ದುಷ್ಟತನದ ಸ್ನೇಹಫಲ!”,

ಇಬ್ಬರು ಸ್ನೇಹಿತರು; ಒಬ್ಬರು ಇನ್ನೊಬ್ಬರನ್ನು ಮೀರಿಸುವಷ್ಟು ಪರಮಲೋಭಿಗಳು.ಇಬ್ಬರೂ ತಪಸ್ಸಿಗೆಂದು ಕುಳಿತರು. ಕಠಿಣವಾದ ತಪಸ್ಸು ಮುಂದುವರಿಯಿತು. ಪೈಪೋಟಿಯಲ್ಲೇ ನಡೆಯಿತು. ದೇವರಿಗೂ ಸಂತೋಷವಾಯಿತು; ಮೊದಲ ಸ್ನೇಹಿತನ ಮುಂದೆ ಪ್ರತ್ಯಕ್ಷನಾದ. ‘ನಿನ್ನ ತಪಸ್ಸಿಗೆ ಮೆಚ್ಚಿರುವೆ; ನಿನಗೆ ಏನು ವರ ಬೇಕೋ ಕೇಳಿಕೋ. ಆದರೆ ಇಲ್ಲೊಂದು ಗುಟ್ಟು! ನೀನು ಏನನ್ನು ಕೇಳಿಕೊಳ್ಳುವೆಯೋ ಅದರ ಎರಡಷ್ಟನ್ನು ನಿನ್ನ ಆ ಸ್ನೇಹಿತ ಪಡೆಯುತ್ತಾನೆ’ ಎಂದ ದೇವರು.ಈಗ ಅವನಿಗೆ ಸಮಸ್ಯೆ ಎದುರಾಯಿತು. ‘ನಾನು ಏನನ್ನು ಕೇಳಿದರೂ ಅವನಿಗೆ ಅದರ ಎರಡರಷ್ಟು! ಒಂದು ಕೋಟಿ ಕೇಳಿದರೆ ಅವನಿಗೆ ಎರಡು ಕೋಟಿ; ನಾನು ನೂರು ಕೋಟಿ ಕೇಳಿದರೆ ಅವನಿಗೆ ಇನ್ನೂರು! ಅರೆ!! ಅವನು ನನಗಿಂತಲೂ ಹೆಚ್ಚಿನ ಶ್ರೀಮಂತ ಆಗಿಬಿಡುತ್ತಾನೆ. ಇದನ್ನು ನಾನು ಹೇಗೆ ಸಹಿಸಿಕೊಳ್ಳುವುದು’ ಎಂದು ಸಂಕಟಕ್ಕೆ ಗುರಿಯಾದಯೋಚಿಸಿ ಯೋಚಿಸಿ ಅವನು ದೇವರನ್ನು ವರ ಕೇಳಿಯೇಬಿಟ್ಟ: ‘ದೇವರೆ, ನನ್ನ ಒಂದು ಕಣ್ಣು ಹೋಗಲಿ!’‘ತಥಾಸ್ತು’ ಎಂದ ದೇವರು.ಇನ್ನೊಬ್ಬ ಸ್ನೇಹಿತನ ಎರಡೂ ಕಣ್ಣು ಹೋದವು. ದುಷ್ಟರು ಯಾವಾಗಲೂ ದುಷ್ಟರೇ. ಅವರ ಸ್ನೇಹವೂ ಅಪಾಯವೇ.ಚೆನ್ನಾಗಿ ಬದುಕುವವರನ್ನು, ಸಂತೋಷದಿಂದ ಇರುವವರನ್ನು ನೋಡಿದರೆ ಕೆಲವರಿಗೆ ಸಹಿಸಲು ಆಗದು. ಎಲ್ಲರೂ ಅಳುತ್ತಿದ್ದರೆ ಮಾತ್ರ ಅಂಥವರಿಗೆ ಸಂತೋಷ, ನೆಮ್ಮದಿ. ಆ ಇಬ್ಬರು ಸ್ನೇಹಿತರು ಅಂಥ ವರ್ಗಕ್ಕೆ ಸೇರಿದವರು. ಅವರು ಹೆಸರಿಗಷ್ಟೆ ಸ್ನೇಹಿತರು; ದಿಟದಲ್ಲಿ ಅವರಿಬ್ಬರೂ ಶತ್ರುಗಳು, ಪರಮಶತ್ರುಗಳು. ಸ್ನೇಹಿನಾದವನು ತನ್ನ ಮಿತ್ರನ ಏಳಿಗೆಯನ್ನು ಕಂಡು ಸಂತೋಷಿಸುತ್ತಾನೆ. ಆದರೆ ಅವರಿಬ್ಬರಿಗೆ ಅಂಥ ಸಂತೋಷಪಡುವ ಸಾಧ್ಯತೇ ಇರಲಿಲ್ಲ. ಅವರು ನಿಜವಾದ ಸ್ನೇಹಿತರಲ್ಲ; ಜೊತೆಗೆ ದುಷ್ಟರು; ಅದರ ಜೊತೆಗೆ ಲೋಭಿಗಳು. ಒಬ್ಬರ ಏಳಿಗೆಯನ್ನು ಇನ್ನೊಬ್ಬರು ನೋಡಿ ನಲಿಯುವ ಸಂದರ್ಭವೇ ಅವರಿಬ್ಬರಲ್ಲಿ ಉದ್ಭವಿಸದು. ‘ನಾನು ಕಷ್ಟ ಪಟ್ಟರೂ ಪರವಾಗಿಲ್ಲ; ನನಗಿಂತಲೂ ಅವನು ಇನ್ನೂ ಹೆಚ್ಚು ಕಷ್ಟ ಪಡಬೇಕು. ನಾನು ನಷ್ಟಹೋದರೂ ಚಿಂತೆಯಿಲ್ಲ; ಅವನು ನನಗಿಂತಲೂ ಇನ್ನೂ ಹೆಚ್ಚಿನ ನಷ್ಟವನ್ನು ಅನುಭವಿಸಬೇಕು’ – ಇದು ಅವರಿಬ್ಬರ ಸಮಾನಗುಣ; ಹೀಗಾಗಿ ಅವರಿಬ್ಬರು ಸ್ನೇಹಿತರು!ನಮ್ಮ ನಡುವೆಯೂ ಈ ಸ್ನೇಹಿತರಂಥವರು ಇರುತ್ತಾರೆ. ನಮ್ಮ ಜೊತೆಯಲ್ಲೇ ಇದ್ದಂತೆ, ನಮ್ಮ ಬೆಳವಣಿಗೆಯನ್ನು ಕಂಡು ಸಂತೋಷಪಡುತ್ತಿರುವಂತೆ, ನಮ್ಮ ಸ್ನೇಹಿತರಂತೆ ಅಂಥವರು ನಟಿಸುತ್ತಿರುತ್ತಾರೆ. ಅಂಥವರಿಂದ ನಾವು ಸದಾ ಎಚ್ಚರದಿಂದ ಇರಬೇಕು. ನಾಲ್ಕು ಜನರು ಚೆನ್ನಾಗಿದ್ದರೆ ಮಾತ್ರವೇ ನಾವೂ ಚೆನ್ನಾಗಿರಲಾದೀತು ಎಂಬ ವಾಸ್ತವವನ್ನು ಯಾರೂ ಕೂಡ ಮರೆಯಬಾರದು.

courtsey:prajavani.net

https://www.prajavani.net/artculture/short-story/neethi-kathe-640684.html

Leave a Reply