“ಹೊಸತನದಲ್ಲಿ ಕಾವಿಕಲೆ”,

ಅದು ಕುಂದಾಪುರ ಪೇಟೆಯ ಸಾರಸ್ವತ ಬ್ರಾಹ್ಮಣರಿಗೆ ಸೇರಿದ ನಾಲ್ಕು ನೂರು ವರ್ಷಗಳಷ್ಟು ಪುರಾತನ ವೆಂಕಟರಮಣ ದೇವಸ್ಥಾನ. ದೇವಸ್ಥಾನ ಪ್ರವೇಶಿಸು ತ್ತಿದ್ದಂತೆಯೇ ಸುತ್ತುಪೌಳಿಯ ಹೊರಗಡೆ ಹಾಗೂ ಆವರಣ ಗೋಡೆಯ ಒಳಭಾಗದಲ್ಲಿ ಕೆಂಪು ಬಣ್ಣದ ಕಾವಿಕಲೆಯ ಹಲವಾರು ಚಿತ್ರಗಳು ವಿಶೇಷವಾಗಿ ಆಕರ್ಷಿಸುತ್ತವೆ. ನಾನು ಈವರೆಗೂ ಇತರ ದೇವಸ್ಥಾನಗಳಲ್ಲಿ ಕಂಡ ಶಿಲ್ಪಾಕೃತಿ, ಭಿತ್ತಿಚಿತ್ರಗಳು, ದೇವರ ಪೇಂಟಿಂಗ್‌ಗಳಿಗಿಂತ ವಿಭಿನ್ನವಾದ ಏಕವರ್ಣೀಯ ಚಪ್ಪಟೆ ಚಿತ್ರಗಳು. ಇವುಗಳಿಗೆ ಕುಂಚದ ಕೈಚಳಕವಿದ್ದಂತಿಲ್ಲ. ದೂರಕ್ಕೆ ನಯವಾಗಿ ಕಂಡರೂ, ಚಿತ್ರಾಕೃತಿಯಲ್ಲಿ ಕೊರೆದು ಮಾಡಿರುವ ಉಬ್ಬುತಗ್ಗುಗಳಿವೆ. ಬಣ್ಣ ಒಂದೇ ಆದರೂ, ಕಣ್ಣು ಮಿಟುಕಿಸಲಾಗದಂತಹ ಸರಳ, ಸ್ನಿಗ್ಧ ಸೌಂದರ್ಯ ಅವುಗಳಲ್ಲಿತ್ತು. 16ನೇ ಶತಮಾನದಲ್ಲಿ ಮಹಾಕಾವ್ಯ, ಪುರಾಣದ ಕಥೆಗಳನ್ನೇ ತನ್ನ ವಸ್ತುವನ್ನಾಗಿಸಿಕೊಂಡು ಮನೆ, ದೇವಸ್ಥಾನಗಳ ಗೋಡೆಯಲ್ಲಿ ರಾರಾಜಿಸುತ್ತಿದ್ದ ಕಲೆ ಕಾವಿಕಲೆ. ಅದರಲ್ಲೂ ವಿಶೇಷವಾಗಿ ಸಾರಸ್ವತ ಬ್ರಾಹ್ಮಣರ ದೇವಸ್ಥಾನ ಹಾಗೂ ಮನೆಯ ಗೋಡೆಗಳಲ್ಲಿ ಕಾವಿಕಲೆಯ ಪ್ರಭಾವ ಹೆಚ್ಚಿತ್ತು. ರಾಮಾಯಣ ಮಹಾಭಾರತದ ಕಥೆಗಳು, ಪುರಾಣದ ಪಾತ್ರಗಳು ಕಾವಿಕಲೆಯ ರೂಪದಲ್ಲಿ ಗೋಡೆಯ ಮೇಲೆ ರಾರಾಜಿಸುತ್ತಿದ್ದವು. ಕಾವಿಕಲೆಯ ನಿಜವಾದ ಹುಟ್ಟೂರು ಗೋವಾ. ಪೋರ್ಚುಗೀಸರ ಆಕ್ರಮಣವಾದಾಗ ಗೋವಾ ದಿಂದ ಹೊರಟ ಆ ಸಮುದಾಯದವರು ಎಲ್ಲೆಲ್ಲಿ ನೆಲೆಸಿದರೋ ಆ ಭಾಗಗಳಲ್ಲಿ ಈ ಕಲೆಯೂ ನೆಲೆಯೂರಿತು. ಹೆಚ್ಚಾಗಿ ಕರ್ನಾಟಕ, ಕೇರಳ, ಗೋವಾ, ಮಹಾರಾಷ್ಟ್ರ, ಗುಜರಾತ್‌ನ ಕರಾವಳಿ ಭಾಗದಲ್ಲಿ ಕಾವಿಕಲೆಯ ಛಾಪಿದೆ ಎಂಬ ಮಾಹಿತಿ ಕಾವಿಕಲೆಯ ಸಂಶೋಧಕ ಕೃಷ್ಣಾನಂದ ಕಾಮತ್‌ ಅವರು ಕನ್ನಡ ಹಾಗೂ ಕೊಂಕಣಿಯಲ್ಲಿ ಬರೆದಿರುವ ಪುಸ್ತಕಗಳಲ್ಲಿ ದೊರೆಯುತ್ತದೆ. ಒಂದು ಕಾಲದಲ್ಲಿ ಕರಾವಳಿಯ ಹಳ್ಳಿ ಹಳ್ಳಿಗಳಲ್ಲಿ, ಮನೆ ಮನೆಗಳಲ್ಲಿ, ಗುಡಿಗೋಪುರಗಳಲ್ಲಿ ಕಡ್ಡಾಯವೆಂಬಂತೆ ಇರುತ್ತಿದ್ದ ಈ ಕಲೆ ಇಂದು ವಿರಳ. ಇದ್ದವುಗಳೂ ನವೀಕರಣದ ಹೆಸರಿನಲ್ಲಿ ಕಣ್ಮರೆಯಾಗುತ್ತಿವೆ. ಇಂದಿನ ಆಧುನಿಕ ಕಟ್ಟಡಗಳಲ್ಲಿ ಇಂತಹ ಚಿತ್ರಗಳನ್ನು ಬಿಡಿಸಲು ಅವಕಾಶವೂ ಇಲ್ಲ. ವೇಗವಾಗಿ ಹೊಸತನದತ್ತ ದಾಪುಗಾಲು ಹಾಕುತ್ತಿರುವ ಕಾಲದ ಕೈಯ್ಯಲ್ಲಿ ಸಿಕ್ಕಿ ಸಾಂಪ್ರದಾಯಿಕ ಶೈಲಿಯ ಕಾವಿಕಲೆ ನಾಶವಾಗುತ್ತಿವೆ. ಕುಂದಾಪುರದ ಪೇಟೆ ವೆಂಕಟರಮಣ ದೇವಸ್ಥಾನದ ಕಾವಿಕಲೆಯ ಮೇಲಿರುವ ಇಸವಿ 1926, ಕೆ. ಮಂಜುನಾಥ್‌ ಪೈ ಎಂಬ ಕಲಾವಿದರ ಹೆಸರು, ಚಿತ್ರಗಳು 95 ವರ್ಷಗಳಷ್ಟು ಹಳೆಯವು ಎಂಬುದನ್ನು ಹೇಳುತ್ತವೆ. ಆವರಣ ಗೋಡೆಯ ಹೊರಭಾಗದಲ್ಲಿರುವ ಚಿತ್ರಗಳನ್ನು ಇಂದಿನ ಪೇಂಟ್‌ಗಳಿಂದ ನವೀಕರಣಗೊಳಿಸಲಾಗಿದೆ. ಒಳಗಿನ ಚಿತ್ರಗಳನ್ನು ನವೀಕರಣದ ಹೆಸರಿನಲ್ಲಿ ಮುಟ್ಟದಿದ್ದರೂ ಅವುಗಳ ಮೂಲರೂಪ ಮಾಸಿದೆ. ‘ಇನ್ನು ಅಂತಹ ಸಾಂಪ್ರದಾಯಿಕ ಶೈಲಿಯ ಕಾವಿಕಲೆಯನ್ನು ಬಿಡಿಸುವವರು ಸಿಗುವುದು ಕನಸಿನ ಮಾತು. ಇದ್ದ ಚಿತ್ರಗಳನ್ನು ಇದ್ದಂತೆಯೇ ಉಳಿಸಿಕೊಳ್ಳುವುದು ಸವಾಲಿನ ಮಾತು’ ಎನ್ನುತ್ತಾರೆ ಇಲ್ಲಿನ ಹಿರಿಯರೊಬ್ಬರು. ಕುಂದಾಪುರದಲ್ಲಿ ಮಾತ್ರವಲ್ಲದೆ ಸಾಂಪ್ರದಾಯಿಕ ಶೈಲಿಯ ಕಾವಿಕಲೆಯನ್ನು ಮಂಗಳೂರಿನ ವೀರ ವಿಠ್ಠಲ ದೇವಸ್ಥಾನ, ಕೊಲ್ಲೂರು ಮೂಕಾಂಬಿಕ ದೇವಸ್ಥಾನ, ಕುಮಟಾದ ಮಹಾಳಸಾ ನಾರಾಯಣಿ ದೇವಸ್ಥಾನವೂ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಹಲವಾರು ದೇವಾಲಯಗಳಲ್ಲಿ ಕಾಣಬಹುದು. ವಿಷ್ಣುವಿನ ದಶಾವತಾರ, ಸಮುದ್ರ ಮಥನ, ಕುರುಕ್ಷೇತ್ರ ಯುದ್ಧ, ಸೀತಾಪಹರಣದಂತಹ ಕಥೆಗಳು. ಅದಲ್ಲದೆ ಜಾಮಿತಿ ವರ್ತುಲಗಳು, ಹೂವುಗಳು, ಕಿಟಕಿ, ಪ್ರವೇಶ ಬಾಗಿಲುಗಳ ಸುತ್ತ ಜಾಮಿತಿ ಬಳ್ಳಿಗಳು, ಗಿಡ, ಬಳ್ಳಿಗಳ ಚಿತ್ರ, ವರ್ತುಲಗಳೊಳಗೆ ಕುಸುರಿನ ಕೆಲಸವಿರುತ್ತಿತ್ತು. ಕಾವಿಕಲೆ ಇವಿಷ್ಟಕ್ಕೆ ಮೀಸಲಾಗಿರದೆ ಆಗಿನ ಸಮಕಾಲಿನ ಪ್ರಭಾವಿ ಹಾಗೂ ಪ್ರತಿಷ್ಠಿತ ವ್ಯಕ್ತಿಗಳ ಚಿತ್ರಗಳನ್ನೂ ಬಿಡಿಸುತ್ತಿದ್ದರು. ಅಂತಹ ವ್ಯಕ್ತಿಚಿತ್ರಗಳಲ್ಲಿ ಪಾಶ್ಚಿಮಾತ್ಯ ಉಡುಪುಗಳ ಪ್ರಭಾವವಿರುವುದನ್ನು ಗಮನಿಸಬಹುದು. ದೇವರುಗಳೊಂದಿಗೆ ಪ್ರಾಣಿ ಪಕ್ಷಿಗಳ, ಅಂದಿನ ಸಾಂಪ್ರದಾಯಿಕ ಉಡುಗೆ ತೊಡುಗೆಗಳಲ್ಲಿ ಮಹಿಳೆಯರ ಚಿತ್ರಗಳೂ ಈ ಕಲೆಯಲ್ಲಿ ಪಾಲು ಪಡೆದಿದ್ದವು ಎಂದು ಕೃಷ್ಣಾನಂದರ ಕೃತಿಯಲ್ಲಿ ಉಲ್ಲೇಖವಾಗಿದೆ. ಸಾಂಪ್ರದಾಯಿಕ ಶೈಲಿ ಸಾಂಪ್ರದಾಯಿಕ ಶೈಲಿಯ ಕಾವಿಕಲೆ ಎಂದರೆ ಮಣ್ಣಿನ ಗೋಡೆಯ ಮೇಲೆ ಚಿತ್ರ ಬರೆಯಬೇಕು. ಕೃಷ್ಣಾನಂದರ ಕೃತಿಯಲ್ಲಿರುವಂತೆ ಸಮುದ್ರದ ಚಿಪ್ಪನ್ನು ಸುಟ್ಟು, ಸುಣ್ಣ ಮಾಡಿ ಅದಕ್ಕೆ ಮರಳು, ಹುಳಿಯಾದ ಬೆಲ್ಲ, ಮರಳು, ಬೆಣಚುಕಲ್ಲಿನ ಪುಡಿಯೊಂದಿಗೆ ಮಿಶ್ರಣ ಮಾಡಿ, ಎರಡು ವಾರಗಳ ಕಾಲ ಕೊಳೆಯಲು ಹಾಕುತ್ತಾರೆ. ನಂತರ ಮಹಿಳೆಯರು ಅದನ್ನು ಒನಕೆಯಿಂದ ಚೆನ್ನಾಗಿ ಕುಟ್ಟಿ, ಬೆಣ್ಣೆಯಷ್ಟು ನಯವಾಗಿ ಹದ ಮಾಡುತ್ತಾರೆ. ಹೊನ್ನಾವರದ ಹತ್ತಿರ ಬವರಾಜ ದುರ್ಗ ದ್ವೀಪದಲ್ಲಿ ಸಿಗುತ್ತಿದ್ದ ಕೆಂಪು ಮಣ್ಣು ಸೇರಿಸಿ (ಇದನ್ನು ಕರಾವಳಿಯಲ್ಲಿ ಸ್ಥಳೀಯವಾಗಿ ‘ಹುರಮುಂಜಿ’ ಎಂದು ಕರೆಯುತ್ತಾರೆ), ಪಾಯಸದಷ್ಟು ದಪ್ಪ ಮಿಶ್ರಣ ಮಾಡಿ ಗೋಡೆಗೆ ಏಕಪ್ರಕಾರವಾಗಿ ಲೇಪಿಸುತ್ತಾರೆ. ಅದು ಸಂಪೂರ್ಣ ಹಸಿಯೂ ಅಲ್ಲದ, ಸಂಪೂರ್ಣವಾಗಿ ಒಣಗಿಯೂ ಇಲ್ಲದ ಘಟ್ಟದಲ್ಲಿ, ಕೆಂಪು ಬಣ್ಣ ಹೋಗಿ ಬಿಳಿ ಬಣ್ಣ ಕಾಣುವಂತೆ ತಾಪಿಯಿಂದ ಚಿತ್ರಗಳನ್ನು ಬರೆಯುತ್ತಿದ್ದರು. ಪ್ರತಿ ನಾಲ್ಕು ಗಂಟೆಗೊಮ್ಮೆ ಬಿರುಕು ಬಿಡದಂತೆ ನೀರು ಚಿಮುಕಿಸಿ ಗಟ್ಟಿಗೊಳಿಸುತ್ತಿದ್ದರು. ಹಾಗೆ ಮಾಡಿದ ಕಾವಿಕಲೆ ಆ ಕಟ್ಟಡ ಇರುವಷ್ಟು ಕಾಲ ಬಾಳಿಕೆ ಬರುತ್ತಿತ್ತಂತೆ. ಆಗ ವಾರಗಳ ಕಾಲ ಸೂರ್ಯನೇ ಕಾಣದಂತೆ ಬಿಡದೇ ಸುರಿಯುತ್ತಿದ್ದ ಮಳೆಯ ತೇವಾಂಶವನ್ನು ಸಹಿಸಿ, ಹಾಳಾಗದಂತೆ ಉಳಿಯುವ ಶಕ್ತಿಯೂ ಈ ಕಲೆಗೆ ಇತ್ತಂತೆ. ಉಳಿದ ಪ್ರಕಾರಗಳಂತೆ ಹಲವು ಬಣ್ಣಗಳಿಂದ ಜನರನ್ನು ಆಕರ್ಷಿಸಲು ಇದರಲ್ಲಿ ಸಾಧ್ಯವಿಲ್ಲ. ಎರಡು ಬಣ್ಣಗಳಲ್ಲೇ ಕಲಾವಿದರು ತಮ್ಮ ಕೈಚಳಕ ತೋರಿಸಬೇಕು. ಇಂದಿನ ತಲೆಮಾರಿಗೆ ಈ ಕಲೆಯ ಪರಿಚಯವೇ ಇಲ್ಲ. ಇದು ಹೊಸತನದೊಂದಿಗೆ ಒಂದಷ್ಟು ಕಲಾಸಕ್ತರನ್ನು ಆಕರ್ಷಿಸಿದರೂ ಅದರ ಸಾಂಪ್ರದಾಯಿಕ ಶೈಲಿ ಮರೆಯಾಗುತ್ತಿದೆ. ಕಾವಿಕಲೆಯ ಕುರಿತು ಸಮಗ್ರ ಮಾಹಿತಿ ದಾಖಲಿಸುವ ಅಗತ್ಯವಿದೆ. ಕೆಲವು ದೇವಸ್ಥಾನಗಳಲ್ಲಿ ಉಳಿದುಕೊಂಡಿರುವ ಈ ಕಲೆಯನ್ನು ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ. ಕಾವಿ ಕಲೆಯ ವೀಣಾ ಇಂದಿನ ತಲೆಮಾರಿಗೆ ಪರಿಚಯವೇ ಇಲ್ಲದಷ್ಟು ನೇಪಥ್ಯಕ್ಕೆ ಸರಿದಿರುವ ಈ ಕಾವಿಕಲೆಗೆ ಹೊಸತನದ ಮೂಲಕ ಮತ್ತೆ ಜೀವ ತುಂಬುವ ಕೆಲಸ ಮಾಡುತ್ತಿರುವವರು ಮಂಗಳೂರಿನ ವೀಣಾ ಶ್ರೀನಿವಾಸ್‌. ಹತ್ತು ವರ್ಷಗಳಿಂದ ಕಾವಿಕಲೆ ಮೇಲೆಯೇ ಕೆಲಸ ಮಾಡುತ್ತಿದ್ದಾರೆ.ಹತ್ತು ವರ್ಷಗಳ ಹಿಂದೆ ಕುಮುಟಾ ದೇವಸ್ಥಾನದ ಗೋಡೆ ಮೇಲೆ ಕಂಡ ಕಾವಿಕಲೆಗೆ ಆಕರ್ಷಿತರಾದರು ವೀಣಾ. ಅಲ್ಲಿವರೆಗೆ ಚಿತ್ರಕಲೆಯ ಯಾವ ಪ್ರಕಾರದಲ್ಲಿ ಸಾಧನೆ ಮಾಡಬೇಕೆಂಬ ಗೊಂದಲದಲ್ಲಿದ್ದ ಅವರಿಗೆ, ಅಪರಿಚಿತವಾಗುತ್ತಿರುವ ಹಾಗೂ ಮೂಲೆ ಸೇರುವ ಹಂತದಲ್ಲಿರುವ ಕಾವಿ ಕಲೆಯನ್ನೇ ಆಯ್ಕೆ ಮಾಡಿಕೊಳ್ಳಬೇಕು ಎನ್ನಿಸಿತು. ನಂತರ ಪುಸ್ತಕಗಳನ್ನು ಓದುತ್ತಾ, ಪ್ರಸ್ತುತ ಈ ಕಲೆಯಿರುವ ಜಾಗಗಳನ್ನು ಪತ್ತೆ ಮಾಡುತ್ತಲೇ ಕಾವಿ ಕಲೆ ಕಲಿಕೆ ಆರಂಭಿಸಿದರು. ಆರಂಭದಲ್ಲಿ ಇವರು ಬಿಡಿಸಿದ ಚಿತ್ರಗಳಿಗೆ ಸಿಕ್ಕ ಪ್ರಶಂಸೆಯನ್ನೇ ಪ್ರೋತ್ಸಾಹವಾಗಿ ಸ್ವೀಕರಿಸಿದರು. ಉಳಿದೆಲ್ಲ ಕಲಾಪ್ರಕಾರಗಳನ್ನು ಬದಿಗಿರಿಸಿ ಇಂದು ಕಾವಿಕಲೆ ಅಧ್ಯಯನ ಮತ್ತು ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ಈವರೆಗೆ 18ಕ್ಕಿಂತ ಹೆಚ್ಚು ಶಿಬಿರಗಳನ್ನು ಆಯೋಜಿಸಿದ್ದಾರೆ. 