ಆಂಗ್ಲ ಕಾದಂಬರಿಕಾರರ ಪರಿಚಯ ಮಾಲಿಕೆ -೬
“ಮೈ ನೇಮ್ ಈಸ್…ಜೇಮ್ಸ್ ಬಾಂಡ್” – ಸೃಷ್ಟಿಸಿದ ಇಯಾನ್ ಫ್ಲೆಮಿಂಗ್
ಗೂಢಚಾರ/ರಹಸ್ಯ ಏಜೆಂಟ್ ಎಂದರೆ ಜೇಮ್ಸ್ ಬಾಂಡ್ ಎಂದು ಪ್ರಪಂಚದ ಮೂಲೆಮೂಲೆಯಲ್ಲೂ ಚಿಕ್ಕ ಮಕ್ಕಳಿಗೂ ಇಂದು ಪರಿಚಿತ. ಇಂತಾ ಒಬ್ಬ ಲೋಕವೇ ಮರೆಯದ ನಾಯಕ ಪಾತ್ರವನ್ನು ಸೃಷ್ಟಿಸಿದ್ದು ಬ್ರಿಟಿಷ್ ನೇವಲ್ ಇಂಟೆಲಿಜೆನ್ಸ್ ವಿಭಾಗದಲ್ಲಿ ಖುದ್ದು ಅಧಿಕಾರಿಯಾಗಿ ಸೇವೆ ಸಲ್ಲಿಸಿ ನೈಜ ಅನುಭವ ಪಡೆದ ಪ್ರಸಿದ್ಧ ಲೇಖಕ ಇಯಾನ್( ಅಯಾನ್) ಫ಼್ಲೆಮಿಂಗ್(1908 – 1964).
ಎರಡನೇ ಮಹಾಯುದ್ಧದಲ್ಲಿ ತನ್ನ ಸ್ವಂತ ಅನುಭವ ಮತ್ತು ನಂತರ ಪತ್ರಕರ್ತನಾಗಿ ದುಡಿದು ಭಟ್ಟಿ ಇಳಿಸಿದ ಅನುಭವಸಾರವೇ ಜಗ ಮೆಚ್ಚಿದ ಏಜೆಂಟ್ ಜೇಮ್ಸ್ ಬಾಂಡ್ ಸರಣಿಯ ಕಾದಂಬರಿಗಳು. ತಮ್ಮ ೫೬ ವಯಸ್ಸಿನಲ್ಲೇ ನಿಧನರಾದರು ಇಯಾನ್.
ಅವರ ಮರಣದ ನಂತರವೂ ಇಂದಿಗೂ ಆ ಪಾತ್ರದ ಸರಣಿ ಚಲನಚಿತ್ರಗಳು ಬಿಡುಗಡೆಯಾಗುತ್ತಲೇ ಇರುವುದರಿಂದ ಹಲವರಿಗೆ ಅವರು ಖುದ್ದಾಗಿ ಬರೆದ ಕತೆಗಳೆಷ್ಟು, ನಂತರ ಚಿತ್ರ ನಿರ್ಮಾಪಕರು ಸೃಷ್ಟಿಸಿದ ಚಿತ್ರಕತೆಗಳ್ಯಾವುವು ಎಂಬುದರ ಮಾಹಿತಿ ಇಲ್ಲ.. ಅವರು ಬರೆದದ್ದು ೧೪ ಕಾದಂಬರಿಗಳು ಒಂದಾದ ಮೇಲೊಂದು.. ತದ ನಂತರ ಬಂದ ಮುಂದುವರೆದ ಸರಣಿ ಕತೆ/ ಚಿತ್ರಕತೆಗಳು ಸೇರಿ ಮೊತ್ತ ೨೪!
ಇಯಾನ್ ಮೊದಲು ಬರೆದ ಜೇಮ್ಸ್ ಬಾಂಡ್ ಕಾದಂಬರಿ -ಕ್ಯಾಸಿನೋ ರೊಯಾಲ್(೧೯೫೩). ಅನಂತರ ’ಲಿವ್ ಅಂಡ್ ಲೆಟ್ ಡೈ ’..ಹೀಗೆ ೧೪ ..ಆಕ್ಟೋಪಸ್ಸಿ(೧೯೬೬) ವರೆಗೂ!
