ಶಿಲ್ಪಕಲೆ ಮೋಡಿಗಾರ ಅಶೋಕ್

ಶಿಲ್ಪಕಲೆ ಮೋಡಿಗಾರ ಅಶೋಕ್

ಬೃಹತ್ ಮೂರ್ತಿಗಳ ಕೆತ್ತನೆಗೆ ಶಿಲ್ಪಿ ಅಶೋಕ್ ಗುಡಿಗಾರ್ ಹೆಸರುವಾಸಿ. ಆತ್ಮತೃಪ್ತಿಗಾಗಿ ಶಿಲ್ಪಕಲಾ ಕ್ಷೇತ್ರಕ್ಕೆ ಬಂದ ಅವರು ಇದುವರೆಗೆ ಆಂಜನೇಯ, ಕನಕದಾಸರ, ವಿವೇಕಾನಂದ ಸೇರಿದಂತೆ ಸಾವಿರಾರು ಮೂರ್ತಿಗಳನ್ನು ಕೆತ್ತನೆ ಮಾಡಿದ್ದಾರೆ. 

ಶಿವಮೊಗ್ಗದ ಸಾಗರ ನಮ್ಮೂರು. ಕಲ್ಲಿನ ವಿಗ್ರಹಗಳ ಕೆತ್ತನೆ ಕುಲಕಸುಬು. ತಂದೆ ಚಿಕ್ಕಣ್ಣ ಗುಡಿಗಾರ್ ಸಣ್ಣಪುಟ್ಟ ವಿಗ್ರಹಗಳ ಕೆತ್ತೆನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಅವರಿಂದಲೇ ಈ ಕಲೆ ಕಲಿತೆ. ಅವರೇ ನನ್ನ ಮೊದಲ ಗುರು.

ಶಿಲ್ಪಕಲೆ ಬಗ್ಗೆ ಚಿಕ್ಕಂದಿನಿಂದಲೂ ಅತಿಯಾದ ಆಸಕ್ತಿ. ಹೀಗಾಗಿ, 16ನೇ ವಯಸ್ಸಿನಲ್ಲಿ ಬೆಂಗಳೂರಿಗೆ ಬಂದೆ. ಬಸವನಗುಡಿಯ ವಾದಿರಾಜ ಎಂಬುವವರ ಬಳಿ ಶಿಷ್ಯನಾಗಿ ಸೇರಿಕೊಂಡೆ. ಶಿಲ್ಪಕಲೆಯನ್ನು ಪರಿಚಯಿಸಿಕೊಂಡೆ. ಪ್ರಾಚೀನ ಶಿಲ್ಪಕಲೆ ಬಗ್ಗೆ ಆಳವಾದ ಅಧ್ಯಯನ ಮಾಡಿದೆ.

ಕೆನಾರಾ ಬ್ಯಾಂಕ್‌ ನಡೆಸುತ್ತಿರುವ ‘ಕುಶಲಕರ್ಮಿಗಳ ತರಬೇತಿ ಶಾಲೆ’ಯಲ್ಲಿ 14 ವರ್ಷ ಶಿಕ್ಷಕನಾಗಿ ಕೆಲಸ ಮಾಡಿದೆ. ನಡು–ನಡುವೆ ವಿಗ್ರಹಗಳ ಕೆತ್ತನೆ ಕಾರ್ಯವು ನಡೆಯುತ್ತಿತ್ತು. ಸಾಕಷ್ಟು ಮಂದಿ ನನ್ನ ಕಲೆಯನ್ನು ಗುರುತಿಸಿ ವಿಗ್ರಹಗಳನ್ನು ಕೆತ್ತನೆ ಮಾಡಿಕೊಡುವಂತೆ ಬೇಡಿಕೆ ಇಟ್ಟರು. ಶಿಕ್ಷಕನಾಗಿದ್ದುಕೊಂಡು ಜನರ ಬೇಡಿಕೆಗೆ ಪೂರಕವಾಗಿ ಸ್ಪಂದಿಸಲಾಗದೆ ಆ ವೃತ್ತಿ ತೊರೆಯಬೇಕಾಯಿತು. ಬಳಿಕ ಬಿಡದಿ ಸಮೀಪದ ದಾಸಪ್ಪನದೊಡ್ಡಿಯಲ್ಲಿ ಶಿಲ್ಪಕಲಾ ಸಂಸ್ಥೆ ಸ್ಥಾಪಿಸಿದೆ.

