“ವಾಸ್ತುಶಿಲ್ಪಗಳ ಛಾಯಾಚಿತ್ರದ ಹಾದಿ”

ಪ್ರಾಣಿ, ಪಕ್ಷಿ, ಜಲಪಾತಗಳನ್ನು ಸೇರಿದಂತೆ ಪ್ರಾಕೃತಿಕ ಅದ್ಭುತಗಳನ್ನು ಸೆರೆಹಿಡಿಯುವ ಹವ್ಯಾಸಿ ಛಾಯಾಚಿತ್ರಗಾರರು ನಮ್ಮ ನಡುವೆ ಸಾಕಷ್ಟು ಮಂದಿ ಇದ್ದಾರೆ. ಆದರೆ ಐತಿಹಾಸಿಕ ಕಟ್ಟಡಗಳು, ಅಪರೂಪದ ವಾಸ್ತುಶಿಲ್ಪಗಳು, ನಗರಗಳಲ್ಲಿ ತಲೆಎತ್ತುವ ಸೂಕ್ಷ್ಮ ವಿನ್ಯಾಸದ ಕಟ್ಟಡಗಳು ಹಾಗೂ ಅವುಗಳ ವಿನ್ಯಾಸಗಳನ್ನು ಸೆರೆಹಿಡಿಯುವ ಹವ್ಯಾಸ ಇರುವುದು ತೀರಾ ಅಪರೂಪ.ಇಂತಹ ಅಪರೂಪದ ಹವ್ಯಾಸದಿಂದಾಗಿಯೇ ನಗರದ ಊರ್ವಿ ಮೆಹ್ತಾ ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಮೂಲತಃ ಮಾರ್ಕೆಟಿಂಗ್ ಬ್ಯುಸಿನೆಸ್‌ನಲ್ಲಿ 17 ವರ್ಷದಿಂದ ಸಾಕಷ್ಟು ಕೆಲಸ ಮಾಡಿರುವ ಅವರು ಹವ್ಯಾಸಿಯಾಗಿ ವಾಸ್ತುಶಿಲ್ಪಗಳ ಛಾಯಾಚಿತ್ರ ತೆಗೆಯುತ್ತಾರೆ.‘ವಾಸ್ತುಶಿಲ್ಪ ಹಾಗೂ ಕಟ್ಟಡದ ವಿನ್ಯಾಸಗಳನ್ನು ಕ್ಯಾಮೆರಾ ಕಣ್ಣಿನಿಂದ ನೋಡುವುದು ಅಷ್ಟು ಸುಲಭ ಅಲ್ಲ. ಅದರಲ್ಲಿರುವ ಸೂಕ್ಷ್ಮ ವಿನ್ಯಾಸಗಳು, ಸಣ್ಣ ಸಣ್ಣ ವಿವರಗಳು ಕೂಡ ಕಾಣುವಂತೆ ಮಾಡುವುದು ಒಂದು ಸವಾಲೇ ಸರಿ’ ಎಂದು ಅವರು ಹೇಳುತ್ತಾರೆ. ಪ್ರಾಕೃತಿಕ ಫೋಟೊ ತೆಗೆಯುವಾಗ ಹೇಗೆ ತಾಳ್ಮೆಯಿಂದ ಕಾಯಬೇಕಾಗುತ್ತದೆಯೋ ಹಾಗೆಯೇ ಈ ಛಾಯಾಗ್ರಹಣದಲ್ಲೂ ತಾಳ್ಮೆ ಹಾಗೂ ಶಿಸ್ತಿನ ಕೆಲಸ ಮಾಡಬೇಕಾದ ಅಗತ್ಯವಿದೆ ಎನ್ನುವುದು ಅವರ ಅನುಭವದ ಮಾತು. ‘ಸಂಪೂರ್ಣ ಕಟ್ಟಡವೊಂದರ ವಿನ್ಯಾಸವನ್ನೂ ಒಂದೇ ಫ್ರೇಮ್‌ನಲ್ಲಿ ತರುವುದು ತುಂಬಾ ಇಷ್ಟದ ಕೆಲಸ. ಈ ಕೆಲಸವನ್ನು ಹತ್ತಾರು ವರ್ಷದಿಂದ ಮಾಡಿಕೊಂಡು ಬಂದಿದ್ದೇನೆ. ಆರಂಭದಲ್ಲಿ ನಾನು ಇದನ್ನು ಹವ್ಯಾಸ ಎಂದೇ ಅಂದುಕೊಂಡಿದ್ದೆ. ಈಗಲೂ ಹೌದು. ಆದರೆ ನಮ್ಮ ನೆರೆಹೊರೆಯವರು ತಮ್ಮ ವಿನ್ಯಾಸಗಳನ್ನು ಫೋಟೊ ತೆಗೆದುಕೊಡಿ ಎಂದು