“ನಿಸರ್ಗದಲ್ಲಿ ‘ಗೊಂಬಿ ಆಟ’”,

ಗೋಡೆಗಳ ಮಧ್ಯೆಯೇ ಹತ್ತು ತಿಂಗಳು ಕಳೆದಿದ್ದ ಮಕ್ಕಳು, ಆ ನಿಸರ್ಗದ ಕಲರವವನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದರು. ಅಲ್ಲಿ ನಡೆಯುವ ಪ್ರತಿ ಚಟುವಟಿಕೆಗಳು ಅವರಿಗೆ ಹೊಸ ಅನುಭೂತಿ ನೀಡುತ್ತಿದ್ದವು.ಹಕ್ಕಿಗಳು ಚಿಲಿಪಿಲಿಗುಟ್ಟಿದರೆ, ದುಂಬಿಗಳು ಝೇಂಕರಿಸಿದರೆ ಮಕ್ಕಳ ಕಿವಿ, ಕಣ್ಣುಗಳು ಆ ಕಡೆಯೇ ವಾಲುತ್ತಿದ್ದವು. ಮಾವು–ಹಲಸುಗಳ ಘಮ ನಾಸಿಕವನ್ನು ಸೆಳೆಯುತ್ತಿತ್ತು. ದಿನ್‌ ಕಾ ರಾಜ– ರಾತ್‌ ಕೀ ರಾಣಿ ಹೂವುಗಳ ಸೊಬಗಿಗೆ ಕಣ್ಣಷ್ಟೇ ಅಲ್ಲ, ಮನಸ್ಸು ಗಳೂ ಅರಳುತ್ತಿದ್ದವು. ನೇರಳೆ–ಪೇರಲ ಹಣ್ಣುಗಳು ಬಾಯಲ್ಲಿ ನೀರೂರಿಸುತ್ತಿತ್ತು. ಸಾಕು ಪ್ರಾಣಿಗಳ ಒಡನಾಟ, ತೋಟದಲ್ಲಿನ ಅಲೆದಾಟ, ಗುಡ್ಡದ ಮೇಲಿನ ಸೂರ್ಯಾಸ್ತದ.. ಓಹ್‌.. ಆ ಅನುಭವ ಹಂಚಿಕೊಳ್ಳುವಾಗ ಮಕ್ಕಳ ಮನಸ್ಸು ಕಾರಂಜಿಯಂತೆ ಪುಟಿಯುತ್ತಿತ್ತು!ಧಾರವಾಡದಿಂದ 10 ಕಿ.ಮೀ ದೂರದಲ್ಲಿರುವ (ಧಾರವಾಡ–ಅಳ್ನಾವರ ಹೆದ್ದಾರಿ ಪಕ್ಕದಲ್ಲಿರುವ) ‘ಸುಮನ ಸಂಗಮ ಕಾಡು ತೋಟ’ದಲ್ಲಿ ಐದು ದಿನಗಳ ಕಾಲ ನಡೆದ ಮಕ್ಕಳ ಶಿಬಿರ ‘ಗೊಂಬಿ ಆಟ’ದಲ್ಲಿ ಕಂಡು ಬಂದ ಮಕ್ಕಳ ಆಟಗಳು ಇವು. ‘ಗಿರಮಿಟ್‌ ಡಿಸೈನ್‌’ ಸಂಸ್ಥೆಯ ವರ್ಷಾ ಸ್ಯಾಮುಯಲ್‌ ರಾಜ್‌ಕುಮಾರ್‌ ಮತ್ತು ಪರಿಸರವಾದಿ ಡಾ. ಸಂಜೀವ ಕುಲಕರ್ಣಿ ಈ ಶಿಬಿರದ ನಾವಿಕರು.