positive vibes – ಧನಾತ್ಮಕ ವಾತಾವರಣ ಸೃಷ್ಟಿಸಬಲ್ಲದು. Depression ಕಡಿಮೆ ಮಾಡಿ ಬದುಕಿನತ್ತ ಮುಖ ಮಾಡಿಸಬಲ್ಲದು.
ಜಗತ್ತೇ ಅಣುಗಳಿಂದಾಗಿದೆ. ಹೀಗಾಗಿ ಅಣುಗಾತ್ರದ ಸುಖವನ್ನು ಅಲಕ್ಷಿಸಲಾಗದು ಮನುಷ್ಯ ದೊಡ್ಡ ದೊಡ್ಡ ಸುಖದ ನಿರೀಕ್ಷೆಗಳಲ್ಲಿ ಇಂಥ ಅಮೃತ ಗಳಿಗೆಗಳನ್ನು ಲಕ್ಷಿಸುವುದಿಲ್ಲ. ಐಷಾರಾಮಿ ಕಾರುಗಳಲ್ಲಿ ಭುರೆಂದು ಸಾಗಿ, ಆ ವೇಗದಲ್ಲಿ ಒಂದು ಸುಖಕ್ಕೆ ನೂರಾರು ಚಿಕ್ಕ ಚಿಕ್ಕ ಸುಖಗಳಿಂದ ವಂಚಿತನಾದುದೂ ಗೊತ್ತಾಗದಂತೆ ಬದುಕಿ ಬಿಡುತ್ತಾನೆ. ಆ ಬದುಕು ಸಾಕೆನಿಸಿ ಹೊರಳಿನೋಡಿದಾಗ ಅಲ್ಲಿ ನೀರವ, ನಿಶ್ಯಬ್ಧಗಳಿಗೆ ಗಳನ್ನು ಹೊರತು ಪಡಿಸಿ ಬೇರೇನೂ ಕಾಣಸಿಗುವುದಿಲ್ಲ. ಅವನು ಗಳಿಸಿದ ಸಂಪತ್ತೆಲ್ಲವನ್ನೂ ತಕ್ಕಡಿಯ ಒಂದು ಪರಡಿಗೇರಿಸಿದರೂ ಗತ ಗಳಿಗೆಗಳ ಒಂದೆರಡು ಕ್ಷಣಗಳನ್ನೂ ಪಡೆಯಲು ಶಕ್ಯವಿಲ್ಲ. ‘gone’ are the days ‘gone for ever’…
“ಬದುಕಿನ ಯಶಸ್ಸಿಗೆ ಎಲ್ಲವೂ ಬೇಕು” ಬದುಕಿಗೆ ಸಾಕಷ್ಟು ಗಳಿಸಿಕೊಂಡ ಮೇಲೇಯೇ ‘ದುಡ್ಡಿನಲ್ಲೇನಿದೆ?’ ಅನ್ನಬಹುದೆಂಬ ಮಾತೊಂದಿದೆ. ಬದುಕು ತುಂಬ ಸುಂದರವಾಗಿದೆ. ಅದರ ಬಳಿ ನಿಮಗೆ ಕೊಡಲು ನಿರಂತರ ಇದೆ. ಆದರೆ ನಮಗೆ ಯಾವುದು, ಎಷ್ಟು ಬೇಕೆಂಬ ಪರಿಜ್ಞಾನವಿದ್ದರೆ ಪರಿ ಪೂರ್ಣ ಬದುಕು ನಮ್ಮದಾಗುತ್ತದೆ.
ಇಲ್ಲದಿದ್ದರೆ ಏನೋ ಕಳೆದುಕೊಂಡ ಅತೃಪ್ತಿಯ ಭಾವ ಬದುಕಿರುವವರೆಗೂ ಬೆನ್ನು ಬಿಡುವದಿಲ್ಲ. ನೆನಪಿಡಿ. “ಆನೇವಾಲಾ ‘ಪಲ್’ ಜಾನೇವಾಲಾ ಹೈ”.