ಕೇಳಿದಾಗ ವೃತ್ತಿಯಾಗಿಯೂ ಸ್ವೀಕರಿಸಿದೆ. ಆದರೆ ತೀರಾ ಅಪರೂಪಕ್ಕೊಮ್ಮೆ ಮಾತ್ರ ಎಂಜಿನಿಯರ್‌ಗಳ ಫೋಟೊಗಳನ್ನು ತೆಗೆಯುತ್ತೇನೆ. ಇಲ್ಲದಿದ್ದರೆ ನನಗೆ ತೆಗೆಯಬೇಕು ಅನ್ನಿಸಿದ ಅಪರೂಪದ ಚಿತ್ರಗಳ ಕಡೆ ಮಾತ್ರ ನನ್ನ ಗಮನ ಇರುತ್ತದೆ’ ಎಂದು ಊರ್ವಿ ತಮ್ಮ ಹವ್ಯಾಸದ ಹಾದಿಯನ್ನು ತೆರೆದಿಟ್ಟರು. ಅಮೆರಿಕ, ಬ್ರಿಟನ್‌ ಸೇರಿದಂತೆ ವಿದೇಶಗಳಲ್ಲಿರುವ ಅಪರೂಪದ ವಾಸ್ತುಶಿಲ್ಪಗಳನ್ನೂ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಭಾರತದ ಕೆಲವು ಮುಖ್ಯ ನಗರಗಳು, ಐತಿಹಾಸಿಕ ಕಟ್ಟಡಗಳು ಇವರ ಚಿತ್ರಗಳಲ್ಲಿ ಸೆರೆಯಾಗಿವೆ. ‘ನಾನು ಬ್ಯುಸಿನೆಸ್‌ ಕೆಲಸಗಳ ಮೇಲೆ ಹೊರಗಡೆ ಹೋದರೂ ಕ್ಯಾಮೆರಾ ನೇತುಹಾಕಿಕೊಂಡೇ ಹೋಗುತ್ತೇನೆ. ಆ ಭಾರವನ್ನು ಹೊರುವುದು ಕೆಲವೊಮ್ಮೆ ಸವಾಲು ಎನಿಸಿದ್ದಿದೆ. ಆದರೆ ಫೋಟೊ ತೆಗೆಯುವ ಖುಷಿಗೆ ಇದೆಲ್ಲಾ ಒಂದು ಹೊರೆ ಎಂದು ಅನಿಸುವುದೇ ಇಲ್ಲ’ ಎಂದು ತಮ್ಮ ಬದ್ಧತೆ ಬಗ್ಗೆ ಹೇಳಿದರು.‘ಆರಂಭದಲ್ಲಿ ನಾನು ಫ್ಯಾಷನ್‌ ಫೋಟೊಗ್ರಫಿಯನ್ನು ಪ್ರಯತ್ನಿಸಿದ್ದೆ. ಈ ಜಗತ್ತಿನ ಎಲ್ಲಾ ಆಯಾಮಗಳನ್ನು ನೋಡಿದ್ದೇನೆ. ಆದರೆ ಅಲ್ಲಿ ಹೆಚ್ಚು ದಿನ ಇರಲು ಮನಸ್ಸು ಆಗಲಿಲ್ಲ. ಫ್ಯಾಷನ್ ಫೋಟೊಗ್ರಫಿಯಲ್ಲಿ ನನಗೆ ಪ್ರತಿ ದಿನ ಹೊಸ ವಿಷಯಗಳನ್ನು ತೆಗೆಯಲು ಏನೂ ಇರಲಿಲ್ಲ ಎಂದು ಅನಿಸಲು ಆರಂಭವಾಯಿತು. ಇಲ್ಲಿಂದ ಹೊರಗೆ ಹೋಗಬೇಕು. ಪ್ರಪಂಚ ಸುತ್ತಬೇಕು. ವಿಭಿನ್ನ ಚಿತ್ರಗಳನ್ನು ತೆಗೆಯಬೇಕು ಎನ್ನುವ ಹಂಬಲದಿಂದಲೇ ಆರಂಭವಾಗಿದ್ದು ವಾಸ್ತುಶಿಲ್ಪದ ಫೋಟೊಗ್ರಫಿ’ ಎನ್ನುತ್ತಾರೆ ಅವರು.

courtsey:prajavani.net

https://www.prajavani.net/artculture/art/photography-architects-649159.html

Leave a Reply