ಸುಮನ ಸಂಗಮ–ಸಂಜೀವ ಕುಲಕರ್ಣಿಯವರ ಕನಸಿನ 17 ಎಕರೆಯ ಕಾಡು ತೋಟ. ಈ ರಮ್ಯ ತಾಣದಲ್ಲೇ ಶಿಬಿರ ನಡೆದಿದ್ದು. ನಗರ ಪರಿಸರದಲ್ಲಿ ಬೆಳೆದ 9 ರಿಂದ 16 ವರ್ಷದೊಳಗಿನ 15 ಮಕ್ಕಳಿಗೆ ಇದರಲ್ಲಿ ಪಾಲ್ಗೊಂಡಿದ್ದರು. ಇಡೀ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳು ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಳ್ಳುತ್ತಾ, ನಿಸರ್ಗದ ಪಾಠಕ್ಕೆ ಕಿವಿಯಾದರು.‘ಕಷಾಯ’ದ ಶುಭೋದಯಎದ್ದ ಹಾಸಿಗೆಯ ಮೇಲೆ ಹಾರ್ಲಿಕ್ಸ್‌, ಬೋರ್ನ್‌ವಿಟಾ ಕುಡಿಯುವ ಅಭ್ಯಾಸವಿದ್ದ ಮಕ್ಕಳಿಗೆ, ಈ ಶಿಬಿರದಲ್ಲಿ ಬೆಳಿಗ್ಗೆ ಎದ್ದ ತಕ್ಷಣ, ಕಷಾಯದೊಂದಿಗೆ ಶುಭೋದಯ. ಮೊದಲ ದಿನ ಕಷಾಯದ ಘಾಟಿಗೆ ತುಸು ಕೊಸರಾಡಿದ ಮಕ್ಕಳಿಗೆ ನಂತರದಲ್ಲಿ, ಅದೇ ಇಷ್ಟವಾಯಿತು. ಮುಂದಿನ ಹಂತ ತೋಟದಲ್ಲಿ ‘ನಿಸರ್ಗ ನಡಿಗೆ’. ತೋಟದಲ್ಲಿ ಅಡ್ಡಾಡಿ, ದಣಿದು ಬಂದವರಿಗೆ ನವಧಾನ್ಯ ಮತ್ತು ತೋಟದಲ್ಲೇ ಬೆಳೆದ ತರಕಾರಿಗಳಿಂದ ತಯಾರಾದ ಬಿಸಿ ಬಿಸಿ ಉಪಾಹಾರ ಸಿದ್ಧವಾಗಿರುತ್ತಿತ್ತು. ನಡಿಗೆ ಮುಗಿಯುತ್ತಿದ್ದಂತೆ ಮಕ್ಕಳು ಗೊಬ್ಬರ ತಯಾರಿಕೆಯಲ್ಲಿ ಕೈ ಜೋಡಿಸುತ್ತಿದ್ದರು. ಸಸಿಗಳಿಗೆ ನೀರುಣಿಸುವುದು, ಗಿಡಗಳ ಆರೈಕೆ ಹೇಗೆಂದು ಕಲಿಯುತ್ತಿದ್ದರು. ವಿವಿಧ ಮರಗಳನ್ನು ಗುರುತಿಸುವುದು, ನೀರಿನ ಮಿತವ್ಯಯ ಮುಂತಾದ ಚಟುವಟಿಕೆಗಳು, ಮಕ್ಕಳಿಗೆ ಪಠ್ಯದಲ್ಲಿಲ್ಲದ ಪಾಠ ಹೇಳಿಕೊಡುತ್ತಿದ್ದವು. ಇವೆಲ್ಲ ಚಟುವಟಿಕೆಯಲ್ಲಿ ಭಾಗವಹಿಸಿ ಬೇಸರವಾಯಿತೆನ್ನಿ, ಆ ಮಕ್ಕಳೆಲ್ಲ ತೋಟದಲ್ಲಿರುವ ಹೊಂಡಕ್ಕೆ ಜಿಗಿದು, ಮಣ್ಣಿನ ಮಜ್ಜನ ಮಾಡಿ, ಪುಳಕಿತರಾಗುತ್ತಿದ್ದರು.