400ರಿಂದ 500 ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಅದರಲ್ಲಿ ಸಂಜನಾ ಕಾಮತ್‌ ಕಾವಿ ಕಲೆಯನ್ನೇ ಕಲಿಯುತ್ತೇನೆ ಎಂದು ಮುಂದೆ ಬಂದಿದ್ದಾರೆ. ಈ ಕಲೆಯ ತಂತ್ರಗಾರಿಕೆಯನ್ನು ಬಲಪಡಿಸಿಕೊಂಡಿರುವ ವಿದ್ಯಾರ್ಥಿನಿಯ ಬಗ್ಗೆ ವೀಣಾ ಅವರಿಗೆ ಹೆಮ್ಮೆ. ಕಾವಿಕಲೆಗೆ ಹೊಸತನ ಐತಿಹಾಸಿಕ ಕಥೆಗಳನ್ನೇ ಹೊತ್ತಿರುವ ಕಾವಿಕಲೆ ಉಳಿಸಲು ಕೆಲವು ಕಲಾವಿದರು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಆ ಕಲೆಗೆ ನಾವೀನ್ಯದ ಲೇಪ ಹಚ್ಚುತ್ತಿದ್ದಾರೆ. ಗೋಡೆಯ ಬದಲಾಗಿ ಕ್ಯಾನ್ವಾಸ್‌ ಮೇಲೆ ಆಕ್ರಿಲಿಕ್‌ ಮತ್ತು ಪೇಪರ್‌ ಮೇಲೆ ವಾಟರ್‌ಕಲರ್‌ ಬಣ್ಣ ಉಪಯೋಗಿಸಿ ಕಾವಿಕಲೆಯನ್ನು ಚಿತ್ರಿಸುತ್ತಾರೆ. ಇವರು ಕ್ಯಾನ್ವಾಸ್‌ ಮೇಲೆ ಪೂರ್ತಿ ಕೆಂಪು ಬಣ್ಣ ಹಚ್ಚಿ, ಅದರ ಮೇಲೆ ಬಿಳಿ ಬಣ್ಣದಿಂದ ಚಿತ್ರ ಬರೆಯುತ್ತಾರೆ. ಕೆಂಪು ರಂಗಿನ ಮೇಲೆ ಬಿಳಿ ಗೆರೆಗಳು ಮೂಡಲು ಒಂದೇ ಗೆರೆಯ ಮೇಲೆ ಮೂರು ಬಾರಿ ಬಿಳಿ ಬಣ್ಣವನ್ನು ಬಳಿಯುವಷ್ಟು ಕೆಲಸವನ್ನು ಈ ಹೊಸ ಮಾದರಿಯ ಕಾವಿಕಲೆ ಬೇಡುತ್ತದೆ.
courtsey:prajavani.net

“author”: “ಮೇಘಲಕ್ಷ್ಮಿ ಮರುವಾಳ”,

https://www.prajavani.net/artculture/art/kavikale-new-way-651224.html

Leave a Reply