ದೇಗುಲಗಳ ಸಮೂಹದ ಹೂಲಿ

ದೇಗುಲಗಳ ಸಮೂಹದ ಹೂಲಿ

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಹೂಲಿ ಗ್ರಾಮವನ್ನು ಕರ್ನಾಟಕದ ವಾಸ್ತುಶಿಲ್ಪ ಪ್ರದರ್ಶಿಸುವ ತಾಣ ಎಂದು ಕರೆಯುತ್ತಾರೆ. ಇದು ಒಂಬತ್ತು ದೇವಾಲಯಗಳಿವೆ. ಅದರಲ್ಲಿ ಪಂಚಲಿಂಗೇಶ್ವರ ತನ್ನ ವಿಶಿಷ್ಟತೆಯಿಂದ ಗಮನ ಸೆಳೆಯುತ್ತದೆ. ಇದು ಕಲ್ಯಾಣ ಚಾಲುಕ್ಯ ಕಾಲದಲ್ಲಿ ನಿರ್ಮಾಣಗೊಂಡಿದೆ.
ಸವದತ್ತಿಯಿಂದ 9 ಕಿ.ಮೀ ದೂರವಿರುವ ಈ ಗ್ರಾಮದಲ್ಲಿರುವ ದೇವಾಲಯಗಳು ವಿಶಿಷ್ಟ ಶಿಲ್ಪಕಲೆ, ವಾಸ್ತುಶಿಲ್ಪ ಪರಿಚಯಿಸುತ್ತವೆ. ಹಾಗೆಯೇ, ಆ ದೇವಾಲಯಗಳಿಗೆ ಬೇಕಾದ ಸಾಕ್ಷ್ಯಗಳನ್ನು ನುಡಿಯುವ ಶಾಸನಗಳೂ ಇವೆ. ಇಲ್ಲಿ ಸರ್ವಧರ್ಮ ಸಮನ್ವಯತೆ ಸಾಧಿಸಿದ ಹಾಗೂ ಸಾಂಸ್ಕೃತಿಕ ಪರಂಪರೆ ಯನ್ನು ಎತ್ತಿ ಹಿಡಿದ ಆ ಕಾಲದ ವಾಸ್ತುಶಿಲ್ಪಗಳು ಇಲ್ಲಿವೆ.
ಪಂಚಲಿಂಗೇಶ್ವರ ದೇವಾಲಯದ ಸುತ್ತಲಿರುವ ಒಂಬತ್ತು ದೇವಾಲಯಗಳಲ್ಲಿ ಕೆಲವು ಬೀಳುವ ಹಂತ ದಲ್ಲಿವೆ. ನಾನು ಭೇಟಿ ಕೊಟ್ಟಿದ್ದು ಪಂಚಲಿಂಗೇಶ್ವರ ದೇವಾಲಯಕ್ಕೆ. ಈ ದೇವಾಲಯ ಒಂದು ಕಾಲದಲ್ಲಿ ಪಂಚ ತೀರ್ಥಂಕರ ಬಸದಿಯಾಗಿತ್ತಂತೆ. ಈಗ ಪಂಚಲಿಂಗೇಶ್ವರವೆಂದು ಪ್ರಸಿದ್ಧಿ ಪಡೆದಿದೆ. ದೇವಾಲಯದ ಶಿಲ್ಪಕಲಾ ಸೌಂದರ್ಯ ಎಂಥವರನ್ನು ವಿಸ್ಮಯರನ್ನಾಗಿಸುತ್ತದೆ. ಗರ್ಭಗುಡಿಯಲ್ಲಿ ಮೂರು ಬೃಹದಾಕಾರದ ಲಿಂಗಗಳು ಹಾಗೂ ಸಭಾಮಂಟಪದಲ್ಲಿ ರುವ ಎರಡು ಗರ್ಭಗುಡಿಗಳಲ್ಲಿ ಎರಡು ಲಿಂಗಗಳು ಇರುವುದರಿಂದ ಇದಕ್ಕೆ ಪಂಚಲಿಂಗೇಶ್ವರ ದೇವಾಲಯ ಎಂದು ಕರೆಯುವರು.
ಸದ್ಯ ಪಂಚ ಗೋಪುರಗಳಲ್ಲಿ ಕೇವಲ ಮೂರು ಮಾತ್ರ ಉಳಿದಿವೆ. ವಿಶಾಲವಾದ ನವರಂಗ ಮೂರು ದಿಕ್ಕುಗಳಿಗೆ ತೆರೆದುಕೊಂಡಿದೆ. ನವರಂಗವು ಬಳ್ಳಿಗಾವಿಯನ್ನು ನೆನಪಿಸುತ್ತದೆ. ಇತಿಹಾಸದ ಯಾವುದೋ ಕಾಲಘಟ್ಟದಲ್ಲಿ ಬಸದಿ ಇದ್ದದ್ದು ಶೈವ ದೇವಾಲಯವಾಗಿ ಪಲ್ಲಟಗೊಂಡಿದೆ. ದೇವಾಲಯದ ಬಾಗಿಲ ಚೌಕಟ್ಟಿನ ಮೇಲೆ ಇದು ಬಸದಿಯಾಗಿತ್ತು ಎಂಬುದಕ್ಕೆ ಲಿಖಿತ ಮತ್ತು ಚಿತ್ರ ಮಾಹಿತಿ ಸಿಗುತ್ತದೆ!
ವಿಶಾಲವಾದ ಸಭಾಮಂಟಪ ಹೊಂದಿದ್ದು, ಸುಮಾರು 25 ರಿಂದ 30 ಕಂಬಗಳಿವೆ. ಈ ದೇವಾಲಯದಲ್ಲಿ ನಾಲ್ಕು ಶಾಸನಗಳನ್ನು ಕಾಣಬಹುದು. ಈ ಶಾಸನಗಳು ಕ್ರಿ.ಶ. 1181ರ ಕಾಲದ್ದು ಎಂದು ಹೇಳಲಾಗಿದೆ. ಈ ದೇವಾಲಯವನ್ನು ಕೇಂದ್ರೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ರಕ್ಷಿತ ಸ್ಮಾರಕವೆಂದು ಘೋಷಿಸಿದೆ. ದೇವಾಲಯದ ಪ್ರಾಂಗಣದಲ್ಲಿ ಗ್ರಾಮದಲ್ಲಿ ದೊರೆತ ವೀರಗಲ್ಲು, ಹಲವಾರು ಶಿಲ್ಪವುಳ್ಳ ಮೂರ್ತಿ ಶಾಸನಗಳು ಇಡಲಾಗಿದೆ. ದೇವಾಲಯದ ಆವರಣದಲ್ಲಿನ ಶಾಸನಗಳನ್ನು ಚೌಕಟ್ಟು ನಿರ್ಮಿಸಿ ಕಾಪಿಟ್ಟಿದ್ದಾರೆ. ಆ ಕಾಲದ ಒತ್ತಡಗಳ, ಸಾಮಾಜಿಕ ಬದಲಾವಣೆಗಳ ಚಿತ್ರಣಗಳ ಜೊತೆಗೆ ಜನ ಜೀವನದ ವಿವರಗಳು ಇಲ್ಲಿನ ಶಾಸನಗಳಿಂದ ನಮಗೆ ತಿಳಿದು ಬರುತ್ತದೆ. ಊರ ಸುತ್ತಮುತ್ತ ಅನೇಕ ಭಗ್ನಾವಶೇಷಗಳು ಎಲ್ಲೆಲ್ಲೂ ಕಾಣಸಿಗುತ್ತದೆ. ದೇವಾಲಯದ ಆವರಣದಲ್ಲಿ ಸಣ್ಣ ವಸ್ತು ಸಂಗ್ರಹಾಲಯವೂ ಇದೆ. ಪುರಾತತ್ವ ಇಲಾಖೆ ಈ ದೇವಾಲಯದ ಉಸ್ತುವಾರಿ ನೋಡಿಕೊಳ್ಳುತ್ತದೆ.


ಹೂಲಿ ಗ್ರಾಮದ ಉತ್ತರ ದಿಕ್ಕಿನಲ್ಲಿ ಗುಡ್ಡದ ಮೇಲೆ ಒಂದು ಕಲ್ಲಿನ ಕೋಟೆ ಇದೆ. ಇದು ಕಲ್ಯಾಣ ಚಾಲುಕ್ಯರದೆಂದು ಹೇಳಲಾಗುತ್ತಿದೆ. ಮೂರು ಹಂತಗಳಲ್ಲಿ ಕೋಟೆ ಗೋಡೆ ಕಟ್ಟಿದ್ದಾರೆ. ಕೋಟೆಯಲ್ಲಿ ಎಂಟು–ಹತ್ತು ಬುರುಜುಗಳಿವೆ. ಇವು ಕೋಟೆಯ ಕುರುಹನ್ನು ಸಾಕ್ಷ್ಯೀಕರಿಸುತ್ತವೆ. ಕೋಟೆಯೊಳಗಿರುವ ಮದ್ದು, ಶಸ್ತ್ರಸಂಗ್ರಹದ ಹೊಂಡ ಈಗಲೂ ಸುಸ್ಥಿತಿಯಲ್ಲಿವೆ. ಸೈನಿಕರ ಬಿಡಾರ, ಧಾನ್ಯ ಗೋದಾಮು ಸೇರಿದಂತೆ ಅನೇಕ ಕಟ್ಟಡಗಳ ಅವಶೇಷಗಳಿವೆ. ಕೋಟೆಗೆ ಹೋಗಲು ಸಮರ್ಪಕವಾದ ಮಾರ್ಗವಿಲ್ಲ. ದೇವಾಲಯದ ಸನಿಹ ದೊಡ್ಡ ಕೆರೆಯಿದೆ. ಮಳೆಯ ಕೊರತೆಯಿಂದಾಗಿ ಹತ್ತು ವರ್ಷದಿಂದ ಬರಿದಾಗಿದೆ. ಮಲಪ್ರಭಾ ನದಿಯ ನೀರನ್ನು ಬಳಸಿ ಕೃಷಿ ಮಾಡುತ್ತಿದ್ದಾರೆ. ಕುಡಿಯುವ ನೀರಿಗೆ ಆ ನದಿಯೇ ಆಧಾರ.
ನಮ್ಮ ಪೂರ್ವಜರ ಇತಿಹಾಸದ ಸಾಕ್ಷ್ಯ ಹೇಳುವ ನಮ್ಮ ಹೆಮ್ಮೆಯ ಕುರುಹನ್ನು ನಾವು ಉಳಿಸಿಕೊಳ್ಳದೇ ಹಾಳುಗೆಡಹುತ್ತಿರುವುದು ನಮ್ಮ ಇತಿಹಾಸದ ಪ್ರಜ್ಞೆಯನ್ನು ಕೆಣಕುತ್ತಿವೆ. ಪ್ರವಾಸೋದ್ಯಮ ಇಲಾಖೆ ಮನಸು ಮಾಡಿದರೆ ಒಂದೊಳ್ಳೆಯ ಪ್ರವಾಸಿ ಕೇಂದ್ರ ಮಾಡಬಹುದಿತ್ತು.

Courtesy : Prajavani.net

https://www.prajavani.net/temple-group-hooli-643115.html

Leave a Reply