ನಾಲಿಗೆಗೆ ‘ದೇಸಿ ರುಚಿ’‘ಶಿಬಿರ ಹೇಗಿತ್ತು’ ಅಂತ ಮಕ್ಕಳನ್ನು ಕೇಳಿದರೆ; ಅವರು ಬರೀ ಸೂಪರ್ ಎಂದು ಹೇಳುತ್ತಿರಲಿಲ್ಲ. ಬದಲಿಗೆ ಶಿಬಿರದಲ್ಲಿ ಅನುಭವಿಸಿದ ಪ್ರತಿ ಕ್ಷಣವನ್ನು ವಿವರಿಸುತ್ತಿದ್ದರು. ‘ಶಾಲೆಯಲ್ಲಿ ಶಿಕ್ಷಕರು ಹೇಳಿದ್ದನ್ನು ಮಾತ್ರ ಮಾಡುತ್ತಿದ್ದೆವು. ಅಲ್ಲಿ ನಮಗೆ ತಿಳಿದಿದ್ದನ್ನು ಮಾಡೋಕೆ ಆಗ್ತಿರಲಿಲ್ಲ. ಆದರೆ ಇಲ್ಲಿ, ನಮಗೆ ತಿಳಿದಂಗೆ ಮಾಡಿದ್ವಿ. ನಮ್ ಪ್ರತಿಭೆ ತೋರಿಸೋಕೆ ಅವಕಾಶ ಸಿಕ್ಕಿತು’ ಎಂದು ಹೇಳಿಕೊಂಡರು ಶಿಬಿರಾರ್ಥಿಗಳಾದ ಬೆಂಗಳೂರಿನ ಉಷಾ, ಧಾರವಾಡದ ಆಕಾಂಕ್ಷಾ. ಅವರಿಗೆ ಶಿಬಿರದ ಚಟುವಟಿಕೆ ಜತೆಗೆ, ಮಾವಿನಕಾಯಿ, ಶೇಂಗಾ ಚೆಟ್ನಿ ರುಚಿ, ಕವಳಿಕಾಯಿ ಉಪ್ಪಿನಕಾಯಿ, ಮಾವು ಮತ್ತು ನಿಂಬು ಪಾನಕ ಆಸ್ವಾದವೂ ನೆನಪಾಗುತ್ತಿತ್ತು.ಕೆಲವು ಮಕ್ಕಳಿಗೆ ಗಿಡ–ಮರಗಳ ಗೆಳೆತನವಾಗಿದ್ದು ಖುಷಿಯಾದರೆ, ಇನ್ನೂ ಹಲವರಿಗೆ ಬೊಂಬೆ ತಯಾರಿಕೆ, ಯಾವುದೋ ಹೊಸ ಕ್ರ್ಯಾಶ್ ಕೋರ್ಸ್ ಕಲಿತಂತಾಗಿತ್ತು. ‘ಈ ಶಿಬಿರದಲ್ಲಿ ಪರಿಸರ ರಕ್ಷಿಸ ದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ’ ಎಂಬ ಪಾಠ ಕಲಿತೆವು ಎಂದು ಅವರು ಹೇಳುವಾಗ ಆ ಮಕ್ಕಳ ಮನದಲ್ಲಿ ಕಡ್ಡಾಯವಾಗಿ ಪರಿಸರ ಸಂರಕ್ಷಣೆಯ ಬೀಜವೊಂದು ಬಿತ್ತನೆಯಾಗಿರಲೇ ಬೇಕು ಎನಿಸಿತು.ಬೊಂಬೆ ಹೇಳುತೈತೆ…ರದ್ದಿ ಕಾಗದ, ಹರಿದ ಬಟ್ಟೆ, ನೀರಿನ ಬಾಟಲಿ, ಹಳೆಯ ಪೆನ್ಸಿಲ್‌, ಬಿದಿರು, ಎಲೆ, ಹೂ, ಒಣಹುಲ್ಲು, ಸೆಣಬಿನ ದಾರ, ಬಲೂನು, ಗೋಂದು, ಬಣ್ಣ…. ಇವೇ ಶಿಬಿರದಲ್ಲಿ ಮಕ್ಕಳು ಸುಂದರವಾಗಿ ಬೊಂಬೆ ತಯಾರಿಸಲು ಬಳಸಿದ ತ್ಯಾಜ್ಯ ವಸ್ತುಗಳು.