ಕಲ್ಲು, ಕಂಚು, ಮರ ಹಾಗೂ ಫೈಬರ್ ಗ್ಲಾಸ್‌ನ ವಿಗ್ರಹಗಳನ್ನು ಇಲ್ಲಿ ಕೆತ್ತನೆ ಮಾಡುತ್ತೇವೆ. 10 ಮಂದಿ ನುರಿತ ಶಿಲ್ಪಿಗಳು ಕೆಲಸ ಮಾಡುತ್ತಿದ್ದಾರೆ. ಮೂರ್ತಿಗಳ ಕೆತ್ತನೆಗೆ ಶಿಲೆಗಳ ಹುಡುಕಾಟದಲ್ಲಿ ನಿರತನಾದ ಕಾರಣ್ಕೆ ಸಂಸ್ಥೆ ನಿರ್ವಹಣೆ ಮಾಡಲು ನನ್ನಿಂದ ಆಗಲಿಲ್ಲ. ಆ ಜವಾಬ್ದಾರಿಯನ್ನು ಪತ್ನಿ ಪ್ರತಿಭಾ ಹೊತ್ತುಕೊಂಡಿದ್ದಾಳೆ. ಮಗ ಗೌತಮ್ ಸಹ ನನ್ನದೇ ಹಾದಿ ಹಿಡಿದಿದ್ದಾನೆ.

ಜರ್ಮನಿ, ಇಂಗ್ಲೆಂಡ್, ಸ್ವಿಟ್ಜರ್‌ಲ್ಯಾಂಡ್ ಹಾಗೂ ಅಮೆರಿಕದಲ್ಲೂ ನಾನು ಕೆತ್ತನೆ ಮಾಡಿದ ಮೂರ್ತಿಗಳು ಪ್ರತಿಷ್ಠಾಪನೆಗೊಂಡಿವೆ. ಇಂಗ್ಲೆಂಡ್, ಅಮೆರಿಕ ಹಾಗೂ ರಷ್ಯಾದಲ್ಲಿ ಮೂರ್ತಿ ಕೆತ್ತನೆ ಕುರಿತು ಪ್ರಾತ್ಯಕ್ಷಿಕೆ ನೀಡಿದ್ದೇನೆ. ಸಾರ್ಥಕತೆಯ ಜೀವನಕ್ಕಾಗಿ ಈ ವೃತ್ತಿ ಆಯ್ದುಕೊಂಡೆ. ವೃತ್ತಿಯನ್ನು ಯಾವತ್ತೂ ವ್ಯಾಪಾರ ದೃಷ್ಟಿಯಿಂದ ನೋಡಿಯೇ ಇಲ್ಲ. ಬದುಕಿನ ನಿರ್ವಹಣೆಗಾಗಿ ಬೇಕಾದಷ್ಟು ಹಣ ಈ ಕಾಯಕದಿಂದ ಸಿಗುತ್ತಿದೆ. ನನ್ನ ಕೈಲಿ ಅರಳಿದ ಮೂರ್ತಿಗಳು ಭೂಮಿ ಮೇಲೆ ಶಾಶ್ವತವಾಗಿರಬೇಕು ಎಂಬ ಆಸೆ ನನಗಿದೆ.

ಅದೊಂದು ಪುಣ್ಯದ ಕೆಲಸ
ಆಂಜನೇಯನನ್ನು ಮಂತ್ರಾಲಯದಲ್ಲಿ ಮುಖ್ಯಪ್ರಾಣ ದೇವರು ಎನ್ನುತ್ತಾರೆ. ಪರಿಚಯಸ್ಥರಾದ ಬಿ.ಕೃಷ್ಣಪ್ಪ ಒಮ್ಮೆ ಮಂತ್ರಾಲಯಕ್ಕೆ ಹೋಗಿದ್ದರು. ಆಗ ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು, ಏಕಶಿಲೆ ಅಭಯ ಆಂಜನೇಯ ಮೂರ್ತಿ ಮಾಡಿಸಿಕೊಡುವಂತೆ ಕೃಷ್ಣಪ್ಪ ಅವರನ್ನು ಕೋರಿದ್ದರು. ಅದಕ್ಕೆ ಒಪ್ಪಿದ್ದ ಕೃಷ್ಣಪ್ಪ, ಕೊಟ್ಟಿದ್ದನ್ನು (ಹಣ) ಸ್ವೀಕರಿಸಿ, 33 ಅಡಿಯ ಮೂರ್ತಿ ಕೆತ್ತನೆ ಮಾಡಿಕೊಡುವಂತೆ ನನಗೆ ಹೇಳಿದ್ದರು.