ಅವರ ಪಾತ್ರಧಾರಿ ಜೇಮ್ಸ್ ಓರ್ವ ತನ್ನ ಬ್ರಿಟಿಷ್ ಇಂಟೆಲಿಜೆನ್ಸ್ ಅಧಿಕಾರಿ, ಅವನ ಕೋಡ್ ನಂಬರ್ ೦೦೭, ಅವನಿಗೆ ಕೊಲ್ಲಲು ಲೈಸೆನ್ಸ್ ಉಂಟು, ಅವನ ಬಾಸ್ ರಹಸ್ಯಮಯ ಸಂಕ್ಷಿಪ್ತ ಹೆಸರಿನ “ಎಂ” ಅವನನ್ನು ಚಿತ್ರವಿಚಿತ್ರ ಸನ್ನಿವೇಶಗಳಲ್ಲಿಯೂ ನಂಬಿ ಒಂದು ಪ್ರಪಂಚವನ್ನೇ ರಕ್ಷಿಸುವಂತಾ ಮಿಶನ್ನಿಗೆ ಕಳಿಸುತ್ತಿರುತ್ತಾನೆ.. ಜೇಮ್ಸ್ ಸುಂದರಾಂಗ ಜೆಂಟಲ್ ಮನ್, ಅವನ ಹಾವಭಾವ ಮತ್ತು ಚಾರ್ಮ್ ಗೆ ಹೆಂಗಳೆಯರು ( ವೈರಿ ಪಕ್ಷದವರೂ) ಮನಸೋತು ಪ್ರಣಯ ರಾಗ ಹಾಡುತ್ತಾ ಶರಣಾಗುತ್ತಾರೆ. ಅವನ ಬಾಸಿನ ಸೆಕ್ರೆಟರಿ ಮಿಸ್ ಮನಿಪೆನ್ನಿ ಕೂಡಾ ಮನದಲ್ಲೆ ಜೇಮ್ಸ್ ಅನ್ನು ಆರಾಧಿಸುತ್ತಾಳೆ…ಆದರೆ ಸರ್ವ ವಿದ್ಯಾ ಪಾರಂಗತ ಜೇಮ್ಸ್ ಯಾರಿಂದಲೂ ಮೋಸ ಹೋಗುವುದಿಲ್ಲ…ಅವನು ಕುಡಿಯುವ ಮದ್ಯ- ಮಾರ್ಟಿನಿ, ಅವನ ಸಿಗರೇಟ್ ಸೇದುವ ಶೈಲಿ, ಅವನ ಸ್ಪೆಷಲ್ ವ್ಯವಸ್ಥೆಯುಳ್ಳ ಏಕೈಕ ಕಾರ್ -ಬೆಂಟ್ಲಿ, ಅವನ ಸ್ಪೆಷಲ್ ರಿವಾಲ್ವರ್- ವಾಲ್ಥರ್ ಪಿಪಿಕೆ ೭.೬೫, ಅವನಿಗೆ ಬೆರಗಾಗುವಂತಾ ತಾಂತ್ರಿಕತೆ ಒದಗಿಸಿ ವೈರಿ ವಿರುದ್ಧ ಮೇಲುಗೈ ಪಡೆವಂತೆ ಮಾಡುವಾತ “ಕ್ಯೂ” …ಹೀಗೆ , ಎಲ್ಲವೂ ಒಂದು ರೀತಿಯ ಬ್ರ್ಯಾಂಡಿಂಗ್ ಸಂಕೇತಗಳೇ. ಪದೇ ಪದೇ ಅದನ್ನೇ ಒತ್ತಿ ಹೇಳಿ ಲೇಖಕರು ಜೇಮ್ಸ್ ಬಾಂಡನ್ನು ದೊಡ್ಡ ಚಿರಪರಿಚಿತ ವ್ಯಕ್ತಿತ್ವದವನಾಗಿ ಬೆಳೆಸುತ್ತಾ ಹೋದರು.. ಅವರ ಕಾದಂಬರಿಗಳು ಎಲ್ಲೆಲ್ಲೂ ಭಿಕರಿಯಾಗಿ ಮುದ್ರಿತ ಪ್ರತಿಗಳು ಮಾಯವಾಗುವಷ್ಟು ವೇಗದಲ್ಲಿ ಖರ್ಚಾದವು.. ಇಯಾನ್ ಇದಲ್ಲದೇ ಚಿಕ್ಕ ಮಕ್ಕಳಿಗಾಗಿ ಕತೆ ಇತ್ಯಾದಿ ಬರೆದಿದ್ದು ಸಹಾ ದಾಖಲೆಯಿದೆ
