“ದೃಶ್ಯ ಕಲೆಯಲ್ಲಿ ಮೂಡಿತು ಶರಣರ ವಚನ”,

ಉಳ್ಳವರು ಶಿವಾಲಯ ಮಾಡುವರು, ನಾನೇನ ಮಾಡುವೆ ಬಡವನಯ್ಯಾ; ಎನ್ನ ಕಾಲೇ ಕಂಬ. ದೇಹವೇ ದೇಗುಲ, ಶಿರ ಹೊನ್ನಕಲಶವಯ್ಯಾ; ಕೂಡಲಸಂಗಮದೇವಾ, ಕೇಳಯ್ಯಾ ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ. ವಚನವು ಅಕ್ಷರ ಬಲ್ಲವರ ಮನದಾಳವನ್ನು ಬಡಿದೆಬ್ಬಿಸಿದರೆ ವಚನದ್ಯಶ್ಯ ಕಲೆ ಬಣ್ಣ, ಸಂಯೋಜನೆ, ಮೈವಳಿಕೆಗಳಿಂದ ನೋಡುಗರ ಅಂತರಾಳವನ್ನು ತಟ್ಟಿ ಇದು ನಾನಯ್ಯ ಇದು ನಾನಯ್ಯ ನನ್ನನ್ನು ಅರಿತರೆ ವಳಿತಯ್ಯ ಎಂದಿತ್ತು. ಬೆಂಗಳೂರಿನ ಕರ್ನಾಟಕ ಲಲಿತ ಕಲಾ ಅಕಾಡೆಮಿ ಮತ್ತು ಸಾಣೇಹಳ್ಳಿ ಶಿವಕುಮಾರ ಕಲಾಸಂಘದ ಸಹಯೋಗದೊಂದಿಗೆ ರಾಜ್ಯ ಮಟ್ಟದ ವಚನಚಿತ್ರ ಶಿಬಿರವು ಸಾಣೇಹಳ್ಳಿ ಮಠದ ಎಸ್. ಎಸ್. ರಂಗ ಮಂದಿರದಲ್ಲಿ ನಡೆಯಿತು. ಸಾಣೀಹಳ್ಳಿಯ ಸ್ವಾಮೀಜಿ ನೀಡಿದ ವಚನಗಳನ್ನು ಅರ್ಥೈಸಿಕೊಂಡು ಕಲಾವಿದರು ಶಿವಶರಣರ ವಚನಗಳನ್ನು ದೃಶ್ಯಕಲೆಯಲ್ಲಿ ಧ್ಯಾನಿಸಿದರು. ಹುಬ್ಬಳ್ಳಿಯ ಪ್ರತಾಪ ಬಹುರೂಪಿ, ಧಾರವಾಡದ ಡಿ.ಕೆ. ಕಾಮ್ಕರ್, ಎನ್. ಆರ್. ನಾಯ್ಕರ್, ಸಂಜೀವ ಕಾಳೆ, ಸೇರಿದಂತೆ ರಾಜ್ಯದ 20 ಕಲಾವಿದರು ಶಿಬಿರದಲ್ಲಿದ್ದರು. ಕಲಾವಿದ ಪ್ರತಾಪ ಬಹುರೂಪಿ ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು ದಿಟ ನಾಗರ ಕಂಡೊಡೆ ಕೊಲ್ಲೆಂಬರಯ್ಯ ಬಸವಣ್ಣನವರ ವಚನವನ್ನು ಕೆಲವೆ ರೇಖೆಗಳಿಂದ ನಾಡ ಬಣ್ಣ ಸಂಯೋಜನೆ ಮೂಲಕ ಮನುಜನಲ್ಲಿರುವ ನಂಬಿಕೆಯನ್ನು ಭಾವ ಹರಿದಾಡಿಸಿ ಕುಂಚದಲ್ಲಿ ಬಿಂಬಿಸಿದ್ದಾರೆ. ಮೇಲ್ಗಡೆ ಹುತ್ತಕ್ಕೆ ಹಾಲು ಎರೆಯುತ್ತಿರುವುದು ಕೆಳಗೆ ಹಾವನ್ನು ಹೊಡೆಯುತ್ತಿರುವುದನ್ನು ನೋಡುವ ಪರಿಯನ್ನು ಚಿತ್ರದಲ್ಲಿ ಕಾಣಬಹುದು. ಕಂದು ಬಣ್ಣದಲ್ಲಿ ರಚಿಸಿರುವ ಕೃತಿಯಿದಾಗಿದೆ. ಹಾವನ್ನು ತೋರಿಸಿದ ರೀತಿ ಭಿನ್ನವಾಗಿದೆ. ಕೋಲು ಹಿಡಿದು ಗಡಬಡಿಸುವ ಜನರ ಭಯ ಅವರ ಮುಖದಲ್ಲಿ ಕಾಣುತ್ತದೆ. ಈ ನಂಬಿಕೆ ಇಂದಿಗೂ ಜೀವಂತವಾಗಿದೆ. ನಿಂದಿಸುವನೊಬ್ಬ ಸ್ತುತಿಸುವನೊಬ್ಬ. ಇವರಿಬ್ಬರು ಪರಮ ಬಂಧುಗಳು. ಆ ಯೋಗಿಯು ಪುಣ್ಯವನೊಬ್ಬ ಕೊಂಬ, ಪಾಪವನೊಬ್ಬ ಕೊಂಬ. ಇದು ಕಾರಣ, ಗುರುಪ್ರಿಯ ಚೆನ್ನಬಂಕೇಶ್ವರನಲ್ಲಿ ಸತ್ಯ ಶರಣರು ನಿತ್ಯ ಮುಕ್ತರು. ಸುಂಕದ ಬಂಕಣ್ಣರ ವಚನಕ್ಕೆ ಕಲಾವಿದ ಡಿ.ಕೆ.ಕಾಮ್ಕರ್ ಕೃತಿಯಲ್ಲಿ ಇವರಿಬ್ಬರ ಹೆಗಲ ಮೇಲೆ ಕೈ ಹಾಕಿ ಲೋಕದ ಒಳಿತನ್ನು ತಿಳಿಸುವಂತೆ ಕೃತಿ ಜೀವಂತಿಕೆ ಪಡೆದುಕೊಂಡಿದೆ. ನಿಂದಿಸುವವನ ಹಿನ್ನೆಲೆಯಲ್ಲಿ ಪಾಪಾಸುಕಳ್ಳಿ ಬೆಳೆಸಿದರೆ, ಗುಲಾಬಿ ಹೂವನ್ನು ಸ್ತುತಿಸುವನ ಹಿನ್ನೆಲೆಯಲ್ಲಿ ಬೆಳೆಸಿದ್ದಾರೆ. ನಿಂದಿಸುವ, ಸ್ತುತಿಸುವ ಇಬ್ಬರ ನಡುವೆ ಶರಣರನ್ನು ರಚಿಸಿದ ರೀತಿ ಕಾವಿ ವರ್ಣ ಸಂಯೋಜನೆಯಲ್ಲಿ ಕಲಾಕೃತಿ ನೀತಿ ಬೋಧೆಯನ್ನು ತಿಳಿಸುತ್ತಿದೆ. ಕಲಾವಿದ ಎನ್.ಆರ್.ನಾಯ್ಕರ್ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯ ಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ, ಇದೇ ಅಂತರಂಗ ಶುದ್ಧಿ; ಇದೇ ಬಹಿರಂಗ ಶುದ್ಧಿ. ಇದೇ ನಮ್ಮ ಕೂಡಲಸಂಗಮ ದೇವರನೊಲಿಸುವ ಪರಿ ವಚನದ ಸಾರವನ್ನು ಅಂತರಂಗ ಮತ್ತು ಬಹಿರಂಗವನ್ನು ಶುದ್ಧೀಕರಿಸಬೇಕು. ನಮ್ಮೊಳಗಿನ ನಾನು ಅಳಿಯಬೇಕೆಂಬ ಅರಿವನ್ನು ಕಲಾಕೃತಿಯಲ್ಲಿ ಅವನನ್ನು ಪ್ರತಿಷ್ಠಾಪಿಸಿ ಲಿಂಗವನ್ನು ಎದುರಿಗಿರಿಸಿದ್ದಾರೆ. ಶ್ವಾನದ ಗುಣ ನೋಡದು ನೋಡ ಮದಗಜವು, ಕಾನನದ ಗುಣ ನೋಡದು, ನೋಡ ಮಹದಗ್ನಿಯು, ಕಾವಳದ ಗುಣ ನೋಡದು, ನೋಡ ಮಹತ್ಪ್ರಕಾಶವು, ಜನನದ ಗುಣ ನೋಡದು…ಸಿದ್ಧರಾಮೇಶ್ವರ ವಚನವನ್ನು ಕಲಾವಿದ ಸಂಜು ಕಾಳೆ ಮನ ಮುಟ್ಟುವಂತೆ ಚಿತ್ರಿಸಿದ್ದಾರೆ. ಶ್ವಾನ ಆನೆ ಎದುರು ಬದುರು ಚಿತ್ರಿಸಿ ನಡುವೆ ಶಿವಲಿಂಗ ಮೇಲೆ ಮಗು ಪ್ರಭಾವಳಿಯನ್ನು ತೋರಿಸಿದ್ದಾರೆ. ಅಗ್ನಿ, ಹಣತೆಯನ್ನು ಬಿಂಬಿಸಿ ವಚನ ದೀವಿಗೆಯನ್ನು ಬೆಳಗಿದ್ದಾರೆ. ಬೆಂಗಳೂರಿನ ಡಿ.ಕೆ. ರಂಗನಾಥ ರಚಿಸಿದ ಕಲಾಕೃತಿ ವಚನದ ಆಳ ಅರಿವಿನ ಪರಿಮಳ ಸೂಸಿತು. ಶರಣರು ಲಿಂಗ ಹಿಡಿದುಕೊಂಡು ಧ್ಯಾನಿಸುತ್ತಿದ್ದಾರೆ ಹಿನ್ನೆಲೆಯಲ್ಲಿ ಬಿಲ್ವಪತ್ರಿ ಶಿವನಿಗೆ ಅರ್ಪಿತವಾಗುವಂತೆ ಸೂಚಿಸುವ ಬಗೆಯೇ ಭಿನ್ನವಾಗಿದೆ.ಇಂಡಿಯ ಜಿ.ಎನ್. ಮಾರ್ಕಪ್ಪನ ಹಳ್ಳಿ, ಡಾ.ಸಂತೋಷ ಕುಮಾರ ನಾಗರಾಳ, ಕಲಬುರ್ಗಿಯ ಡಾ.ಸುಚಿತ್ರಾ ಲಿಂಗದಹಳ್ಳಿ, ತುಮಕೂರಿನ ರಂಗಸ್ವಾಮಿ, ರಾಯಚೂರಿನ ಹೇಮಣ್ಣ ಸಿ.ಎಸ್., ಚಿತ್ರದುರ್ಗದ ಕುಮಾರ ಸಿ, ಚಳ್ಳಕೇರಿಯ ಮಲ್ಲಿಕಾರ್ಜುನ ಎಚ್, ರಾಜೇಶ್ವರಿ ಎಂ. ಮೊಪಗರ್, ಮಂಗಳೂರಿನ ಶ್ರೀ ಶೈಲೇಶ್ ಕೋಟ್ಯಾನ್, ಉಡುಪಿಯ ಸಂತೋಷ, ತುಮಕೂರಿನ ಗಿರೀಶ್ ಹರಸೂರು, ಬೀದರಿನ ಲಕ್ಷ್ಮೀ ಬಾಯಿ ಕೆ. ಚಳಕಾಪುರಿ, ಬಳ್ಳಾರಿಯ ಗಣೇಶ ಶರಣರ ವಚನಗಳನ್ನು ದೃಶ್ಯಕಲೆಯಲ್ಲಿ ಅರ್ಥವತ್ತಾಗಿ ಕಟ್ಟಿಕೊಟ್ಟರು

courtsey:prajavani.net

https://www.prajavani.net/artculture/art/art-world-649593.html

Leave a Reply