ಮೊದಲಿಗೆ ಬಲೂನು ಊದಿ, ದಾರ ಕಟ್ಟಿ, ಅದರ ಸುತ್ತಲು ಗೋಂದು ಬಳಿದು ಎಂಟು ಪದರ ರದ್ದಿ ಕಾಗದ ಅಂಟಿಸಿದರು. ನಂತರ ಒಂದು ದಿನ ಬಿಸಿಲಿನಲ್ಲಿ ಒಣಗಿಸಿದರು. ಗೋಳಾಕಾರದ ಆಕೃತಿ ಸಿದ್ಧವಾಯಿತು. ಈ ಎಲ್ಲ ಪಾಠವನ್ನು ವರ್ಷಾ ಅವರು ಮಕ್ಕಳಿಗೆ ಹೇಳಿಕೊಟ್ಟರು. ನಂತರ ಮಕ್ಕಳನ್ನು ‘ಇನ್‌ಕ್ರೆಡಿಬಲ್‌’ ಮತ್ತು ‘ಸೆವೆನ್‌ ಫ್ರೆಂಡ್ಸ್‌’ ಎಂಬ ಎರಡು ತಂಡಗಳಾಗಿಸಿದರು. ‘ಗೊಂಬೆಗಳಿಗೆ ನಿಮಗೆ ಬೇಕಾದ ರೂಪವನ್ನು ಕೊಡಿ’ ಎಂದು ಸೂಚಿಸಿದರು.ಮಕ್ಕಳು, ಆರಂಭದಲ್ಲಿ, ಕಣ್ಣು, ಕಿವಿ, ಮೂಗು, ಬಾಯಿಗಳನ್ನು ಮೂಡಿಸಿದರು. ಅಂತಿಮವಾಗಿ, ಒಂದೊಂದು ಬೊಂಬೆಯೂ ಮಾನವ, ದಾನವ, ದೇವರು, ಹುಲಿ, ಸಿಂಹ, ಆನೆ, ಪಕ್ಷಿ ರೂಪ ಪಡೆದುಕೊಂಡವು. ಅಷ್ಟೇ ಅಲ್ಲ, ಆ ಬೊಂಬೆಗಳೇ ಪಾತ್ರಧಾರಿಯಾಗಿಸಿ, ಮಕ್ಕಳು ಕಿರು ನಾಟಕಗಳನ್ನೂ ಪ್ರದರ್ಶಿಸಿದರು.‘ಬೊಂಬೆ ತಯಾರಿಕೆ ಮತ್ತು ನಾಟಕ ಪ್ರದರ್ಶನ ಮಕ್ಕಳ ಮನೋವಿಕಾಸಕ್ಕೆ ಇಂಬು ನೀಡಿತು. ಕರಕೌಶಲ, ವರ್ಣವಿನ್ಯಾಸ, ಕಥಾ ರಚನೆ, ಸಂಭಾಷಣೆ, ಅಭಿನಯ, ವಾಕ್‌ ಶುದ್ಧಿ, ಸ್ಟೇಜ್‌ ಕರೇಜ್‌, ಕ್ರಿಯಾಶೀಲತೆ, ಹೊಸ ಆಲೋಚನೆ ಮುಂತಾದ ಅಂಶಗಳಿಗೆ ಒತ್ತು ನೀಡಿದೆವು. ಮೊಬೈಲ್‌, ಟಿ.ವಿ, ವಿಡಿಯೊ ಗೇಮ್‌ಗಳಲ್ಲಿ ಮುಳುಗಿದ್ದ ಮಕ್ಕಳನ್ನು ಚೌಕಾಬಾರ, ಲಗೋರಿ ಆಟಗಳಲ್ಲಿ ತೊಡಗಿಸಿದೆವು. ಕೇವಲ ಅಂಕಗಳಿಂದ ಮಕ್ಕಳನ್ನು ಅಳೆಯುವ ಪದ್ಧತಿಯಿಂದ, ಮಕ್ಕಳಲ್ಲಿ ಅಡಗಿರುವ ವಿವಿಧ ಕೌಶಲ ಮತ್ತು ಪ್ರತಿಭೆಗಳು ಹೇಗೆ ಕಮರಿ ಹೋಗುತ್ತವೆ ಎಂಬುದನ್ನು ಪೋಷಕರಿಗೆ ಮನದಟ್ಟು ಮಾಡಿಕೊಟ್ಟೆವು’ ಎನ್ನುತ್ತಾರೆ ವರ್ಷಾ. (ಮೊ: 98445 41744 ಸಂಪರ್ಕಿಸಿ)ಶಿಬಿರ ಮತ್ತೊಂದು ಶಾಲೆಯಾಗದಿರಲಿ!