ಜೇಮ್ಸ್ ಬಾಂಡ್ ಎಲ್ಲರ ಮನಗೆದ್ದು ಇಂಗ್ಲೀಷ್ ಚಲಚಿತರ್ರಂಗದಲ್ಲೂ ಒಬ್ಬ ಅನುಕರಿಸಲರ್ಹ ಸ್ಟೈಲಿಷ್ ಮೇರು ವ್ಯಕ್ತಿತ್ವದವನಾಗಿ ಮೆರೆಯುತ್ತಾ ಬೆಳೆಯುತ್ತಾ ಹೋದ..ವಿಶ್ವದ ಭಾಷೆಗಳಲ್ಲೆಲ್ಲಾ ಲೋಕಲ್ ಜೇಮ್ಸ್ ಬಾಂಡ್ ಪಾತ್ರಧಾರಿ ಚಿತ್ರಗಳು, ಕಾಪಿಗಳು ಬರುತ್ತಾ ಹೋದವು…
ಮೊದಲು ಕೆಲವು ಬಾಂಡ್ ಚಿತ್ರಗಳನ್ನು ಶಾನ್ ಕಾನೆರಿ ಎಂಬ ಪ್ರಸಿದ್ಧ ಸ್ಕಾಟಿಶ್ ನಾಯಕ ನಿಭಾಯಿಸಿ ಎಲ್ಲಾ ಚಿತ್ರರಸಿಕರ ಮನದಲ್ಲೂ ಬೇರು ಬಿಟ್ಟ..ನಂತರ ಬಂದ ಸ್ವಲ್ಪ ಸೌಮ್ಯ ಕಳೆಯ ರೋಜರ್ ಮೂರ್ ಆ ಪರಂಪರೆಯನ್ನು ಉಳಿಸಿ ಬೆಳೆಸುತ್ತಾ ಹೋದರು, ಅನಂತರ ಬಂದ ಆಕರ್ಷಕ ವ್ಯಕ್ತಿತ್ವದ ನಟ ಪಿಯರ್ಸ್ ಬ್ರೋಸ್ನಾನ್, ಮತ್ತು ಇತ್ತೀಚೆಗೆ ಗಡಸು ಮುಖದ ಡೇನಿಯಲ್ ಕ್ರೇಗ್ ಆ ಪಾತ್ರದಿಂದಲೇ ಜಗದ್ವಿಖ್ಯಾತರಾದರು. ಒಂದು ಚಿತ್ರದಲ್ಲಿ ಜಾರ್ಜ್ ಲೆಜ಼ೆನ್ಬಿ ಎಂಬವರೂ ಕೂಡಾ ಇದ್ದರು.
ಬಾಂಡ್ ಚಿತ್ರಗಳಲ್ಲಿ ನಟಿಸಲು ವಿಶ್ವಚಿತ್ರರಂಗದ ಚೆಲುವೆ ನಾಯಕಿಯರ ಸಾಲು ಸಾಲೇ ಕಾದಿರುತ್ತವೆ, ಅದನ್ನು ಅವರ ಜೀವನದ ದೊಡ್ಡ ಸಾಧನೆಯೆಂದು ಪರಿಗಣಿಸಲಾಗುತ್ತದೆ.
ಆದರೆ ಬಾಂಡ್ ಚಿತ್ರಗಳೆಲ್ಲಾ ’ಮಸಾಲೆ ಬೆರೆತ ಆತಿರೇಕ, ವೈಭವೀಕೃತ ’ ಎನ್ನುವವರಿದ್ದಾರೆ. “ಮೊದಲು ಅವರ ಕಾದಂಬರಿಗಳನ್ನು ಓದಿ ನೋಡಿ, ಚಿತ್ರಗಳಲ್ಲ” ಎನ್ನುವ ಪಟ್ಟು ಬಿಡದ ಓದುಗ ವರ್ಗವೂ ಇನ್ನೂ ಇದೆ. ಅವರ ಪುಸ್ತಕಗಳು ಅಂಗಡಿಗಳಲ್ಲಿ ಸದಾ ದೊರೆಯುತ್ತವೆ ಎಂದು ಪ್ರತೀತಿ.
ಏನೇ ಆಗಲಿ, ಜೇಮ್ಸ್ ಬಾಂಡ್ ಗನ್ ಹಿಡಿದು ಪೋಸ್ ಕೊಡುತ್ತಾ, ಮೊದಲ ಸೀನಿನಲ್ಲಿ ಬೈನಾಕ್ಯುಲರಿನಲ್ಲಿ ತನ್ನನ್ನು ಗಮನಿಸುವ ವ್ಯಕ್ತಿಗೆ ಶೂಟ್ ಮಾಡಿ ಕೊಲ್ಲುತ್ತಾ , ಸೋಲದ ಸಾಹಸಿಯಾಗಿ ರಂಜಿಸುತ್ತಾ, ವರುಷಕ್ಕೊಂದರಂತೆ ಗಲ್ಲಾ ಪೆಟ್ಟಿಗೆ ಲೂಟಿ ಹೊಡೆಯುತ್ತಲೇ ಇದ್ದಾನೆ!