ಮಂತ್ರಾಲಯದ ಪ್ರವೇಶದ್ವಾರದ ಬಳಿ ನಾನು ಕೆತ್ತನೆ ಮಾಡಿದ ಮೂರ್ತಿ ಪ್ರತಿಷ್ಠಾಪನೆಯಾಗುತ್ತದೆ ಎಂಬುದು ಹೆಮ್ಮೆಯ ವಿಚಾರ. ಮೂರ್ತಿ ಕೆತ್ತನೆಗೆ ಆಗುವ ವೆಚ್ಚವನ್ನು ಲೆಕ್ಕ ಹಾಕದೇ ಅವರ ಮಾತಿಗೆ ಒಪ್ಪಿಕೊಂಡೆ. ಅದೊಂದು ಪುಣ್ಯದ ಕೆಲಸ ಎಂದು ಭಾವಿಸಿ ಕೆಲಸ ಶುರುಮಾಡಿದೆ. ಆಂಜನೇಯ ಮೂರ್ತಿಯನ್ನು ಕೆಂಪು ಕಲ್ಲಿನಿಂದ ಕೆತ್ತನೆ ಮಾಡಿದರೆ ಶ್ರೇಷ್ಠ ಎಂದು ಕೆಲವರು ಹೇಳಿದ್ದರು. ಆಂಧ್ರದ ಮಡಕಶಿರದಿಂದ ಏಕಶಿಲೆ ತಂದು ಕಾರ್ಯ ಆರಂಭಿಸಿದೆವು. ರಾಘವೇಂದ್ರ ಸ್ವಾಮಿಯ ಕೃಪೆಯಿಂದ ಎಲ್ಲವೂ ಸುಸೂತ್ರವಾಗಿ ಸಾಗಿ, ಕೆತ್ತನೆ ಕಾರ್ಯ ಪೂರ್ಣಗೊಂಡಿದೆ.

ಪೀಠ ಸೇರಿ 130 ಟನ್ ತೂಕವುಳ್ಳ ಈ ಮೂರ್ತಿಯನ್ನು ಈಚೆಗಷ್ಟೇ ಬಿಡದಿ ಸಮೀಪದ ದಾಸಪ್ಪನದೊಡ್ಡಿ ಶಿಲ್ಪಕಲಾ ಕೇಂದ್ರದಿಂದ ಮಂತ್ರಾಲಯಕ್ಕೆ ಸಾಗಿಸಲಾಗಿದೆ. ಮಾರ್ಗದುದ್ದಕ್ಕೂ ಸಾವಿರಾರು ಮಂದಿ ಮೂರ್ತಿಯ ದರ್ಶನ ಪಡೆದಿದ್ದಾರೆ.

ಮೂರ್ತಿ ಅದ್ಭುತವಾಗಿ ಮೂಡಿ ಬಂದಿದೆ. ಸುಬುಧೇಂದ್ರ ತೀರ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆತ್ತನೆ ವೇಳೆ ಪೇಜಾವರ ಶ್ರೀಗಳು ಶಿಲ್ಪಕಲಾ ಕೇಂದ್ರಕ್ಕೆ ಭೇಟಿ ನೀಡಿ ಶುಭಕೋರಿದ್ದರು. ಮೂರ್ತಿಗೆ ಅಂತಿಮ ಸ್ಪರ್ಶ ನೀಡುವುದಷ್ಟೇ ಬಾಕಿ ಇದ್ದು, ಅದು ಪೂರ್ಣಗೊಂಡ ಬಳಿಕ ಪ್ರತಿಷ್ಠಾಪನೆ ಕಾರ್ಯ ಆರಂಭವಾಗುತ್ತದೆ.
***
ಸಂದ ಪ್ರಶಸ್ತಿಗಳು
* ರಾಜ್ಯೋತ್ಸವ ಪ್ರಶಸ್ತಿ
* ಕಮಲಾದೇವಿ ಚಟ್ಟೋಪಾಧ್ಯಾಯ ವಿಶ್ವಕರ್ಮ ಪ್ರಶಸ್ತಿ
* ಸಂದೇಶ್ ಪ್ರಶಸ್ತಿ
* ‘ಶ್ರೀರಾಮಪಟ್ಟಾಭಿಷೇಕ’ ವಿಗ್ರಹಕ್ಕೆ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಪ್ರಶಸ್ತಿ
* ‘ವೇಣುಗೋಪಾಲಕೃಷ್ಣ’ ವಿಗ್ರಹಕ್ಕೆ ಕೇಂದ್ರ ಜವಳಿ ಮತ್ತು ಕರಕುಶಲ ಮಂಡಳಿ ಪ್ರಶಸ್ತಿ

Courtesy : Prajavani.net

http://www.prajavani.net/news/article/2018/04/19/566934.html

Leave a Reply