“ಗೊಂಬೆಯಾಟದಲ್ಲಿ ಬುದ್ಧ! : ಜಾನಪದ ಕಲೆಗೆ ಪರಂಪರೆ–ಆಧುನಿಕತೆಯ ಬೆಸುಗೆ”,

ಅವರ ಒಂದು ಕೈಯಲ್ಲಿ ಬಾಪೂ, ಮತ್ತೊಂದು ಕೈಯಲ್ಲಿ ಬುದ್ಧನ ತೊಗಲುಗೊಂಬೆಗಳಿದ್ದವು. ತಮ್ಮ ಹೃದಯಕ್ಕೆ ಸದಾ ಹತ್ತಿರ ಎಂಬಂತೆ ಬೆಳಗಲ್‌ ವೀರಣ್ಣ ಅವುಗಳನ್ನು ಹಿಡಿದುಕೊಂಡು ತಮ್ಮಷ್ಟಕ್ಕೆ ತಾವೇ ಎಂಬಂತೆ ಮಾತನಾಡುತ್ತಿದ್ದರು. ಅದು ಕಲಾವಿದನೊಬ್ಬ ತನ್ನ ಕಲೆಯ ಜೊತೆಗೇ ಮೈಮರೆಯುವ, ಒಂದಾಗುವ ರೀತಿ. ಬಳ್ಳಾರಿಯ ರೇಡಿಯೊ ಪಾರ್ಕ್‌ ಪ್ರದೇಶದ ತಮ್ಮ ಮನೆಯ ಅಂಗಳದಲ್ಲಿ ಕುಳಿತಿದ್ದ ಅವರು, ತೊಗಲುಗೊಂಬೆಗಳು ಪೌರಾಣಿಕ ಕಥನ ರೂಪಗಳನ್ನು ದಾಟಿ ಚಾರಿತ್ರಿಕ ರೂಪಗಳಾಗಿ ಮೈದಾಳಿದ ಬಗೆಯನ್ನು ಸ್ವತಃ ರೋಮಾಂಚನ ಅನುಭವಿಸುತ್ತಾ ಹೇಳುತ್ತಿದ್ದರು. ಕಲೆಗೆ ಸಮಕಾಲೀನ ಗುಣ ಒದಗಿದರೆ ಮಾತ್ರ ಸಾರ್ಥಕ ಎಂಬ ನಿಲುವು ಅಲ್ಲಿತ್ತು. 9ನೇ ವರ್ಷಕ್ಕೆ ತಂದೆ– ತಾಯಿಯನ್ನು ಕಳೆದುಕೊಂಡ, ಶಾಲೆ ಕಲಿಯದ, ಅಲೆಮಾರಿ ಶಿಳ್ಳೆಕ್ಯಾತರ ಸಮುದಾಯದ ಹುಡುಗ 16ನೇ ವಯಸ್ಸಿಗೇ, ಶಿಡಿಗಿನ ಮೊಳೆ ವೈ. ಚಂದ್ರಯ್ಯನವರ ಮಾರ್ಗದರ್ಶನದಲ್ಲಿ ಬಗೆಬಗೆಯ ಪಾತ್ರಗಳನ್ನು ಮಾಡುತ್ತಿದ್ದುದು, ಚಿಕ್ಕಚಿಕ್ಕ ಪುಸ್ತಕಗಳನ್ನು ಓದುತ್ತಿದ್ದುದು ಇನ್ನೂ ಅವರ ನೆನಪಿನಲ್ಲಿದೆ. ನಟರಾಗಿ, ನಿರ್ದೇಶಕರಾಗಿ, ಸಂಗೀತ ಕಲಾವಿದರಾಗಿ, ತಂಡಗಳನ್ನು ಕಟ್ಟಿದ ಹಳ್ಳಿ ಮಾಸ್ತರರಾಗಿದ್ದು ವೀರಣ್ಣ ಅವರ ಒಂದು ಜೀವನಘಟ್ಟ. ತೊಗಲುಬೊಂಬೆಗಳ ಜೊತೆಗಿನದು ಉತ್ತರಾರ್ಧ. ಅದೇ ಹೆಚ್ಚು ಮಹತ್ವದ್ದು. ಏಕೆಂದರೆ, ಅದು ಕನ್ನಡದ ತೊಗಲುಗೊಂಬೆಯಾಟದ ಸಾಗರೋಲ್ಲಂಘನ ಘಟ್ಟ. ಬಳ್ಳಾರಿಯ ಗಡಿದಾಟಿ ಚೀನಾ, ಅಮೆರಿಕ, ಇಸ್ರೇಲ್, ಇಂಡೋನೇಷಿಯಾ, ಬರ್ಮಾ, ಫ್ರಾನ್ಸ್ ಸೇರಿದಂತೆ ಹಲವು ವಿದೇಶಗಳಲ್ಲೂ ಬೆಳಗಲ್‌ ವೀರಣ್ಣ ಎಂದರೆ ‘ತೊಗಲುಗೊಂಬೆ ವೀರಣ್ಣ’ ಎಂಬುದೇ ಹೆಸರು. ಕಲೆಯಿಂದ ಕಲಾವಿದನಿಗೆ ಕೀರ್ತಿಯೋ?  ಕಲಾವಿದನಿಂದ ಕಲೆಗೆ ಕೀರ್ತಿಯೋ? ವೀರಣ್ಣ ಮತ್ತು ತೊಗಲುಗೊಂಬೆಯ ವಿಷಯದಲ್ಲಿ ವಿಂಗಡಿಸಿ ಹೇಳುವುದು ಕಷ್ಟ. ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷರಾಗಿದ್ದವರು ವೀರಣ್ಣ. ಅದಕ್ಕಿಂತಲೂ ತೊಗಲುಗೊಂಬೆಗಳ ಜೊತೆಗಿನ ಅಧ್ಯಕ್ಷಗಿರಿಯೇ ಅವರಿಗೆ ಆಪ್ತ. 80ರ ದಶಕದಲ್ಲಿ ರಾಮಾಯಣದ ಅರಣ್ಯಕಾಂಡವನ್ನು ಆಧರಿಸಿ ‘ಪಂಚವಟಿ ಪ್ರಸಂಗ’ವನ್ನು ಮೊದಲ ಬಾರಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಿದಾಗಲೂ ವೀರಣ್ಣ ಅದನ್ನು ಆಧುನಿಕತೆಯ ತೆಕ್ಕೆಗೆ ಒಪ್ಪಿಸುವ ಕುರಿತು ಆಲೋಚಿಸಿರಲಿಲ್ಲ. ಕಾನ್ಪುರದಲ್ಲಿ ನಡೆದ ‘ಅಪ್ನಾ ಉತ್ಸವ’ದಲ್ಲಿ ಪ್ರದರ್ಶನ ನೀಡಿದ ಬಳಿಕವಷ್ಟೇ ಅವರಿಗೆ, ತೊಗಲುಗೊಂಬೆಗಳ ಮೂಲಕ ಎಂಥ ಕತೆಯನ್ನಾದರೂ ಕಾಣಿಸಬಹುದು ಎಂದು ಬಲವಾಗಿ ಅನಿಸಿತು. ಅದು ತೊಗಲುಗೊಂಬೆಯಲ್ಲಿ ಹೊಸ ಕಥಾವಸ್ತುಗಳ ಆರಂಭ ಕಾಲವಾಯಿತು. ಆಗ ಅವರಿಗೆ ಜೊತೆಯಾದವರು, ಅವರ ಅನುಗಾಲದ ಒಡನಾಡಿಯಾಗಿದ್ದ ಬಳ್ಳಾರಿಯ ಲೇಖಕ ವೈ. ರಾಘವೇಂದ್ರರಾವ್‌. ಸ್ವಾತಂತ್ರ್ಯ ಸಂಗ್ರಾಮದ ರೂಪಕವೊಂದನ್ನು ರಾವ್‌ ವೀರಣ್ಣನವರಿಗೆಂದೇ ರಚಿಸಿಕೊಟ್ಟರು. ಲಾವಣಿ ಮಟ್ಟಿನ ಹಾಡುಗಳು, ಸಂಭಾಷಣೆಗಳು, ಕತೆಗೆ ತಕ್ಕ ತೊಗಲುಗೊಂಬೆಗಳು ಸಿದ್ಧವಾದವು.ಬ್ರಿಟಿಷ್‌ ಅಧಿಕಾರಿಗಳು, ಮಂಗಲ್‌ಪಾಂಡೆ, ಝಾನ್ಸಿರಾಣಿ ಲಕ್ಷ್ಮಿಬಾಯಿ, ನಾನಾ ಸಾಹೇಬ್‌, ಪೇಶ್ವೆ ಮೊದಲಾದವರ ಚಿತ್ರಗಳನ್ನು ಸಂಡೂರಿನ ಕಲಾವಿದ ವಿ.ಟಿ. ಕಾಳೆಯವರು ಬಿಡಿಸಿಕೊಟ್ಟರು. ಹಿಮ್ಮೇಳವೂ ಬದಲಾಯಿತು. ಹೊಸ ಚಿಂತನೆಯ ಲೇಖಕ, ಚಿತ್ರ ಕಲಾವಿದ ಮತ್ತು ತೊಗಲುಬೊಂಬೆ ಕಲಾವಿದರ ಸಾಂಗತ್ಯದಲ್ಲಿ ತೊಗಲುಗೊಂಬೆಗಳು ಹೊಸ ಕಾಲದ ಕಥನ ಮಾಧ್ಯಮವಾಗಿ ಮಾರ್ಪಟ್ಟವು. ಇದು ಮೊದಲ ಯತ್ನ. ಈ ರೂಪಕ ದೂರದರ್ಶನದಲ್ಲೂ ಪ್ರಸಾರವಾಗಿದ್ದನ್ನು ಹೆಮ್ಮೆಯಿಂದ ಸ್ಮರಿಸುತ್ತಾರೆ ವೀರಣ್ಣ. ಇದೇ ರೀತಿ ಮಹಾತ್ಮ ಗಾಂಧೀಜಿಯವರ ಜೀವನ– ಸಾಧನೆಯನ್ನು ತೊಗಲುಗೊಂಬೆಯಾಟ ಮೂಲಕ ಪ್ರದರ್ಶಿಸಲು ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಪ್ರತಿಷ್ಠಾನ ಆಹ್ವಾನ ನೀಡಿದ ಬಳಿಕ ಆಟಕ್ಕೆ ಮತ್ತಷ್ಟು ಹುರುಪು ಬಂತು. 1992ರ ಅಕ್ಟೋಬರ್‌ 2ರಂದು ದೆಹಲಿಯಲ್ಲಿರುವ ಪ್ರತಿಷ್ಠಾನದಲ್ಲೇ ‘ಬಾಪೂ’ ಮೊದಲ ಪ್ರದರ್ಶನ ಕಂಡಿತ್ತು. ನಂತರ ರಾಷ್ಟ್ರಪತಿ ಭವನದಲ್ಲೂ ಪ್ರದರ್ಶನಗೊಂಡಿತು. ಬಳ್ಳಾರಿಯ ಕಲೆಯೊಂದು ಹೀಗೆ ರಾಷ್ಟ್ರಪತಿ ಭವನವನ್ನೂ ತಲುಪಿತ್ತು. ಇದುವರೆಗೆ ಅದು ಹತ್ತು ಸಾವಿರ ಪ್ರದರ್ಶನಗಳನ್ನು ಕಂಡಿದೆ. ಗದಗಿನ ತೋಂಟದಾರ್ಯ ಸಿದ್ದಲಿಂಗ ಸ್ವಾಮೀಜಿಯವರ ಅಪೇಕ್ಷೆ ಮೇರೆಗೆ ಪ್ರೊ.ಎಂ.ಎಂ. ಕಲಬುರ್ಗಿಯವರ ನೇತೃತ್ವ ಮತ್ತು ನಿರ್ದೇಶನದಲ್ಲಿ ಪ್ರವಾದಿ ಬಸವೇಶ್ವರ ರೂಪಕ ಸಿದ್ಧವಾಗಿದ್ದು ಮೂರನೇ ಮಹತ್ವದ ಮೈಲಿಗಲ್ಲು. ಅದು 101 ಪ್ರದರ್ಶನ ಕಂಡಿತ್ತು. ಕುವೆಂಪು ಅವರ ಶ್ರೀರಾಮಾಯಣ ದರ್ಶನಂನ ಸುಂದರ ಕಾಂಡದ ತೊಗಲುಗೊಂಬೆ ರೂಪಕವೂ 2011ರಲ್ಲಿ ಬಳ್ಳಾರಿಯಲ್ಲೇ ಪ್ರದರ್ಶನಗೊಂಡಿದ್ದು ಹೊರಗಿನ ಬಹಳ ಮಂದಿಗೆ ತಿಳಿದಿಲ್ಲ. ಈಗ ಬುದ್ಧ ಪ್ರಭುಶಂಕರ್‌ ಅವರ ನಾಲ್ಕು ನಾಟಕಗಳ ಸಂಪುಟ ‘ಬುದ್ಧ ನಾಟಕ ಚಕ್ರ’ವನ್ನು ಆಧರಿಸಿದ ತೊಗಲುಗೊಂಬೆ ರೂಪಕ ‘ಬೋಧಿ ಸತ್ಯ’ದ ಸಿದ್ಧತೆ ಎರಡು ದಶಕಕ್ಕೂ ಮೀರಿದ ಅವಧಿಯಿಂದ ನಡೆದಿದ್ದರೂ ಪೂರ್ಣಗೊಂಡಿರಲಿಲ್ಲ. ಈಗ ಆ ಪ್ರಯತ್ನ ಮತ್ತೆ ನಡೆದಿದೆ. ವೀರಣ್ಣನವರ ಮೂರನೇ ಪುತ್ರ ಪ್ರಕಾಶ್‌ ಪರಿಕಲ್ಪನೆ, ಸಂಗೀತದ ಜೊತೆಗೆ ಹಾಡುಗಳನ್ನು ರಚಿಸಿದ್ದಾರೆ. ವಿ.ಟಿ. ಕಾಳೆಯವರ ಮೂಲ ರೇಖಾ ಚಿತ್ರಗಳನ್ನು ಎರಡನೇ ಪುತ್ರ ಮಲ್ಲಿಕಾರ್ಜುನ ತೊಗಲುಗೊಂಬೆಗಳನ್ನಾಗಿ ಪರಿವರ್ತಿಸಿದ್ದಾರೆ. ನಿರ್ದೇಶನ ವೀರಣ್ಣ ಅವರದ್ದೇ. ‘ನನಗೆ ಈಗ 88 ವರ್ಷ ವಯಸ್ಸು. ಬಿ.ಪಿ, ಷುಗರ್‌ ಏನೂ ಇಲ್ಲ. ಮೊಣಕಾಲು ನೋವಿದೆ. ಅದೇನೂ ಲೆಕ್ಕಕ್ಕಿಲ್ಲ. ಇನ್ನೆಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ. ಅಷ್ಟರೊಳಗೆ ಶಂಕರಾಚಾರ್ಯ ಮತ್ತು ವಿವೇಕಾನಂದರ ಕುರಿತು ತೊಗಲುಗೊಂಬೆಯಾಟವನ್ನೂ ಮಾಡಿಬಿಡಬೇಕು’ ಎಂದು ವೀರಣ್ಣ ನಕ್ಕರು. ‘ನಿಮಗೋಸ್ಕರ ನಾನು ಸದಾ ಸಿದ್ಧ’ ಎಂಬಂತೆ, ಅವರ ಪಕ್ಕದಲ್ಲಿ ಮಗ ಪ್ರಕಾಶ್‌ ಇದ್ದರು. ಕೊಂಚ ದೂರದಲ್ಲಿ ಮಂಚದ ಮೇಲೆ ಕುಳಿತಿದ್ದ ಪತ್ನಿ ಮಹಾಲಿಂಗಮ್ಮ ಅವರ ಮುಖದಲ್ಲಿ ಅನಾರೋಗ್ಯದ ನಡುವೆಯೂ ಮೆಚ್ಚುಗೆ, ಹೆಮ್ಮೆ, ಶುಭಾಶಯದ ಮಿಂಚೊಂದು ಹಾದುಹೋಯಿತು.

coutsey:prajavani.net

“author”: “ಕೆ.ನರಸಿಂಹಮೂರ್ತಿ”,

https://www.prajavani.net/artculture/art/togalugombe-budda-649326.html

Leave a Reply