ನಂಬುವದೋ…. ಬಿಡುವದೋ…ನೀವೇ ಹೇಳಿ…
ನಮ್ಮ ಕಡೆಗೆ ಕೆಲವು ನಂಬಿಕೆಗಳಿವೆ. ಅವು ಮೂಢ ನಂಬಿಕೆಗಳೇ ಅಲ್ಲವೇ ಎಂಬುದನ್ನು ಬಲ್ಲವರು ಹೇಳಬೇಕು.’ಮೂಢ’ ಶಬ್ಧ ನಮ್ಮ ಶಬ್ಧಕೋಶಗಳೊಳಗೆ ಸೇರುವಷ್ಟರಲ್ಲೇ ನಮ್ಮ ನಂಬುಗೆಗಳು ಗಟ್ಟಿಗೊಂಡಿದ್ದವು. ಅವುಗಳನ್ನು ನಂಬಿ ಅನಾಹುತಗಳೇನೂ ಆಗಿರಲಿಲ್ಲ. ಅಂದ ಮೇಲೆ ಬದಲಿಸಬೇಕೆಂಬ ಭಾವನೆ, ಒತ್ತಾಯ ಯಾವುದೂ ಇರಲಿಲ್ಲ. ನಂಬಿದ್ದು ಆಕಸ್ಮಿಕವಾಗಿ ನಿಜವಾದರೆ ನಂಬಿಗೆಗೆ credit, ನಿಜವಾಗಲಿಲ್ಲವೋ’ಕತ್ತೆ ಬಾಲ’ ಹೋಯ್ತು ಎಂಬ ತತ್ವ ನಮ್ಮನ್ನು ಸುರಕ್ಷಿತ ವಲಯದಲ್ಲೇ ಇರಗೊಟ್ಟಿತ್ತು.
ಇಂದು ಇದೆಲ್ಲ ಯಾಕೆ ನೆನಪಾಯಿತೆಂದರೆ ಬೆಳಿಗ್ಗೆ ಸೀರೆಯುಡುವಾಗ ಅದು ಗೊತ್ತಿಲ್ಲದೇ ಉಲ್ಟಾ ಆಗಿತ್ತು. ಹಾಗೆ ಸೀರೆ ತಿರುಮುರುವು ಉಟ್ಟರೆ ಹೊಸ ಸೀರೆ ಬರುತ್ತೆ ಅಂತ ಒಂದು ನಂಬಿಕೆ. ಉಣ್ಣುವ ತಟ್ಟೆ ಜಾಗ ಬಿಟ್ಟು ಸರಿದರೆ ಔತಣ ಬರುತ್ತದೆ, ಮನೆಯ ಮಾಳಿಗೆಯ ಮೇಲೆ ಕಾಗೆ ಕೂಗಿತೋ ನಂಟರು ಬರುತ್ತಾರೆ, ಮಗು ಮನೆಯ ಚಿಲಕ ಬಾರಿಸಿದರೆ ಅತಿಥಿಗಳು ಬರುತ್ತಾರೆ, ಅಂಗೈ ತುರಿಸಿದರೆ ಧನಾಗಮನ , ಅಂಗಾಲು ಕಡಿದರೆ ಎಲ್ಲಿಗೋ ಪಯಣ ಭಾಗ್ಯ, ಹೊರಗೆ ಹೊರಟ ವೇಳೆಯಲ್ಲಿ ‘ ಎಲ್ಲಿಗೆ’ ಎಂದು ಯಾರಾದರೂ ಕೇಳಿದರೆ ಅಪಶಕುನ, ಶುಭ ಕೆಲಸದ ವೇಳೆ ಒಚಿಟಿ ಸೀನು ಶುಭವಲ್ಲ, ಒಳ್ಳೆಯ ಕೆಲಸಕ್ಕೆ ಮೂರು ಜನ ಹೋಗುವದು ಸಲ್ಲದು, ಅಥವಾ ಆಕಸ್ಮಿಕವಾಗಿ ವಿಧವೆ ಎದುರಾಗುವುದು, ಬೆಕ್ಕು ಅಡ್ಡ ಹೋಗುವುದು ಇಂಥವುಗಳೆಲ್ಲ ಅದೇ ಪಟ್ಟಿಯ ಇನ್ನು ಹಲವು ನಂಬಿಕೆಗಳು. …simply, a Big NO NO No for them…
ಇವುಗಳನ್ನು sooo called ಮೂಢ ನಂಬಿಕೆಗಳ ಪಟ್ಟಿಯಲ್ಲಿ ಸೇರಿಸಬೇಕಾ? ಬೇಡವಾ? ಎಂಬ ನಮ್ಮ ಹಿಂಜರಿಕೆಗೆ ಸಬಲ ಕಾರಣಗಳಿವೆ. ಇದುವರೆಗೆ ಯಾವುವೂ ಸಾರಾಸಗಟಾಗಿ ನಿಜವೂ ಆಗಿಲ್ಲ. ಸುಳ್ಳೂ ಆಗಿಲ್ಲ. ಟೊಂಗೆ ಮುರಿದದ್ದು ಕಾಗೆ ಕೂತಿದ್ದಕ್ಕಾ?ಟೊಂಗೆ ಒಣಗಿದ್ದುದಕ್ಕಾ? ಗೊತ್ತಿಲ್ಲದೇ ಅವುಗಳನ್ನು ನಮ್ಮ ಅನುಕೂಲಕ್ಕೆ ಅರ್ಥೈಸಿ ಖುಷಿ, ಸಮಾಧಾನ ಪಟ್ಟದ್ದಿದೆ. ಹೇಳಿ ಕೇಳಿ ನಾವು ಹಳ್ಳಿಯ ‘ಜವಾರಿ’ ಮಂದಿ. ಪಟ್ಟಣಗಳ ನಯ ನಾಜೂಕು ನಮಗೆ ‘ನಾಟಕಬಾಜಿ’ ಅನಿಸಿದ್ದೇ ಹೆಚ್ಚು.. ಎಲ್ಲಾದರೂ ಹೋಗುವುದು ತಪ್ಪಿತೋ
there is always ‘next time’ ಎಂಬ ಭಾವ… ಊಟದ ವೇಳಗೆ ಎಲ್ಲಿರುತ್ತೇವೋ ಅಲ್ಲಿಯೇ ಎಲೆ ಹಾಸಿ ಠಿಕಾಣಿ ಅರಿಯದ್ದಲ್ಲ. ಇನ್ನು ಅತಿಥಿಗಳು ಬರಬಾರದೇ? ಎಂಬ ಹಂಬಲ, ತುಡಿತ, ಬಂದಷ್ಟೂ ಖುಷಿ… ಉಣ್ಣುವ ಖುಷಿಗಿಂತ, ಉಣಿಸಿಯೇ ಸುಖಿಸುವ ಮಂದಿ. ವಿಧವೆಯರು ಎದುರು ಬಂದರೆ ಸಂಬಂಧಿಸಿದವರು ಮುಖ ಮುದುಡಿಸುವ ಮುನ್ನವೇ ‘sorry’ ಮುಖಭಾವ… ಯಾವುದೂ ಅಪಥ್ಯ ಅನಿಸದ ಮನೋವೈಶಾಲ್ಯ… ಹಳ್ಳಿ ಬುದ್ಧಿ… ಕಟ್ಟಾ ಸಂಪ್ರದಾಯಸ್ಥರನ್ನೂ ಅವರದೇ ಮನಸ್ಥಿಯಲ್ಲಿ ಅಳೆದು ಕ್ಷಮಿಸಿಬಿಡುವ ಯಾವ ಕಾಲಕ್ಕೂ ತಪ್ಪು ತಿಳಿಯದ ಹೃದಯ ವೈಶಾಲ್ಯ…. ಏನಾದರೂ ಅನಿಸಿದರೆ ಅದನ್ನು ಇತರರು ತಿಳಿಯುವ ಮುನ್ನ ಮನದಲ್ಲಿಯೇ ಹೂತು ಹಾಕುವದು ನಮಗೆ ಯಾರೂ ಹೇಳಿಕೊಡಬೇಕಾಗಿಲ್ಲ. ಯಾವುದು ಹೆದರಿಸೀತು ನಮ್ಮನ್ನು!
ಅದಕ್ಕೇ ನಾವು ನಂಬಿಕೆಗಳಿಗೆ ‘ಮೂಢ’ ಅಭಿನಾಮ’ ಸೇರಿಸಲು ಅನುಮಾಮಿಸುವುದು.ಅದೇ ಇವತ್ತೇ ನೋಡಿ…. ಬೆಳಿಗ್ಗೆ ಸೀರೆ ಉಲ್ಟಾ ಉಟ್ಟೆ… ಎರಡೂ ಬದಿಗಳಿಗೆ ಹೆಚ್ಚು ವ್ಯತ್ಯಾಸವಿರದಿದ್ದುದೇ ಕಾರಣ. ಸರಿಪಡಿಸಿ ಉಟ್ಟುಕೊಳ್ಳಲು ಮನಸ್ಸಾಗಲಿಲ್ಲ… ಹೊಸ ಸೀರೆ ಬರುವ chance ಕಡಿಮೆ. ಯಾಕೆಂದರೆ ಈ ಸಲ ಕಾರ್ಯ , ಕಾರಣಗಳೂ ತಿರುವು ಮುರುವಾಗಿವೆ. ಮೊನ್ನೆ, ಒಂದೇ ದಿನ ಮೊದಲು ವಾರಣಾಸಿ ಸಿಲ್ಕ ಸೀರೆ ತಮ್ಮನ ಮಗಳಿಂದ ಬಂದಿದೆ. ಇಂದು ಸೀರೆ ಉಡುವದು ಉಲ್ಟಾ ಆಗಿದೆ. ನಾನಾವತ್ತೂ ಹಾಗೇನೇ… ಲೇಟ್ ಲತೀಫ್… ಹಹಹ