“ರಾಮ ನಮ್ಮೂರಿನ ಅಳಿಯ, ಸೀತೆಯ ಊರು ನನ್ನದು: ಕನ್ಹಯ್ಯಾ ಕುಮಾರ್”,

ಮಂಗಳೂರಿನಲ್ಲಿ ಶನಿವಾರ ನಡೆದ ಬಿ.ವಿ.ಕಕ್ಕಿಲ್ಲಾಯ ಜನ್ಮ ಶತಾಬ್ದಿ ಕಾರ್ಯಕ್ರಮವು ಎರಡು ನಿಲುವುಗಳನ್ನು ಹೊಂದಿದ ಯುವ ಮನಸ್ಸುಗಳ ಅಪರೂಪದ ಮುಖಾಮುಖಿಗೆ ಸಾಕ್ಷಿಯಾಯಿತು. ಪ್ರಶ್ನೆ ಯಾವುದಾದರೂ, ನಿಲುವು ಎಂಥದ್ದಾದರೂ ಸಂವಾದ ನಡೆಸಲು ಸಾಧ್ಯವಿದೆ ಎನ್ನುವ ಪ್ರಜ್ಞಾವಂತರ ಮಾತುಗಳು ಅಲ್ಲಿ ಧ್ವನಿಸಿದವು. ಜೈಹಿಂದ್ ಘೋಷಣೆ, ಏಕ ಭಾರತದ ಕುರಿತು ತನ್ನನ್ನು ಪ್ರಶ್ನಿಸಿದ ಕಾನೂನು ವಿದ್ಯಾರ್ಥಿನಿ ಸೀಮಾ ಬಾಸ್ಕರ್ ಅವರಿಗೆ ಸಿಪಿಐ ಯುವ ನಾಯಕ ಕನ್ಹಯ್ಯ ಕುಮಾರ್ ನೀಡಿದ ಉತ್ತರ ಮತ್ತು ನಡೆಸಿದ ಸಂವಾದದ ಅಕ್ಷರ ರೂಪ ಇಲ್ಲಿದೆ. ಯುವತಿಯ ಪ್ರಶ್ನೆ: ‘ಮಿಸ್ಟರ್ ಕನ್ಹಯ್ಯ ಕುಮಾರ್, ಜೈ ಶ್ರೀರಾಮ್. ಮಂಗಳೂರು ಯುವ ಜನರ ಪ್ರತಿನಿಧಿಯಾಗಿ ನನ್ನದೊಂದು ಮನವಿ. ಸ್ವಾತಂತ್ರ್ಯ ದಿನಾಚರಣೆ ಹತ್ತಿರ ಇದೆ.ನೀವು ಒಮ್ಮೆ ಜೈ ಹಿಂದ್ ಎಂದು ಹೇಳಿಬಿಡಿ. ಅದು ಮಂಗಳೂರಿಗೆ ಸಿಕ್ಕ ಗೌರವ ಎಂದುಕೊಳ್ಳುತ್ತೇನೆ. ನೀವು ಭಾವನಾತ್ಮಕ ರಾಜಕೀಯದ ಬಗ್ಗೆ ಮಾತನಾಡಿದಿರಿ. ಹೌದು ನಾವು ಭಾವುಕ ಜೀವಿಗಳು. ನಾವು ನಮಗೆ ಒಬ್ಬ ಅಪ್ಪ, ಅಬ್ಬ ಅಮ್ಮ ಎಂದು ಭಾವಿಸಿದ್ದೇವೆ. ನಾವು ಆ ‘ಒಂದು’ ಎಂಬುದರಲ್ಲಿ ನಂಬಿಕೆ ಇಟ್ಟಿದ್ದೇವೆ. ಒಬ್ಬ ವಿದ್ಯಾರ್ಥಿನಿಯಾಗಿ ನನ್ನ ಪ್ರಶ್ನೆ ಇಷ್ಟೇ. ನೀವೇಕೆ ಒಂದು ದೇಶದ ಪರವಾಗಿ ನಿಲ್ಲುವುದಿಲ್ಲ, ನಿವೇಕೆ ಒಗ್ಗಟ್ಟಾದ ವಿದ್ಯಾರ್ಥಿ ಶಕ್ತಿ ಜೊತೆ ನಿಲ್ಲುವುದಿಲ್ಲ. ಒಂದು ಕಡೆ ಜಿಂದಾಬಾದ್‌, ಇನ್ನೊಂದು ಕಡೆ ಇನ್‌ಕ್ವಿಲಾಬ್‌, ಮತ್ತೊಂದು ಕಡೆ ಜೈ ಶ್ರೀರಾಮ್‌, ಮಗದೊಂದೆಡೆ ಜೈ ಹಿಂದ್‌ ಇದರ ಅವಶ್ಯಕತೆ ಏನಿದೆ. ಯಾಕೆ ನೀವು ಒಂದನ್ನು ಪ್ರತಿನಿಧಿಸುವುದಿಲ್ಲ, ಯಾಕೆ ನೀವು ಏಕತೆಯನ್ನು ಪ್ರತಿನಿಧಿಸುವುದಿಲ್ಲ?’ ಪ್ರಶ್ನೆ ಕೇಳಿದ ಯುವತಿ ಕನ್ಹಯ್ಯ ಕುಮಾರ್ ಉತ್ತರ: ‘ನೀವು ಜೈ ಶ್ರೀರಾಮ್ ಎಂದು ಹೇಳುತ್ತಿದ್ದೀರಿ. ನಮ್ಮ ಕಡೆ ಸೀತಾರಾಮ್ ಎನ್ನುತ್ತಾರೆ. ನೀವು ಏಕದ ಕುರಿತು ಹೇಳುತ್ತಿದ್ದೀರಿ. ಏಕೆ ‘ಏಕೈಕ’ವನ್ನು ಪ್ರಚಾರ ಮಾಡೋದಿಲ್ಲ, ಅದನ್ನೇಕೆ ಒಪ್ಪಿಕೊಳ್ಳೋದಿಲ್ಲ ಅಂತ ಕೇಳ್ತಿದ್ದೀರಿ. ಆದರೆ ನಾನೇನು ಮಾಡಲಿ? ನಾನು ಹುಟ್ಟಿದ್ದು ಇಬ್ಬರ ಸಂಯೋಗದಿಂದ. ನನ್ನ ಅಪ್ಪ ಮತ್ತು ಅಮ್ಮ ಇಬ್ಬರು ಮದುವೆಯಾಗಿದ್ದರಿಂದ ನಾನು ಹುಟ್ಟಿದೆ. ಯಾರೋ ಒಬ್ಬರಿಂದ ನಾನು ಹುಟ್ಟುವುದು ಅಸಾಧ್ಯವಿತ್ತು. ಅಲ್ಲಿ ಅಪ್ಪ ಮತ್ತು ಅಮ್ಮ ಇಬ್ಬರಿದ್ದರು.ನೀವು ಏಕರಾಷ್ಟ್ರದ ಪರಿಕಲ್ಪನೆಯನ್ನು ನಾನೇಕೆ ಬೆಂಬಲಿಸೋದಿಲ್ಲ ಅಂತ ಕೇಳ್ತಿದ್ದೀರಿ. ರಾಷ್ಟ್ರ ಯಾವತ್ತಿಗೂ ಒಂದೇ. ಭಾರತ ಇರುವುದು ಒಂದೇ, ಇದರಲ್ಲಿ ಸಂದೇಹವಿಲ್ಲ. ಆದರೆ, ಈ ಏಕಭಾರತವನ್ನು ಪ್ರತಿನಿಧಿಸುವ ಒಂದು ಸಂವಿಧಾನ ಇದೆ. ಅದರಲ್ಲಿ 300ಕ್ಕಿಂತ ಹೆಚ್ಚು ವಿಧಿಗಳಿವೆ. ನೀವು ಹೇಳುತ್ತಿರುವ ಏಕರಾಷ್ಟ್ರವನ್ನು ಪ್ರತಿನಿಧಿಸಲು ಇರುವ ಒಂದು ಸಂಸತ್ತಿನಲ್ಲಿ ಎರಡು ಸದನಗಳಿವೆ (ಲೋಕಸಭೆ ಮತ್ತು ರಾಜ್ಯಸಭೆ). ಮತ್ತು ಅದಕ್ಕೆ ಚುನಾಯಿತರಾಗಿ ಹೋಗುವುದು ಯಾರೋ ಒಬ್ಬರಲ್ಲ, ಪೂರಾ 545 ಸದಸ್ಯರು. ‘ನಾವು ಪ್ರತಿಪಾದಿಸುವ ಏಕತೆ ಏನಿದೆ, ಅದು ವಿವಿಧತೆಯನ್ನು ಪ್ರತಿನಿಧಿಸುವಂಥದ್ದು. ಅಲ್ಲಿ ವೈವಿಧ್ಯತೆ ಇದೆ. ನೀವು ಜೈ ಶ್ರೀರಾಮ್ ಘೋಷಣೆ ಕುರಿತು ಹೇಳಿದಿರಿ. ನೀವು ಖಂಡಿತವಾಗಿ ಘೋಷಣೆ ಹಾಕಿ, ಅದು ನಿಮ್ಮ ಸ್ವಾತಂತ್ರ್ಯ. ನೀವು ಜೈ ಶ್ರೀರಾಮ್ ಬೇಕಾದರೂ ಅನ್ನಿ, ಜೈ ಹನುಮಾನ್ ಬೇಕಾದರೂ ಅನ್ನಿ. ನಿಮಗೆ ಬೇಕಾದ ಘೋಷಣೆ ಕೂಗುವ ಸ್ವಾತಂತ್ರ್ಯವನ್ನು ನಮ್ಮ ಸಂವಿಧಾನ ನೀಡಿದೆ. ಆದ್ದರಿಂದ ನಾನು ನಿಮ್ಮಲ್ಲಿ ಆಗ್ರಹಿಸುತ್ತೇನೆ, ನಿಮಗೆ ನಿಮ್ಮ ಘೋಷಣೆ ಕೂಗುವ ಸ್ವಾತಂತ್ರ್ಯ ನೀಡಿರುವ ಸಂವಿಧಾನಕ್ಕೂ ಒಮ್ಮೆ ಜೈಕಾರ ಹಾಕಿಬಿಡಿ. ‘ನಾನು ಹುಟ್ಟಿದ್ದೇ ಮಿಥಿಲೆಯಲ್ಲಿ. ನನ್ನ ಊರು ಬೆಗುಸರಾಯ್ ಮಿಥಿಲಾ ಪ್ರಾಂತ್ಯಕ್ಕೆ ಸೇರುತ್ತದೆ. ನಿಮಗೆ ಗೊತ್ತಿರಬಹುದು, ಮಿಥಿಲೆ ಶ್ರೀರಾಮನ ಮಾವನ ಮನೆ. ನಮ್ಮ ಊರಲ್ಲಿ ಪ್ರತಿವರ್ಷ ಸೀತಾ ರಾಮರ ವಿವಾಹ ಮಹೋತ್ಸವ ನಡೆಸುತ್ತಾರೆ. ಅಯೋಧ್ಯೆಯಿಂದ ತರುಣರು ರಾಮನ ವೇಷದಲ್ಲಿ ನಮ್ಮ ಊರಿಗೆ ಮೆರವಣಿಗೆ ಬರುತ್ತಾರೆ. ನಾವು ಹೆಣ್ಣಿನ ಕಡೆಯವರು. ಅವರು ಗಂಡಿನ ಕಡೆಯವರು. ನಮ್ಮ ಪ್ರಾಂತ್ಯದಲ್ಲಿ ಬೀಗರನ್ನು ಬೈಗುಳದ ಮೂಲಕ ಸ್ವಾಗತಿಸುವ ಪದ್ಧತಿ ಇದೆ. ನಾವು ರಾಮನನ್ನು ನಿಂದಿಸುತ್ತಾ ಸ್ವಾಗತ ಕೋರುತ್ತೇವೆ. ರಾಮನನ್ನು ಹಾಸ್ಯ ಮಾಡುತ್ತೇವೆ. ಇದು ನಮ್ಮಲ್ಲಿ ಪಾರಂಪರಿಕವಾಗಿ ನಡೆದು ಬಂದ ರೂಢಿ. ಇದು ನಮ್ಮ ನೆಲದ ಸಂಸ್ಕೃತಿ. ‘ನಾನು ಹುಟ್ಟಿ ಬೆಳೆದ ಸಂಸ್ಕೃತಿಯಲ್ಲಿ ಯಾವ ದೇವರನ್ನೂ ಏಕವಾಗಿ ಸ್ಮರಿಸುವುದಿಲ್ಲ. ರಾಮನನ್ನು ಸೀತಾರಾಮ ಎಂದೂ ಕೃಷ್ಣನನ್ನು ರಾಧಾಕೃಷ್ಣ ಎಂದೂ ಜೋಡಿಯಾಗಿ ಸ್ಮರಿಸುತ್ತಾರೆ, ಪೂಜಿಸುತ್ತಾರೆ. ಇದು ನಾನು ಬೆಳೆದ ನೆಲದ ಪರಂಪರೆ. ನನ್ನ ಪರಿಸರದ ಸಂಸ್ಕೃತಿ. ನೀವೇನಾದರೂ ಪಿಎಚ್‌ಡಿ ಮಾಡುವುದಾದರೆ, ಈ ದೇಶದಲ್ಲಿ ಎಷ್ಟು ರಾಮಾಯಣಗಳಿವೆಯೋ ಅವುಗಳ ಮೇಲೆ ಸಂಶೋಧನೆ ಮಾಡಿ. ನನಗೆ ತಿಳಿದಿರುವಂತೆ ಈ ದೇಶದಲ್ಲಿ ಮುನ್ನೂರಕ್ಕೂ ಹೆಚ್ಚು ರಾಮಾಯಣಗಳಿವೆ. ‘ನಾನೊಮ್ಮೆ ಹಿಮಾಚಲಕ್ಕೆ ಹೋಗಿದ್ದೆ. ಅಲ್ಲಿ ತ್ರಿಲೋಕನಾಥ ಮಂದಿರವಿದೆ. ನೀವು ಈ ದೇಶವನ್ನು ಸುತ್ತಾಡಬೇಕು. ಆಗ ನಿಮಗೆ ಈ ದೇಶದ ನಿಜ ಸೌಂದರ್ಯ ತಿಳಿಯುತ್ತದೆ. ನಮ್ಮ ದೇಶದ ಅಗಾಧತೆ ಎದುರು ನಾವೆಷ್ಟು ತುಚ್ಛರು ಅನ್ನುವುದು ಅರ್ಥವಾಗುತ್ತದೆ. ಈ ತ್ರಿಲೋಕನಾಥ ಮಂದಿರದಲ್ಲಿ ಭಗವಾನ್ ಬುದ್ಧನ ಮೂರ್ತಿ ಇದೆ. ಅದರ ತಲೆಮೇಲೆ ಶಿವನ ಮೂರ್ತಿನ್ನು ಇರಿಸಲಾಗಿದೆ. ಈ ಮಂದಿರಕ್ಕೆ ಮೊದಲು ಹಿಂದೂ ಸಾಧು ಬರುತ್ತಾರೆ. ಪ್ರಾರ್ಥನೆ ನಡೆಸುತ್ತಾರೆ. ಅದಾದ ನಂತರ ಬೌದ್ಧ ಭಿಕ್ಕು ಬರುತ್ತಾರೆ, ಅಲ್ಲಿ ಪ್ರದಕ್ಷಿಣೆ ನಮಸ್ಕಾರ ಹಾಕುತ್ತಾರೆ. ಇದು ಈ ದೇಶದ ವೈಶಿಷ್ಟ್ಯ. ಇದು ಹಿಂದೂಸ್ಥಾನದ ವೈಶಿಷ್ಟ್ಯ. ‘ಲಾಹೋಲ್ ಜಿಲ್ಲೆಯಲ್ಲಿ ಒಂದು ರಾಮಾಯಣ ಪ್ರಚಲಿತದಲ್ಲಿದೆ. ಅದು ಲಾಹೋಲಿ ಭಾಷೆಯಲ್ಲಿದೆ. ಆ ರಾಮಾಯಣದಲ್ಲಿ ರಾವಣ ಸೀತೆಯನ್ನು ಅಪಹರಿಸುವುದಿಲ್ಲ. ಆ ರಾಮಾಯಣದ ಪ್ರಕಾರ ;ಸೀತೆ ರಾವಣನ ಮಗಳು. ಸೀತೆಯನ್ನು ರಾಮ ಪ್ರೀತಿಸಿ ಮದುವೆಯಾಗುತ್ತಾನೆ. ಈ ಕಾರಣದಿಂದ ರಾಮ ರಾವಣರ ಯುದ್ಧ ನಡೆಯುತ್ತದೆ. ಇದು ಲಾಹೋಲಿ ರಾಮಾಯಣ ಹೇಳುವ ಕಥೆ. ‘ಇಂಥವನ್ನೆಲ್ಲ ಯಾರು, ಯಾಕಾಗಿ ನಿಮ್ಮ ತಲೆಯೊಳಗೆ ತುಂಬಿದ್ದಾರೋ ನನಗೆ ಗೊತ್ತಿಲ್ಲ. ಈ ದೇಶದಲ್ಲಿ ಜನಿಸುವುದೇ ಒಂದು ಗೌರವದ ವಿಷಯ. ನೀವು ಹಿಮಾಚಲಕ್ಕೆ ಹೋದರೆ ನಿಮಗೆ ಸ್ವಿಟ್ಜ್‌ರ್ಲೆಂಡ್‌ಗೆ ಹೋದ ಅನುಭವವಾಗುತ್ತದೆ. ಗೋವಾ ಅಥವಾ ಮಂಗಳೂರು ಸಮುದ್ರ ತೀರಕ್ಕೆ ಬಂದರೆ, ಮಿಯಾಮಿ ಬೀಚ್’ನಲ್ಲಿ ಮಲಗಿರುವ ಅನುಭವವಾಗುತ್ತದೆ. ಈ ದೇಶದ ಮೈದಾನಗಳಲ್ಲಿ ಅಲೆದಾಡಿದರೆ, ಅವು ಅಮೆರಿಕಾದ ಹಸಿರು ಮೈದಾನಗಳಿಗಿಂತ ಎಷ್ಟು ಅಗಾಧವಾಗಿದೆ ಅನ್ನೋದು ತಿಳಿಯುತ್ತದೆ. ಆದರೂ ಒಟ್ಟಾರೆಯಾಗಿ ಇದು ಒಂದು ದೇಶ. ಇದು ನಮ್ಮ ದೇಶ. ‘ನಿಮ್ಮ ದೇಶ ನಿಮ್ಮದು. ನಿಮ್ಮ ತಾಯಿ ನಿಮ್ಮವಳು. ನೀವು ನಿಮ್ಮ ತಾಯಿಯನ್ನು ಪ್ರೀತಿಸುವುದು ನಿಮ್ಮ ಖಾಸಗಿ ವಿಷಯ. ಹಾಗಂತ ಯಾರಾದರೂ ಯಾವುದೇ ಬಣ್ಣದ ಬಾವುಟ ಹಿಡಿದು ಬಂದು, ಜೈ ಶ್ರೀ ರಾಮ್ ಎಂದೋ ಇಂಕ್ವಿಲಾಬ್ ಜಿಂದಾಬಾದ್ ಎಂದೋ ಘೋಷಣೆ ಕೂಗುತ್ತಾ ಬಂದು, ‘ನೀನು ನಿನ್ನ ತಾಯಿಯನ್ನು ಪ್ರೀತಿಸುವುದೇ ನಿಜವಾದರೆ, ಹೇಗೆ ಪ್ರೀತಿಸುತ್ತೀಯ ತೋರಿಸು’ಅಂದರೆ, ಆಗ ನಿಮ್ಮ ಉತ್ತರ ಏನಿರುತ್ತದೆ? ‘ಈ ದೇಶ ನನ್ನದು. ನಾನು ಈ ದೇಶವನ್ನು ಪ್ರೀತಿಸುತ್ತೇನೆ. ನನಗೆ ಪ್ರೀತಿ ಪ್ರದರ್ಶನದ ವಸ್ತುವಲ್ಲ. ನಾನು ಅದನ್ನು ನನ್ನ ಎದೆಯಲ್ಲಿ ಹೊತ್ತು ತಿರುಗುತ್ತೇನೆ’. ಇನ್ನಷ್ಟು.. ಕನ್ಹಯ್ಯ ಕುಮಾರ್‌ ಭೇಟಿಗೆ ವಿರೋಧ: ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಬರಹ ದೇಶಭಕ್ತಿಯ ಹೆಸರಿನಲ್ಲಿ ಸರ್ಕಾರದ ಅಂಧಭಕ್ತಿ ದೊಡ್ಡ ದೇಶದ್ರೋಹ: ಕನ್ಹಯ್ಯ ಕುಮಾರ್ ಕನ್ಹಯ್ಯ ಕುಮಾರ್ ನಿರುದ್ಯೋಗಿ, ಆಸ್ತಿ ₹8.5 ಲಕ್ಷ ಕನ್ಹಯ್ಯಾಗೆ ಬಾಲಿವುಡ್‌ ಬೆಂಬಲ ಫಲಿತಾಂಶ ವಿಶ್ಲೇಷಣೆ | ಇದು ವ್ಯಕ್ತಿಯ ಗೆಲುವೋ? ಪಕ್ಷದ ಗೆಲುವೋ? ವಿಚಾರದ ಗೆಲುವೋ?

courtsey:prajavani.net

“author”: “ಚೇತನಾ ತೀರ್ಥಹಳ್ಳಿ”,

https://www.prajavani.net/artculture/article-features/i-belongs-seetha-town-657299.html

Leave a Reply