‘ಒಂದು ವಾರದಲ್ಲಿ ಎಲ್ಲವನ್ನೂ ಕಲಿಸುತ್ತೇವೆ’ ಎಂಬ ಶಿಬಿರಗಳು ಮಕ್ಕಳಿಗೆ ಮತ್ತೊಂದು ಶಾಲೆಯಂತೆ ಭಾಸವಾಗುತ್ತವೆ. ಅದನ್ನು ಬಿಟ್ಟುಬಿಡಬೇಕು. ಅವರ ಆಸಕ್ತಿಗನುಗುಣವಾದ ಚಟುವಟಿಕೆಯಲ್ಲಿ ಮಕ್ಕಳಿಗೆ ತೊಡಗಲು ಮುಕ್ತ ಅವಕಾಶ ಕಲ್ಪಿಸಬೇಕು. ನಾವಿಲ್ಲಿ ಮಕ್ಕಳನ್ನು ನಾಲ್ಕು ಗೋಡೆಗಳ ಮಧ್ಯದಿಂದ ಪರಿಸರದ ಅಂಗಳಕ್ಕೆ ಕರೆ ತಂದಿದ್ದೇವೆ. ಇಲ್ಲಿ ಮರ–ಪಕ್ಷಿ, ಪಕ್ಷಿ–ಹುಳು, ಹುಳು–ಮಣ್ಣು… ಹೀಗೆ ಜೀವಿ ಮತ್ತು ಪರಿಸರದ ನಿಕಟ ಸಂಬಂಧವನ್ನು ಅರ್ಥ ಮಾಡಿಸಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಪರಿಸರವಾದಿ ಡಾ.ಸಂಜೀವ್‌ ಕುಲಕರ್ಣಿ‘ಜಗಮಗ ಬೆಳಕಿನಲ್ಲಿ ಬೆಳೆದಿರುವ ನಗರದ ಮಕ್ಕಳಿಗೆ ‘ಕತ್ತಲು’ ಎಂಬುದೇ ಗೊತ್ತಿಲ್ಲ. ರಾತ್ರಿಯಲ್ಲಿ ದೆವ್ವ, ಭೂತ ಸಂಚಾರ ಮಾಡುತ್ತವೆ ಎಂದು ಪೋಷಕರು ಮಕ್ಕಳಿಗೆ ಅನಗತ್ಯ ಭಯ ಬಿತ್ತಿರುತ್ತಾರೆ. ನಾವು ‘ಕತ್ತಲ ನಡಿಗೆ’, ‘ಮುಂಜಾನೆ ನಡಿಗೆ’‌ ಮೂಲಕ ಪ್ರಾಯೋಗಿಕವಾಗಿ ಪರಿಸರವನ್ನು ಅರ್ಥ ಮಾಡಿಸುತ್ತೇವೆ. ಕತ್ತಲಿನಿಂದ ಎದ್ದು ಬರುವ ಹಸಿರಿನ ಸೊಬಗು, ಬಾನಿನಲ್ಲಿ ಮೂಡುವ ವರ್ಣ ವೈಭವ, ಹಕ್ಕಿಗಳ ಚಿಲಿಪಿಲಿ ಮಕ್ಕಳ ಮನಸ್ಸಿಗೆ ಮುದ ನೀಡುತ್ತದೆ. ಈ ತೋಟದಲ್ಲಿ ಗ್ರಾಮೀಣ ಜನರ ಬದುಕು–ಬವಣೆಯೂ ಅವರಿಗೆ ಅರ್ಥವಾಗುತ್ತದೆ. ಏಕಾಂಗಿಯಾಗಿ ಬೆಳೆದ ಮಕ್ಕಳಿಗೆ ಕೂಡಿ ಬಾಳುವ ಸುಖವನ್ನು ಈ ಶಿಬಿರ ಅರ್ಥ ಮಾಡಿಸುತ್ತದೆ’ ಎನ್ನುತ್ತಾರೆ ಕುಲಕರ್ಣಿ.

courtsey:prajavani.net

https://www.prajavani.net/gombi-aata-nature-638166.html

Leave a Reply